ಭಾನುವಾರ, ಡಿಸೆಂಬರ್ 9, 2012

ಸಜ್ಜುಮಾಡು ಅಮ್ಮಾ


ಜ್ಜುಮಾಡು ಅಮ್ಮಾ ಎನ್ನ
ಎದುರಿಸಲು ಜಗವನು
ಎಷ್ಟು ಕಾಲ ಮಲಗಿರಲಿ
 ನಿನ್ನ ಮಡಿಲನಲ್ಲಿಯೇ?

ಸಡಿಲಿಸಮ್ಮ ಮಮತೆ ಬಂಧ
ನೋಡಲು ಬಿಡು ಜಗವನು
ಸವಿಯಲು ಬಿಡು ಸೋಲ ಕಹಿಯ
ನೋಯಲು ಬಿಡು ಮನವನು

ನೊಂದು ಬೆಂದು  ಮಾಗಿ ಮತ್ತೆ
ಬರುವೆ ನಿನ್ನ ಮಡಿಲಿಗೆ
ಆಗ ನೀಡು ಸಾಂತ್ವನವ
ಅಷ್ಟೇ ಸಾಕು ಬಾಳಿಗೆ

ಮಮಕಾರವ ದೂರುತಿಲ್ಲ
ಅಮ್ಮಾ ಘಾಸಿಪಡದಿರು
ಹಾರ ಬಯಸದೇನು ಹಕ್ಕಿ
ತನ್ನ ರೆಕ್ಕೆ ಬಲಿಯಲು?

ಗೊತ್ತು ಅಮ್ಮಾ ನಿನ್ನ ಪ್ರೀತಿ
ಆಕುಲತೆಯ ಮರೆಯಲಿ
ಅವಿತ ಅಮಿತ ಮಮತೆಯನ್ನು
ಹೇಗೆ ತಾನೇ ಹಳಿಯಲಿ?

ಹಾತೊರೆದಿದೆ ನನ್ನ ಮನವು
 ಜಗದನುಭವ ಪಡೆಯಲು
ರೆಕ್ಕೆ ಹರಡಿ ಕ್ಷಿತಿಜದೆಡೆಗೆ
 ಹಾರಿ ಹೋಗಿ ನೋಡಲು

ಅಮ್ಮಾ ಒಮ್ಮೆ ಕಳಿಸಿ ನೋಡು
 ಸೇರುವೆನು ಗುರಿಯನು
ನಿನ್ನ ಹರಕೆ ಒಂದೇ ಸಾಕು
ಎದುರಿಸಲು ಜಗವನು



ಶನಿವಾರ, ಡಿಸೆಂಬರ್ 8, 2012

ಪ್ರೀತಿ ಎಷ್ಟೊಂದು ಕುರುಡು.........!!??


ಅವನು ಸೋತ ಕಾಲುಗಳನ್ನೆಳೆಯುತ್ತಾ ದಿಕ್ಕು ದೆಸೆ ಇಲ್ಲದೇ ಹೋಗುತ್ತಿದ್ದ. ಚಿಂತೆ,ಆತಂಕಗಳ ಗೂಡಾಗಿದ್ದ  ಅವನ ಈ ಮನಸ್ಥಿತಿಗೆ ಕಾರಣ ಮುಂಜಾನೆ ಬಂದ ಕರೆ.

" ಮಾವ, ನೀವು ಮಾತು ಕೊಟ್ಟ ಹಾಗೆ ಇನ್ನೂ ಸ್ಕೂಟರ್ ಕೊಡಿಸಿಲ್ಲ. ಅದಕ್ಕೇ ನಿಮ್ಮ ಮಗಳನ್ನು ನಿಮ್ಮನೆಗೇ ಕಳಿಸ್ತಿದೀನಿ. ಅವಳ ಮೇಲೆ ಪ್ರೀತಿ ಇದ್ರೆ, ಅವಳು ನಮ್ಮನೇಲಿ ಚನ್ನಾಗಿರ್ಬೇಕೂಂತ ಆಸೆ ಇದ್ರೆ ಆದಷ್ಟೂ ಬೇಗ ಸ್ಕೂಟರ್ ಕೊಡಿಸಿ. ಇಲ್ಲಾಂದ್ರೆ ನಿಮ್ಮ ದಾರಿ ನಿಮ್ದು, ನನ್ ದಾರಿ ನಂದು......."

 ಹಿನ್ನೆಲೆಯಲ್ಲಿ ಅಳುವ ಸದ್ದು! "ಇಲ್ಕೇಳಿ ಅಳಿಯಂದ್ರೆ......." ಫೋನ್ ಕಟ್ಟಾಯಿತು.

 ' ಅಯ್ಯೋ ಮಗು ಎಷ್ಟು ಸಂಕಟ ಪಡ್ತಿದಾಳೂ.....' ಮನಸ್ಸು ವಿಲವಿಲ ಒದ್ದಾಡಿತು. ಹೊಟ್ಟೆ ಬಟ್ಟೆ ಕಟ್ಟಿ ಮುದ್ದಿನಿಂದ ಸಾಕಿ ಸಲಹಿದ ಒಬ್ಬಳೇ ಮಗಳು. ಅವಳ ಮೈಮೇಲೆ ಸಾಕಷ್ಟು ಬಂಗಾರ ಹಾಕಿ ತಕ್ಕಮಟ್ಟಿಗೆ ಚನ್ನಾಗೇ ಮದುವೆ ಮಾಡಿ ಕಳಿಸೋದ್ರಲ್ಲಿ ಸಾಲದ ಹೊಳೆಯಲ್ಲಿ ಪೂರ್ಣವಾಗಿ ಮುಳುಗಿ ಹೋಗಿದ್ದ. ಎಷ್ಟೇ ತಿಪ್ಪರಲಾಗ ಹಾಕಿದ್ರೂ ಅಳಿಯ ದೇವರು ಕೇಳಿದ ಸ್ಕೂಟರ್ ತರಲು ಆಗಲೇ ಇಲ್ಲ. ಆದಷ್ಟೂ ಬೇಗ ಕೊಡಿಸ್ತೀನಿ ಅಂತ ಹೇಗೋ ಸಮಾಧಾನ ಮಾಡಿ ಹೆಣ್ಣೊಪ್ಪಿಸಿಕೊಡೋಷ್ಟರಲ್ಲಿ ಮತ್ತೆ ಹುಟ್ಟಿ ಬಂದಂತಾಗಿತ್ತು.

