ಶುಕ್ರವಾರ, ಜನವರಿ 1, 2021
ಶುಕ್ರವಾರ, ಡಿಸೆಂಬರ್ 18, 2020
ಮಂಗಳವಾರ, ಡಿಸೆಂಬರ್ 15, 2020
ಬುಧವಾರ, ಅಕ್ಟೋಬರ್ 28, 2020
ಕೊನೆಯ ಕರ್ತವ್ಯ....
ನನ್ನ ತೀರಾ ಪರಿಚಿತರೊಬ್ಬರು ಆಸ್ಪತ್ರೆಯಲ್ಲಿ ದಾಖಲಾಗಿದ್ರು.. ಅವರನ್ನು ನೋಡಲು ಬೇಗ ಮನೆಯ ಕೆಲಸ ಮುಗಿಸಿ ಹೊರಟೆ..
ಇನ್ನೇನು ಆ ಆಸ್ಪತ್ರೆಯ ಬಾಗಿಲಲ್ಲಿ ಆಟೋದಿಂದ ಇಳೀಬೇಕು, ಆಗ ಆಕೆಯ ತಮ್ಮ ಬಂದು `` ಮ್ಯಾಡಂ, ಇಲ್ಲಿ ಆಗಲ್ಲ ಅಂತ ಬೇರೆ ಹಾಸ್ಪಿಟಲ್ ಗೇ ಕರ್ಕೋಡು ಹೋಗಿದಾರೆ.. ನೀವು ನನ್ ಹಿಂದೇ ಬನ್ನಿ...'' ಅಂತ ಅವರ ಟೂ ವೀಲರ್ ನಲ್ಲಿ ಹೋದರು..ನಾನು ಅದೇ ಆಟೋದಲ್ಲಿ ಹಿಂಬಾಲಿಸಿದೆ.. ಆಟೋದವನಿಗೆ ಹಣ ನೀಡಿ, ನಾ ಆಸ್ಪತ್ರೆಯ ಒಳಗೆ ಪ್ರವೇಶಿಸುವಷ್ಟರಲ್ಲಿ ಆತ ಎಲ್ಲೋ ಮಾಯವಾಗಿದ್ದ!..
ಅವನೆಲ್ಲಿ ಅಂತ ಅರಸುತ್ತಾ ಇದ್ದ ನನ್ನ ಬಳಿ ನರ್ಸ್ ಒಬ್ಬರು ಬಂದು`` ಸುಮಾ ಅಂದ್ರೆ ನೀವೇನಾ?'' ಅಂದ್ರು ನಾನು ಹೌದೆಂದು ತಲೆ ಆಡಿಸಿದೆ.. ೨೩ನೇ ನಂಬರ್ ಬೇಡ್ ನವರನ್ನು ತಾನೇ ನೀವು ನೋಡ್ಬೇಕು? ಬನ್ನಿ ಬೇಗ ಅವರ ಕಂಡೀಶನ್ ತುಂಬಾ ಕ್ರಿಟಿಕಲ್ ಆಗಿದೆ.. ಬೇಗ ಬನ್ನಿ ನಿಮ್ಮನ್ನೇ ಕಾಯ್ತಿದೀವಿ'' ಅಂದಾಗ ನನಗೆ ಶಾಕ್!! ಕಾಲುಗಳಲ್ಲಿ ನಡೆಯುವ ಶಕ್ತಿಯೇ ಕಳೆದು ಹೋದ ಭಾವ!
ಆಕೆ ಹೆಚ್ಚೂ ಕಡಿಮೆ ನನ್ನನ್ನು ಎಳೆದುಕೊಂಡು ಹೋಗಿ ಆ ೨೩ನೇ ಬೆಡ್ ಮುಂದೆ ನಿಲ್ಲಿಸಿದಳು.. ಅಲ್ಲಿ ಮಲಗಿದ್ದ ಕ್ಷೀಣ ಕಾಯದ ವ್ಯಕ್ತಿಗೆ`` ತಾತ ನಿಮ್ ಮಗಳು ಬಂದಿದಾರ್ '' ನೋಡಿ.. '' ಅಂದು ನನ್ ಕೈಯ್ಯನ್ನು ಆತನ ಕೈಯ್ಯಲ್ಲಿಟ್ಟಳು.. ನನಗೆ ಎಷ್ಟು ದಿಗ್ಭಮೆಯಾಗಿತ್ತು, ಎಂಥ ಅಯೋಮಯ ಸ್ಥಿತಿಯಲ್ಲಿದ್ದೆ ಎಂದರೆ ನಾ ಏನೊಂದೂ ಹೇಳದಾದೆ.. ಸುಮ್ಮನೇ ಅವರ ಪಕ್ಕ ಕುಳಿತೆ ....
