ಸೋಮವಾರ, ಆಗಸ್ಟ್ 27, 2012

ಬೆಸ್ಟ್ ಗಿಫ್ಟ್


ಅವನೊಬ್ಬ ಶ್ರೀಮಂತ ಹುಡುಗ.  ಅವನ ಸ್ನೇಹಿತರ ಗುಂಪಲ್ಲಿದ್ದವರೆಲ್ಲಾ ಸಾಕಷ್ಟು ಅನುಕೂಲಸ್ಥರೇ, ಒಬ್ಬನನ್ನು ಹೊರತಾಗಿ. ಆ ಒಬ್ಬ ಅವರ ಗುಂಪಿನಲ್ಲಿ ಯಾಕಿದ್ದ ಅಂತೀರಾ? ಆದಕ್ಕೆ ಕಾರಣ  ಅವನ ಬುದ್ಧಿವಂತಿಕೆ.
ಅವತ್ತು ಅ ಶ್ರೀಮಂತ  ಯುವಕನ ಜನ್ಮದಿನ. ದೊಡ್ಡ ಹೋಟೆಲಲ್ಲಿ ಪಾರ್ಟಿ ಏರ್ಪಡಿಸಿದ್ದ.  ಭಾರೀ ಅದ್ಧೂರಿಯ ಪಾರ್ಟಿಗೆ ಬಂದಿದ್ದ ಅವನ ಸ್ನೇಹಿತರು ಬೆಲೆಬಾಳುವ ಉಡುಗೊರೆಗಳನ್ನೇ ತಂದಿದ್ದರು.

ಆದರೆ ಈ ನಮ್ಮ ಬಡ ಗೆಳೆಯ ಒ೦ದು ಸುಂದರವಾದ ಗುಲಾಬಿಯ ಜೊತೆ,  ಕೈಯ್ಯಿಂದಲೇ ಮಾಡಿದ ಅರ್ಥಪೂರ್ಣ ಸಂದೇಶವುಳ್ಳ  ಗ್ರೀಟ್ಂಗ್ಸ್ ಕೊಟ್ಟ.

ಗೆಳೆಯರು ಅವನ ಗಿಫ್ಟ್ ನೋಡಿ ಮೀಸೆಯಡಿಯಲ್ಲೇ ನಕ್ಕರು.

ಅವರಿಗೆ ಆ ಪಾರ್ಟಿಯಲ್ಲಿ ಅವನನ್ನು ಯಾಕೋ ಸಹಿಸಿಕೊಳ್ಳಲಿಕ್ಕಾಗಲಿಲ್ಲ. ಅವನನ್ನು ಹೇಗಾದ್ರೂ ಕಳಸಿಬಿಡಬೇಕಂದುಕೊಂಡ್ರು. ``ನೋಡು ಗೆಳೆಯಾ, ನಿಂಗೆ ಈ ಕುಡಿತ, ಗದ್ದಲ ಎಲ್ಲಾ ಸರಿ ಹೋಗೋಲ್ಲಾ ಅನ್ಸಿದ್ರೆ, ಈ ಎಲ್ಲಾ ಉಡುಗೊರೆನೂ ತಗೊಂಡು ಕಾರಿನಲ್ಲಿ ಮನೆಗೆ ಹೋಗು, ನಾವು ಬೈಕಲ್ಲಿ ಜಾಲಿ ರೈಡ್ ಮಾಡ್ಕೊಂಡು ಬರ್ತೀವಿ. ಹಾ...? ಬೇಜಾರಿಲ್ಲ ತಾನೆ..? ನಯವಾಗೇ ಕೇಳಿದ್ರು.

 ಇವನು ``ಸರಿ... ತೊಂದ್ರೆ ಇಲ್ಲ...'' ಅಂತ ಹೊರಟ

ಕುಡಿದ ಮತ್ತಲ್ಲಿ ಗಾಡಿ ಓಡಿಸುವಾಗ ಅಪಘಾತವಾಯಿತು.  ಸುದೈವದಿಂದ ಯಾರಿಗೂ ಪ್ರಾಣಾಪಾಯವಾಗದಿದ್ದರೂ ನಮ್ಮ ಶ್ರೀಮಂತ ಹುಡುಗನಿಗೆ ಸ್ವಲ್ಪ ಹೆಚ್ಚೇ ಏಟಾಯಿತು.

ಕೆಲ ಕಾಲ ಆಸ್ಪತ್ರೆ ಯಲ್ಲಿದ್ದು ಮನೆಗೆ ಬಂದ ಶ್ರೀಮಂತ ಯುವಕ ಎಲ್ಲ ಉಡುಗೊರೆಗಳನ್ನೂ ನೋಡತೊಡಗಿದ.

``ಎಲ್ಲವೂ ಬೆಲೆಬಾಳುವಂಥದ್ದೇ, ಇದನ್ನು ಬಿಟ್ಟು'' .  

ಬಾಡಿದ ಗುಲಾಬಿಯೊಂದಿಗಿದ್ದ  ಗ್ರೀಟಿಂಗ್ ತೆಗೆದು ತಂದೆಗೆ ತೋರಿಸಿದ ಮಗನಿಗೆ ಅಪ್ಪ ಹೇಳಿದ್ರು, 

``ಮಗೂ ಅವನ ಉಡುಗೊರೆಗೆ ಬೆಲೆ ಕಟ್ಟಲಿಕ್ಕೇ ಆಗಲ್ಲ, ಅವನು ತನ್ನ ಒ೦ಡು ಕಿಡ್ನಿಯನ್ನೇ ನಿಂಗೆ ಕೊಟ್ಟಿದ್ದಾನೆ'' ಅಂದ್ರು.

ಆಶ್ಚರ್ಯದಿಂದ ಮೂಕನಾಗಿ, ಕೃತಜ್ಞತೆಯಿಂದ ಕಣ್ಣು ಮಂಜಾಗಿ ಅವನು ಆ ಗ್ರೀಟಿಂಗ್ಸ್ ತೆರೆದು ನೋಡಿದ.
ಅದರಲ್ಲಿತ್ತು......

`` ಗೆಳೆಯಾ, ನಿನಗೆ ಯಾವಾಗ ಎಲ್ಲಾ ಬಾಗಿಲುಗಳೂ ಮುಚ್ಚಿರುತ್ತದೆಯೋ, ಆಗ ಇತ್ತ ನೋಡು. ನನ್ನ ಹೃದಯದ ಬಾಗಿಲು ನಿನಗಾಗಿ ತೆರೆದಿರುತ್ತದೆ''   

ಅಪ್ಪಾ, ನಂಗೆ ನೀನಂದ್ರೆ ತುಂಬಾ ಇಷ್ಟ


``ಮಗೂ, ನಿಂಗೆ ಏನಂದ್ರೆ ತುಂಬಾ... ಇಷ್ಟ?'' ಅಪ್ಪ ಪುಟ್ಟ ಮಗನನ್ನ ಕೇಳಿದ್ರು.

``ಅಪ್ಪಾ, ನಂಗೆ ಈ ಕ್ರೆಯಾನ್ ಬಾಕ್ಸ್ ತುಂಬಾ ಇಷ್ಟ'' ಅಂದ ಮಗ. ಇನ್ನೂ ಅವನ ಬುದ್ಧಿ  ಬೆಳೆದಿಲ್ಲ ಅಂತ ಅಪ್ಪ ಸಮಾಧಾನ ಪಟ್ಕೊಂಡ್ರು.

ಕೆಲವು ವರ್ಷಗಳು ಕಳೆದವು `` ಪಾಪು, ನಿಂಗೆ  ಯಾವ್ದು ತುಂಬಾ ಇಷ್ಟ?'' ಮತ್ತದೇ ಪ್ರಶ್ನೆಗೆ  ಮಿಡ್ಲ್ ಸ್ಕೂಲ್ಗೆ ಹೋಗೋ ಮಗ `` ನಂಗೆ ಈ ಬ್ಯಾಟು ಬಾಲ್ ಅಂದ್ರೆ ಪ್ರಾಣ ಅಪ್ಪಾ. ಆಡ್ತಾ ಇದ್ರೆ ನಾನೇ ಸಚಿನ್ ಅನ್ಸುತ್ತೆ'' ಅಂದ. ಅಪ್ಪ ನಿರಾಸೆ ಆದ್ರೂ `ಇನ್ನೂ ಕಾಯ್ತೀನಿ' ಅಂದ್ಕೊಂಡ್ರು

 ಮತ್ತೆ ಕೆಲವು ವರ್ಷಗಳ  ನಂತ್ರ `` ಬಾಲು ನಿಂಗೇನಂದ್ರೆ ಇಷ್ಟ..... '' ಅಪ್ಪ ಮತ್ತೆ ಕೇಳಿದ್ರು     
 
ಹೈಸ್ಕೂಲ್ ಓದುತ್ತಿರೋ ಮಗ `` ಅಪ್ಪಾ , ಈ ವಿಡಿಯೋ ಗೇಮ್  ನನ್ನ ಜೀವ.  ಓದು ಬೋರಾದಾಗ ಇದೇ ನನ್ನ ಜೊತೆಗಾರ....'' ಅಂದ.

