ಬುಧವಾರ, ನವೆಂಬರ್ 21, 2018

ಸತ್ಯ ಕಥಾ

ಸತ್ಯ ಕಥಾ
ಒಂದು ಸುಂದರ ಹಳ್ಳಿಯಲ್ಲಿ ಇಬ್ಬರು ಸಹೋದರಿಯರಿದ್ದರು. ಒಬ್ಬಳು ಸತ್ಯಾ ಇನ್ನೊಬ್ಬಳು ಕಥಾ. ಇಬ್ಬರೂ ಅತ್ಯಪೂರ್ವ
ಸುಂದರಿಯರು. ಸುಗುಣಶೀಲರು.
ಒಮ್ಮೆ ಅವರ ಊರಿಗೆ ಯಾತ್ರಿಕನೊಬ್ಬ ಬಂದ. ಅಲೆದಲೆದು ಆಯಾಸಗೊಂಡ ಆತನಿಗೆ ಆಶ್ರಯ, ಆಹಾರ ನೀಡಿ ಈ
ಸಹೋದರಿಯರು ಸತ್ಕರಿಸಿದರು. ಆತ ಬಲು ತುಷ್ಟನಾಗಿ ಹೊರಡುವ ಮೊದಲು ಅವರಿಗೊಂದು ಅತೀ ಸುಂದರವಾದ
ಕನ್ನಡಿಯನ್ನು ಉಡುಗೊರೆಯಾಗಿ ಕೊಟ್ಟು ಅದರಲ್ಲಿ ಯಾರು ನೋಡುತ್ತಾರೋ ಅವರ ಪ್ರತಿಬಿಂಬ ಕಾಣುವುದೆಂದು ತಿಳಿಸಿ
ಹೋದ.
ಆ ಮೊದಲು ಕನ್ನಡಿಯನ್ನೇ ನೋಡದ ಆ ಸೋದರಿಯರು ಕುತೂಹಲದಿಂದ ಅವರ ಮುಖಗಳನ್ನು ನೋಡಿಕೊಂಡರು.
‘ನಾನಿಷ್ಟು ಚೆಲುವೆಯೇ...’ ಎಂದು ಬೆರಗಾದರು.
ಸತ್ಯಾ “ ನೋಡು ಕಥಾ ನಾನೆಷ್ಟು ಸುಂದರಿ.. ನೀನು ಚೆನ್ನಾಗಿದ್ದೀ ಆದರೆ ನನ್ನ ಕಾಂತಿ ಜಾಸ್ತಿ..” ಎಂದಳು.
ಅದಕ್ಕೊಪ್ಪದ ಕಥಾ “ಇಲ್ಲ.. ನಾನೇ ಚೆಲುವೆ ...” ಎಂದಳು
ಹೀಗೇ ಅವರ ನಡುವೆ ವಾದ ಆರಂಭವಾಯ್ತು.. ಕೊನೆಗೆ ಅವರು ಊರ ನಡುವಿನ ಚೌಕದಲ್ಲಿ ಜನರನ್ನು ಕೇಳುವುದೆಂದು
ತೀರ್ಮಾನಿಸಿದರು.
ಮೊದಲು ಸತ್ಯಾ ಸರಳ ವೇಷ ಭೂಷಣ ಮತ್ತು ಅಗಾಧ ಆತ್ಮವಿಶ್ವಾಸದೊಂದಿಗೆ ಹಳ್ಳಿಯನ್ನು ಪ್ರವೇಶಿಸಿದಳು. ಎಲ್ಲಾ ಅವಳ
ಸೌಂದರ್ಯವನ್ನೇ ಮೆಚ್ಚುವರೆಂದು ಅವಳಿಗೆ ಖಚಿತವಾಗಿ ಗೊತ್ತಿತ್ತು.
ಆದರೆ ...
ಇದೇನಿದು!!! ಅವಳನ್ನು ಕಾಣುತ್ತಲೇ ಎಲ್ಲಾಆ ದೂರ ಹೋಗತೊಡಗಿದರು.. ಅವಳು “ಬನ್ನಿ...ಬನ್ನಿ...” ಎಂದು