ಆತ ನನ್ನ ಕೈಯನ್ನು ತನ್ನ ಕೃಶವಾದ ಕೈಯ್ಯಲ್ಲಿ ಹಿಡಿದು ಅಸ್ಪಷ್ಟವಾಗಿ ಏನೋ ಹೇಳುತ್ತಿದ್ದರೆ ನನಗೆ ನನ್ನ ತಂದೆಯ ನೆನಪು ಒತ್ತರಿಸಿ ಬರುತ್ತಿತ್ತು.. ಅವರ ಮಾತಿಗೆಲ್ಲಾ ತಲೆ ಆಡಿಸುತ್ತಾ . ಕೆಲವು ಪ್ರಶ್ನೆಗಳಿಗೆ ನನಗೆ ತಿಳಿದ ರೀತಿ ಉತ್ತರಿಸುತ್ತಾ, ಇಲ್ಲಿಗೆ ನಾನು ಬಂದ ಎಂಬುದನ್ನೇ ಮರೆತು ಪಕ್ಕದಲ್ಲೇ ಕುಳಿತುಬಿಟ್ಟೆ..
ಸ್ವಲ್ಪ ಸಮಯದ ನಂತರ ಆತನಿಗೆ ಬಿಕ್ಕಳಿಕೆ ಬಂತು.. ನಾನು ನನ್ನ ಬ್ಯಾಗಲ್ಲಿದ್ದ ಬಾಟಲ್ ನಿಂದ ನೀರು ಕುಡಿಸಿದೆ. ಎರಡು ಗುಟುಕು .. ಮೂರನೇ ಗುಟುಕು ಒಳಗೆ ಹೋಗಲಿಲ್ಲ.. ಆತನ ಕಣ್ಣುಗಳಲ್ಲಿ ಇದ್ದ ಕಾಂತಿ ಮಾಯವಾದಂತೆ ಅನ್ನಿಸಿತು!
ತಕ್ಷಣ ಗಾಭರಿಯಿಂದ ಅಲ್ಲೇ ಇದ್ದ ಡಾಕ್ಟರ್ ನ ಕರೆದೆ.. ಅವರು ಬಂದು.. ಚೆಕ್ ಮಾಡಿ ` ಸಾರಿ ಮ್ಯಾ ಡಂ.. ಹಿ ಈಸ್ ನೋ ಮೋರ್ '' ಅಂದರು. ನಾನು ``ಇವರು ಯಾರಂತ ನಂಗೊತ್ತಿಲ್ಲ ಸರ್....'' ಅಂದೆ.. ``ಮತ್ತೆ ಇಷ್ಟು ಹೊತ್ತು ಅವರ ಜೊತೆ ಮಾತಾಡ್ತಿದ್ರಿ?'' ಅಂದ್ರು.
ಅಷ್ಟು ಹೊತ್ತಿಗೆ ನನ್ನ ಕರೆತಂದಿದ್ದ ನರ್ಸ್ ಬಂದು.. ``ಸಾರಿ ಮ್ಯಾಡಂ ಈ ಪೇಷಂಟ್ ಕಡೆಯೋರು ಇವರು.. ನಾನು ಕನ್ಫ್ಯೂಸ್ ಮಾಡಿಕೊಂಡೆ....'' ಅಂದ್ರು.
ಆಗ ಅಲ್ಲಿ ಬಂದ ನನ್ನ ಪರಿಚಿತರ ತಮ್ಮ ಬಂದ... ``ಓ ಇಲ್ಲಿದೀರಾ? ನಮ್ಮಕ್ಕ ಇರೋದು ಬೇರೆ ಕಡೆ ಬನ್ನಿ...'' ಅಂತ ಕರೆದ.. ನನಗೆ ಮನಸ್ಸು ತಳಮಳಗೊಂಡಿದ್ದರಿಂದ ಅವರಿಗೆ ಮತ್ತೆ ಬರ್ತೀನಿ.. ಕೆಲಸವಿದೆ ಅಂತ ಹೇಳಿ, ಸ್ವಲ್ಪ ಹಣ ಕೊಟ್ಟು, ಅಲ್ಲಿ ಹೆಚ್ಚು ಸಮಯ ನಿಲ್ಲದೇ ಮನೆಗೆ ಹಿಂತಿರುಗಿದೆ..
ಸ್ವಲ್ಪಕಾಲ ಧ್ಯಾನ ಮಾಡಿದ ನಂತರ ಮನಸ್ಸು ತಿಳಿಯಾಯ್ತು....
ಯಾವುದು ಶಾಶ್ವತ?
ಕವಿಯ ಮನಸ್ಸಿನಲ್ಲಿ ಒಂದು ಸುಂದರವಾದ ಭಾವ ಒಂದು ಕವನದ ಸಾಲಿನ ರೂಪದಲ್ಲಿ ತನ್ನಿಂದತಾನೆ ಹುಟ್ಟುತ್ತದೆ..ನಂತರ ಕವಿ ಅದಕ್ಕೆ ತನ್ನ ಕಲ್ಪನೆಯಲ್ಲೊಂದು ರೂಪು ನೀಡಿ, ತನ್ನ ಭಾಷಾಜ್ಞಾನ, ಪದ ಸಂಪತ್ತು ಹಾಗೂ ಛಂದಸ್ಸಿನ ಅರಿವಿನ ಬಲದಿಂದ ಒಂದು ಕವನರೂಪವನ್ನು ಕೊಡುತ್ತಾನೆ..,
ಅದನ್ನು ಪುನಃ ಪುನಃ ಓದಿ ತನ್ನ ಮನಸ್ಸಿಗೆ ಒಪ್ಪುವಂತೆ, ಲೋಪದೋಷಗಳಿರದಂತೆ ತಿದ್ದುತ್ತಾನೆ...ಆಗ ಒಂದು ಕಾವ್ಯದ ಸೃಷ್ಟಿಯಾಗುತ್ತದೆ.
