ಶನಿವಾರ, ಸೆಪ್ಟೆಂಬರ್ 20, 2014

ಅಲ್ಲವೆ?


`` ನೀನಿನ್ನೂ ಹಿಂದಿನ ಕಾಲದವಳ ಹಾಗಿದ್ದೀ..  ಈಗಿನ ಕಾಲದಲ್ಲಿ ಎಲ್ಲರೂ ಕುಡೀತಾರೆ, ನಾನ್ ವೆಜ್ ತಿಂತಾರೆ ...ಸ್ಮೋಕ್ ಸಹಾ ಮಾಡ್ತಾರೆ.. ಈಗ ನಾನೇ ನೋಡು ನಿಂಗಿಂತಾ ದೊಡ್ಡವಳಾದ್ರೂ ಹೇಗೆ ಹೆಪ್ ಆಗಿದೀನಿ.. ನೀನ್ಯಾಕೆ ಸ್ವಲ್ಪ ಮಾಡ್ ಆಗ್ಬಾರ್ದು....''
 ಇದು ಪಾರ್ಟಿಯೊಂದರಲ್ಲಿ ನನ್ನತ್ತ ತೂರಿಬಂದ ಪ್ರಶ್ನೆ..
``ನಿಮ್ಮ ಪ್ರಕಾರ ಕುಡಿದರೆ, ನಾನ್ ವೆಜ್ ತಿಂದರೆ, ಸ್ಮೋಕ್ ಮಾಡಿದರೆ ಮಾಡ್ರನ್ ಅಂತನ?  ನನ್ನ ಅನಿಸಿಕ ಹಾಗಲ್ಲ.. ನೀವು ನನ್ನ ಪೂರ್ವ ಕಾಲದ ಪುಟ್ಟಮ್ಮ ಅಂತನೇ ಅನ್ನಿ.. ಚಿಂತೆ ಇಲ್ಲ.. '' ಅಂದೆ  ನಗ್ತಾ.
ನನ್ ಪ್ರಕಾರ ಮಾಡ್ರನ್ ಆಗಿರೋದಂದರೆ. ಹಿಂದಿನ ಕಾಲದಿಂದ ಬಂದ ಮೂಢನಂಬಿಕೆಗಳನ್ನು ``ಅಜ್ಜ ಹಾಕಿದ ಆಲದ ಮರಕ್ಕೆ ನೇತು ಬೀಳೊ ..'' ಥರ ನಂಬದೇ ಅದನ್ನು ವಿಚಾರದ ಒರೆಗೆ ಹಚ್ಚಿ ನಂಬುವುದು.. ಹಿಂದಿನಿಂದ ಬಂದ ಜಾತೀಯತೆಯಂಥ ಸಾಮಾಜಿಕ ಪೀಡೆಗಳನ್ನು ವಿರೋಧಿಸುವುದು..

 ಒಟ್ಟಿನಲ್ಲಿ ಹಿಂದಿನವರು ಮಾಡಿದ ಯಾವ ಯಾವ ಕೆಲಸಗಳು ತಪ್ಪು ಎಂದೆನಿಸುತ್ತೋ ಅದನ್ನು ಪುನರಾವರ್ತಿಸದೇ,  ನಮ್ಮ ಮನ:ಸ್ಸಾಕ್ಷಿ ಮೆಚ್ಚುವಂತೆ ಜೀವಿಸುವುದು...

ಹೀಗಾದರೆ ಹೇಗೆ?

`` ಗಾಂಧೀಜಿಯವರ ಜನ್ಮದಿನ ಯಾವತ್ತು? ಅವರು ಬರೆದ ಪುಸ್ತಕ ಯಾವುದು?'' ಇಂಥ ಸರಳ ಪ್ರಶ್ನೆಗಳಿಗೂ  ನಮ್ಮ ಶಿಕ್ಷಕರು ಉತ್ತರ ಕೊಡಲು ಅಸಮರ್ಥರಾಗಿ ತಡವರಿಸಿದರೆಂಬ ಪತ್ರಿಕಾ ವರದಿ  ನಿಜಕ್ಕೂ  ಚಿಂತೆಗೀಡುಮಾಡಿತು.. ಇದು ಶಿಕ್ಷಕ ಸಮುದಾಯವೇ ತಲೆ ತಗ್ಗಿಸುವಂಥದ್ದು..