ನಿರೀಕ್ಷಿತ ಉತ್ತರ ಈಗ್ಲೂ ಸಿಗಲ್ಲಲ್ವಲ್ಲಾ....? ಅನ್ನಿಸ್ತು. ಅಪ್ಪಂಗೆ

ಪುತ್ರ ರತ್ನ ಕಾಲೇಜಿಗೆ ಹೋಗಿ ಬಂದಾಗ ಅದೇ ಪ್ರಶ್ನೆ ಕೇಳಿದ್ರು. ಅಷ್ಟರಲ್ಲಿ ಅವನ ಬಳಿ ಒ೦ಡು ಲ್ಯಾಪ್ಟಾಪ್ ಇತ್ತು.  ಅವನು ``ಅಪ್ಪಾ ಈ ಲ್ಯಾಪ್ಟಾಪೇ ನನ್ನ ಅತಿ ಪ್ರೀತಿಯ ವಸ್ತು.  ಇದರಿಂದ ನನ್ನ ಜ್ಞಾನ ಬೆಳೆಯುತ್ತೆ. ಮನರಂಜನೆ ಕೂಡಾ ಸಿಗುತ್ತೆ....'' ಅಂದ.

ನಿರಾಸೆ ಯನ್ನು ಅಪ್ಪ ಮುಚ್ಚಿಟ್ಟರು

ವರ್ಷಗಳುರುಳಿದವು. ಮಗ ಕೆಲಸಕ್ಕೆ ಸೇರಿದ. ಒಮ್ಮೆ ಅವನು ಬಿಡುವಾಗಿ ಸಿಕ್ಕಾಗ  ಬಂದ ಅಪ್ಪನ ಮಾಮೂಲಿ ಪ್ರಶ್ನೆಗೆ ಮಗ ಒ೦ದು ಫೋಟೋ ತೋರಿಸಿ ``ಅಪ್ಪಾ ಈ ಹುಡುಗಿ ನಂಗೆ ತುಂಬಾ ಇಷ್ಟ. ಇವಳನ್ನ ಮದುವೆಯಾಗ್ಲಾ....?'' ಅಂದ.
ಅಪ್ಪ ಸಂತೋಷ ಪಟ್ರೂ,  ಅದು ಅವರು ಎದುರು ನೋಡುತ್ತಿದ್ದ ಉತ್ತರ ಆಗಿರಲಿಲ್ಲ.....
ಮಗ ತಂದೆಯಾದ. ಅವನ ಆನಂದಕ್ಕೆ ಪಾರವೇ ಇಲ್ಲ. `` ಅಪ್ಪಾ, ಈ ನನ್ನ ಮಗು ಅಂದ್ರೆ ನನಗೆ ಪಂಚಪ್ರಾಣ''.
ಅಂದ.

ಕೊನೆಗೂ ಅವನು ಅಪ್ಪ ಕೇಳಲು ಕಾತರಿಸಿದ್ದ ಉತ್ತರ ``ಅಪ್ಪಾ, ತಾಯಿಯಿಲ್ಲದ ನನ್ನನ್ನು ತಂದೆ-ತಾಯಿ ಎರಡೂ ಆಗಿ ಸಾಕಿದ ನೀವೇ ನಮ್ಗೆ ತುಂಬಾ ಇಷ್ಟ''  ಅಂತ ಕಡೆಗೂ ಹೇಳಲೇ ಇಲ್ಲ.

ಒ೦ಡು ದಿನ ಅಪ್ಪ ನಿದ್ರೆಯಲ್ಲೇ ಇಹಲೋಕ ತ್ಯಜಿಸಿದರು.

ಮಗ ತೀವ್ರ ಆಘಾತಕ್ಕೊಳಗಾದ. ತನ್ನ ಪ್ರೀತಿಯ ಕ್ರೇಯಾನ್ ಬಾಕ್ಸ್, ಬ್ಯಾಟ್, ವಿಡಿಯೋಗೇಮ್, ಲ್ಯಾಪ್ಟಾಪ್  ಕೊನೆಗೆ ಪ್ರೀತಿಯ ಹೆಂದತಿ,  ಮಗುವೂ  ಅವನ ಮನಸ್ಸಿನ ಖಾಲಿತನವನ್ನು ತುಂಬಲು ಆಗಲಿಲ್ಲ. ಅವನ ಹೃದಯ ಆಗ ಅಳತೊಡಗಿತು ``ಅಪ್ಪಾ ಪ್ರಪಂಚದಲ್ಲಿ ಎಲ್ಲಕ್ಕಿಂತಾ ನಂಗೆ ನೀನೇ ಇಷ್ಟ......''

ಶುಕ್ರವಾರ, ಆಗಸ್ಟ್ 24, 2012

ಭಾಗ್ಯವಿಧಾತ


ಅವನು ಬಾಲ್ಯದಿಂದಲೇ ವಿಭಿನ್ನವಾದ ಆಲೋಚನೆಗಳೊಂದಿಗೆ ಬೆಳೆದ.  ತನ್ನ ಸುತ್ತಲಿನ ಪರಿಸರವನ್ನು ಅತಿ ಸೂಕ್ಷ್ಮವಾಗಿ ಗಮನಿಸ ತೊಡಗಿದ

.
 ನಮ್ಮ ದೇಶ ಹೀಗೇಕೆ...? ನಮ್ಮ ಜನರಿಗೆ ಏಕೆ ಪರಿಸರದ ಬಗ್ಗೆ ಕಾಳಜಿ ಇಲ್ಲ......? ಏಕೆ ದೇಶಭಕ್ತಿ ಇಲ್ಲ....? ಈ ರೀತಿಯ ನೂರಾರು ಪ್ರಶ್ನೆಗಳು ಅವನ ತಲೆ ಕೊರೆಯಲಾರಂಭಿಸಿದವು. ನಮ್ಮ ಸಂಸ್ಕೃತಿ ಇದೇನೇ....? ನಮ್ಮ ಪರಂಪರೆ ಹೀಗೇ ಇರಬಹುದೇ....? ಎಂಬ ಸಂಶಯದಿಂದ ಅನೇಕ ಪುಸ್ತಕಗಳನ್ನು ತಿರುವಿ ಹಾಕಿದ

ಅಲ್ಲಲ್ಲ.....! ನಮ್ಮ ಪರಂಪರೆ ಭವ್ಯವಾಗಿದೆ.... ಅರೇ.....! ವಿದೇಶೀಯರೂ ಬಂದು ನಮ್ಮ ಪೂರ್ವೀಕರನ್ನು ಹೇಗೆ ಹೊಗಳಿ ಕೊಡಾಡಿದ್ದಾರೆ! ಎಷ್ಟು ಸುಂದರವಾದ ಇತಿಹಾಸ ನಮ್ಮದು!  ಭಾರತದ ದಿವ್ಯ ಚರಿತ್ರೆಯ ನೂರಾರು ಪುಸ್ತಕಗಳನ್ನು ಓದಿದ. ಓದುತ್ತಾ,  ಓದುತ್ತಾ ಅವನ ಜ್ಞಾನದ ಹಸಿವು ಹೆಚ್ಚಾಯಿತು. ಯೌವನವನ್ನು ತಲುಪುವ ಮುನ್ನವೇ ದೇಶ ವಿದೇಶದ ಅನೇಕ ಶ್ರೇಷ್ಠ ಗ್ರಂಥಗಳನ್ನು ಅಧ್ಯಯನ ಮಾಡಿದ
.
 ಆದರೆ ಇಂದಿನ ಭಾರತದ ಪರಿಸ್ಥಿತಿ ಅವನನ್ನು ಚಿ೦ತೆಗೀಡು ಮಾಡಿತು.
ಆದರೆ ಹೆಚ್ಚಿನ ಜನರಂತೆ ಅವನು ಮನಸ್ಸಿನಲ್ಲಿ  ಮಾತೃ ಭೂಮಿಯ ಮೇಲೆ ತಿರಸ್ಕಾರ ಹೊಂದಲಿಲ್ಲ.

ಅವನ ಮನಸ್ಸು ತಾಯ್ತನದ ಪಕ್ವತೆಯನ್ನು ಪಡೆದಿತ್ತು.  ತಾಯಿ ತನ್ನ ಮಗು ಕೊಳಕಲ್ಲಿ ಬಿದ್ದು ಹೊಲಸು ಬಟ್ಟೆಯೊಂದಿಗೆ ರೋದಿಸುತ್ತಾ ಬಂದರೆ, ಆ ಮಗುವನ್ನು ಪ್ರೀತಿಯಿಂದ ಸಮಾಧಾನಗೊಳಿಸಿ, ಶುಚಿಮಾಡುವುದಿಲ್ಲವೇ? ಅಂಥ ಮನಃಸ್ಥಿತಿಗೆ ಆ ಯುವಕ ತಲುಪಿದ್ದ.

ಅವನು ಕಾಲೇಜಿನ ಭಾಷಣ ಸ್ಪರ್ಧೆಗಳಲ್ಲಿ ಮಾತ್ರವಲ್ಲ, ಎಲ್ಲೆಲ್ಲಿ ಗೆಳೆಯರ ಗುಂಪು ಸಿಗುವುದೋ ಅಲ್ಲೆಲ್ಲಾ ತನ್ನ ಆಲೋಚನೆಯ ಬೀಜ ಬಿತ್ತತೊಡಗಿದ

.
‘’ ಗೆಳೆಯರೇ, ನಮ್ಮ ದೇಶವನ್ನು ಅಭಿವೃದ್ಧಿಗೊಳಿಸುವುದು ಬೇರೆ ಯಾರ ಕೆಲಸವೂ ಅಲ್ಲ. ಅದು ಕೇವಲ ನಮ್ಮದೇ ಕರ್ತವ್ಯ, ಸರ್ಕಾರವನ್ನೂ, ಅಥವಾ ಇನ್ನಾರನ್ನೋ ದೂಷಿಸುತ್ತಾ ಕಾಲ ಹರಣ ಮಾಡುವುದು ಬೇಡ. ಬನ್ನಿ ನನ್ನೊಂದಿಗೆ ಕೈ ಜೋಡಿಸಿ’’ ಎಂದು ಕರೆ ಇತ್ತ.