ಕವಿಯಾಗ ಅದನ್ನು ಸದಭಿರುಚಿ/ಸಮಾನಾಭಿರುಚಿ ಉಳ್ಳವರಿಗೆ ಓದಿ ತೋರಿಸಿ ಆನಂದಿಸುತ್ತಾನೆ…
ನಂತರ ಕಾವ್ಯವು ಸಮರ್ಥ ಸಂಗೀತಗಾರನ ಕೈ ಸೇರುತ್ತದೆ...ಆತನು ಕವಿಯ ಭಾವನೆಗಳನ್ನು ಅರ್ಥೈಸಿಕೊಂಡು ಅದಕ್ಕೆ ಹೊಂದುವಂತಹ ಒಂದು ಸಂಗೀತ ಸಂಯೋಜನೆ ಮಾಡುತ್ತಾನೆ..ಆ ಕಾರ್ಯ ಅವನಿಗೆ ಅಪರಿಮಿತವಾದ ಸಂತೋಷವನ್ನು ಹಾಗೂ ಆತ್ಮತೃಪ್ತಿಯನ್ನು ಕೊಡುತ್ತದೆ..
ಹೀಗೆ ಸಂಗೀತವನ್ನು ಪಡೆದ ಕವನ ಒಬ್ಬಗಾಯಕನ ಕೈಗೆ ಸೇರುತ್ತದೆ ..ಗಾಯಕನ ಶ್ರುತಿಬದ್ಧವಾಗಿ ಪಕ್ಕವಾದ್ಯ ಸಹಿತವಾಗಿ ಅದನ್ನು ಹಾಡುತ್ತಾನೆ ...ಅಸಂಖ್ಯಾತ ಕೇಳುವರು ಅದನ್ನು ಕೇಳಿ ಆನಂದಿಸುತ್ತಾರೆ ...ಗುನುಗುನಿಸುತ್ತಾರೆ..
ಹೊಸ ಹೊಸತರಲ್ಲಿ ಕವನದ ರಚನೆ ಯಾರದು, ಸಂಗೀತ ನಿರ್ದೇಶಕ ಯಾರು, ಗಾಯಕ/ಗಾಯಕಿ ಯಾರು ಎಂದು ತಳಿದಿದ್ದದರೂ ಕಾಲ ಕಳೆದಂತೆ ಕವಿಯ ಹೆಸರು, ನಂತರ ನಿರ್ದೇಶಕನ ಹೆಸರು, ಹಿನ್ನೆಲೆ ಸೇರಿದರೆ ಮತ್ತೆ ವರ್ಷಗಳ ನಂತರಗಾಯಕರ ಹೆಸರು ಸಹಾ ಮರೆಯಬಹುದು .
ಅಂದರೆ.. ಯಾವ ಕವಿಯ ಹೃದಯದಲ್ಲಿ ಹುಟ್ಟಿ ಕಲ್ಪನೆಯಲ್ಲಿ ಬೆಳೆದು ಲೇಖನಿಯಲ್ಲಿ ರೂಪ ಪಡೆಯಿತೋ ಆ ಕವಿಯ ಹೆಸರು ಶಾಶ್ವತವಲ್ಲ.
ಯಾರ ಕೌಶಲ್ಯ ದಿಂದ ಕವನವು ಹಾಡಾಯ್ತೋ ಆ ವ್ಯಕ್ತಿಯ ಹೆಸರೂ ಅಲ್ಲ.. ಭಾವದುಂಬಿ ಹಾಡುವ ಗಾಯಕನ ಹೆಸರೂ ಅಲ್ಲ. ಇನ್ನು ಅದನ್ನಷ್ಟು ಸುಂದರ ಗೊಳಿಸಿದ ಪಕ್ಕವಾದ್ಯದವರು ಮುನ್ನೆಲೆಗೆ ಬರುವುದು ಅಪರೂಪ..
ಹಾಗಾದರೆ ಯಾವುದು ಶಾಶ್ವತ?
ಆಳವಾದ ಮನಮುಟ್ಟುವ ಸಾಹಿತ್ಯವುಳ್ಳ ದಕ್ಷ ಸಂಗೀತವಿದ್ದು ಅತ್ಯುತ್ತಮ ಗಾಯಕರಿಂದ ಹಾಡಲ್ಪಟ್ಟ ಆ ಹಾಡು ಶಾಶ್ವತ..
ಅದನ್ನು ಶಾಶ್ವತಗೊಳಿಸಲು ಕವಿ, ಸಂಗೀತ ನಿರ್ದೇಶಕ, ಗಾಯಕ, ಮೊದಲಾದ ಎಲ್ಲಾ ಹೆಸರಿನ ವ್ಯಾಮೋಹ ವಿಲ್ಲದೇ ಶ್ರಮಿಸಬೇಕು.. ಆಗ ಜನಮಾನಸದಲ್ಲಿ ಚಿರಂತನವಾಗಿ ಉಳಿಯುವಂತಹ ಕವನ ಜೀವಪಡೆಯುತ್ತದೆ..