 ಶಿಕ್ಷಕರ ಕೆಲಸ ಅತ್ಯಂತ ಜವಾಬ್ದಾರಿಯಿಂದ ಕೂಡಿದ್ದು ಅವರು ಅದನ್ನು  ತುಂಬಾ ಶ್ರದ್ಧೆಯಿಂದ ಮಾಡಬೇಕು.. ಅದಕ್ಕಾಗಿ ಪ್ರತೀ ದಿನವೂ  ಕಲಿಯುತ್ತಿರುವ ಅನ್ವೇಷಿಸುವ  ಕುತೂಹಲಭರಿತ  ಮನಸ್ಸಿರಬೇಕು.. ಪ್ರತೀ ತರಗತಿಯನ್ನು ತೆಗೆದುಕೊಳ್ಳುವ ಮೊದಲೂ ಅಧ್ಯಯನ ಮಾಡುವುದೂ ಅಗತ್ಯವಲ್ಲದೇ ಮಕ್ಕಳು ಕೇಳಬಹುದಾದ ಎಲ್ಲಾ ಬಗೆಯ ಪ್ರಶ್ನೆಗಳಿಗೂ ಉತ್ತರಿಸುವ ಸಿದ್ಧತೆ ಕೂಡಾ ಮಾಡಿಕೊಳ್ಳಬೇಕಾಗುತ್ತದೆ.. ಹಾಗೂ ಯಾವುದೇ ಪ್ರಶ್ನೆಗೆ ಉತ್ತರ ತಿಳಿಯದಿದ್ದರೆ/ನೆನಪಿಗೆ ಬಾರದಿದ್ದರೆ  `` ನನಗೆ ತಿಳಿದಿಲ್ಲ/ನೆನಪಿಲ್ಲ  ತಿಳಿದ್ ಹೇಳುತ್ತೇನೆ...'' ಎಂದು ಹೇಳುವ ಪ್ರಾಮಾಣಿಕತೆ ಹಾಗೂ  ಆ ಮಾತನ್ನು ಉಳಿಸಿಕೊಳ್ಳುವ  ಬದ್ಧತೆ ಬೇಕು..  ಆಗ ಯಾರೂ ಉತ್ತಮ ಶಿಕ್ಷಕ ಎಂದು ಹೊಗಳದಿದ್ದರೂ   ಮನಸ್ಸಾಕ್ಷಿ   ಒಪ್ಪುತ್ತದೆ ..ಅಲ್ಲವೇ ?

