ಬುಧವಾರ, ನವೆಂಬರ್ 16, 2016

ನನ್ನಪ್ಪ

೨  ವರ್ಷದಲ್ಲಿ- ನನ್ನಪ್ಪನಿಗೆ ಎಲ್ಲಾ ಗೊತ್ತು.   4 ವರ್ಷದಲ್ಲಿ- ನನ್ನಪ್ಪನಿಗೆ ತುಂಬಾ ವಿಷಯಗಳು ಗೊತ್ತು.
5 ವರ್ಷದಲ್ಲಿ- ನನ್ನಪ್ಪನಿಗೆ ನಿಮ್ಮಪ್ಪನಿಗಿಂತಾ ಹೆಚ್ಚು ಗೊತ್ತು.
6  ವರ್ಷದಲ್ಲಿ- ನನ್ನಪ್ಪನಿಗೆ ಎಲ್ಲಾ ಗೊತ್ತೆಂದು ಅನ್ನಿಸಲ್ಲ...
8 ವರ್ಷದಲ್ಲಿ- ನನ್ನಪ್ಪನಿಗೆ ಈಗಿನ ಕಾಲದ ಕೆಲವು ವಿಷಯ ತಿಳಿಯದು...
10 ವರ್ಷದಲ್ಲಿ- ನನ್ನಪ್ಪನಿಗೆ ವಿಷಯ ನೆನಪಿರಕ್ಕೆ  ಗೊತ್ತಿರಕ್ಕೆ ಸಾಧ್ಯವಿಲ್ಲ.
12 ವರ್ಷದಲ್ಲಿ- ನನ್ನಪ್ಪನಿಗೆ ಗಮನ ಕೊಡಬೇಕಿಲ್ಲ.. ಹಳೇ ಕಾಲದವ ..
14 ವರ್ಷದಲ್ಲಿ- ನನ್ನಪ್ಪನಾ? ಅವನಷ್ಟು ಗೊಡ್ಡು ಸಂಪ್ರದಾಯದವರ್ಯಾರೂ ಇಲ್ಲ.. ಛೇ!
21 ವರ್ಷದಲ್ಲಿ- ನನ್ನಪ್ಪನಿಗೆ ಈ ಬಗ್ಗೆ ತಿಳಿದಿರಬಹುದು.. ಅವರನ್ನೊಮ್ಮೆ ಕೇಳಬೇಕೇನೋ?
25 ವರ್ಷದಲ್ಲಿ- ನನ್ನಪ್ಪನ ಅಭಿಪ್ರಾಯ ಕೇಳೋದೊಳ್ಳೇದು.. ಅವರೆಷ್ಟಾದರೂ ಅನುಭವಸ್ಥರು...
35 ವರ್ಷದಲ್ಲಿ- ನನ್ನಪ್ಪನ ಅಭಿಪ್ರಾಯ ಕೇಳದೇ ಏನೂ ಮಾಡಲ್ಲ..
40  ವರ್ಷದಲ್ಲಿ-  ಅಬ್ಬಾ!ನನ್ನಪ್ಪ ಇಂಥ ಸಂದರ್ಭಗಳನ್ನು ಹೇಗೆ ನಿಭಾಯಿಸಿದರೋ!!  ಅವರಷೃ ತಾಳ್ಮೆ , ಜಾಣ್ಮೆ ನನಗಿಲ್ಲವಲ್ಲ!
 50 ವರ್ಷದಲ್ಲಿ- ನನ್ನಪ್ಪನಿಗೆ ಎಲ್ಲಾ ವಹಿಸಿಬಿಡ್ತೀನಿ.. ಅವರ ಜಾಣ್ಮೆಯನ್ನು  ಮೀರಿಸಕ್ಕಾಗಲ್ಲ ನಂಗೆ .. ಇಂಥ ಸಮಸ್ಯೆಗಳನ್ನು ನಿಭಾಯಿಸಕ್ಕೆ ಅವರೇ ಸರಿ