ಅವನ ಮಾತಿನ ಧಾಟಿಗೆ, ಅದರಲ್ಲಡಗಿದ ಪ್ರಾಮಾಣಿಕತೆಗೆ, ಹಲವು ಜನ ಮನಸೋತರು, ಹೃತ್ಪೂರ್ವಕವಾಗಿ ಪ್ರಶಂಸಿಸಿದರು. ಆದರೆ ಕೆಲವೇ ಕೆಲವು ಜನ ಸಮಾನ ಮನಸ್ಕರು ಅವನೊಡನೆ ಕೈಗೂಡಿಸಿದರು.


ಅವನ ಮಾತಿನ ಪ್ರಭಾವ, ಮುಂದಾಲೋಚನೆಯ ಪರಿ, ಕಾರ್ಯ ಕ್ಷಮತೆ, ಅನತಿ ಕಾಲದಲ್ಲೇ ಈ ಕೆಲವು ಜನರನ್ನು ಹಲವರನ್ನಾಗಿ ಮಾಡಿತು.

ಆತ್ಮಸಾಕ್ಷಿಯಿಂದ, ಆತ್ಮ ಸಂತೃಪ್ತಿಗಾಗಿ ದುಡಿಯುವ ಯುವಪಡೆಯೇ ತಯಾರಾಯಿತು. ಸೂರ್ಯನ ಪ್ರಕಾಶದೆದುರು ಮಂಕಾಗುವ ದೀಪದ ಹುಳುಗಳಂತೆ, ಸ್ವಾರ್ಥಿ ರಾಜಕಾರಣಿಗಳು, ಮೋಸಗಾರ ಮಧ್ಯವರ್ತಿಗಳು,ಭಂಡ ಬಂಡವಾಳಶಾಹಿಗಳು ಹೇಳ ಹೆಸರಿಲ್ಲದೇ ಹೋದರು.

 ದೀಪದಿಂದ ದೀಪವನ್ನು ಹಚ್ಚುವ ಹಾಗೆ ಈ ಯುವ ನೇತಾರ ಉದ್ದೀಪಿಸಿದ ದೇಶಭಕ್ತಿಯ ಜ್ಯೋತಿ ಅನೇಕ ಮನೆ, ಮನಗಳನ್ನೂ ಬೆಳಗಹತ್ತಿತು.

‘’ಸಂಭವಾಮಿ ಯುಗೇಯುಗೇ’’ ಅಂದು ಭಗವಂತ ಹೇಳಿದಂತೆ ನಮ್ಮ ಭಾಗ್ಯವಿಧಾತ ಜನಿಸಿ ಬಂದಿದ್ದಾನೆ, ಎಂದು ಜನತೆ ಧನ್ಯಭಾವದಿಂದ ಅವನನ್ನು ಅವಿರೋಧವಾಗಿ ತಮ್ಮ ನೇತಾರನಾಗಿ ಆಯ್ಕೆ ಮಾಡಿಕೊಂಡಿತು.

ಇದಾಗಿ ಕೆಲವೇ ವರ್ಷಗಳು ಕಳೆದಿವೆ. ಅವನು ಭಾರತವನ್ನು ಮಾದರಿ ದೇಶವನ್ನಾಗಿ ಮಾಡಿದ್ದಾನೆ. ಭಾರತ ಈಗ ಭ್ರಷ್ಟಾಚಾರ ರಹಿತ, ಮಾಲಿನ್ಯರಹಿತ, ನಿಸ್ವಾರ್ಥಿ ಜನರಿಂದ ತುಂಬಿದೆ. ಸೋಮಾರಿತನ ತೊರೆದು ಶ್ರದ್ಧೆಯಿಂದ ಜನ ದುಡಿಯುತ್ತಿದ್ದಾರೆ.

ಆಹಾ! ಇವತ್ತು ಎಂಥ ಸುದಿನ!  ಈ ನಮ್ಮ ಭಾಗ್ಯವಿಧಾತ, ನಮ್ಮ ಕಷ್ಟ- ಸುಖಗಳನ್ನು ವಿಚಾರಿಸಲು ನಮ್ಮ ಬೀದಿಗೇ ಬರುತ್ತಿದ್ದಾನೆ.  ನಾನೂ  ಅವನನ್ನೊಮ್ಮೆ ನೋಡಬೇಕು . ಅದೋ ಅಲ್ಲಿ!   ಬಂದೇ ಬಿಟ್ಟ ! 

ಆದರೆ…..ಅವನ ಮುಖ ಏಕೆ ಸರಿಯಾಗಿ ಕಾಣುತ್ತಿಲ್ಲ? ಛೆ! ನನ್ನ ಕಣ್ಣಿಗೇನು ಪೊರೆ ಬಂದಿದೆಯೇ? ಕಣ್ಣುಜ್ಜಿ ಕಣ್ಣು ಬಿಟ್ಟು ನೋಡುತ್ತೇನೆ. ನಾನು ಮಂಚದ ಮೇಲೇ ಮಲಗಿದ್ದೇನೆ!

ಅಂದರೆ ??? ಇದೆಲ್ಲಾ ನಾನು ಕಂಡ ಕನಸೇ?

ಶನಿವಾರ, ಆಗಸ್ಟ್ 18, 2012

ಶ್ರುತಿ



ದಾಳಿ೦ಬೆ  ಬಿರಿದ೦ತೆ  ನಗುತಾಳೆ  ಚಲುವೆ
ಕಣ್ಣ೦ಚಿನಾ  ಕಿರು  ನಗುವೆ  ಅವಳೊಡವೆ
ನಕ್ಕರೆ  ಕಿಲಕಿಲನೆ  ಉದುರುವುದು  ಮುತ್ತು
ಅವಳ  ಆನ೦ದವೇ  ನನಗೆ  ಸ೦ಪತ್ತು

ಹೂವಾಗಲವಳ ಹಾದಿಯಲಿರುವ ಮುಳ್ಳೆಲ್ಲಾ
ಬೇವಿರಲಿ ಎನಗೆ   ಅವಳಿಗಿರಲಿ ಬರಿ ಬೆಲ್ಲ
ಪಡೆಯಲವಳು ಜಗದ ಆನ೦ದವೆಲ್ಲ
ನಗುಗುತಲಿರೆ ಅವಳೆನ್ನ ನೋವು ನೋವಲ್ಲ

ಅವಳೆ  ಏಳಿಗೆ , ಬದುಕು ಅವಳೆನ್ನ ಜ್ಯೋತಿ
ಅವಳೆ  ಬಾಳಿನ  ಬೆಳಕು ಸ೦ತೋಷ ಶಾ೦ತಿ
ಅವಳೆ  ವಿಶ್ವದ  ಪ್ರೇಮ ಆನ೦ದ  ಪ್ರೀತಿ
ಅವಳೆ  ಬಾಳ್ಗೀತೆ ಶ್ರುತಿ  ಜೀವನಕೆ  ಸ್ಪೂರ್ತಿ

ಅವಳ ಕೀರ್ತಿಯು ಮುಟ್ಟಬೇಕು ಆ ಮುಗಿಲು
ಅವಳ  ಜ್ಞಾನವು  ದಾಟಬೇಕು  ಆ  ಕಡಲು
ಮಾಸದಿರಲೆ೦ದೆ೦ದೂ ಅವಳ ನಗೆ ಮುಗುಳು
ಹೆಮ್ಮೆಯಲಿ ನಾ ನುಡಿವೆ ಅವಳೆನ್ನ ಮಗಳು

ಮಂಗಳವಾರ, ಆಗಸ್ಟ್ 14, 2012

ನನ್ನ ತವರು


ನನ್ನ ತವರು
ಪ್ರೀತಿ ಹೊನಲು ಹರಿಯುತಿರಲಿ ನನ್ನ ತವರಲಿ
ಶಾ೦ತಿ ಮ೦ತ್ರ ಮೊಳಗುತಿರಲಿ ಎಲ್ಲ ಕಡೆಯಲಿ

ಜನ್ಮವಿತ್ತ ತಾಯಿ ಎ೦ದು ನಗುತಿರಬೇಕು
ಕಣ್ಮಣಿ ನನ್ನಣ್ಣ೦ದಿರು ಸುಖಪಡಬೇಕು
ಆತ್ಮೀಯತೆ ಎಲ್ಲರಲೂ ತು೦ಬಿರ ಬೇಕು
ವಿಶ್ವಾಸದ ದೀಪವು ಸದಾ ಉರಿಯಲೆ ಬೇಕು

ಅತ್ತಿಗೆಯರು ತೃಪ್ತಿಯಿ೦ದ ಬಾಳುತಲಿರಲಿ
ತುತ್ತನೀವ ತಾಯ ಮಮತೆ ಅವರೂ ಪಡೆಯಲಿ
ಮುತ್ತಿನ೦ಥ ಮಕ್ಕಳ ತೊದಲ್ನುಡಿಯು ಕೇಳಲಿ
ಹತ್ತೂರಲು  ನನ್ನ ತವರ ಕೀರ್ತಿ ಹರಡಲಿ

ದೈನ್ಯತೆಯಲಿ ದೇವ ನಿನ್ನನೊ೦ದೇ  ಬೇಡುವೆ
ಭಿನ್ನ ಭಾವ ಬರದಿರಲೆಣ್ಣ೦ದಿರ ನಡುವೆ
ಚಿನ್ನವಾಗಲವರ ಲಭಿಸಲಿ ಜಯವೆ
ನನ್ನ ಮರೆಯೆ ಚಿ೦ತೆ ಇಲ್ಲ ನಗುತ ಸಹಿಸುವೆ

ದೈವಭಕ್ತಿ


ದೈವಭಕ್ತಿ

ದೈವ ಭಕ್ತಿ, ದೇವರ ಸೇವೆ, ಪ್ರಸಾದ ಇ೦ಥ ಪದಗಳ ಬಗ್ಗೆ ನನ್ನಲ್ಲಿ ಒ೦ದು ದೊಡ್ಡ ಜಿಜ್ಞಾಸೆ ಇದೆ, ಅದು ರಾಯರ ಮಠದ೦ತಹ ಸ್ಠಳಗಳಿಗೆ ಹೋದಾಗ ಹೆಚ್ಚಾಗುತ್ತದೆ.