ಬಾಹ್ಯ ರೂಪ

ಹಿಂದೆ ಹುಡುಗರು `` ಈ ಹುಡುಗಿ ಚನ್ನಾಗಿಲ್ಲ, ಕಪ್ಪಗಿದ್ದಾಳೆ, ಕುಳ್ಳಗಿದ್ದಾಳೆ.. '' ಹೀಗೆ ಏನೇನೋ ನೆಪ ಒಡ್ಡಿ ಮದುವೆಯಾಗಲು ನಿರಾಕರಿಸುತ್ತಿದ್ದರು.
ಅದಕ್ಕೂ ಹಿಂದೆ ಹುಡುಗಿಯರಿಂದ ಹಾಡು ಹೇಳಿಸಿ , ಪುಸ್ತಕ ಓದಿಸಿ, ಅವರ ಕೈಕಾಲು ಊನವಿಲ್ಲ ಎಂದು ಖಾತ್ರಿ ಪಡಿಸಿಕೊಳ್ಲಲು ನಡೆದಾಡಿಸಿ, ಕಣ್ಣು ಕಾಣ್ತದ ಇಲ್ಲವ ಎಂದು ಪರೀಕ್ಷಿಸಲಿಕ್ಕಾಗಿ ಸೂಜಿಗೆ ದಾರ ಪೋಣಿಸಲು ಹೇಳಿ ನಂತರ  ಹೆಣ್ಣನ್ನು ಒಪ್ಪುತ್ತಿದ್ದರಂತೆ!!
 ಈಗ ಆ ಸರದಿ ಹುಡುಗಿಯರದ್ದಾಗಿದೆ.. ಅವರು ಚಿಕ್ಕ ಚಿಕ್ಕ ಕಾರಣಗಳಿಗೆ ಹುಡುಗರನ್ನು ನಿರಾಕರಿಸುವುದು ನೋಡಿದಾಗ ``ಇದಂತೂ ಅತಿ..'' ಅನಿಸುತ್ತದೆ..
ಅಲ್ಲವೆ?
 ಯಾಕೆ ಜನರು ಅನಿತ್ಯವೂ ಅಶಾಶ್ವತವೂ ಆದ ಬಾಹ್ಯ ರೂಪಕ್ಕೆ ಇಷ್ಟೊಂದು  ಪ್ರಾಮುಖ್ಯ ಕೊಡುತ್ತಾರೆ?
 ನಾವು ಸುಂದರವಾಗಿದ್ದೇವೆಂದು ಮೆರೆಯುವುದೂ, ಇಲ್ಲವೇ ಚನ್ನಾಗಿಲ್ಲವೆಂದು ಕೊರಗುವುದು ಎರಡೂ ಅರ್ಥಹೀನ ಎಂದು ನನ್ನ ನಂಬಿಕೆ..  ಯಾಕೆಣ್ದರೆ ನಮ್ಮ ರೂಪ ಅದು ಹೇಗೇ ಇರಲಿ ಅದಕ್ಕೆ  ನಾವು ಹೊಣೆಯಲ್ಲ..  ದೈವಸೃಷ್ಠಿಯಾದ ಈ ದೇಹವನ್ನು ಅದು ಹೇಗಿದೆಯೋ ಹಾಗೇ ಗೌರವಿಸಬೇಕು,,
 `ಶರೀರಮಾಧ್ಯಂ ಖಲು ಧರ್ಮ ಸಾಧನಂ..' ಎಂಬಂತೆ ಅದನ್ನು ಜೋಪಾನವಾಗಿ, ರೋಗಗಳಿಗೆ ಬಲಿಯಾಗದಂತೆ ಕಾಪಾಡಿಕೊಂಡು, ಅದು ಸತ್ಕಾರ್ಯಗಳನ್ನು ಮಾಡಲಿಕ್ಕೆ ಸಮರ್ಥವಾಗಿಟ್ಟುಕೊಳ್ಳಬೇಕೆಂಬುದು ನನ್ನ ನಂಬಿಕೆ...


ಅಲ್ಲವೆ?

`ನಾವು ನಿಮ್ಮ ರಕ್ಷಕರು''