"ಅಯ್ಯೋ...! ದೇವ್ರೇ!......ಇನ್ನು ಹಣಕ್ಕಾಗಿ ಏನು ಮಾಡಲಿ? ಯಾರ ಹತ್ರ ಕೇಳಲಿ?........" ಮನದಲ್ಲೇ ಮೌನವಾಗಿ ರೋದಿಸುತ್ತಾ ಸಾಗುತ್ತಿದ್ದವನನ್ನು ಒ೦ದು ಭಯಂಕರ ಶಬ್ದ ವಾಸ್ತವಕ್ಕೆ ತಂದಿತು. ವ್ಯಾನೊಂದು ಚಾಲಕನ ನಿಯಂತ್ರಣ ತಪ್ಪಿ ಮರವೊಂದಕ್ಕೆ ಡಿಕ್ಕಿ ಹೊಡೆದಿತ್ತು. ಬಹುಷಃ ಎಲ್ಲರೂ ಸ್ಥಳದಲ್ಲೇ ಮೃತಪಟ್ಟಿರಬಹುದು. ಯಾವ ಕಿರುಚಾಟವೂ ಕೇಳಿಬರಲಿಲ್ಲ. ಹತ್ತಿರ ಹೋಗಿ ನೋಡಿದ. ಕಿಟಕಿಯಿಂದ ಒಂದು ರಕ್ತಸಿಕ್ತ  ಕೈ ಆಚೆ ಬಂದಿತ್ತು.

ಅವನ ಗಮನ ಸೆಳೆದಿದ್ದು ಆ ಕೈಗಳಲ್ಲಿದ್ದ ಬಂಗಾರದ ಬಳೆಗಳು. ಇವನ್ನು ಮಾರಿದರೆ ಸ್ಕೂಟರ್ ಗೆ ಹಣ ಹೊಂದಿಸಬಹುದು ಅಂದುಕೊಂಡು ಲಗುಬಗೆಯಿಂದ ಆ ಬಳೆಗಳನ್ನು ಕಳಚಿಕೊಳ್ಳುವಾಗ ಆ ಕೈ ಮೇಲಿದ್ದ ಮಚ್ಚೆ ಮಗಳನ್ನು ನೆನಪಿಗೆ ತಂತು " ಪುಟ್ಟಿ ನಾನು ಸ್ಕೂಟರ್ ತಂದು ಕೊಡ್ತೇನಮ್ಮ ನೀನು ಅಳ್ಬೇಡ...." ಅಂತ ಮನಸ್ಸಲ್ಲೇ ಅಂದುಕೊಂಡು ಮನೆಗೆ ಧಾವಿಸಿದ.

"ಇನ್ನೇನು ಮಗು ಬರ್ತಾಳೆ. ಅವಳನ್ನ ನಾಳೆ ಪೇಟೆಗೆ ಕರ್ಕೊಂಡು ಹೋಗಿ ಅವಳ ಗಂಡನಿಗೆ ಒಳ್ಳೆ ಸ್ಕೂಟರ್ ಕೊಡಿಸ್ತೀನಿ........" ಅಂತ ಕಾಯ ತೊಡಗಿದ.

 ಗಂಟೆಗಳುರುಳಿದರೂ ಮಗಳ ಸುಳಿವಿಲ್ಲ. ಕಾಯುತ್ತಾ ತೂಕಡಿಸುತ್ತಾ ಕುಳಿತವನನ್ನು ಬಾಗಿಲ ಸದ್ದು ಎಚ್ಚರಿಸಿತು. 'ಓ ಮಗು ಬಂದ್ಲು.....' ಅಂತ ಲಗುಬಗೆಯಿಂದ ತೆಗೆದವನಿಗೆ ಕಂಡದ್ದು ಪೋಲೀಸರ ಗಡಸು ಮುಖ. " ನಿನ್ ಮಗಳಿಗೆ ಆಕ್ಸಿಡೆಂಟಾಗಿದೆ, ಆಸ್ಪತ್ರೆಲಿದ್ದಾಳೆ...." ಅಂದದ್ದೇ ಎದ್ದೆನೋ ಬಿದ್ದೆನೋ ಅಂತ ಆಸ್ಪತ್ರೆಗೆ ಓಡಿದ.

ಮಗಳ ಮೃತದೇಹದ ಮುಂದೆ ಅಳುತ್ತಿದ್ದ ಅವನಿಗೆ ಯಾರೋ ಅಂದಿದ್ದು ಕೇಳಿಸಿತು " ಪಾಪ  ಅಪಘಾತವಾದದ್ದು ನೋಡಿದವರು ಇಲ್ಲಿಗೆ ಬೇಗ ಕರೆತಂದಿದ್ದರೆ ಬದಿಕಿರೋಳು. ಅದ್ಯಾವ ಕಟುಕನೋ ಅಂಥ ಸ್ಠಿತೀಲಿ ಅವಳ ಬಳೆ ಕಿತ್ಕೊಂಡು ಹೋಗಿದಾನೆ ನೋಡಿ. ....."

'ಆ ಕಟುಕ ತಾನೇ...' ತನ್ನನ್ನು ತಾನು ಕ್ಷಮಿಸಿಕೊಳ್ಳಲು ನಿರಾಕರಿಸಿದ ಅವನ ಹೃದಯ ಸ್ಥಬ್ದವಾಗಿತ್ತು........ 

ಮಂಗಳವಾರ, ನವೆಂಬರ್ 13, 2012

ಪಾಪ! ಪರದೇಶದ ಪಾಪುಗಳು.........!



ಅಂದು ನಾವು ( ಅಂದರೆ ನಾನು ಮತ್ತು ನನ್ನ ಮನೆಯವರು  ) ಕೆಲಸಕ್ಕೆ ದಿನನಿತ್ಯದಂತೆ ಕಾರಲ್ಲಿ ಹೋಗುತ್ತಿದ್ದೆವು.


ತಡವಾದೀತೆಂಬ ಗಡಿಬಿಡಿಯಲ್ಲಿ ಇವರು ಕಾರು ಓಡಿಸುತ್ತಿದ್ದರು. ಆಗ ಇದ್ದಕ್ಕಿದ್ದಂತೆ  ಮುಂದೆ ಹೋಗುತ್ತಿದ್ದ ವಾಹನದ ವೇಗ ಕಡಿಮೆ ಆಯಿತು.  ಅದಕ್ಕೆ ಕಾರಣ ನಿದಾನವಾಗಿ ರಸ್ತೆ ದಾಟುತ್ತಿದ್ದ ಒಂದು ಹಸು...............