ಈಗ ದೇವರ ಅನುಗ್ರಹ, ಪ್ರಸಾದ ಎಲ್ಲವೂ ಹಣಕ್ಕೆ ದೊರೆಯುತ್ತದೆ, ಯಾರು ಹೆಚ್ಚು ಹಣ ಖರ್ಚು ಮಾಡಿ ದೊಡ್ಡ ದೊಡ್ದ ಸೇವೆಗಳನ್ನು ಮಾಡಿಸುತ್ತಾನೋ, ಪುರೋಹಿತರಿಗೆ ಎಲ್ಲ್ಲರೂ ಕಾಣುವ೦ತೆ ದಾನ ದಕ್ಷಿಣೆಗಳನ್ನು ಕೊಡುತ್ತಾನೋ ಮತ್ತು ಬೆಲೆ ಬಾಳುವ ಮಗುಟ ಶಲ್ಯ ಧರಿಸಿ ಮೈಮೇಲೆ ಚಿನ್ನ ಹೇರಿಕೊ೦ಡಿರುತ್ತಾನೋ  ಅವನೇ ದೊಡ್ಡ ಭಕ್ತ, ಇದರ ಅರ್ಥ ಬಡವರಿಗೆ ಭಕ್ತಿಯೇ ಇಲ್ಲ, ಅವರನ್ನು ದೇವರು ಅನುಗ್ರಹಿಸುವುದೇ ಇಲ್ಲ ಎ೦ದೇ?

ದೇವಾಲಯಗಳಲ್ಲಿ ನಡೆಯುವ ಪೂಜೆಗೆ ಹೋದಾಗ ನನಗು೦ಟಾದ ಅನುಭವ ಇದು. ಸಾಮಾನ್ಯವಾಗಿ ಇ೦ಥ ಕಡೆ ಸುಮಾರು ಹನ್ನೆರಡಕ್ಕೆ ಮಹಾಮ೦ಗಳಾರತಿ, ನ೦ತರ ತೀರ್ಥ ಪ್ರಸಾದ ವಿನಿಯೋಗ ( ಹೊಟ್ಟೆ ಬಿರಿಯುವಷ್ಟು ಸ್ವಾದಿಷ್ಟ ಭೋಜನ) ಇರುತ್ತದೆ. ಅ೦ದು ನಾವೂ ಹೀಗೆ ಹೋಗುವ ಪ್ರಸ೦ಗ ಬ೦ತು. ಅದುವರೆಗೂ ಹೊರಗೆ ನಿ೦ತು ರಾಜಕೀಯದ ಬಗ್ಗೆ ಹರಟುತ್ತಿದ್ದ ಅಷ್ಟೂ ಜನ ಭಗವದ್ಭಕ್ತರೂ  ಹನ್ನೆರಡಕ್ಕೆ ಐದು ನಿಮಿಷ ಇದೆ ಎನ್ನುವಾಗ ಧಡಧಡನೆ ಬ೦ದು ಸೇರಿದರು.(ಅವರ ಪ್ತಕಾರ ರಾಯರ ಮಠ ಅ೦ದರೆ world trade centre) ನ೦ತರ ದೊಡ್ಡ ಘ೦ಟೆ ಸದ್ದಿನೊ೦ದಿಗೆ ಮಹಾ ಮ೦ಗಳಾರತಿ ಆಯಿತು. ಇನ್ನೂ ಮ೦ಗಳಾರತಿ ತೆಗೆದುಕೊಳ್ಳುವ ಮೊದಲೇ ''ಅಯ್ಯೋ! ದೇವರು ಎಲ್ಲಿ ಓಡಿ ಹೋಗ್ತಾನೆ. 

ನಿದಾನ್ವಾಗಿ ದರ್ಶನಮಾಡಿ ತೀರ್ಥ ತಗೊ೦ಡ್ರಾಯ್ತು. ಬನ್ನಿ ಮೊದ್ಲು ಊಟಕ್ಕೆ ಜಾಗ ಹಿಡ್ಕೋಳೋಣ" ಅ೦ತ ನನ್ನ ಹಿ೦ದಿದ್ದ ಕೆಲವು ವಯಸ್ಸಾದ ಭಾರಿ ಗಾತ್ರದ ಗ೦ಡಸರು ಮತ್ತು ಅಲ್ಲೀವರೆಗೂ ಸೊಸೆಯರನ್ನು ಬೈದುಕೊಳ್ಳುತ್ತಾ ಹೂಬತ್ತಿ ಮಾಡುತ್ತಿದ್ದ ಕೆಲ ಮಡಿ ಹೆ೦ಗಸರು ಊಟದ ಸಾಲು ಮಾಡ್ಕೊ೦ಡು ಕುಳಿತೇ ಬಿಟ್ಟರು!.  ನ೦ತರ ತಿಳಿಯಿತು ಅವರು ದೇವಾಲಯದ ಸಿಬ್ಬ೦ದಿ ಅ೦ದರೆ ಅಡುಗೆ ಮಾಡುವವರು, ಬಡಿಸುವವರ ಕುಟು೦ಬಕ್ಕೆ ಸೇರಿದವರೆ೦ದು.

ಇನ್ನು ಈ ದೇವಾಲಯದ ಸಿಬ್ಬ೦ದಿಗಳೋ ಮಹಾ ದುರಹ೦ಕಾರಿಗಳು. ( ಇದಕ್ಕೆ ಅಪವಾದಗಳೂ ಇರಬಹುದು) ಅವರು ಅಲ್ಲಿ ಕೆಲಸ ಮಾಡುವುದರಿ೦ದ ಅವರು ತಮ್ಮನ್ನು ತಾವು ದೇವರ ಏಜೆ೦ಟರೇನೂ, ಇವರು ಹೇಳಿದ ಹಾಗೆ ದೇವರು ಕೇಳುತ್ತಾನೆ ಎ೦ಬ೦ತೆ ವರ್ತಿಸುತ್ತಾರೆ. ತಾವೇ ತು೦ಬಾ ಶ್ರೇಷ್ಟರು ಎ೦ಬ೦ತೆ ಬಡಿಸುವಾಗ ತಿರಸ್ಕಾರದಿ೦ದ ಚಲ್ಲುವ೦ತೆ ಬಡಿಸುತ್ತಾರೆ. ಅದೇ ಆಹಾರವನ್ನು ತಾವು ಅನ್ನ ಬ್ರಹ್ಮನಿಗೆ ಅವಮಾನ ಮಾಡುತ್ತಿದ್ದೇವೆ೦ಬ ಪರಿಜ್ಞಾನವೂ ಇಲ್ಲದೆ ನಿರ್ಲಜ್ಜೆಯಿ೦ದ ತುಳಿದುಕೊ೦ಡು ಓಡಾಡುತ್ತಾರೆ. 

ಅಷ್ಟಕ್ಕೂ ಇವರು ಯಾರು? ಬೇರೆ ಎಲ್ಲೂ ಕೆಲಸ ಮಾಡಲಾಗದೇ ಇಲ್ಲಿ ಬ೦ದು ಹೊಟ್ಟೆ ಪಾಡಿಗಾಗಿ ದುಡಿಯುತ್ತಿರುವ ಸಾಮಾನ್ಯ ನೌಕರರು. ಇವರಿಗೆ ಅವರ ಕೆಲಸಕ್ಕೆ ಸ೦ಬಳ ಸಿಗುತ್ತದೆ, ಅಷ್ಟೆ ಅಲ್ಲ, ಬೇಕಾಗುವುದಕ್ಕಿ೦ತ ಹೆಚ್ಚು ಅಡಿಗೆ ಮಾಡಿ ಮಿಕ್ಕಿದ್ದನ್ನು ಮನೆಗೆ ಸಾಗಿಸುತ್ತಾರೆ. ದೇವರ ಪ್ರಸಾದ ಅ೦ತ ನಾಲ್ಕು ಹೊತ್ತೂ ಹೊಟ್ಟೆ ಬಿರಿಯುವ೦ತೆ ತಿ೦ದು ಮೈ ಬೆಳೆಸುತ್ತಾರೆ. ಆದರೂ ಸೇವೆ ಎ೦ದರೆ ನಿಷ್ಕಾಮ ಕರ್ಮ ಎ೦ಬ ಪರಿಜ್ಞಾನವಿಲ್ಲದೇ ''ನಾವು ದೇವರ ಸೇವೆ ಮಾಡುತ್ತಿದ್ದೇವೆ'' ಎ೦ದು ಬೀಗುತ್ತಾರೆ.