`` ನಮಸ್ಕಾರ ಇನ್ಸ್ಪೆಕ್ಟರ್ ಸರ್.  ನನ್ ಹೆಸರು ರಾಮ್ ಪ್ರಸಾದ್... ಇಲ್ಲಿ ತುಂಬಾ ಗಲಾಟೆ ನಡೀತಿದೆ.. ನೀವು ಬೇಗ ಬರ್ದಿದ್ರೆ ಅನಾಹುತಾನೇ ಆಗಬಹುದು  ಬೇಗ್ನೇ ಬನ್ನೀ ಸರ್ ..ಪ್ಲೀಜ್...' ಪೋಲೀಸ್ ಸ್ಟೇಶನ್ ಗೆ...
.ಕಾಲ್ ಬಂದ ಕೂಡಲೇ ಇನ್ಸ್ಪೆಕ್ಟರ್  ಧಾವಿಸಿದರು ಜೀಪ್ ನಲ್ಲಿ...
``ಯಾರ್ರೀ ರಾಮ್ ಪ್ರಸಾದ್...''?  
ಗಡಸು ದನಿ ಕೇಳಿ ಹದಿನೆಂಟರ ಹುಡುಗ ಓಡಿ ಬಂದ...
`` ನಾನೇ ಸರ್, ನಾನೇ ಕಾಲ್ ಮಾಡಿದ್ದು...... ನಿಮ್ಮ ಜೀಪ್ ನೋಡಿ ರೌಡಿಗಳೆಲ್ಲ ಓಡಿ ಹೋದ್ರು ಸರ್.. ಥ್ಯಾಂಕ್ಸ್ ಸರ್ ಸಮಯಕ್ಕೆ ಸರಿಯಾಗಿ ಬಂದು ಆಗೋ ಅನಾಹುತನ ತಪ್ಪಿಸಿದ್ರಿ.. '' 
 `ನಾನೇ ಕಾಲ್ ಮಾಡಿದ್ದು ' ಅನ್ನೋ ಹೆಮ್ಮೆ` ಎಂಥ ಗಲಾಟೆ ಆಯ್ತಲ್ಲ!?'  ಅನ್ನೋ ಆತಂಕ, ` ಸಧ್ಯ ತಪ್ಪಿ ಹೋಯ್ತಲ್ಲ...'  ಅಂತ ನಿರಾಳತೆ, ಕೃತಜ್ಞತೆ ಎಲ್ಲ ಇತ್ತು ಅವನ ಧ್ವನಿಯಲ್ಲಿ..
 `` ಎ! ಏನೋ ' ಪೋಲೀಸ್ರ ಜೊತೆ ಆಟ ಆದ್ತಿದ್ದೀಯಾ? ನಡೀ ಸ್ಟೇಶನ್ ಗೆ ಅಂತ ಕತ್ತಿನ ಪಟ್ಟಿಗೆ ಕೈ ಹಾಕಿದ್ರು...
  ಆಗ ಅಲ್ಲಿದ್ದ ಹಿರಿಯರು `` ಸರ್ ಅವನದ್ದೇನೂ ತಪ್ಪಿಲ್ಲ.. ಏನಾಗುತ್ತೋ.. ಅನ್ನೋ ಭಯದಲ್ಲಿ ಇಂಥ ಸಂದರ್ಭದಲ್ಲಿ ಪೋಲೀಸರನ್ನು ಕರೀಬೇಕಂತ ಹೇಳಿದ್ದು ನಾನೇ.. ಅವನ ಟೀಚರ್...''
'' ಓ.. ಇದರಲ್ಲಿ ನಿಮ್ ಕೈವಾಡನೂ ಇದ್ಯ? ನೀವೂ ಹತ್ತಿ...
  ``ಅಯ್ಯೋ!! ಅವನನ್ನು ಬಿಟ್ಬಿಡಿ ಸರ್.. ಅವಂಗೇನೂ ಗೊತ್ತಿಲ್ಲ .. ತಿಳೀದೆ ತಪ್ ಮಾಡಿದಾನೆ  '' ಕಣ್ಣೀರಿಡ್ತಾ ಬಂದು ಕಾಲು ಹಿಡಿದ ತಂದೇನೂ ಹತ್ತಿಸಿಕೊಂಡು  ಪೋಲೀಸ್ ಜೀಪ್ ಸ್ಟೇಶನ್ ಗೆ ಹೋಯ್ತು..
ಛಟ್!! ಛಟಾರ್!... ...''
`` _________________ ಮಗನೆ ' ಪೋಲೀಸ್ ಜೊತೆ ಹುಡುಗಾಟ ಆಡ್ತೀಯಾ?   ನಾವೇನು ನಿನ್ನ ಆಳುಗಳಾ?...""
  ಸಂಬಂಧಿಕರು ಆ ಮೂವರನ್ನೂ ಇದ್ದಬದ್ದ ಹಣವನ್ನೆಲ್ಲಾ ಕೊಟ್ಟು ಬಿಡಿಸಿಕೊಂಡು ಹೋಗುವಲ್ಲಿ ಅರ್ಧ ಜೀವವಾಗಿದ್ದರು. ಆ ಮೂವರೂ.. ಹೊರಗೆ ಬಂದು  ನಿಟ್ಟುಸಿರಿಟ್ಟು ನೋಡಿದಾಗ  ಕಲಾವಿದನೊಬ್ಬನ ಸುಂದರ ಕೈಬರಹದಲ್ಲಿ ರಾರಾಜಿಸುವ ಬೋರ್ಡ್ ಕಂಡಿತು

``ನಾವು ನಿಮ್ಮ ರಕ್ಷಕರು''

` ನಿಮಗೆ ಸಹಾಯ ಬೇಕೇ?'' ಸಾರ್ವಜನಿಕರ ಸೇವೆಯೇ ನಮಗೆ ಪೂಜೆ!!''