 ಅದೇ ತಾನೆ ಕೆಲಕಾಲ ಅಮೆರಿಕದಲ್ಲಿದ್ದು ಬಂದಿದ್ದ ಇವರಿಗೆ ಹಸುವನ್ನು ನೋಡಿ ಕೋಪ ಬಂತು. "ಅಲ್ಲೆಲ್ಲಾ ಪ್ರಾಣಿಗಳಿರಲಿ ಮನುಷ್ಯರೇ ಹೀಗೆ ಅಡ್ಡ ಬರೋಲ್ಲ. ಟ್ರಾಫಿಕ್ ಪ್ರಾಬ್ಲಮ್ಮೇ ಇರಲ್ಲ. ಛೆ! ನಮ್ಮ ದೇಶದಲ್ಲಿ.........." ಹೀಗೆ ಗೊಣಗಾಡಲಿಕ್ಕೆ ಶುರು ಮಾಡಿದರೆ, ನನ್ನ ಮನಸ್ಸು ಆ ದೇಶದ ಮಕ್ಕಳ ಬಗ್ಗೆ ಯೋಚಿಸುತ್ತಿತ್ತು.

 ಪಾಪ ಆ ಮಕ್ಕಳು ನಮ್ಮ ಮಕ್ಕಳು ಅನುಭವಿಸುವ ಸುಂದರ ಬಾಲ್ಯದಿಂದ ವಂಚಿತರಾಗುತ್ತಾರಲ್ಲವೇ?


ನಮ್ಮ ಮಗಳ ಬಾಲ್ಯದ ದಿನಗಳು ಕಣ್ಣೆದಿರು ಬಂದವು. ಅವಳು ಅತ್ತಾಗ ಸಮಾಧಾನ ಮಾಡಲು, ತಿನ್ನಲು ಹಟ ಮಾಡಿದಾಗ ತಿನ್ನಿಸಲು. ನಿದ್ದೆ ಮಾಡದಿದ್ದಾಗ ಹೆದರಿಸಲು,  ಹೀಗೆ ಹತ್ತು ಹಲವಾರು ಪ್ರಸಂಗಗಳಲ್ಲಿ ಸಹಕರಿಸಿದ್ದೇ ಈ ಪ್ರಾಣಿ ಪಕ್ಷಿಗಳು.
ನಮ್ಮ ದೇಶದಲ್ಲಿ ಮಕ್ಕಳಿಗೆ ಮಾತು ಕಲಿಸುವುದರಲ್ಲಿ, ಅವರ ಸಾಮಾನ್ಯ ಜ್ಞಾನ ಹೆಚ್ಚಿಸುವುದರಲ್ಲಿ ಈ ನಾಡಾಡಿ ಜೀವಿಗಳ ಕೊಡುಗೆ ಅಪಾರ


ಆಗ ಮನೆಯಿಂದ ಹೊರ ಬಂದು ದಾರಿಯಲ್ಲಿ ಹೋಗೋ ಹಸುಗಳನ್ನ ತೋರಿಸಿ
" ಹಸು ಏನನ್ನುತ್ತಮ್ಮ?...... ಅಂಬಾ.....! ಎಲ್ಲಿ ಅಂಬಾ ಅನ್ನು"  ಅಂತ ಹೇಳಿಕೊಡುತ್ತೇವೆ. ಮಗು ಪುಟ್ಟ ಬಾಯಲ್ಲಿ ಹಾಗೇ "ಅಂಬಾ " ಅಂದು ಬಿಟ್ಟರೆ ಹಿಗ್ಗೋಹಿಗ್ಗು. ಪುಟ್ಟಿ "ಅಂಬಾ" ಅಂದ ದಿನ ಅಂತ ಕ್ಯಾಲೆಂಡರ್ ನಲ್ಲಿ ಬರೆದಿಡುತ್ತೇವೆ.


ಶಾಲೆಗೆ ಹೋಗುವ ಮೊದಲೇ ನಮ್ಮ ಮಕ್ಕಳು ಹೀಗೆ ಯಾವ ಯಾವ ಪ್ರಾಣಿಗಳು ಹೇಗಿರುತ್ತವೆ, ಯಾವ ರೀತಿ ಕೂಗುತ್ತವೆ, ಹೇಗೆ ವರ್ತಿಸುತ್ತವೆ ಎಲ್ಲಾ ನೈಜವಾಗಿ ನೋಡಿ ಕಲಿತಿರುತ್ತಾರೆ. ವರ್ಷ ತುಂಬೋ ಮೊದಲೇ ನಾಯಿ, ಹಸು, ಎಮ್ಮೆ, ಎತ್ತು, ಕತ್ತೆ, ಕುದುರೆ, ಹಂದಿ ಕುರಿ ...... ಹೀಗೆ ಎಷ್ಟೊಂದು ಪ್ರಾಣಿಗಳನ್ನ ಗುರುತಿಸ ಬಲ್ಲರು ನಮ್ಮ ಮಕ್ಕಳು
ಅವರು ಹಾಡೋ ಹಾಡುಗಳೂ ಈ ಪ್ರಾಣಿಗಳ ಕುರಿತೇ ಇರುತ್ತವೆ.......

" ನಾಯಿ ಮರಿ ನಾಯಿಮರಿ ತಿಂಡಿ ಬೇಕೇ?....... ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ........."  "ಕೋಳಿ ಕೂಗಿತೇಳು ಕಂದಾ.........
 "
ಇತ್ಯಾದಿ ಇತ್ಯಾದಿ.........


"ನಾಯಿ ಏನನ್ನುತ್ತೆ...." "  ಭೌಭೌ...."   " ಕಾಗೆ ಹೆಂಗೆ ಕೂಗುತ್ತೆ? " ಕಾಕಾ......." ಹೀಗೆ ಪ್ರಾಣಿಗಳು ಮಾಡೋ ಶಬ್ದನ ಕಲಿಸ್ತೀವಿ. 

 ಮತ್ತೆ ಮಕ್ಕಳು ಏನಾದ್ರೂ ಚೂಪಾದ ವಸ್ತೂನೋ ಇಲ್ಲಾ ದುಬಾರಿಯಾದ ಸಾಮಾನನ್ನೋ ಬೇಕೂಂತ್ ಹಟ ಮಾಡಿದಾಗ, ಅದನ್ನ ಮರೆಸಿಟ್ಟು  "ಅಲ್ನೋಡು ಕಾಗೆ ಕಾಕಾ ಕಾಗೆ ಕಚ್ಕೋಂಡ್ ಹೋಯ್ತು....."ಅಂತ ಯಾಮಾರಿಸ್ತೀವಿ.