ಮಂಗಳವಾರ, ನವೆಂಬರ್ 1, 2016

ನಿಷ್ಕಾಮ ಕರ್ಮ


ನಿಷ್ಕಾಮ ಕರ್ಮ ಎಂಬುದೊಂದಿದೆ ಅಂದೇ ನನಗನ್ನಿಸುವುದಿಲ್ಲ.. ನಾವು ಮಾಡುವ ಪ್ರಯಿಯೊಂದು ಕೆಲಸಕ್ಕೂ ಬಯಸಲೀ ಬಿಡಲೀ ಪ್ರತಿ ಫಲ ಸಿಕ್ಕೇ ಸಿಗುತ್ತದ್ದೆ... ನ್ಯೂಟನ್ ನ ಮೂರನೇ ನಿಯಮದ ಹಾಗೆ ` ಪ್ರತಿಯೊಂದು ಕ್ರಿಯೆಗೂ ಪ್ರತಿಕ್ರಿಯೆ ಇದ್ದೇ ಇರುತ್ತದೆ.'
ಏನೂ ಅರಿಯದ ಹಸು ಕಂದಮ್ಮನೂ ತಾಯ ಸೇವೆಗೆ ತನ್ನ ಆಟ ಪಾಟಗಳ ಮೂಲಕ  ಪ್ರತಿಫಲ ಕೊಟ್ಟೇ ಬಿಡುತ್ತದೆ. ಅಲ್ಲವೇ? ಎಲ್ಲಾ ಕೆಲಸಕ್ಕೂ ಪ್ರತಿಯಾಗಿ ಹಣವೇ ಸಿಗಬೇಕೆಂದಿಲ್ಲ.. ಅದು ಆತ್ಮ ತೃಪ್ತಿಯ ರೂಪದಲ್ಲೋ, ಮೆಚ್ಚುಗೆಯ ರೂಪದಲ್ಲೋ, ಹೀಗೆ ಯಾವುದೇ ರೂಪದಲ್ಲಿ ದೊರೆಯಬಹುದು.
 ಅಥವಾ  ಅವಹೇಳನವೋ ನಿಂದನೆಯೋ, ಉಪೇಕ್ಷೆಯೋ ಆಗಿದ್ದರೀ ಇರಬಹುದು. ಅದೂ ಒಂದು ಪ್ರತಿ ಫಲ ತಾನೆ?  ಋಣಾತ್ಮಲವಾದದ್ದು, ಯಾರೂ ಬಯಸದ್ದು ಆದರೂ

 ಯಾರಾ ದರೂ ನಿಷ್ಕಾಮ ಕರ್ಮ ಮಾಡುತ್ತಾರೆಂದೂ ನನಗನ್ನಿಸಲ್ಲ..  ಸರ್ವಸಂಗ ಪರಿತ್ಯಾಗಿಯಾಗಿ ತಪಸ್ಸು ಮಾಡುವವನೂ ಮೋಕ್ಷ ಕಾಮಿ ಯಾಗಿರುತ್ತಾನೆ

ಹೆಜ್ಜೆ ಗುರುತುಗಳು

                                                  
 ಆ ಸಜ್ಜನ ಬಾಳ ಹಾದಿಯಲ್ಲಿ   ಸಾಗುತ್ತಿದ್ದ.. ತನ್ನೊಡನೆ ದೇವರಿದ್ದಾನೆಂಬ ವಿಶ್ವಾಸದಿಂದ... ಇಂದು ಕ್ಷಣ ಅವನು ಹಿಂತಿರುಗಿ ತಾನು ಸಾಗಿ ಬಂದ ದಾರಿಯ ಸಿಂಹಾವಲೋಕನ ಮಾಡಿದ.. ಅವನ ವಿಶ್ವಾಸ ಸತ್ಯವಾಗಿತ್ತು!! ದಾರಿಯುದ್ದಕ್ಕೂ ಎರಡು ಜೊತೆ ಹೆಜ್ಜೆ ಗುರುತುಗಳು!!
 ಆದರೆ ... ಇದೇನಿದು??? ಕೆಲವು ಸ್ಥಳಗಳಲ್ಲಿ ಮಾತ್ರ ಒಂದೇ ಜೊತೆ ??
 ಅವನು ಆ ಸಂದರ್ಭಗಳನ್ನು ಮೆಲುಕು  ಹಾಕುವಾಗ ಅವನು ಮ್ಲಾನ ಚಿತ್ತನಾದ.. ಕಾರಣ ಅವೆಲ್ಲವೂ ಆತನ ಅತ್ಯಂತ ದು:ಖದ, ದೀನಾವಸ್ಥೆಯಲ್ಲಿದ್ದ ದಿನಗಳಾಗಿದ್ದವು..
 ``ಸದಾ ನನ್ನೊಂದಿಗಿದ್ದ ದಯಾಮಯನಾದ ಭಗವಂತ ನಾನು ದು:ಖಿತನಾದಾಗ ಕೈಬಿಟ್ಟನೇ?;;.. ಅವನು ದೇವರನ್ನೇ `ಯಾಕೆ ನೀ ಹೀಗೆ ಮಾಡಿದೆ?.. ಸದಾ ನನ್ನೊಂದಿಗೆ ಇರುತ್ತೀ ಎಂದು ಎಷ್ಟು ದೃಢವಾಗಿ ನಂಬಿದ್ದೆನಲ್ಲ? ನನ್ನ ಹೀನಾವಸ್ಥೆಯಲ್ಲೇ ಒಂಟಿ ಮಾಡಿದ್ದು ನ್ಯಾಯವೇ?....'' ಎಂದು ದೈನ್ಯವಾಗಿ ಕೇಳಿದ..