ಆದರೆ ಅಂತಹ ನಿಸ್ವಾರ್ಥಿಗಳು ಯಾರಿದ್ದಾರೆ ಎಂದಿರಾ? ಇದ್ದಾರೆ..
ಅವರೇ ನಮ್ಮ ಜಾನಪದ ಕವಿಗಳು..
ಎಂತೆಂತಹ ಒಳ್ಳೆಯ ಕವನಗಳನ್ನು ಕೊಟ್ಟು ಹೋಗಿದಾರೇರೀ.. ಅಲ್ವಾ?
ನನಗಿಷ್ಟವಾಗುವ ಕವನ
ಹೆಣ್ಣಿನ ಜನ್ಮಕ್ಕೆ ಅಣ್ಣ ತಮ್ಮರು ಬೇಕು
ಬೆನ್ನ ತಟ್ಟುವರು ಸಭೆಯೊಳಗೆ
ಬೆನ್ನ ತಟ್ಟುವರು ಸಭೆಯೊಳಗೆ ಸಾವೀರ
ಹೊನ್ನ ಕಟ್ಟುವರು ಉಡಿಯೊಳಗೆ
ವಸುಮತಿ
೨೮-೧೦-೨೦೨೦
ಶುಕ್ರವಾರ, ಡಿಸೆಂಬರ್ 20, 2019
ಭಯ'
ಒಂದು ಪುಟ್ಟ ಊರಿತ್ತಂತೆ. ಒಂದಿನ ಆ ಊರಿಗೆ ಒಬ್ಬ ದೊಡ್ದ ರಾಕ್ಷಸ ಬಂದನಂತೆ.. ಅವನು ಬೆಟ್ಟ ಕ್ಕಿಂತಾ ಭಾರೀ ಗಾತ್ರದವನು.. ಅವನು ಬಂದು,'' ನಾನು ಈ ಊರಿನ ಜನರನ್ನೆಲ್ಲಾ ತಿಂತೀನಿ..'' ಅಂದನಂತೆ.
ಆಗ ಜನ ''ಬೇಡಪ್ಪಾ, ನಾವೇ ದಿನಕ್ಕೊಬ್ಬರನ್ನು ಕಳಿಸ್ತೇವೆ.. ನೀವು ಆರಾಮಾಗಿ ನಿನ್ನ ಗುಹೆಯಲ್ಲಿರು...'' ಅಂದರಂತೆ..
ಅದೇ ಪ್ರಕಾರ ದಿನಕ್ಕೊಬ್ಬ ಮನುಷ್ಯ ಹೋಗುತ್ತಿದ್ದನಂತೆ. ಅವನು ಗುಹೆಯ ಬಾಗಿಲ ಬಳಿ ಹೋದ ಕ್ಷಣವೇ ಸತ್ತು ಹೋಗುತ್ತಿದ್ದನಂತೆ..
ಹೀಗಿರುವಾಗ ಆ ಊರಿಗೆ ಒಬ್ಬ ತುಂಬಾ ಧೈರ್ಯವಂತ ರಾಜಕುಮಾರ ಬಂದನಂತೆ. ಎಲ್ಲರ ಹ್ಯಾಪು ಮೋರೆ ನೋಡಿ'' ಏನಾಯ್ತು? ಯಾಕೆಲ್ಲ ಹೀಗಿದೀರಿ?'' ಅಂತ ಕೇಳಿದನಂತೆ.
ವಿಷಯ ತಿಳಿದು ಅವನು ಮರುದಿನ ಅವನೇ ಗುಹೆಯ ಬಾಗಿಲಲ್ಲಿ ನಿಂತನಂತೆ.. ನೋಡುತ್ತಾನೆ ಆ ರಾಕ್ಷಸ ಬೆಟ್ಟಕ್ಕಿಂತ ದೊಡ್ದದು!. ಆದರೂ ಏನಾಗುತ್ತೋ ನೊಡೋಣ ಅಂತ ಮುಂದೆ ನಡೆದನಂತೆ.. ಅವನು ಮುಂದೆ ಸಾಗಿದಂತೆಲ್ಲಾ ಆ ರಕ್ಕಸನ ಗಾತ್ರ ಕಡಿಮೆ ಆಗ್ತಿತ್ತಂತೆ.. ಅದರ ತೀರಾ ಸಮೀಪ ಹೋದಾಗ ಅದು ಒಂದು ಕೈಯ್ಯಲ್ಲಿ ಹಿಡಿಯುವಷ್ಟಾಯಿತಂತೆ.. ರಾಜಕುಮಾರ ಅದನ್ನು ಸಾಯಿಸುವ ಮೊದಲು ಅದನ್ನು '' ನೀನು ಯಾರು?'' ಅಂತ ಕೇಳಿದನಂತೆ
.
ಅದಕ್ಕೆ ಅದು ಉತ್ತರಿಸಿತಂತೆ..
...
....
....
...