 ಅಲ್ದೇ ಅವು ಮಲಗ್ದೇ ರಚ್ಚೆ ಹಿಡಿದಾಗ "ಮಿಯಾವ್...ಮಿಯಾವ್.... "  ಅಂತ ಕೂಗಿ ಮತ್ತೆ " ಶ್  ಮಿಯಾಂ ಬೆಕ್ಕು  ಬಂತು ! ಹೋಗಪ್ಪಾ ಬೆಕ್ಕಣ್ಣ.... ನಮ್ ಪಾಪು ತುಂಬಾ ಜಾಣ ಮರಿ ಮಲಕ್ಕೊಂಡ್ ಬಿಟ್ಲು........." ಅಂತ ಹೆದರಿಸಿ ಮಲಗಿಸ್ತೀವಿ.


ಹೀಗೆ ಯಾವ ಫಾರಂ ಗೂ ಪ್ರಾಣಿ ಸಂಗ್ರಹಾಲಯಕ್ಕೂ ಹೋಗದೆ ಮನೆ ಹತ್ತಿರಾನೇ ಎಷ್ಟೊಂದು ಪ್ರಾಣಿ ಪಕ್ಷಿಗಳನ್ನ ನಮ್ಮ ಮಕ್ಕಳಿಗೆ ಪರಿಚಯ ಮಾಡಿಸ್ತೀವಲ್ಲ. ಆ ಪ್ರಾಣಿಗಳನ್ನ ಎಷ್ಟು ಸಹಜವಾಗಿ ನಮ್ಮ ಬದುಕಿನ ಭಾಗವಾಗಿ ಸ್ವೀಕರಿಸಿ ಬಿಡ್ತೀವಲ್ಲ.  ಭಾರತದ ಮಾತೆಯರೇ ಧನ್ಯರು

ಜೈ ಭಾರತ ಮಾತೆ.............

ಸೋಮವಾರ, ನವೆಂಬರ್ 12, 2012

ದೀಪಾವಳಿಯ ಸವಿ ನೆನಪುಗಳು



 ಅನೇಕ ವರ್ಷಗಳಾದರೂ ಆ ಸುಂದರ ಬಾಲ್ಯ, ಆ ದೀಪಾವಳಿಯ ಸಡಗರ ಮನಸ್ಸಿನಲ್ಲಿ ಸದಾ ಮಿಂಚುತ್ತಿರುತ್ತದೆ.

ನನ್ನ ಎಳೆತನವನ್ನು ಒ೦ದು ಸರಳವಾದ  ಚಿಕ್ಕ ಊರು, ಶಿಮ್ಮೊಗ್ಗ ಜಿಲ್ಲೆಯ ಸೊರಬದಲ್ಲಿ ಕಳೆದೆ.

 ಹಬ್ಬದ ಹಿಂದಿನ ದಿನ ನೀರು ತುಂಬೋ ಹಬ್ಬ. ಅವತ್ತು ಮನೆ ಎಲ್ಲಾ ಸಗಣಿಯಿಂದ ಸಾರಿಸಿ, ಗೋಡೆ ಅಂಚಿಗೆ ಮತ್ತೆ ಹೊಸಿಲುಗಳ ಮೇಲೆ ರಂಗೋಲಿ ಹಾಕುತ್ತಿದ್ದರು.

ಹಾಗೇ ಅಡಿಗೆಮನೆ ಹಾಗೂ ಬಚ್ಚಲು ಮನೆಯ ಒಲೆಗಳನ್ನು ಸಾರಿಸಿ, ಹಂಡೆಯನ್ನು ಚನ್ನಾಗಿ ತೊಳೆದು ನೀರು ತುಂಬುತ್ತಿದ್ದರು. ಅದರ ಮುಂದೆ ದೀಪ ಇಟ್ಟು, ಪೂಜೆ ಮಾಡುತ್ತಿದ್ದೆವು. ಅಪ್ಪ ಆ ಹಂಡೆಯ ಪೂಜೆಗೇ  ಒಂದು ಶ್ಲೋಕ ರಚಿಸಿದ್ದರು. 

ಅದೀಗ ಪೂರ್ತಿ ನೆನಪಿಲ್ಲ  ಅಂತೂ  "........ ಭಾಂಡ ದೇವಿ ನಮೋಸ್ತುತೇ" ಅಂತ ಮುಗಿಯುತ್ತೆ.

ಮರುದಿನ ಎರೆದು ಕೊಳ್ಳೋ ಹಬ್ಬ. ಮಧ್ಯರಾತ್ರಿ ಯಾವಾಗಲೋ ಅಪ್ಪ ಎದ್ದು ಒಲೆ ಉರಿ ಹಾಕಿರುತ್ತಿದ್ದರು.

ಹಬ್ಬದ ದಿನ ಎಲ್ಲರೂ ಬೇಗ ಎದ್ದರೆ ನಾನು ಚಿಕ್ಕವಳೆಂದು ನನಗೆ ರಿಯಾಯಿತಿ , ಸ್ವಲ್ಪ ತಡವಾಗಿ ಏಳಲು ಅನುಮತಿ ಇರುತ್ತಿತ್ತು!

ಅಮ್ಮಎಲ್ಲರನ್ನೂ ದೇವರ ಮನೆಯಲ್ಲಿ ಚಾಪೆ ಹಾಕಿ ಕೂರಿಸಿ " ಅಶ್ವತ್ಥಾಮ ಬಲಿರ್ವ್ಯಾಸ........." ಶ್ಲೋಕ ಹೇಳುತ್ತಾ ಎಣ್ಣೆ ಒತ್ತುತ್ತಿದ್ದರು.