ಕರೆಯತೊಡಗಿದಳು.. ಆದರೆ ಜನ ಇನ್ನೂ ವೇಗವಾಗಿ ದೂರ ಓಡಿದರು.. ಹೇಗಾದರೂ ಜನರನ್ನು ತನ್ನತ್ತ ಸೆಳೆಯಲೇ ಬೇಕೆಂದು
ಅವಳು ತನ್ನ ಬಟ್ಟೆಗಳನ್ನು ಕಳಚತೊಡಗಿದಳು.. ತಕ್ಷಣ ಎಲ್ಲಾ ಅವರವರ ಮನೆಯೊಳಗೆ ಸೇರಿಕೊಂಡು ಕಿಟಕಿ ಬಾಗಿಲುಗಳನ್ನೂ
ಮುಚ್ಚಿಕೊಂಡರು..
ಸತ್ಯಾ ತುಂಬಾ ನಿರಾಶಳಾದಳು.. ಸೋತ ಮುಖಹೊತ್ತು ಮನೆಗೆ ಹೋದಳು.
ಆಷ್ಟರಲ್ಲಿ ಕಥಾ ಸುಂದರ ಆಭೂಷಣಗಳನ್ನೂ , ಆಭರಣಗಳನ್ನು ತೊಂಟ್ಟು ಸಿದ್ಧವಾಗಿದ್ದಳು. ಅವಳು ಮುಗುಳು ನಗುತ್ತಾ
ಮೆಲ್ಲನೆ ಹಳ್ಳಿಯ ಚೌಕವನ್ನು ಸೇರುವುದೇ ತಡ ಎಲ್ಲಾ ಅವಳ ಸುತ್ತಾ ಸೇರ ತೊಡಗಿದರು..
“ ಓಹ್ ! ಎಂಥಾ ಚೆಲುವೆ!! ಅವಳ ದರ್ಶನದಿಂದ ಪಡೆದ ನಾವೇ ಅಷ್ಟವಂತರು ಬನ್ನಿ ನೀವೂ ನೋಡಿ.. ಬನ್ನಿ....” ಎಂದು ಜನ
ಗುಂಪು ಗುಂಪಾಗಿ ಅವಳನ್ನು ನೋಡಲು ಬಂದರು..
ಜಯಶೀಲಳಾದ ಮನೆಗೆ ಬಂದ ಕಥಾಳನ್ನು ದುಃಖಿತಳಾದ ಸತ್ಯಾ ಕೇಳಿದಳು.“ ಕಥಾ ನಾನು ನಿನ್ನಷ್ಟು ಚೆಲುವೆಯಲ್ಲ ಅನ್ನೋದೇ
ನಿಜವಿರಬಹುದು ಆದರೆ ಯಾಕೆ ನನ್ನನ್ನು ನೋಡಿದ ಕೂಡಲೇ ಜನ ದೂರವಾದರು ಎಂಬುದೇ ನನಗೆ ನೋವು ಕೊಡುತ್ತಿದೆ.
ಯಾಕೆ ಹೀಗಾಯಿತು...? ”

ಕಥಾ ನಗುತ್ತಾ ಹೇಳಿದಳು, “ ಇಲ್ಲ ಸತ್ಯಾ.. ನೀನೇ ನಿಜಕ್ಕೂ ಸುಂದರಿ.. ಆದರೆ ಜನ ಸತ್ಯವನ್ನು ತಾಳಿಕೊಳ್ಳಲಾರರು..
ಅದರಲ್ಲೂ ನಗ್ನ ಸತ್ಯ .. ಉಹೂ.. ಸಾಧ್ಯವೇ ಇಲ್ಲ.. ಅದಕ್ಕೇ ಅವರು ದೂರವಾದರು.. ಆದರೆ ನಾನು ಕಥಾ.. ನನ್ನ ಜೊತೆ
ಸತ್ಯದ ಜೊತೆ ಕಲ್ಪನೆಯ ಆಭರಣಗಳಿವೆ.. ಕುತೂಹಲದ ಆಭೂಷಣವಿದೆ.. ಅದರಿಂದ ಅವರೆಲ್ಲಾ ನನ್ನ ಕಡೆ ಆಕರ್ಷಿತರಾದರು..