''ನಾನು ಭಯ''
ಸಮುದ್ರಮಥನ
ಮರಣ ಬಾರದಂತೆ ಇರಲು
ಸುರರು ಅಸುರರಂದು ಬಯಸಿ
ಗುರುವಿನಲ್ಲಿ ಅವರ ಬಯಕೆಯನ್ನು ತಿಳಿಸಲು l
ಶರಧಿಯನ್ನು ಮಥಿಸಿ ನೀವು
ದೊರೆವುದಾಗ ನಿಮಗೆ ಸುಧೆಯು
ಇರದು ಮರಣ ಬಾಧೆ ಅದನು ಕುಡಿಯಲೆನ್ನಲುll
ಗಿರಿಯ ಶರಧಿ ನಡುವಲಿಟ್ಟು
ಉರಗವನ್ನು ಅದಕ್ಕೆ ಸುತ್ತಿ
ಭರದಿ ಕಡಲ ಕಡೆಯಲಿಕ್ಕೆ ಸಿದ್ಧವಾದರು l
ಬರದೆ ಇರಲು ಬೆಟ್ಟ ಮೇಲೆ
ಹರಿಯು ಮರುಕವನ್ನು ತಾಳಿ
ಹೊರಲು ಬಂದ ಗಿರಿಯ ತಾನೆ ಕೂರ್ಮ ರೂಪದಿll
ನಾವು ಶಿರದ ಭಾಗವನ್ನು
ದೇವತೆಗಳು ಬಾಲವನ್ನು
ಯಾವ ಚರ್ಚೆಮಾಡದಂತೆ ಎಳೆವೆವೆನ್ನುತl
ಹಾವು ಹಿಡಿಯುತಸುರ ಸುರರು
ಧಾವತಿಯಲಿ ಮಥಿಸಲು ಸಂ
ಭಾವಿಸಿದವು ಹಲವು ದಿವ್ಯ ವಸ್ತುವಾಗಲೇll
ಇಂದು ಬಂದ ಕಡಲಿನಿಂದ
ಚೆಂದದೈರವತವು ಬಂತು
ಬಂದನೊಬ್ಬ ದೇವ ವೈದ್ಯ ಹಿಡಿದು ಔಷಧl
ಮಂದಗಮನೆಯಾಗಿ ಬಂದ
ಇಂದಿರೆಯನು ಹರಿಯು ವರಿಸಿ
ಮುಂದೆ ದೊರೆತ ಕೌಸ್ತುಭವನು ಧರಿಸಿಕೊಂಡನುll
ಕಾಲಕೂಟ ವಿಷವು ಬರಲು
ಫಾಲನೇತ್ರ ಭರದಿ ಬಂದು
ಲೀಲೆಯಿಂದ ವಿಷವು ಕುಡಿದು ಭಯವ ಹರಿಸಿದl
ಮೇಳವಿಸುತ ಕಡೆಯುತಿರಲು
ಲೋಲಜಾಕ್ಷಿ ಮೋಹನಾಂಗಿ
ಪಾಲಗಡಲಿನಿಂದ ಸುಧೆಯ ಕಲಶ ತಂದಳುll
ಕೆಟ್ಟ ಗುಣದ ರಕ್ಕಸರಿಗೆ
ಕೊಟ್ಟುಬಿಡಲು ಸುಧೆಯ ನಾವು
ದುಷ್ಟತನದ ಜಗವಸುಡುವರೆಂದು ಚಿಂತಿಸಿl
ಶಿಷ್ಟರಾದ ಸುರರಿಗಾಗ
ತುಷ್ಟಳಾಗಿ ಸುಧೆಯ ಕೊಡಲು
ಗುಟ್ಟಿನಲ್ಲಿ ರಾಹುವೆಂಬ ದೈತ್ಯ ಕುಡಿದನುll
ಭುವನವಂದ್ಯಳಾದ ದೇವಿ
ಅವನ ಮೋಸವನ್ನು ಅರಿತು
ತವಕದಿಂದ ಅವನ ರುಂಡವನ್ನು ತರಿದಳುl
ದವಡ ರಾಕ್ಷಸಾಧಮರಿಗೆ
ಅವಳು ಹರಿಯ ಮಾಯೆಯೆಂಬ
ಅವಗತಿಯನು ಕಳೆದುಕೊಂಡು ಮೂರ್ಖರಾದರುll
ಜಡತೆಯನ್ನು ತೊರೆದು ನಾವು
ಕಡೆಯುತಿರಲು ಮನದ ಶರಧಿ
ಪಡೆಯಬಹುದು ಜ್ಞಾನವೆಂಬ ದಿವ್ಯ ಸುಧೆಯನುl
ತೊಡೆದು ಕೆಟ್ಟ ಗುಣಗಳನ್ನು
ಹಿಡಿದು ಸತ್ಯ ಮಾರ್ಗವನ್ನು
ನಡೆಯುವವನು ಬಾಳಿನಲ್ಲಿ ಜಯವ ಪಡೆವನುll
ವಸುಮತಿ
೧೯-೧೨-೨೦೧೯
ಬುಧವಾರ, ನವೆಂಬರ್ 21, 2018
ಸತ್ಯ ಕಥಾ
ಒಂದು ಸುಂದರ ಹಳ್ಳಿಯಲ್ಲಿ ಇಬ್ಬರು ಸಹೋದರಿಯರಿದ್ದರು. ಒಬ್ಬಳು ಸತ್ಯಾ ಇನ್ನೊಬ್ಬಳು ಕಥಾ. ಇಬ್ಬರೂ ಅತ್ಯಪೂರ್ವ
ಸುಂದರಿಯರು. ಸುಗುಣಶೀಲರು.