ಆಮೇಲೆ ಅಮ್ಮನೋ ಅಕ್ಕನೋ ನನಗೆ ಸ್ನಾನ ಮಾಡಿಸುತ್ತಿದ್ದರು.
ಅಕ್ಕ ಮನೆಯ ಮುಂದೆ , ಹಿತ್ತಿಲಲ್ಲಿ ತುಳಸೀ ಕಟ್ಟೆಯ ಮುಂದೆ ರಂಗೋಲಿ ಹಾಕುತ್ತಿದ್ದಳು. ಅವಳ ರಂಗೋಲಿ ಹಾಕುವ ರೀತಿಯೇ ವಿಭಿನ್ನ! ಮಿಂಚಿನ ರೀತಿಯಲ್ಲಿ  ಯಾವ ಚುಕ್ಕಿಯ ಆಧಾರವೂ ಇಲ್ಲದೇ ಅವಳಿಡುವ ಮನೋಹರ ವಿನ್ಯಾಸಗಳು ಎಂದೂ ಪುನರಾವರ್ತನೆಯಾಗಿದ್ದಿಲ್ಲ. ಅವಳು ಒಬ್ಬ ಅಭಿಜಾತ ಕಲಾವಿದೆ.

 ಆಮೇಲೆ ಹೊಸ ಬಟ್ಟೆ ಹಾಕಿ ಕೊಂಡು ಬರುವಷ್ಟರಲ್ಲಿ ಅಪ್ಪ ಪೂಜೆ ಶುರು ಮಾಡಿರುತ್ತಿದ್ದರು. ಅವರು ಪ್ರತಿ ದಿನ ಮಂತ್ರೋಕ್ತವಾಗಿ ಪೂಜೆ ಮಾಡುತ್ತಿದ್ದರು.
ಆಗಿನ ಹಬ್ಬದೂಟ ಕೂಡ ಸರಳವಾಗಿದ್ದರೂ ಸ್ವಾದಿಷ್ಟವಾಗಿರುತ್ತಿತ್ತು,

ಆಗ ಎಲ್ಲರ ಜೊತೆ ಕುಳಿತು ಅಕ್ಕ ಅಣ್ನಂದಿರ ಜೊತೆ ಹರಟುತ್ತಾ, ಜಗಳವಾಡುತ್ತಾ ಊಟ ಮಾಡುತ್ತಿದ್ದುದು ನೆನಪಾದಾಗ  ಏನೋ ಕಳೆದು ಕೊಂಡಂತಾಗುತ್ತದೆ.

ಮರುದಿನ ಬಲಿ ಪಾಡ್ಯಮಿಯಂದು  ಎಲ್ಲ ಹೊಸಿಲಿನ ಎರಡೂ ಬದಿಯಲ್ಲೂ ಒರಳು ಕಲ್ಲಿನ  ಮತ್ತು ಹಂಡೆಯ ಮೇಲೂ ಬಲೀಂದ್ರನ್ನ ಮಾಡಿಡುತ್ತಿದ್ದರು. ಅಂದರೆ ಸಗಣಿಯಿಂದ ಪುಟ್ಟ ಗೋಪುರವನ್ನು ಮಾಡಿ, ಅದರ ಮೇಲೆ ಚಂಡು ಹೂ ಸಿಗಿಸಿ, ಜೊತೆಗೆ ತೆಂಗಿನ ಸಿಂಗಾರವನ್ನು ಇಡುತ್ತಿದ್ದರು.

ಅಪ್ಪ ಒಂದು ಆಕಾಶ ಬುಟ್ಟಿ ಮಾಡಿಸಿದ್ದರು. ರಾತ್ರಿ  ಅದರಲ್ಲಿ ದೀಪ ಹಚ್ಚಿ ಮನೆಯ ಅಟ್ಟದ ಮೇಲೆ ಹೊರಗಿನಿಂದ ಕಾಣುವಂತೆ ಇಡುತ್ತಿದ್ದೆವು.

ಆಗ ಈಗಿನಂತೆ ಪಟಾಕಿ ಸಿಗುತ್ತಿರಲಿಲ್ಲ. ಕೆಲವೇ ಅತಿ ಶ್ರೀಮಂತರು ಪಟಾಕಿ ಹೊಡೆಯುತ್ತಿದ್ದರೆ, ನಾವು ಅದನ್ನು ನೋಡಿ ತೃಪ್ತಿ ಪಟ್ಟುಕೊಳ್ಳುತ್ತಿದ್ದೆವು. ಅಪ್ಪ ಒಂದು ಉದ್ದವಾದ ಕೋಲಿಗೆ ಬೆಂಕಿ ಹತ್ತಿಸಿ ಕೊಡುತ್ತಿದ್ದರು ನಾವು ಅದರ ಇನ್ನೊಂದು ತುದಿ ಹಿಡಿದುಕೊಂಡು, ಅದನ್ನು ಆಡಿಸುತ್ತಾ ವಿವಿಧ ವಿನ್ಯಾಸಗಳನ್ನು ಮಾಡಿ ಆನಂದಿಸುತ್ತಿದ್ದೆವು.

ಇದೆಲ್ಲಾ ನೆನಪಾದಾಗ, ಆ ಪೈಪೋಟಿ ಇಲ್ಲದ, ಕಪಟವಿಲ್ಲದ, ಕೇವಲ ಪ್ರೀತಿ, ಮುಗ್ಧತೆ ಯಿಂದ ಕೂಡಿದ ಸರಳ ಸುಂದರ ಬಾಲ್ಯ ಮತ್ತೊಮ್ಮೆ ಬರಬಾರದೇ ಅನ್ನಿಸುತ್ತದೆ.

ಭಾನುವಾರ, ನವೆಂಬರ್ 11, 2012

ಮಕ್ಕಳ ದಿನಾಚರಣೆ


ನವೆಂಬರ್ ನಲ್ಲಿ ಬರುವ ಮತ್ತೊಂದು ಜನಪ್ರಿಯ ಉತ್ಸವ ಎಂದರೆ ಮಕ್ಕಳ ದಿನಾಚರಣೆ.



ಎಷ್ಟೋ ವರ್ಷಗಳಿಂದ ನಾವು ಒಂದೇ ರೀತಿಯಲ್ಲಿ ಈ ಮಕ್ಕಳ ದಿನಾಚರಣೆಯನ್ನು ಆಚರಿಸುತ್ತಾ ಬಂದಿದ್ದೇವೆ.
ಅದೇ ಭಾಷಣಗಳು, ಅದೇ ಬಹುಮಾನಗಳು,

ನಾವೇಕೆ ಏನಾದರೂ ಹೊಸದನ್ನು ಮಾಡಬಾರದು? ಯಾವುದು ನಿಜವಾದ ರೀತಿಯಲ್ಲಿ. ವರ್ಷವಿಡೀ ಮಕ್ಕಳು ಸ್ಮರಣೆಯಲ್ಲಿಟ್ಟು ಕೊಳ್ಳುವ, ಅಷ್ಟೇ ಅಲ್ಲ ಅವರಿಗೆ ಉಪಯುಕ್ತವಾಗುವಂತದ್ದನ್ನು?ಅವರ ಆಲೋಚನಾ ವಿಧವನ್ನು ತಿದ್ದುವಂತದ್ದು? ಅವರ ಚಿಂತನೆಯ ಮಟ್ಟವನ್ನು  ಸುಧಾರಿಸುವಂತದ್ದು?