ನೆನಪಿನ ಪುಟಗಳಿಂದ


ಇವತ್ತಿನ ಹಾಗೇ ಅವತ್ತೂ ಮಡಿಯಲ್ಲಿ ಅಡುಗೆ ಮಾಡ್ತಿದ್ದೆ.. ನನ್ನ ಮಗಳು ಬಂದು ಮುಟ್ಟಿದಳು.
ಅಮ್ಮ,`` ಏನು ಈಗಿನ ಕಾಲದ ಮಕ್ಳೋ.. ಮಡಿ ಇಲ್ಲ, ಮೈಲಿಗೆ ಇಲ್ಲ....'' ಅಂತ ಸಿಡುಕಿದರು... ಅದಕ್ಕೆ ಇವಳು `` ಅಜ್ಜೀ, ಮಡೀನೂ ಇಲ್ಲ, ಮೈಲಿಗೇನೂ ಇಲ್ಲ,, ಹಾಗಾದ್ರೆ ಏನಿದೆ? '' ಅಂತ  ಮಾಮೂಲಿ ತುಂಟತನದ ಪ್ರಶ್ನೆ ಹಾಕಿ ಅಮ್ಮನ್ನ ಮುಜುಗರಕ್ಕೀಡು ಮಾಡಿದಳು.. `` ತಲೆ ಹರಟೆ ಮಾಡ್ಬೇಡ ಹೋಗು...'' ಅಂತ ಗದರಿದೆ ನಾನಾಗ..
ಆದರೂ ಅವಳ ಪ್ರಶ್ನೆಯಿಂದ ಬಂದ ನಗುವನ್ನು ಅಡಗಿಸಿಕೊಳ್ಳಲಿಕ್ಕೆ ಕಷ್ಟವಾಯ್ತು.. ಅಲ್ಲದೇ ನಾನು ನಗೋದು ಅಮ್ಮ ನೋಡಿದರೆ ಅನ್ನೋ ಆತಂಕದಿಂದ ಅವರತ್ತ ನೋಡಿದೆ.. ಅವರೂ ತಮ್ಮ ನಗುವನ್ನು ಅದುಮಿಡಲಿಕ್ಕೆ ಹೆಣಗ್ತಿರೋದು ಕಂಡು ನಗುಬಂತು.. ಇಬ್ಬರೂ ಒಬ್ಬರನ್ನೊಬ್ಬರು ನೋಡಿ ನಕ್ಕುಬಿಟ್ಟೆವು..
ಅದನ್ನು ಗಮನಿಸಿ  ಮತ್ತೆ ಕೇಳಿದಳು, `` ಅಜ್ಜೀ, .... ನಾನು ಅಮ್ಮನ್ನ ಮುಟ್ಟಿದರೆ ಅವರು ಮೈಲಿಗೆ ಆಗ್ತಾರೆ. ಅಮ್ಮಾನೇ ನನ್ನ ಮುಟ್ಟಿದ್ರೆ ನಾನ್ ಮಡಿ ಆಗ್ತೀನ?...''
ಹಟಾತ್ತನೆ ಬಂದ ಪ್ರಶ್ನೆಗೆ ಅಮ್ಮ ತಬ್ಬಿಬ್ಬಾದ್ರು..
ನಾನು ಅನಿವಾರ್ಯವಾಗಿ, `` ಹೋಗೇ .. ತಲೆ ಪ್ರತಿಷ್ಠೆ ಮಾಡ್ಬೇಡ... ದೊಡ್ಡವರಂದ್ರೆ ಭಯ ಇಲ್ಲ, ಭಕ್ತಿ ಇಲ್ಲ ....'' ಅಂತ ಅಮ್ಮನ ಸ್ಟಯಿಲ್ ನಲ್ಲೇ ಗದರಿದೆ.....''
ನಂತರ. ಮುಂದೆ  ಉತ್ತರಿಸಬೇಕಾಗುವ most expected questions
`` ಅಮ್ಮಾ ಹರಟೋದು ಬಾಯಲ್ಲಿ ತಾನೆ? ಮತ್ಯಾಕೆ ತಲೆ ಹರಟೆ ಅಂತಾರೆ?
ತಲೆ ಪ್ರತಿಷ್ಠೆ ಅಂದ್ರೇನು? ಕೈ, ಕಾಲು ಪ್ರತಿಷ್ಠೆ ಅಂತ ಯಾಕಿಲ್ಲ?

ಇತ್ಯಾದಿ ಪ್ರಶ್ನೆಗಳಿಗೇನು ಉತ್ತರಿಸಲಿ ಅಂತ ಯೋಚಿಸ್ತಾ ನನ್ನ ಅಡುಗೆ ಮುಂದುವರೆಸಿದೆ.....