ಒಮ್ಮೆ ಅವರ ಊರಿಗೆ ಯಾತ್ರಿಕನೊಬ್ಬ ಬಂದ. ಅಲೆದಲೆದು ಆಯಾಸಗೊಂಡ ಆತನಿಗೆ ಆಶ್ರಯ, ಆಹಾರ ನೀಡಿ ಈ
ಸಹೋದರಿಯರು ಸತ್ಕರಿಸಿದರು. ಆತ ಬಲು ತುಷ್ಟನಾಗಿ ಹೊರಡುವ ಮೊದಲು ಅವರಿಗೊಂದು ಅತೀ ಸುಂದರವಾದ
ಕನ್ನಡಿಯನ್ನು ಉಡುಗೊರೆಯಾಗಿ ಕೊಟ್ಟು ಅದರಲ್ಲಿ ಯಾರು ನೋಡುತ್ತಾರೋ ಅವರ ಪ್ರತಿಬಿಂಬ ಕಾಣುವುದೆಂದು ತಿಳಿಸಿ
ಹೋದ.
ಆ ಮೊದಲು ಕನ್ನಡಿಯನ್ನೇ ನೋಡದ ಆ ಸೋದರಿಯರು ಕುತೂಹಲದಿಂದ ಅವರ ಮುಖಗಳನ್ನು ನೋಡಿಕೊಂಡರು.
‘ನಾನಿಷ್ಟು ಚೆಲುವೆಯೇ...’ ಎಂದು ಬೆರಗಾದರು.
ಸತ್ಯಾ “ ನೋಡು ಕಥಾ ನಾನೆಷ್ಟು ಸುಂದರಿ.. ನೀನು ಚೆನ್ನಾಗಿದ್ದೀ ಆದರೆ ನನ್ನ ಕಾಂತಿ ಜಾಸ್ತಿ..” ಎಂದಳು.
ಅದಕ್ಕೊಪ್ಪದ ಕಥಾ “ಇಲ್ಲ.. ನಾನೇ ಚೆಲುವೆ ...” ಎಂದಳು
ಹೀಗೇ ಅವರ ನಡುವೆ ವಾದ ಆರಂಭವಾಯ್ತು.. ಕೊನೆಗೆ ಅವರು ಊರ ನಡುವಿನ ಚೌಕದಲ್ಲಿ ಜನರನ್ನು ಕೇಳುವುದೆಂದು
ತೀರ್ಮಾನಿಸಿದರು.
ಮೊದಲು ಸತ್ಯಾ ಸರಳ ವೇಷ ಭೂಷಣ ಮತ್ತು ಅಗಾಧ ಆತ್ಮವಿಶ್ವಾಸದೊಂದಿಗೆ ಹಳ್ಳಿಯನ್ನು ಪ್ರವೇಶಿಸಿದಳು. ಎಲ್ಲಾ ಅವಳ
ಸೌಂದರ್ಯವನ್ನೇ ಮೆಚ್ಚುವರೆಂದು ಅವಳಿಗೆ ಖಚಿತವಾಗಿ ಗೊತ್ತಿತ್ತು.
ಆದರೆ ...
ಇದೇನಿದು!!! ಅವಳನ್ನು ಕಾಣುತ್ತಲೇ ಎಲ್ಲಾಆ ದೂರ ಹೋಗತೊಡಗಿದರು.. ಅವಳು “ಬನ್ನಿ...ಬನ್ನಿ...” ಎಂದು
ಕರೆಯತೊಡಗಿದಳು.. ಆದರೆ ಜನ ಇನ್ನೂ ವೇಗವಾಗಿ ದೂರ ಓಡಿದರು.. ಹೇಗಾದರೂ ಜನರನ್ನು ತನ್ನತ್ತ ಸೆಳೆಯಲೇ ಬೇಕೆಂದು
ಅವಳು ತನ್ನ ಬಟ್ಟೆಗಳನ್ನು ಕಳಚತೊಡಗಿದಳು.. ತಕ್ಷಣ ಎಲ್ಲಾ ಅವರವರ ಮನೆಯೊಳಗೆ ಸೇರಿಕೊಂಡು ಕಿಟಕಿ ಬಾಗಿಲುಗಳನ್ನೂ
ಮುಚ್ಚಿಕೊಂಡರು..
ಸತ್ಯಾ ತುಂಬಾ ನಿರಾಶಳಾದಳು.. ಸೋತ ಮುಖಹೊತ್ತು ಮನೆಗೆ ಹೋದಳು.
ಆಷ್ಟರಲ್ಲಿ ಕಥಾ ಸುಂದರ ಆಭೂಷಣಗಳನ್ನೂ , ಆಭರಣಗಳನ್ನು ತೊಂಟ್ಟು ಸಿದ್ಧವಾಗಿದ್ದಳು. ಅವಳು ಮುಗುಳು ನಗುತ್ತಾ
ಮೆಲ್ಲನೆ ಹಳ್ಳಿಯ ಚೌಕವನ್ನು ಸೇರುವುದೇ ತಡ ಎಲ್ಲಾ ಅವಳ ಸುತ್ತಾ ಸೇರ ತೊಡಗಿದರು..