 ಅದಕ್ಕೆ  ಕರುಣೆಯ ಜೇನಿನಲ್ಲದ್ದಿದಂಥ ಭಗವಂತನ   ದನಿ ಕೇಳಿ ಬಂತು `` ಮಗೂ, ನೀನು ತಪ್ಪು ತಿಳಿದಿದ್ದೀ.. ಯಾವಾಗ ನೀನು ಅತ್ಯಂತ ಶೋಕದಲ್ಲಿದ್ದೆಯೋ , ಆ ಜಾಗದಲ್ಲೆಲ್ಲಾ ನೀನು ಕಾಣುವ ಒಂದೇ ಜೊತೆ ಹೆಜ್ಜೆ ಗುರುತುಗಳು ನನ್ನವು.. ಆಗ ನಾನು ನಿನ್ನನ್ನು ನನ್ನ ಕೈಗಳಲ್ಲಿ ಎತ್ತಿಕೊಂಡು ನಡೆಯುತ್ತಿದ್ದೆ....''

ದೇವರ ದರ್ಶನ

ಹೋಗಿದ್ದು ದೇವಸ್ಥಾನಕ್ಕೆ.. ದೇವರ ದರ್ಶನಕ್ಕಾಗಿ....

ಕಂಡದ್ದು...

ಕ್ಯೂನಲ್ಲಿ ನೂಕುತ್ತಿದ್ದ ಅಸಹನೆ ತುಂಬಿದ ಜನರನ್ನು, 

ಎಷ್ಟೋ ದಿನಗಳಿಂದ ಉಪವಾಸ ಮಾಡಿದಂತೆ ದೀನ ಮುಖದಿಂದ ಬೇಡುತ್ತಿದ್ದ ಮುದುಕನನ್ನು, ....

ಚಪ್ಪಲಿ ಕಾಯುತ್ತಿದ್ದ ಹುಡುಗನಿಗೆ ಎರಡು ರೂಪಾಯಿಗೆ ಚೌಕಾಸಿ ಮಾಡುತ್ತಿದ್ದ,
ಮೈತುಂಬಾ ಒಡವೆ ಹೇರಿಕೊಂಡಿದ್ದ ಹೆಂಗಸರನ್ನು...

ಪಿಕ್ ಪಾಕೆಟ್ ಮಾದಲಿಕ್ಕೆ ಹೋಗಿ ಸಿಕ್ಕಿಬಿದ್ದ ಯುವಕನನ್ನು ಚಚ್ಚುತ್ತಾ ವಾಚಾಮಗೋಚರವಾಗಿ ನಿಂದಿಸುತ್ತಿದ್ದ ಭಕ್ತ ಜನರನ್ನು...

ಮಂಗಳಾರತಿಗೆ ಬೀಳುವ ದಕ್ಷಿಣೆಗೆ ಅನುಸಾರವಾಗಿ ಪ್ರಸಾದ ನೀಡುವ ಪೂಜಾರಿಯನ್ನು...

ಎಲ್ಲಾ ನೋಡುತ್ತಾ ಹೂವಿನ ಅಲಂಕಾರದಲ್ಲಿ. ಬಣ್ಣಬಣ್ಣda ದೀಪಗಳ ನಡುವೆ ಮುಚ್ಚಿ ಹೋದ ಪರಶಿವನನ್ನು..

ದೇವಾಲಯದಿಂದ ಹೊರಗೆ ಬಂದಾಗ.. ಆನಂದದ ಬದಲಾಗಿ ಏನೋ ವಿಷಾದ...