ಹೀಗೊಂದು ಜಾಹೀರಾತು:


 ಗಾಂಧಾರಿ ಬಳಸುತ್ತಿದ್ದ  ಲಕ್ಷಾಂತರ ಕಣ್ಣಿಗೆ ಕಟ್ಟುತ್ತಿದ್ದ ಬಟ್ಟೆಗಳು ದೊರೆತಿವೆ!! ಅಮೂಲ್ಯವಾದ ರೇಶ್ಮೆ ಬಟ್ಟೆಗಳು, ಮನಮೋಹಕ ಬಣ್ಣಗಳಲ್ಲಿ, ಸುಂದರ ಕಸೂತಿಗಳನ್ನೊಳಗೊಂಡ ಬಟ್ಟೆಗಳು ಈಗ   ಮಾರಾಟಕ್ಕಿವೆ.....
  ಉಪಯೋಗಗಳು ಏನೆನ್ನುವಿರಾ?
ಒಂದೇ ಎರಡೇ?  ಹಲವಾರು ..ನೀವಿದನ್ನು ಕಣ್ಣಿಗೆ ಕಟ್ಟಿಕೊಂದರೆ ನಿಮ್ಮ ಸುಂದರ ಕಣ್ಣುಗಳಿಗೆ ಕಸ ಬೀಳದು..  ಸೂರ್ಯನಿಂದ ಬರುವ  ಅತಿ ನೇರಳೆ ಕಿರಣಗಳಿಂದ ರಕ್ಷಣೆ.. ನಿಮ್ಮ  ಉಡುಪಿಗೆ ಸರಿಯಾದ ಮ್ಯಾಚಿಂಗ್ ಕಣ್ಣು ಪಟ್ಟಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ
 ಅಷ್ಟೇ ಅಲ್ಲ..
 ನಿಮ್ಮ ಸುತ್ತಮುತ್ತ ಇರುವವರ ಮುಖದಲ್ಲಿ ನಿಮ್ಮಬಗ್ಗೆ ತಿರಸ್ಕಾವೋ. ಅಸೂಯೆಯೋ, ಕ್ರೋಧವೂ ಇದ್ದರೆ ಅದು ನಿಮಗೆ ಕಾಣುವುದಿಲ್ಲ..
ಇನ್ನೂ ಇದೆ..
ಸುತ್ತಾ ನಡೆಯುವ  ಆರಕ್ಷಕರ ಅವ್ಯವಹಾರಗಳು ,  ಮಂತ್ರಿಗಳ ಮೋಸಗಳು,   ದೇಶ ಸೇವೆಯ ಹೆಸರಲ್ಲಿ ದೌರ್ಜನ್ಯಗಳು, ರಾಜ ಕಾರಣದ ಹುಳುಕು ಕೊಳಕುಗಳು  ನಿಮಗೇ ಕಾಣಿಸದೇ ಕಾಣಿಸದು..
 ನೀವು ಆರಾಮವಾಗಿ ``ನಾನು ರಾಮ ರಾಜ್ಯದಲ್ಲಿದ್ದೇನೆ ...''ಎಂಬ ಸುಂದರ ಭ್ರಮಾ ಲೋಕದಲ್ಲಿ ವಿಹರಿಸುತ್ತಿರಬಹುದು.
 ಬೇಕಿದ್ದರೆ ಸಂಪರ್ಕಿಸಿ..
 ವಿ.ಸೂ.. ಕಪ್ಪು ಪಟ್ಟಿ ಮಾತ್ರ ಲಭ್ಯವಿಲ್ಲ.. ಅದನ್ನು ನ್ಯಾಯದೇವತೆ ತುಂಬಾ ಹಿಂದೇ  ತೆಗೆದುಕೊಂಡಿದ್ದಾಳೆ...