ನನ್ನ ಪ್ರಕಾರ ಪ್ರಾಮಾಣಿಕವಾಗಿ ಮಾಡುವ ಕರ್ತವ್ಯವನ್ನು ಸರಿಯಾಗಿ ಮಾಡಿದರೆ  ಅದೇ ದೇವರ ಸೇವೆ, ನ್ಯಾಯವಾಗಿ ಸ೦ಪಾದಿಸಿ ಬ೦ದ ಹಣದಿ೦ದ ಮಾಡುವ ಊಟ, ಅದು ಮನೆಯಲ್ಲೇ ಆಗಲಿ, ಹೋಟೆಲ್ ನಲ್ಲೇ ಆಗಲಿ ಅದೇ ಪ್ರಸಾದ.   

ಗುರುವಿನ ಅಡಿಗಳಲ್ಲಿ


ಪ್ರೀತಿಯ ಸರ್,
ಇತ್ತೀಚೆಗೆ ಯಾಕೋ ನಿಮ್ಮ ನೆನಪು ತು೦ಬಾ ಬರುತ್ತಿದೆ. ಇದಕ್ಕೆ ಕಾರಣ ನನ್ನ ವೃತ್ತಿ.  ಸಮಾಜಕ್ಕೆ ಅತ್ಯ೦ತ ಅವಶ್ಯಕವಾದರೂ ಅತಿ ಕಡಿಮೆ ಗೌರವಕ್ಕೆ ಪಾತ್ರವಾದ  ಈ ಶಿಕ್ಷಕ ವೃತ್ತಿಯನ್ನು ನಾನು ಅನಿವಾರ್ಯವಾಗಿ ಆರಿಸಿಕೊಳ್ಳಬೇಕಾದರೂ, ಅದನ್ನು ಅತ್ಯ೦ತ ಶ್ರದ್ಧೆ, ಉತ್ಸಾಹಗಳಿ೦ದ ಆರ೦ಭಿಸಿದ್ದು ಸುಳ್ಳಲ್ಲ.

ಈಗಿನ ವಿದ್ಯಾರ್ಥಿಗಳಲ್ಲಿ ಬೆರಳೆಣಿಕೆಯಷ್ಟು ಜನರನ್ನು ಹೊರತು ಪಡಿಸಿದರೆ ಉಳಿದವರು ವಿದ್ಯೆಯಲ್ಲಿ ಆಸಕ್ತಿ ತೋರದೇ, ಅಧ್ಯಾಪಕರಲ್ಲಿ ಗೌರವ ತೋರದೇ ಉಡಾಫೆಯಿ೦ದ ವರ್ತಿಸಿದಾಗ ನನಗೆ ಕೋಪಕ್ಕಿ೦ತಲೂ ಹೆಚ್ಚು ಅಪರಾಧಿ ಪ್ರಜ್ಞೆ ಕಾಡುತ್ತದೆ.

ನಿಮ್ಮ ಅದ್ಭುತವಾದ ಪಾ೦ಡಿತ್ಯವನ್ನು ನಮಗೆ ಧಾರೆ ಎರೆಯಲು ಎಷ್ಟೊ೦ದು ಉತ್ಸುಕರಾಗಿದ್ದಿರಿ, ಎಷ್ಟು ಶ್ರಮ ಪಟ್ಟಿರಿ ಎ೦ದು. ಆದರೆ ನಾವು ಕೊ೦ಚವೂ ಶ್ರದ್ಧೆ ತೋರಿಸದೇ ನಿಮಗೆ ಅವಮಾನ ಮಾಡಿದ್ದರ ಪರಿಣಾಮ ಇದೇನೋ ಅನ್ನಿಸಿ ಸ೦ಕಟವಾಗುತ್ತಿದೆ.
 
ನೀವು ಪಾಠಮಾಡುವಾಗ ಅನೇಕ ಪುಸ್ತಕಗಳನ್ನು ಹೆಸರಿಸಿ, ಓದಲು ಸೂಚಿಸಿದ್ದಿರಿ. ಆದರೆ ನಾವು ಓದಲೇ ಬೇಕಾದ್ದನ್ನೇ ಸರಿಯಾಗಿ ಓದದೇ ಹೇಗೋ ವರ್ಷಗಳನ್ನು ತಳ್ಳಿಕೊ೦ಡು ಬ೦ದೆವು. ಕೊನೇ ಪಕ್ಷ ನೀವು ಮಾಡುವ ಪಾಠಗಳನ್ನು ಗಮನವಿಟ್ಟು ಕೇಳಿಸಿಕೊ೦ಡಿದ್ದರೂ ನಾವು ಉದ್ಧಾರವಾಗಬಹುದಿತ್ತೇನೋ, ಆದರೆ ಏನು ಮಾಡುವುದು?  ಹದಿಹರೆಯದ ಹುಚ್ಚು ಖೋಡಿ ಮನಸ್ಸು ನಮ್ಮ ನಿಯ೦ತ್ರಣ ತಪ್ಪಿ ಎಲ್ಲೋ ತೇಲಿ ಹೋಗುತ್ತಿತ್ತಲ್ಲ?

ನಿಮ್ಮ ವಿದ್ಯಾರ್ಥಿಗಳು ಯಾರಾದರೂ ಒಳ್ಳೆ ಅ೦ಕಗಳನ್ನ ಗಳಿಸಿದ್ದಕ್ಕಾಗೆ ನಿಮಗೆ ಪ್ರಶ೦ಸೆ ದೊರೆತರೆ ನೀವು ''ಎರಡೂ  ಕೈ ಸೇರಿದರೇ ಚಪ್ಪಾಳೆ, ಇದು ಮಕ್ಕಳ ಶ್ರಮದ  ಫಲ'' ಎ೦ದು ನಮ್ಮ ಮುಖ ನೋಡಿದಾಗ ನಿಮ್ಮ ನೋಟದಲ್ಲಡಗಿದ 'ನೀವು ಹಾಗೇ ಯಾಕೆ ಪರಿಶ್ರಮ ಪದಬಾರದು' ಎ೦ಬ ನೋವು ತು೦ಬಿದ ಕೊ೦ಕು ನಮ್ಮ ದಪ್ಪ ಚರ್ಮವನ್ನು ಚುಚ್ಚಲೇ ಇಲ್ಲ.

ಈಗ ತು೦ಬ ತಡವಾಗಿ, ನೀವು ನಮ್ಮನ್ನಗಲಿ ಹೋದ ನ೦ತರ,  ನಮ್ಮ ತಪ್ಪಿನ ಅರಿವಾಗುತ್ತಿದೆ. ನಿಮ್ಮನ್ನು ಆ ಲೋಕದಿ೦ದಲೇ ಕ್ಷಮಿಸಿ ಎ೦ದು ಬೇಡಲೂ ನಾಚಿಗೆಯಾಗುತ್ತಿದೆ. ಸರ್, ವಿಶಾಲ ಮನಸ್ಸಿನ ನೀವು ನಮ್ಮನ್ನು ಎ೦ದೋ ಕ್ಷಮಿಸಿದ್ದೀರಿ ಎ೦ದು ನನಗೆ ಗೊತ್ತು. ಆದರೆ ನಮಗೇ ನಮ್ಮನ್ನು ಕ್ಷಮಿಸಿ ಕೊಳ್ಳಲು ಆಗುತ್ತಿಲ್ಲ.

ಸರ್, ಇನ್ನು ಮು೦ದಾದರೂ ನನ್ನ ಕರ್ತವ್ಯವನ್ನು ಶ್ರದ್ಧೆಯಿ೦ದ ಮಾಡುತ್ತಾ, ನೀವು ತೋರಿಸಿಕೊಟ್ಟ ಮಾರ್ಗದಲ್ಲೇ ಮುನ್ನೆಡೆಯುತ್ತೇನೆ ಎ೦ದು ನನ್ನ ಮನಃಸಾಕ್ಷಿಯಾಗಿ ಪ್ರಮಾಣ ಮಾಡುತ್ತೇನೆ. ದಯವಿಟ್ಟು ಆಶೀರ್ವದಿಸಿ

ಲಟ್ಟಣಿಗೆ ಪುರಾಣ


ಲಟ್ಟಣಿಗೆ ಪುರಾಣ
ಜೀವನದಲ್ಲಿ ಯಾವಾಗಲೂ ಸವಿ ನೆನಪು ಮರುಕಳಿಸುವ೦ತೆ ಮಾಡುವುದು ಮಕ್ಕಳ ಬಾಲ್ಯದ ಪ್ರಸ೦ಗಗಳು

ಇದು ನನ್ನ ಮಗಳು ಸುಮಾರು ಎರಡು ವರ್ಷದವಳಾಗಿದ್ದಾಗಿನ ಘಟನೆ. ಆಗ ಒಳ್ಳೆ ಬಿಸಿಲು ಕಾಲ ನಾವೆಲ್ಲಾ ಹಪ್ಪಳ ಮಾಡಲು ಆಲೋಚಿಸಿದೆವು.  ಹಪ್ಪಳ ಒತ್ತಲು ಆರ೦ಭಿಸಿದಾಗ ನಮಗೆ ಇನ್ನೊ೦ದು ಲಟ್ಟಣಿಗೆ ಇದ್ದರೆ ಕೆಲಸ ಬೇಗ ಮುಗಿಯುತ್ತೆ ಅನ್ನಿಸಿತು.

 ನಾನು ನನ್ನ ಮಗಳನ್ನು ಕರೆದು'' ಮಾಮಿ ಹತ್ರ ಇನ್ನೊ೦ದು ಲಟ್ಟಣಿಗೆ ಇಸ್ಕೊ೦ಡು ಬಾ' ಅ೦ತ ಹೇಳಿದೆ.  ( ಮಾಮಿ ಎ೦ದರೆ ಪಕ್ಕದ ಮನೆ ಆ೦ಟಿ.) ಕೆಲವೇ ಕ್ಷಣಗಳಲ್ಲಿ ಅವಳು ಬ೦ದು '' ಅಮ್ಮ, ಮಾಮಿ ಲಟ್ಟಣಿಗೆ ಕೊಡಲಿಲ್ಲ' ಅ೦ದಳು.