“ ಓಹ್ ! ಎಂಥಾ ಚೆಲುವೆ!! ಅವಳ ದರ್ಶನದಿಂದ ಪಡೆದ ನಾವೇ ಅಷ್ಟವಂತರು ಬನ್ನಿ ನೀವೂ ನೋಡಿ.. ಬನ್ನಿ....” ಎಂದು ಜನ
ಗುಂಪು ಗುಂಪಾಗಿ ಅವಳನ್ನು ನೋಡಲು ಬಂದರು..
ಜಯಶೀಲಳಾದ ಮನೆಗೆ ಬಂದ ಕಥಾಳನ್ನು ದುಃಖಿತಳಾದ ಸತ್ಯಾ ಕೇಳಿದಳು.“ ಕಥಾ ನಾನು ನಿನ್ನಷ್ಟು ಚೆಲುವೆಯಲ್ಲ ಅನ್ನೋದೇ
ನಿಜವಿರಬಹುದು ಆದರೆ ಯಾಕೆ ನನ್ನನ್ನು ನೋಡಿದ ಕೂಡಲೇ ಜನ ದೂರವಾದರು ಎಂಬುದೇ ನನಗೆ ನೋವು ಕೊಡುತ್ತಿದೆ.
ಯಾಕೆ ಹೀಗಾಯಿತು...? ”
ಕಥಾ ನಗುತ್ತಾ ಹೇಳಿದಳು, “ ಇಲ್ಲ ಸತ್ಯಾ.. ನೀನೇ ನಿಜಕ್ಕೂ ಸುಂದರಿ.. ಆದರೆ ಜನ ಸತ್ಯವನ್ನು ತಾಳಿಕೊಳ್ಳಲಾರರು..
ಅದರಲ್ಲೂ ನಗ್ನ ಸತ್ಯ .. ಉಹೂ.. ಸಾಧ್ಯವೇ ಇಲ್ಲ.. ಅದಕ್ಕೇ ಅವರು ದೂರವಾದರು.. ಆದರೆ ನಾನು ಕಥಾ.. ನನ್ನ ಜೊತೆ
ಸತ್ಯದ ಜೊತೆ ಕಲ್ಪನೆಯ ಆಭರಣಗಳಿವೆ.. ಕುತೂಹಲದ ಆಭೂಷಣವಿದೆ.. ಅದರಿಂದ ಅವರೆಲ್ಲಾ ನನ್ನ ಕಡೆ ಆಕರ್ಷಿತರಾದರು..
ಸೋಮವಾರ, ಜುಲೈ 23, 2018
ಪತ್ರಕರ್ತರ ದಿವ್ಯ ಮೌನ
ಬೋಳುತಲೆ ಮತ್ತು ಡಾಕ್ಟರ್
ಬುಧವಾರ, ನವೆಂಬರ್ 16, 2016
ಅಸಹಾಯಕತೆ
ನಾನು ಶಾಲೆ ಮುಗಿಸಿಕೊಂಡು ಬರುವಾಗ ಸ್ವಲ್ಪ ಅಗತ್ಯ ವಸ್ತುಗಳನ್ನು ಖರೀದಿ ಮಾಡಬೇಕಾದ್ದರಿಂದ ಅರ್ಧ ದಾರಿಲಿ ಆಟೋದಿಂದ ಇಳಿದು ನನ್ನ ಕೆಲಸ ಮುಗಿಸಿಕೊಂಡು ಮನೆಗೆ ಹೊರಟೆ. ಮುಖ್ಯ ರಸ್ತೆಯ ವಾಹನ ದಟ್ಟಣೆ ಮತ್ತು ಪಲ್ಯೂಶನ್ ಗಳಿಂದ ಬಚಾವಾಗಲು ಒಳ ಹಾದಿಯಲ್ಲಿ ಹೋಗುವುದೆಂದು ತೀರ್ಮಾನಿಸಿ ಹೊರಟೆ.
ಒಂದು ಸ್ವಲ್ಪದೂರ ಸಾಗುವಷ್ಟರಲ್ಲಿ ಮಗುವೊಂದರ ಆಕ್ರಂದನ, ಹಿರಿಯರೊಬ್ಬರ ಕಿರುಚಾಟ ಕೇಳಿತು. ಮುಂದೆ ಹೋಗಿ ನೋಡಿದಾಗ ತಂದೆಯೊಬ್ಬರು ಮಗುವನ್ನು ಹಿಗ್ಗಾ ಮುಗ್ಗಾ ಥಳಿಸುತ್ತಿದ್ದರು. ಮಗು `` ಸ್ಕೂಲ್.... ಸ್ಕೂಲ್ ....''ಅಂತ ಆಳುತ್ತಾ ದೈನ್ಯವಾಗಿ ನನ್ನನ್ನು ನೋಡಿತು.