ಶುಕ್ರವಾರ, ಸೆಪ್ಟೆಂಬರ್ 19, 2014

ಚುಟುಕಗಳು

ಮೌನದಲಿ ನೂರಾರು ಮಾತುಗಳು ಇರುವಾಗ
ಸುಮ್ಮನೇ ವ್ಯರ್ಥ ಮಾತೇಕೆ ಬೇಕು?
ನನ್ನ ಮನಸಿನ ಭಾವ ನಿನಗರ್ಥವಾಗಿರಲು
ಒಂದು ಚೆಂದದ ಮುಗುಳುನಗೆಯಷ್ಟೆ ಸಾಕು

ನಿಶ್ವಾಸ ಉಚ್ಛ್ವಾಸದಂತೆಯೇ ಅನಿವಾರ್ಯ
ವಿಶ್ವಾಸವೆನುವ ವೈಡೂರ್ಯ ಜಗದೆ
ಆಶ್ವಾಸ ನೀಡುವುದು ಆಹ್ಲಾದ ತುಂಬುವುದು
ವಿಶ್ವದಲಿ ವಿಷಮತೆಯನಳಿಸಿ ಮುದದೆ

ಬೇಕಿಲ್ಲ ಅಮ್ಮನಿಗೆ ದೇವತೆಯ ಸ್ಥಾನ
ಸಾಕು ಅವಳಿಗೆ ನಮ್ಮ ಪ್ರೀತಿ ಅಭಿಮಾನ
ಆಶಿಸಳು ಯಾವುದೇ ಬಗೆಯ ಹೊಗಳಿಕೆಯ
ನೀಡಿದರೆ ಸಾಕವಳಿಗಾಗಿ ತುಸು ಸಮಯ

ಮುರಳಿಲೋಲನು ತೊರೆದ ಮುರಳಿ ಗಾನವು ಇರದೆ
ದ್ವಾಪರದಲಿತ್ತು ಒಂದೇ ಗೋಕುಲ
ಎಲ್ಲ ಮಕ್ಕಳು ದೂರ ದೇಶದಲ್ಲಿ ನೆಲೆಸಿಹರು
ಇಂದು ಪ್ರತಿ ಮನೆಯಲೂ ಅದೇ ವ್ಯಾಕುಲ

ತಾಯ ಪ್ರೀತಿಯು ಕಡಲ ಬಿತ್ತರ
ತಂದೆ ಹಿಮಗಿರಿಯೆತ್ತರ
ಅದಕೆ ಅದೆ ಸರಿ ಇದಕೆ ಇದೆ ಸರಿ
ಉಂಟೆ ಹೋಲಿಕೆ, ಅಂತರ?

ವೃತ್ತದೊಲು ತಾಯೊಲುಮೆ ಇಲ್ಲ ಕೊನೆ ಮೊದಲು
ಸುತ್ತಲೂ ಪಸರಿಪುದು ಸಂತಸದ ಹೊನಲು
ಅವಳಾತ್ಮ ನಲಿಯುವುದು ಶಿಶು ಸೌಖ್ಯದಲ್ಲಿ
ಬೆಳಕವಳು ಕಂದನಾ ಬಾಳಹಾದಿಯಲಿ

ಉಕ್ಕುತಿದೆ ಮನದಲ್ಲಿ ನೂರಾರು ಕವನಗಳ
ಸೃಷ್ಠಿಮಾಡುವ ಭಾವ ಸಂಭ್ರಮದ ಒರತೆ
ಕಾಗದದ ಮೇಲದನು ಬರೆಯಬೇಕೆಂದರೆ
ಎಷ್ಟು ಅಡೆತಡೆಗಳೋ! ಪದಗಳದೆ ಕೊರತೆ

ಕೇಳಲಿಕ್ಕೆ ಹಿತವಾಗಿದ್ದರೆ ಮಾತು 
ಕೇಳುವವರಿಗೂ ಆಡುವವರಿಗೂ ಭೂಷಣ....
ಇಲ್ಲವಾದರೆ ಕೇಳಲಿಕ್ಕೆ ಅಂತೂ ಭೀಷಣ 
ಆಡುವವರಿಗೆ ಹೇಗೋ ಗೊತ್ತಿಲ್ಲಣ್ಣ

ಕ್ಷೀರ ಸಾಗರವನ್ನು ಮಥಿಸಿದುದರಿಂದಲೇ
ದೇವಲೋಕದ ಸುಧೆಯು ಉತ್ಪನ್ನವಾಯ್ತು
ಕಾವ್ಯವೆನ್ನುವ ಅಮೃತ ಸೃಜಿಸಬೇಕಾದರೆ
ಕವಿ ಹೃದಯದಲಿ ನಡೆವ ಮಥನವೇ ಹೇತು