ನಾನು ಗಮನಿಸಿದಂತೆ ಇತ್ತೀಚಿಗೆ ಮಕ್ಕಳು ತಮ್ಮ ಬಾಲ್ಯ ಸಹಜವಾದ ಚಟುವಟಿಕೆ, ಹೆಚ್ಚು ಅರಿಯುವ ಕೌತುಕ, ಮತ್ತಷ್ಟು ಅನ್ವೇಷಿಸುವ ಕುತೂಹಲವನ್ನು ಕಳೆದುಕೊಳ್ಳುತ್ತಿದ್ದಾರೆ. ಅವರಲ್ಲಿ ಆಲಸೀ ಭಾವ ಬೆಳೆಯುತ್ತಿದೆ. ಅವರಿಗೆ ಪರೀಕ್ಷೆ ಇಲ್ಲದ ಪ್ರಗತಿ, ಪರಿಶ್ರಮವಿಲ್ಲದ ಫಲ ಬೇಕಾಗಿದೆ.

ಅವರಿಗೆ ಬಾಯಲ್ಲಿ ತುತ್ತಿಟ್ಟರೂ ನುಂಗುವುದು ಕಷ್ಟ ಎಂಬ ಭ್ರಮೆ ಮೂಡಿಸುವುದರಲ್ಲಿ ಪೋಷಕರ ಪಾತ್ರವೂ ಇದೆ.

ಅತಿಯಾಗಿ ಮುದ್ದು ಮಾಡುವುದು, ಕೇಳಿದ್ದನ್ನೆಲ್ಲಾ, ಕಂಡಿದ್ದನ್ನೆಲ್ಲಾ ಕೊಡಿಸುವುದು, ನಡೆದರೆ ಸವೆಯುತ್ತಾರೆಂಬಂತೆ ಓಲೈಸುವುದೇ ಪ್ರೀತಿಯೇ ಎಂದು ಭಾವಿಸಿರುವ ಪಾಲಕರು ಈ ದುಬಾರಿ ಕಾಲದಲ್ಲಿ ಅವರ ಅವಶ್ಯಕತೆಗಳನ್ನು ಪೂರೈಸಲು ಹೆಚ್ಚು ದುಡಿಯಬೇಕಾಗುತ್ತದೆ, ಅದಕ್ಕಾಗಿ ಹಗಲಿರುಳೂ ದುಡಿಯುವ ಭರದಲ್ಲಿ ಮಕ್ಕಳಿಗೆ ತಮ್ಮ ಅಮೂಲ್ಯ ಸಮಯವನ್ನು ನೀಡಲು ಅಸಮರ್ಥರಾಗುತ್ತಾರೆ.

ಯಾರೂ  ಅವರನ್ನು ಏಣಿಯ ಕೊನೆಯ ಮೆಟ್ಟಿಲವರೆಗೂ ಹತ್ತಿಸಲು ಸಾಧ್ಯವಿಲ್ಲ, ಆದ್ದರಿಂದ ಮಕ್ಕಳನ್ನು ಹೆಜ್ಜೆ ಇಡಲು ಪ್ರೇರೇಪಿಸಬೇಕಾಗುತ್ತದೆ. ಜೀವನ ಹೂವಿನ ಹಾದಿಯಲ್ಲ , ಅದರಲ್ಲಿ ಮುಳ್ಳುಗಳೂ ಸಾಕಷ್ಟಿರುತ್ತವೆ.
ಬದುಕಿನ ಏರುಪೇರುಗಳನ್ನೂ,  ಎಡರುತೊಡರುಗಳನ್ನೂ ಸಮರ್ಥವಾಗಿ ನಿಭಾಯಿಸಿಕೊಂಡು, ಸಫಲತೆಯನ್ನು ಪಡೆಯಬೇಕಾದರೆ, ಶಿಸ್ತು, ಸಂಯಮಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ. ಜೀವನ ಎನ್ನುವ ಪರೀಕ್ಷೆಯನ್ನು ಎದುರಿಸಲು ಮಕ್ಕಳನ್ನು ತರಬೇತುಗೊಳಿಸುವ ಹೊಣೆ ಮನೆಯಲ್ಲಿ ಪೋಷಕರಿಗಿದ್ದಂತೆ.  ಶಾಲೆಯಲ್ಲಿ ಉಪಾಧ್ಯಾಯರಿಗಿರುತ್ತದೆ.

ಹಾಗೆ ನಾವು ನಮ್ಮ ನಾಳಿನ ಭರವಸೆಯ ಆಶಾಕಿರಣಗಳೂ. ಭವಿಷ್ಯದ ಭಾಗ್ಯ ಜ್ಯೋತಿಗಳೂ ನಮ್ಮ ದೇಶವನ್ನು ಕಟ್ಟುವ ಹೊಣೆಯನ್ನು ಹೊರಬೇಕಾಗಿರುವವರೂ ಆದ ನಮ್ಮ ಮಕ್ಕಳನ್ನು ಪ್ರತಿ ಕ್ಷಣವೂ ಸನ್ಮಾರ್ಗದತ್ತ ನಡೆಸುತ್ತಾ, ಅವರ ಜ್ಞಾನದ ಪರಿಧಿಯನ್ನು ವಿಸ್ತರಿಸುತ್ತಾ, ಅವರಿಗೆ ಮಾರ್ಗದರ್ಶನಮಾಡಿದರೆ ಅನು ದಿನವೂ ಮಕ್ಕಳ  ದಿನವೇ ಅಲ್ಲವೇ?

ಕವಿಯ ಬದುಕು


ಏಕಿನಿತು ಕಠಿಣವೋ ಬಡ ಕವಿಯ ಬದುಕು
ಸೂಕ್ಷ್ಮ ಸಂವೇದಿತ್ವ ಇವಗೇಕೆ ಬೇಕು?