ಅದೇ ಮಗುವನ್ನು ಈಗ್ಗೆ ಎಂಟು -ಹತ್ತು ದಿನಗಳ ಹಿಂದೆ ಇದೇ ದಾರಿಯಲ್ಲಿ ಬಂದಾಗ ನಾನು ನೋಡಿದ್ದೆ. ಹರುಕು, ಹಳೆ ಬಟ್ಟೆ ತೊಟ್ಟಿದ್ದರೂ ಅದರ ಕಣ್ಣುಗಳಲ್ಲಿದ್ದ ಮಿಂಚು ನನ್ನನ್ನು ಸೆಳೆದಿತ್ತು. ಅವಳನ್ನು ಹತ್ತಿರ ಕರೆದು, ನನ್ನ ಬ್ಯಾಗಿನಲ್ಲಿದ್ದ ಚಾಕ್ಲೇಟನ್ನು ಅವಳ ಕೈಗಿತ್ತು `` ಯಾವ ಸ್ಕೂಲಿಗೆ ಹೋಗ್ತೀಯಾ ಪುಟ್ಟಿ? ನಿನ್ನ ಹೆಸರೇನು.....? ಅಂತ ಕೇಳಿದ್ದೆ..................
ಆ ಮಗು `` ಸ್ಕೂಲಿಗೆ ಹೋಗಲ್ಲಾ ಆಂಟಿ. ಮನೆ ಕೆಲ್ಸ ಮಾಡ್ತೀನಿ....'' ಅಂದಾಗ ನಾನು `` ನೀನು ಸ್ಕೂಲಿಗೆ ಹೋಗ್ಬೇಕಮ್ಮಾ.ನಿಮ್ಮ ಅಪ್ಪ ಅಮ್ಮಂಗೆ ಕೇಳು ಸ್ಕೂಲಿಗೆ ಸೇರ್ಸಿ ಅಂತ. ಹಟ ಮಾಡಿ ಆದ್ರೂ ಸ್ಕೂಲಿಗೆ ಸೇರ್ಬೇಕು. ಆಯ್ತಾ.....ನಿಂಗೆ ಪುಸ್ತಕ ಪೆನ್ಸಿಲ್ಲು ಎಲ್ಲಾ ನಾನು ಕೊಡಿಸ್ತೀನಿ.....?ಅಂತ ಅವಳ ತಲೆ ಸವರಿ ಏನೋ ದೊಡ್ದ ಕೆಲಸ ಮಾಡಿದ ತೃಪ್ತಿಯಿಂದ ಮನೆ ಸೇರಿದ್ದೆ.
ನನ್ನನ್ನು ನೋಡಿ ಮಗುವಿನ ಅಳು ಇನ್ನೂ ಹೆಚ್ಚಾಯ್ತು. ಅವಳನ್ನು ಬಡಿಯುತ್ತಿದ್ದ ಅವಳ ತಂದೆ ನನ್ನನ್ನು ನೋಡಿದರು. ಅಬ್ಬಾ! ಆ ಕೆಂಪು ಕಣ್ಣುಗಳ ಕ್ರೂರ ನೋಟಕ್ಕೆ ನಾನು ನಡುಗಿ ಹೋದೆ! ಆತ ಬಹುಶ: ಕುಡಿದಿದ್ದಿರಬಹುದು. ಅವರಿಗೆ ``ಮಗು ಸ್ಕೂಲ್ಗೆ ಸೇರಿಸಿ ಅಂತ ಹಟ ಮಾಡುವಂತೆ ಕುಮ್ಮಕ್ಕು ಕೊಟ್ಟಿದ್ದು ಇವಳೇ.....'' ಅಂತ ಗೊತ್ತಾಯಿತೇನೋ. ನನ್ನನ್ನು ದುರುಗುಟ್ಟಿಸಿಕೊಂಡು ನೋಡುತ್ತಾ ಮಗುವಿನ ಕೆನ್ನೆಗೆ ಛಟಾರನೆ ಹೊಡೆದು, ತಿರಸ್ಕಾರ ಕೋಪಗಳಿಂದ ನನ್ನತ್ತ ನೋಡಿ, ನನಗೆ ಹೋಗುವಂತೆ ಸನ್ನೆ ಮಾಡಿದರು. ಆತ ನನಗೇ ಹೊಡೆದಂತೆ ಭಾಸವಾಗಿ ಅಲ್ಲಿಂದ ಹೊರಟೆ. ಭಯ ಉದ್ವೇಗಗಳಿಂದ ನನ್ನ ಎದೆ ಬಡಿತ ನನಗೇ ಕೇಳುವಂತೆ ಅನ್ನಿಸಿತು.
ದಾರಿಯಲ್ಲಿ ಅಳುವುದು ಸರಿ ಅಲ್ಲ ಎಂದು ಕರ್ಚೀಫ್ ನಿಂದ ಬಾಯನ್ನು ಭದ್ರವಾಗಿ ಮುಚ್ಚಿಕೊಂಡು, ಸರಸರ ಮನೆ ಸೇರಿ, ಮನಸ್ಸು ಹಗುರವಾಗುವ ವರೆಗೂ ಬಿಕ್ಕಿ ಬಿಕ್ಕಿ ಅತ್ತೆ.........