ಎಲ್ಲೊ ಸಂಪಿಗೆಯರಳಿ ಪರಿಮಳವ ಬೀರಿದರೆ
ಇಲ್ಲಿ ಈ ಮನದಲ್ಲಿ ಮೃದು ಸ್ಪಂದನ
ಮಲ್ಲೆ ಸಂಪಿಗೆ ಇರಲಿ ಚಲ್ವ ಜಾಜಿಯೆ ಇರಲಿ
ಒಲುಮೆ ತುಂಬಿದ ಮನದಿ ಹೊಸ ಕಂಪನ

ಬುಧವಾರ, ಸೆಪ್ಟೆಂಬರ್ 17, 2014

ವರ

ಜೊತೆಯಲ್ಲಿ ಓದುತ್ತಿದ್ದ ಒಂದೇ ವಯಸ್ಸಿನ ತರುಣ ತರುಣಿಯ ನಡುವೆ ಪ್ರೀತಿ ಹುಟ್ಟಿತು.. ಇಬ್ಬರೂ ಇಪ್ಪತ್ತು ವರ್ಷವಾದಾಗ  ಮದುವೆಯಾದರು.. ನಲವತ್ತು ವರ್ಷಗಳ ಕಾಲ  ಸಂಸಾರ ಮಾಡಿದರು.. ಅದೂ ಅನ್ಯೋನ್ಯವಾಗಿ!!..
 ಇದನ್ನು ಮೆಚ್ಚಿ ಭಗವಂತ ಪ್ರತ್ಯಕ್ಷನಾದ..
 `` ಮಕ್ಕಳೇ ನಿಮ್ಮ ಅನ್ಯೋನ್ಯತೆಯನ್ನು ಮೆಚ್ಚಿದ್ದೇನೆ ನಿಮಗೇನು ವರ ಬೇಕೋ ಕೇಳಿ.. ಓಕೆ.. ಲೇಡೀಸ್ ಫಸ್ಟ್ ನೀನು ಕೇಳಮ್ಮ.. '' ಅಂತ  ಆ  ಅರವತ್ತರ ಮುತ್ತೈದೆಯನ್ನು ಕೇಳಿದ..
``   ದೇವಾ ನಾನು  ನನ್ನ ಗಂಡನ ಜೊತೆ ವರ್ಲ್ಡ್ ಟೂರ್ ಮಾಡಬೇಕನ್ನೋದೇ ನನಗಿರೋ ಆಸೆ.. ಈಡೇರಿಸು ತಂದೇ..'' ಬೇಡಿದಳು ಆಕೆ..
 ಗಂಡ ಮನದಲ್ಲೇ `` ವರ್ಲ್ಶ್ ಟೂರ್ ಓಕೆ.. ಆದ್ರೆ ಛೀ!! ಈ ಮುದುಕಿ ಜೊತೆನಾ?    ಬೇಡಪ್ಪ.. ''
 ದೇವ,ರು`` ನಿನಗೇನು ಬೇಕು ಮಗೂ..'' ಅಂದ.
 ``ದೇವರೇ,  ನನ್ನ ಜೊತೆ ವರ್ಲ್ಡ್ ಟೂರು ಮಾಡೋ ನನ್ನ ಹೆಂಡತಿ ನನಗಿಂತ ಮೂವತ್ತು ವರ್ಷ ಚಿಕ್ಕವಳಾಗಿರಬೇಕು....''
 ಅಂತ ಹೆಂಡತಿಯನ್ನು ತಿರಸ್ಕಾರದಿಂದ ನೋಡುತ್ತ.. ತಥಾಸ್ತು.. ದೇವರು ಮಾಯವಾದ.
   ಇದೇನು ಪಕ್ಕದಲ್ಲಿ ಅದೇ ಹೆಂಡತಿ ಇದಾಳೆ? ಆದರೆ ನನಗಿಂತ ಎತ್ತರವಾಗಿ ಕಾಣ್ತಾಳೆ?  ದೇವರು ಮೋಸ ಮಾಡಿದನ? ಸಂದೇಹದಿಂದ ಕನ್ನಡಿ ನೋಡಿದ..
 ಅರೇ!! ಇದೇನಾಯ್ತು?


 ಅವನು ತುಂಬತ್ತು ವರ್ಷದ ಬೆನ್ನು ಬಾಗಿದ ಮುದುಕನಾಗಿದ್ದ