ಜಗದಾವ ಮೂಲೆಯಲೋ ಬಂದ ಕ್ಷ್ಮಾಮಕ್ಕೆ
ಭುಗಿಲೆದ್ದ ಕ್ರೌರ್ಯದಾ ಅಟ್ಟಹಾಸಕ್ಕೆ
ಉಗ್ರರಾರ್ಭಟಕೆ ಕಂಗೆಟ್ಟ ಮನುಕುಲಕೆ
ಮರುಗುವುದು ಕವಿ ಹೃದಯ ಈ ಪರಿಯಲೇಕೆ?

ಭೂಕಂಪ ದಿಂದ ಜನ ಯಮಪುರಿಗೆ ಪೋಗೆ
ನೂಕು ನುಗ್ಗುಲಲಿ ಕಾಲ್ತುಳಿತಗಳು ಜರುಗೆ
ವಿಕೃತತೆಯು ಮೇಲಾಗಿ ಸುಗುಣ ತಲೆ ಬಾಗೆ
ಏಕೆ ಕವಿಯಾತ್ಮವನು ದಹಿಸುವುದು ಬೇಗೆ?

ಏಕಿಷ್ಟು ಸೂಕ್ಷ್ಮವೂ ಕಾಣೆ ಕವಿ ಮನಸು
ಏನೋ ಸಂಕಟ ಯಾರ ಮೇಲೋ ತುಸು ಮುನಿಸು
ಕಲ್ಲೆದೆಯಲೂ ಹೂವನರಳಿಸುವ ಕನಸು
ಮಾಡಲರಿಯರದ ನೋವು ಅದನೆಂದು ನನಸು

ಭಾನುವಾರ, ನವೆಂಬರ್ 4, 2012

ಬೆಳಕು ಮತ್ತು ಕತ್ತಲು







ಮತ್ತೊಮ್ಮೆ ಬೆಳಕಿನ ಹಬ್ಬ ದೀಪಾವಳಿ  ಬರುತ್ತಿದೆ.........

ಬೆಳಕಿಲ್ಲದ ಜೀವನವನ್ನು ಊಹಿಸಲೂ ಅಸಾಧ್ಯ. ಅಂಧಕಾರ ನಮ್ಮನ್ನು ಸಂಪೂರ್ಣವಾಗಿ ಅಂಧರನ್ನಾಗಿ ಮಾಡುತ್ತದೆ.

ಬೆಳಕೇ ಕತ್ತಲಿಗಿಂತ ಬಲಿಷ್ಠವಾದದ್ದು ಎಂದು ನಾನು ಭಾವಿಸುತ್ತೇನೆ. ಏಕೆಂದರೆ ದೀಪವನ್ನು ಬೆಳಗಿಸಿ ಕತ್ತಲನ್ನ ಓಡಿಸಬಹುದು. ಆದರೆ ಕತ್ತಲನ್ನು ತಂದು ಬೆಳಕನ್ನು ಓಡಿಸಲು ಸಾಧ್ಯವಿಲ್ಲ. ಅಂದರೆ, ಬೆಳಕು ಕತ್ತಲನ್ನು ನುಂಗುತ್ತದೆಯೇ ವಿನಃ, ಕತ್ತಲು ಬೆಳಕನ್ನಲ್ಲ.

ಈ ಬೆಳಕು, ಕತ್ತಲುಗಳಲ್ಲಿ ಅನೇಕ ಬಗೆಗಳಿವೆ. .......

ಅದು ಅಜ್ಞಾನವೆಂಬ ಕತ್ತಲಾಗಿದ್ದರೆ ಸುಜ್ಞಾನದ ಪ್ರಭೆ ಅದನ್ನು ಹೊಡೆದೋಡಿಸುತ್ತದೆ........

 ಅಹಮಿಕೆಯ ತಮವನ್ನು ನಮ್ರತೆಯ ಸೌಮ್ಯ ಜ್ಯೋತ್ಸ್ನೆ ಇಲ್ಲವಾಗಿಸುತ್ತದೆ........

 ಅಂಧಾನುಕರಣೆಯ ಅಂಧಕಾರವನ್ನು ಅಳಿಸಲು ಬೇಕಾಗಿರುವುದು ಜ್ವಾಲಜ್ಯಮಾನವಾದ ವಿವೇಚನೆ ಎಂಬ ಪ್ರಕಾಶ........

 ಅಸಮಾನತೆಯ ಮಬ್ಬು ಕರಗಲು ಸಮದರ್ಶಿತ್ವದ ಸ್ನೇಹಪೂರ್ಣ ಬೆಳದಿಂಗಳು ಸಾಕಲ್ಲವೇ.........?


ಹಾಗೇ ಅಸಹನೆ, ಮಾತ್ಸರ್ಯದ ತಿಮಿರದ ನಾಶಕ್ಕಾಗಿ ಬೆಳಗೋಣವೇ ಶಾಂತಿಯ ಜ್ಯೋತಿಯನ್ನ.......?


ಈ ಎಲ್ಲ ಬಗೆಯ ಪ್ರಕಾಶವೂ ಎಲ್ಲರ ಮನೆ, ಮನಗಳ ಹಣತೆಗಳಲ್ಲಿ ಆವಿರ್ಭವಿಸಿ, ಎಂದೂ ನಂದದ ನಂದಾದೀಪವಾಗಿ ಬೆಳಗುತ್ತಿರಲಿ.

 ಎಲ್ಲೆಡೆ ಮಮತೆಯ, ಪ್ರೀತಿಯ ಸುಮಗಳು ಅರಳಿ ಪರಿಮಳ ಸೂಸಲಿ.

ದೀಪಾವಳಿಯ ಶುಭ ಹಾರೈಕೆಗಳು


"ತಮಸೋಮಾ ಜ್ಯೋತಿರ್ಗಮಯ........."

ಶನಿವಾರ, ನವೆಂಬರ್ 3, 2012

ರಸಋಷಿ ಕುವೆಂಪು














ಕನ್ನಡ ರಾಜ್ಯೋತ್ಸವದ ದಿನ ಅಕಸ್ಮಾತ್ತಾಗಿ ಟಿವಿ ಹಾಕಿದಾಗ ' ರಸಋಷಿ ಕುವೆಂಪು....' ಎಂಬ ಸಿನೆಮಾ ಪ್ರಸಾರವಾಗುತ್ತಿತ್ತು.

 'ಹೀಗೊಂದು  ಸಿನೆಮಾ ಬಂದಿತ್ತೇ.........'?ಎಂದು  ಕುತೂಹಲದಿ೦ದ ನೋಡಲು ಕುಳಿತವಳಿಗೆ ಬಿಟ್ಟೇಳಲು ಮನಸ್ಸಾಗಲಿಲ್ಲ.