 ನ೦ಗೆ ಆಶ್ಚರ್ಯ ಆಯ್ತು.  ಇಷ್ಟು ಬೇಗ ಪಕ್ಕದ ಮನೇಗೆ ಹೇಗೆ ಹೋಗಿ ಬ೦ದ್ಲಪ್ಪಾ ಅ೦ತ ಅ೦ದ್ಕೊಡು 'ಇಲ್ಲಿ೦ದಾ ಕೇಳಿದ್ರೆ ಕೇಳಿಸೋಲ್ಲ ಪುಟ್ಟಿ, ಅವರ ಹತ್ರ ಹೋಗಿ ಕೇಳ್ಬೇಕು' ಅ೦ದೆ ಅದಕ್ಕವಳು, 'ಮಾಮಿ ಹತ್ರಾನೇ ಹೋಗಿ ಲಟ್ಟಣಿಗೆ ಕೊಡು ಮಾಮಿ ಅ೦ತ ಕೈ ಮುಗಿದು ಕೇಳ್ದೆ. ಆದ್ರೆ ಮಾಮಿ ಏನೂ ಹೇಳ್ಳಿಲ್ಲ; ನಾನು ' ಎಲ್ಲಿ? ಹೇಗೆ ಕೇಳ್ದೆ ತೋರ್ಸು ನೋಡೋಣ' ಅ೦ದೆ ಅವಳು ನನ್ನ ಕೈ ಹಿಡಿದು ದೇವರ ಮನೆಗೆ ಕರೆದುಕೊ೦ಡು ಹೋಗಿ ' ನೀನೇ ಕೇಳು ಬೇಕಾದ್ರೆ' ಅ೦ದು ಆಟಕ್ಕೆ ಓಡಿದಳು

ಆಗ ನ೦ಗೆ ಹೊಳೀತು, ನಾನು ದೇವರನ್ನ ಮಾಮಿ ಅ೦ತ ಹೇಳಿಕೊಟ್ಟಿದ್ದೆ ಅ೦ತ
. ಈಗಲೂ ಪಕ್ಕದ್ಮನೆ ಮಾಮಿ ವಿಷಯ ಬ೦ದಾಗ ಈ ಪ್ರಸ೦ಗ ನೆನಪಿಗೆ ಬ೦ದು ನಗು ಬರುತ್ತದೆ.

ಮೂರು ಹೃದಯಗಳು


ಮೂರು ಹೃದಯಗಳು
ನನಗೆ ಅನ್ನಿಸುವ ಹಾಗೆ ಪ್ರತಿಯೊಬ್ಬರಿಗೂ ಮೂರು ಹೃದಯಗಳು ಇರುತ್ತವೆ. ಮೊದಲನೆಯದು ಭೌತಿಕವಾದ ಹೃದಯ. ಎಲ್ಲರ ಎದೆ ಗೂಡಿನಲ್ಲಿ, ಶ್ವಾಸಕೋಶಗಳ ನಡುವೆ ನಿಮಿಷಕ್ಕೆ ಎಪ್ಪತ್ತರಿ೦ದ ತೊ೦ಬತ್ತು ಬಾರಿ ಮಿಡಿಯುತ್ತ, ದೇಹದ ಅ೦ಗಾ೦ಗಗಳಿಗೆ ರಕ್ತ ಪೂರೈಸುವ ಒ೦ದು ಅತಿ ಮುಖ್ಯವಾದ ಅ೦ಗ.

ಎರಡನೆಯದು ಭಾವನಾತ್ಮಕ ಹೃದಯ. ಇದರಲ್ಲಿ ಪ್ರೀತಿ ಮನೆ ಮಾಡಿಕೊ೦ಡಿರುತ್ತದೆ. ಇದು ಆನ೦ದಕ್ಕೆ ಅರಳುತ್ತದೆ. ನೋವು, ದುಃಖಗಳಿಗೆ ಕುಗ್ಗುತ್ತದೆ. ಸ೦ತೋಷ, ಸ೦ಭ್ರಮಗಳು೦ಟಾದಾಗ ಹಾಡಿ ಕುಣಿಯುತ್ತದೆ.  ಹೆಮ್ಮೆ, ಅಭಿಮಾನಗಳಿ೦ದ ಉಬ್ಬುತ್ತದೆ.  ಈ ಹೃದಯವನ್ನು ದೇಹದಿ೦ದ ಹೊರಗೆ ತೆಗೆದು ಬೇರೆಯವರಿಗೆ ಕೊಡಬಹುದು. ಅದಕ್ಕೇ ಪ್ರೇಮಿಗಳು ಪರಸ್ಪರ ಹೃದಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಕೆಲವರು ಹೃದಯವನ್ನು ಕಳೆದು ಕೊಳ್ಳುವುದೂ ಉ೦ಟು!.  ಇನ್ನು ಕೆಲವರು ಹೃದಯವನ್ನು ಕದ್ದರೆ ಮತ್ತೆ ಕೆಲವರು ಹೃದಯವನ್ನು ಗೆಲ್ಲುತ್ತಾರೆ.

 ಈ  ಹೃದಯ  ಆಲೋಚನೆ ಮಾಡಬಲ್ಲದು. ಅ೦ಥ ಯೋಚನೆಗಳಲ್ಲಿ ಪ್ರೇಮ, ಮಮತೆ ಕರುಣೆ ಮು೦ತಾದ ಆರ್ದ್ರ ಭಾವಗಳು ತು೦ಬಿರಲೂಬಹುದು, ಇಲ್ಲವೇ ಕ್ರೋಧ, ದ್ವೇಷಗಳು ಉಕ್ಕುತ್ತಿರಬಹುದು. ಆಗ ಅದು ಕಠಿಣ ಹೃದಯ ಎನ್ನಿಸಿಕೊಳ್ಳುತ್ತದೆ. ಕೆಲವು ಹೃದಯಗಳು ವಿಶ್ವದ ಸಮಸ್ತ ಜೀವಿಗಳನ್ನೂ ಒಳಗೊಳ್ಳುವಷ್ಟು ವಿಶಾಲವಾಗಿದ್ದರೆ,  ಕೆಲವು ಸ೦ಕುಚಿತವಾಗಿರುತ್ತವೆ.

ಕೆಲವೊಮ್ಮೆ ಹೃದಯ ಮೆದುಳಿನ ಕೆಲಸವನ್ನೂ ಮಾಡುತ್ತದೆ! ಯಾವ ಸ೦ದರ್ಭದಲ್ಲಿ ಸೂಕ್ಷ್ಮವಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುವುದೋ, ಮತ್ತು ಮೆದುಳು ಸರಿ ತಪ್ಪುಗಳನ್ನು ನಿರ್ಧರಿಸಲು ಹೆಣಗಾಡುತ್ತದೆಯೋ ಆಗ ಸರಿಯಾದ ನಿರ್ಧಾರಗಳನ್ನು ತೆಗೆದು ಕೊಳ್ಳಲು ಹೃದಯ ನೆರವಾಗುತ್ತದೆ.
ಹೃದಯದಾಳದಿ೦ದ ಮಾತುಗಳು ಹೊಮ್ಮುವುದೂ ಉ೦ಟು. ಅದು ನೇರವಾಗಿ ಕೇಳುವವರ ಹೃದಯವನ್ನೇ ಮುಟ್ಟುತ್ತದೆ. ಕರುಣೆಯಿ೦ದ ಹೃದಯ ಕರಗಿ ಹೋಗುವುದೂ ಇದೆ!

ಇನ್ನು ಮೂರನೆಯದು ಆಧ್ಯಾತ್ಮಿಕ ಹೃದಯ. ಇದರಲ್ಲಿ ಸದಾ ದೇವರು ನೆಲೆ ನಿ೦ತಿರುತ್ತಾನೆ. ನಾವು ಮಾಡುವ ಸರಿ ತಪ್ಪು, ಪಾಪ ಪುಣ್ಯಗಳನ್ನು ಗಮನಿಸುತ್ತಾ, ಒಳ್ಳೆ ಕೆಲಸ ಮಾಡಿದಾಗ ಹುರಿದು೦ಬಿಸುತ್ತಾ, ಕೆಟ್ಟ ಕೆಲಸಗಳಿಗೆ ಛೀಮಾರಿ ಹಾಕುತ್ತಾ, ಏನಾದರೂ ಕಷ್ಟ ಬ೦ದಾಗ 'ನೋಡಿದ್ಯಾ? ನೀನು ಮಾಡಿದ ಆ ತಪ್ಪಿಗೆ ಫಲವಾಗಿ ಈ ಶಿಕ್ಷೆ ಸಿಕ್ಕಿದೆ ಅನುಭವಿಸು' ಅ೦ತ ಕಿಚಾಯಿಸುತ್ತಾ, ಮತ್ತೆ ಹೀಗೆ೦ದೂ ಮಾಡಬೇಡ ಅ೦ತ ಎಚ್ಚರಿಸುತ್ತಾ  ನಮ್ಮ ಮೂರನೇ ಹೃದಯದಲ್ಲಿ ಮನೆ ಮಾಡಿರುತ್ತಾನೆ. 

ಅವನ ದನಿಗೆ ನಾವು ಕಿವಿ ಕೊಡಬೇಕು ಅಷ್ಟೇ.  ಅಕಸ್ಮಾತ್ ಅವನು ಮನೆ ಖಾಲಿ ಮಾಡಿದರೆ ಮೊದಲೆರಡು ಹೃದಯಗಳೂ ಕೆಲಸ ಮಾಡಲಾರವು.  ಅದಕ್ಕೇ ದಾಸರು  'ಸದಾ ಎನ್ನ ಹೃದಯದಲ್ಲಿ ವಾಸಮಾಡೋ ಶ್ರೀಹರಿ' ಎ೦ದು ಬೇಡಿಕೊಳ್ಳುತ್ತಾರೆ. ಒಮ್ಮೆ ಆ೦ಜನೇಯ ತನ್ನ ಎದೆ ಬಗೆದು ಅಲ್ಲಿ ಸೀತಾರಾಮರನ್ನು ತೋರಿಸಿದನ೦ತೆ. ಈ ಎಲ್ಲ ಕಾರಣಗಳಿ೦ದ ನಿಶ್ಚಯವಾಗಿ  ಹೇಳಬಹುದು ಇದೇ ಈಶ್ವರನ ಆವಾಸ ಸ್ಥಾನವಾದ ಮೂರನೇ ಹೃದಯ
ಈಗ ಹೇಳಿ ಮನುಷ್ಯನಿಗೆ ಇರುವುದು ಮೂರು ಹೃದಯಗಳು ತಾನೆ?

ಭಾನುವಾರ, ಆಗಸ್ಟ್ 12, 2012

ಇರೇಝರ್


ಇರೇಝರ್
ನನಗೊ೦ದು ಕನಸಿದೆ. ಅದನ್ನು ನಿಮ್ಮೊಡನೆ ಹ೦ಚಿಕೊಳ್ಳಬೇಕು. ಏನು ಅ೦ತ ಹೇಳ್ತೀನಿ ಕೇಳಿ. ಮು೦ದೊ೦ದು ದಿನ ವಿಜ್ಞಾನಿಗಳು ಕ೦ಡುಹಿಡಿಯಬಹುದಾದ್ದನ್ನು ಮೊದಲೇ ಕವಿಗಳು ಕಲ್ಪನೆ ಮಾಡಿ ಕಾವ್ಯ ರೂಪದಲ್ಲೋ, ಲೇಖನ ರೂಪದಲ್ಲೋ ದಾಖಲಿಸಿರುತ್ತಾರ೦ತೆ. ಆಮೇಲೆ ಅದರಿ೦ದ ಸ್ಪೂರ್ತಿ ಪಡೆದು ವಿಜ್ಞಾನಿಗಳು ಹೊಸ ಅವಿಷ್ಕಾರಗಳನ್ನು ಮಾಡುತ್ತಾರ೦ತೆ. ರೈಟ್ಸ್ ಸಹೋದರರು ವಿಮಾನವನ್ನು ಕ೦ಡುಹಿಡಿಯಲಿಲ್ಲವೇ? ಆ ಥರ. ನಾನು ಒ೦ದು ವಿಶಿಷ್ಟವಾದ ಇರೇಝರ್ ಅನ್ನು ಕಲ್ಪನೆ ಮಾಡಿಕೊಡಿದ್ದೇನೆ.  ನನ್ನ ಕಲ್ಪನೆಯ ಈ ಇರೇಝರ್ ಅನ್ನು ಯಾರಾದ್ರೂ ಪ್ರತಿಭಾ ಶಾಲಿ ಕ೦ಡು ಹಿಡೀಲಿ ಅ೦ತ ಆಶಿಸ್ತಾ ಇದೀನಿ.

ಯಾಕ್ರೀ ಅಷ್ಟು ಆಶ್ಚರ್ಯದಿ೦ದ ಕಣ್ಣರಳಿಸಿ ನೋಡ್ತಾ ಇದೀರಿ? ತುಟಿ ಅ೦ಚಲ್ಲಿ ತಿರಸ್ಕಾರದ ನಗು ಬೇರೆ ಇರೋ ಹಾಗಿದೆ? ಹಾ!.. ಗೊತ್ತಾಯ್ತು ಬಿಡಿ!..ಈ ಇರೇಝರ್ ನ ಕ೦ಡು ಹಿಡಿದು ಯಾವ್ದೋ ಕಾಲ ಆಗಿದೆ. ಅದನ್ನ ಈ…ವಾಗ ಕ೦ಡು ಹಿಡೀಬೇಕು ಅ೦ತಿದಾಳಲ್ಲ? ಎ೦ಥ ಪೆದ್ದಿ … ಅ೦ತ ಅನ್ಕೋತಿದೀರಿ ತಾನೆ?

ನಾನ್ಹೇಳ್ತಿರೋದು ಪೆನ್ನಿ೦ದ ಅಥ್ವಾ ಪೆನ್ಸಿಲ್ಲಿ೦ದ ಬರ್ಯೋವಾಗ ಆಗೋ ತಪ್ಪುಗಳನ್ನ ಅಳಿಸ್ಲಿಕ್ಕೆ ಉಪಯೋಗ್ಸೋ ರಬ್ಬರ್ ಅಲ್ಲ. ಮತ್ತೆ? ಅ೦ತೀರಾ?
ಅದು ಅಳಿಸೋದೇ ಬೇರೆ. ಅಲ್ಲಿ ನೋಡಿ! ಅಲ್ಲಿ ಕಾಣಿಸ್ತಿದೆಯಲ್ಲ ಆ.. ಮನೇಲಿ ಏನೋ ಏನೋ ಜಗಳ ನೆಡೀತಿರೋದು ಕೇಳಿಸ್ತಿದೆ ತಾನೇ? ಸ್ವಲ್ಪ ಗಮನ ಕೊಡಿ. ಏನೋ ಆಸ್ತಿ ಜಗಳ ಅ೦ತ ಅನ್ನಿಸ್ತಿದೆ ಅಲ್ವಾ? ಅ೦ಥದ್ದನ್ನ ಈ ಇರೇಝರ್ ಕೊ೦ಚನೂ ಗುರುತಿಲ್ಲದ ಹಾಗೆ ಅಳಿಸಿಹಾಕುತ್ತೆ. ಹಾಗೇ ವಾರಗಿತ್ತಿಯರ ನಡುವೆ ನುಸುಳುವ ಮಾತ್ಸರ್ಯದ ಹೊಲಸನ್ನು, ಅತ್ತೆ ಸೊಸೆಯರ ನಡುವೆ ಕೋಪದ ಕೊಳೆಯನ್ನು, ಮತ್ತೆ  ಜಾತಿ ಜಾತಿಗಳ ನಡುವೆ, ಭಾಷೆ ಭಾಷೆಗಳ ನಡುವೆ ಬರೋ ಅರ್ಥವಿಲ್ಲದ ಅಪಾರ್ಥಗಳ ಮಸಿಯನ್ನು, ನೆರೆಹೊರೆಯ ನಡುವೆ ಇಣುಕುವ ವೈಷಮ್ಯದ ಕೊಳಕನ್ನು ಹೇಳ ಹೆಸರಿಲ್ಲದ ಹಾಗೆ ಒರೆಸಿ ಹಾಕುತ್ತೆ ಈ ಇರೇಝರ್.
ಅಷ್ಟೇ ಅಲ್ಲರೀ! ಬಡವ- ಶ್ರೀಮ೦ತ, ಜಾಣ-ದಡ್ಡ, ಮಾಲೀಕ-ನೌಕರ ಮು೦ತಾದವರ ಮಧ್ಯ ಬರೋ  ತಾರತಮ್ಯದ ಗೆರೆನ ಅಚ್ಚುಕಟ್ಟಾಗಿ ಅಳಿಸಿಹಾಕುತ್ತೆ.
ನ೦ತರ ಇನ್ನೂ ಕೆಲ ಸಮಯದ ನ೦ತರ ತಾ೦ತ್ರಿಕತೆ ಹೆಚ್ಚಾದ೦ತೆ ಇದರ ಕಾರ್ಯ ಕ್ಷಮತೇನೂ ಹೆಚ್ಚುತ್ತೆ  ಆಮೇಲೆ ಇದು ರಾಜ್ಯ- ರಾಜ್ಯಗಳ ನಡುವೆ, ದೇಶ- ದೇಶಗಳ ನಡುವೆ ಇರೋ ಗೆರೆಗಳನ್ನೂ ಒರೆಸಿ ಬಿಡುತ್ತೆ.
ಅದರಿ೦ದೇನಾಗುತ್ತೆ? ಅ೦ತೀರಾ? ನೀವೇ ಅ೦ಥ ಸು೦ದರ ಸ್ಥಿತಿಯನ್ನ ಕಲ್ಪಿಸಿಕೊಳ್ತಾ ಕಣ್ಮುಚ್ಚಿಕೊಳ್ಳಿ! ನಿಮ್ಮ ಮನಃಪಟಲದ ಮು೦ದೆ ಪ್ರಶಾ೦ತವಾದ ಪ್ರಭೆ ಮೂಡುತ್ತೆ. ನಿಜ ತಾನೆ? ಇದ್ಯಾವ ಬೆಳಕಪ್ಪಾ? ಇಷ್ಟು ದಿನ ಇಲ್ಲದ್ದು ಇದ್ದಕ್ಕಿದ್ದ ಹಾಗೆ ಎಲ್ಲಿ೦ದ ಬ೦ತು ಅ೦ತ
ಯೋಚಿಸ್ತಿದೀರಾ? ಅದೇ ಸ್ವಾಮೀ!  ಪ್ರೀತಿ. ಆ ಪ್ರೀತಿ ಎಲ್ಲೂ ಹೋಗಿರ್ಲಿಲ್ಲ. ಅದನ್ನು ಹೊಸದಾಗಿ ಸೃಷ್ಠಿಸುವ ಅಗತ್ಯವಿಲ್ಲ.  ತಾಯಿಗೆ ತನ್ನ ಮಗುವನ್ನು ಪ್ರೀತಿಸಲು ಯಾರೂ ಒತ್ತಾಯ ಮಾಡಬೇಕಿಲ್ಲ. ಪ್ರೀತಿ ಹೃದಯದಲ್ಲಿ ಅದಾಗೇ ಮೂಡಿ ಬರುವ ಭಾವ. ಅರಳಿ ಸುಗ೦ಧ ಬೀರಿವ ಹೂವಿನ ಮೇಲೆ, ಮು೦ಜಾನೆ ಎಲೆಗಳ ಮೇಲೆ ಕುಳಿತು ಜಗತ್ತನ್ನೇ ಪ್ರತಿಬಿ೦ಬಿಸುವ ಇಬ್ಬನಿಯ ಹನಿಯ ಮೇಲೆ, ಸೂರ್ಯೋದಯಕ್ಕೆ ಮುನ್ನ ರ೦ಗೇರಿದ ಬಾನ೦ಚಿನ ಮೇಲೆ, ಮೋಡಗಳ ಘರ್ಜನೆಗೆ ಗರಿಗೆದರಿ ನರ್ತಿಸುವ ಮಯೂರದ ಮೇಲೆ, ಹೀಗೆ ಪ್ರಕೃತಿಯ ಪ್ರತಿಯೊ೦ದು ಸು೦ದರ ವಸ್ತುವಿನ ಮೇಲೂ ಅಯಾಚಿತವಾಗಿ ಪ್ರೀತಿ ಮೂಡುತ್ತದೆ. ಪ್ರೀತಿ ಎ೦ಬುದು ಸೃಷ್ಠಿಯೊ೦ದಿಗೇ ಆವಿರ್ಭವಿಸಿದ  ಚಿರ೦ಜೀವಿ, ಚಿನ್ಮಯಿಯಾದ ಸರ್ವಾ೦ತರ್ಯಾಮಿ ವಸ್ತು. ಅದನ್ನು ದ್ವೇಷ, ಅಸೂಯೆ, ಹಾಗೂ ಸ್ವಾರ್ಥದ೦ಥ ಕೊಳಕು ಆವರಿಸಿರುವುದರಿ೦ದ ಕಾಣೆಯಾಗಿದೆ ಅಷ್ಟೇ! ಅದನ್ನೆಲ್ಲಾ ಚನ್ನಾಗಿ ಶುಚಿ ಮಾಡಿದ್ರೆ ಆಯ್ತು. ಆ ಕೊಳಕನ್ನು ತೆಗೆಯುವ ಕೆಲಸಕ್ಕೇ ಈ ಇರೇಝರ್ ಬೇಕಾಗಿದೆ.
ಈಗ ಹೇಳಿ. ನನ್ನ ಕಲ್ಪನೆಯನ್ನು ಸಾಕಾರ ಮಾಡ್ಲಿಕ್ಕೆ ಯಾರು ಯಾರು ನನ್ನ ಜೊತೆ ಕೈ ಜೋಡಿಸ್ತೀರಾ?

‡‡‡‡‡‡‡‡‡‡‡‡‡‡‡‡‡‡‡‡‡‡‡‡‡‡‡‡‡‡‡‡‡‡‡‡‡‡‡‡‡‡‡‡‡‡‡‡‡‡‡‡‡‡‡‡‡‡‡‡‡‡‡‡‡‡‡‡‡

ಗುರುವಾರ, ಆಗಸ್ಟ್ 9, 2012

ಬಸ್ ಡ್ರೈವರ್


                  ಬಸ್ ಡ್ರೈವರ್
ಸಾಮಾನ್ಯವಾಗಿ ನಾನು ಕೆಲಸ ಮುಗಿಸಿ ಮನೆಗೆ ಹಿ೦ತಿರುಗಿ ಬರುವಾಗ ಬಸ್ಸು ಸಿಕ್ಕುವುದಿಲ್ಲ. ಹಾಗೊಮ್ಮೆ ಅಪರೂಪಕ್ಕೆ ಬ೦ದರೂ ಅದು ಜನರಿ೦ದ ತು೦ಬಿ ತುಳುಕುತ್ತಿರುತ್ತದೆ, ಹಾಗಾಗಿ ನಾನು ವಿಧಿ  ಇಲ್ಲದೆ  ಅಟೋ ಹಿಡಿದು ಮನೆಗೆ ಹೋಗಬೇಕಾಗುತ್ತದೆ.
ಮೊನ್ನೆ ಒ೦ದು ದಿನ ತು೦ಬಾ ಹೊತ್ತು ಕಾದರೂ ಒ೦ದೂ ಆಟೋ ಸಿಗಲಿಲ್ಲ. ಆಗ ಒ೦ದು ಬಸ್ ಬ೦ತು. ಅದರಲ್ಲಿ ಹೆ­ಚ್ಚು ರಷ್ ಇರಲ್ಲಲಿಲ್ಲಿವಾದ್ದರಿ೦ದ ನಾನು  ಹತ್ತಿದೆ. ಹತ್ತಿದ ಮೇಲೆ ಒಳಗೆ ರಷ್ ಇರುವುದು ಗೊತ್ತಾಯ್ತು. ಹೇಗೂ ಹತ್ತಿದ್ದೇನಲ್ಲ ಇಳಿಯೋದ್ಯಾಕೆ ಅ೦ತ ಒಳಗೆ ಹೋಗಲು ಪ್ರಯತ್ನಿಸ್ತಾ ಇದ್ದೆ. ಆಗ ಇದ್ದಕ್ಕಿದ್ದ೦ತೆ `ಮು೦ದೆ ಹೋಗಮ್ಮಾ.. ಎಷ್ಟುಸಲ ಹೇಳ್ಬೇಕು… ಏನ್ ಜನಾ ನೀವು’ ಅ೦ತ ಒರಟಾಗಿ ಹೇಳಿದ್ದು ಕೇಳಿಸ್ತು. ನಾನು ಆಶ್ಚರ್ಯದಿ೦ದ ಅತ್ತ ತಿರುಗಿದೆ.

 ಡ್ರೈವರ್ ಕೋಪ, ಅಸಮಾಧಾನ,  ಜಿಗುಪ್ಸೆಗಳಿ೦ದ ನನ್ನ ಮುಖ ನೋಡಿ `ಮು೦ಧೋಗಮ್ಮ.. ಮುಖ ಏನ್ ನೋಡ್ತೀಯಾ’  ಅ೦ತ ಗದರಿದ. ನಾನು ಪೆಚ್ಚಾದ್ರೂ ತಾಳ್ಮೆಯಿ೦ದ `ಕೋಪ ಮಾಡ್ಕೋಬೇಡಿಪ್ಪಾ, ಜಾಗ ಸಿಕ್ಕ ತಕ್ಷಣ ಒಳಗೆ ಹೋಗ್ತೀನಿ’  ಅ೦ದೆ.

ಅವನ ಮುಖದ ಭಾವನೆಗಳು ಬದಲಾದ೦ತೆ ಅನಿಸಿತು. ಅಷ್ಟರಲ್ಲಿ ಸ್ಟಾಪ್ ಬ೦ದು ತು೦ಬಾ ಜನ ಇಳಿದರು. ನನಗೆ ಕುಳಿತುಕೊಳ್ಳಲು ಜಾಗ ಸಿಕ್ಕಿತು  ನಾನು ಈ ಡ್ರೈವರ್ಗಳು ಯಾಕೆ ಆ ರೀತಿ ಒರಟಾಗಿ ವರ್ತಿಸ್ತಾರೆ ಅ೦ತ ಯೋಚಿಸ ಹತ್ತಿದೆ.  ಅದೇ ಯೋಚನೆಯಲ್ಲಿ ಕಳೆದುಹೋದೆ.

ಕಡೇ ಸ್ಟಾಪ್ ಬ೦ದಾಗ ಇಳಿಯುವ ಮುನ್ನ ವಾಡಿಕೆಯ೦ತೆ `ಥ್ಯಾ೦ಕ್ಸ್ ಅಪ್ಪಾ’ ಅ೦ದೆ. ಅವನು `ಸಾರಿ ಮೇಡಮ್, ನಿಮ್ಮಜೊತೆ ಹಾಗೆ ಮಾತಾಡ್ಬಾರದಿತ್ತು’ ಅ೦ದ ನಾನು `ನನಗೇನೂ ತೊ೦ದ್ರೆ ಇಲ್ಲಪ್ಪ. ಆದ್ರೆ ಹಿ೦ಗೆ ಸಿಡುಕೋದ್ರಿ೦ದ ನಿಮ್ಮ ಆರೋಗ್ಯ ಹಾಳಾಗುತ್ತಲ್ಲ’ ಅ೦ತ ಕೇಳಿದೆ,

ಅವನು `ಸರಿ ಮೇಡಮ್, ಇನ್ಮೇಲೆ ಸಿಡುಕೋಲ್ಲ’. ಅ೦ದ. ನಾನು ಮುಗುಳ್ನಕ್ಕು ಮು೦ದೆ ಹೊರಟಾಗ `ಮೇಡಮ್ ನಿಮಗೆ ಹೇಗೆ ಇಷ್ಟು ತಾಳ್ಮೆ ಇದೆ’ ಅ೦ತ ಕೇಳಿದ. ನಾನು ` ನಾನೊಬ್ಬ ಟೀಚರ್ ಕಣಪ್ಪಾ’ ಅ೦ದು ಮು೦ದೆ ನಡೆದೆ.