ಅದು ನಮ್ಮ ರಾಷ್ಟ್ರ ಕವಿ ಕುವೆಂಪು ಅವರ ಜೀವನ ಚರಿತೆಯನ್ನಾಧರಿಸಿ ಮಾಡಲಾದ ಚಲನ ಚಿತ್ರ
.
ಅದರಲ್ಲಿ ಪಾತ್ರಮಾಡಿರುವ ಕಲಾವಿದರ ಭಾಷೆ, ಮಾತಾಡುವ ಶೈಲಿ, ಉಡುಗೆ ತೊಡುಗೆ,ಎಲ್ಲವೂ ಎಷ್ಟು ಸಹಜವಾಗಿವೆ ಎಂದರೆ ಅಲ್ಲಿ ಇರುವವರು ಕುವೆಂಪು ಅಲ್ಲ,  ಅವರಂತೆ ಅಭಿನಯಿಸುತ್ತಿರುವ ನಟರು ಎಂದೇ ಅನಿಸುವುದಿಲ್ಲ
.
ನಾನು ನೋಡುವಾಗ  ಕುವೆಂಪು ಅವರ ಬಾಲ್ಯದ ಪ್ರಸಂಗಗಳು ಆಗಿಹೋಗಿದ್ದವು. " ಅಯ್ಯೋ! ಮೊದಲಿಂದ ನೋಡಲಿಲ್ಲವಲ್ಲಾ..... " ಅನ್ನಿಸಿತು.

 ಒಬ್ಬ ಸಂಶೋಧಕಿಯ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಕುವೆಂಪು ಅವರು ನೆನಪಿನ ಪುಟಗಳಲ್ಲಿ ತೇಲಿ ಹೋಗುವ ಕಲ್ಪನೆ ಮನೋಹರವಾಗಿದೆ.

ಮುಂದೆ ನೋಡುತ್ತಾ ಹೋದಂತೆ ಅವರ ತರುಣಾವಸ್ಥೆಯಲ್ಲಿ ತಮ್ಮ ಮಾರ್ಗ ಯಾವುದು? ಆಧ್ಯಾತ್ಮವೋ, ಸಂಸಾರವೋ ಎಂಬ ದ್ವಂದ್ವದಲ್ಲಿ ಸಿಲುಕಿದಾಗ ಅವರ ಗುರುಗಳು ಸರಿದಾರಿ ತೋರುವ ರೀತಿ ಮನೋಜ್ಞವಾಗಿದೆ.


ಯಾವಾಗ  ಜೀವನದ ಪ್ರಮುಖ ನಿರ್ಧಾರಗಳನ್ನು ತೆಗೆದು ಕೊಳ್ಳುವಾಗ ದ್ವಂದ್ವವು ಎದುರಾಗುತ್ತದೋ, ಆಗ ಗುರುವಿನ ಮಾರ್ಗದರ್ಶನದ ಅನಿವಾರ್ಯತೆ ತೋರುತ್ತದೆ. ಕೇವಲ ಸುದೈವಿಯಾದವನು ಸದ್ಗುರುವಿನ ಕೃಪೆಗೆ ಪಾತ್ರನಾಗಿ, ಸನ್ಮಾರ್ಗದತ್ತ ನಡೆಸಲ್ಪಡುತ್ತಾನೆ. ಹಾಗೂ ಅಂತಹವನು ಮಾತ್ರ ಕುವೆಂಪು ಅವರಂತೆ ಮಹಾನ್ ವ್ಯಕ್ತಿಯಾಗುತ್ತಾನೆ.


ಇದು ಎಲ್ಲ ಜೀವನ ಚರಿತ್ರೆಗಳಂತೆ ಸಪ್ಪೆಯಾಗಿರದೇ ಅಲ್ಲಲ್ಲಿ ಕವಿವರ್ಯರ ಮಾಧುರ್ಯಪೂರ್ಣ ಗೀತೆಗಳಿಗೆ ಅಳವಡಿಸಲಾದ ಮನೋಹರ ನೃತ್ಯಗಳನ್ನು ಸೇರಿಸಲಾಗಿತ್ತು.

 ಅಲ್ಲದೆ ಸಾಂದರ್ಭಿಕವಾಗಿ ಅವರ 'ಜಲಗಾರ' ನಾಟಕದ ಕೆಲ ಭಾಗಗಳು ಆ ನಾಟಕವನ್ನು ಓದದವರೂ ಓದಬೇಕೆನ್ನಿಸುವ ಹಾಗೆ ಮಾಡಿತು.


" ಊರ ತೋಟಿಯು ನೀನು ಜಗದ ತೋಟಿಯು ನಾನು......." ಭಗವಾನ್  ಶಿವನ ಬಾಯಲ್ಲಿ ಶ್ರೀಯುತರು ನುಡಿಸಿದ ಮಾತು ಎಷ್ಟೊಂದು ಅರ್ಥಪೂರ್ಣವಾಗಿದೆ!


ಚಿತ್ರದ ಕೊನೆಯಲ್ಲಿ ಅವರು ದೈವಾಧೀನ ರಾಗಿದ್ದನ್ನು ಸಾಂಕೇತಿಕವಾಗಿ ತಿಳಿಸುತ್ತಾ ಮುಗಿಸಿದಾಗ " ಇಷ್ಟು ಬೇಗ ಮುಗಿದು ಹೋಯ್ತಲ್ಲಾ......" ಅನ್ನಿಸಿತು.


ಇದೊಂದು ಪ್ರತಿಯೊಬ್ಬ  ಕನ್ನಡಿಗನೂ ನೋಡಲೇ ಬೇಕಾದ ಚಿತ್ರ ಎನ್ನುವುದು ನಿಸ್ಸಂಶಯ.

ಗುರುವಾರ, ನವೆಂಬರ್ 1, 2012

ಸಿರಿಗನ್ನಡಮ್ ಗೆಲ್ಗೆ




ಓ!!! ಬಂದೇ ಬಿಟ್ಟಿತು ನವೆಂಬರ್ ಒ೦ದು......


ಅಮ್ಮಂದಿರ ದಿನ, ಅಪ್ಪಂದಿರ ದಿನ ಇದ್ದ ಹಾಗೆ ಕನ್ನಡಮ್ಮನನ್ನೂ ನೆನಪಿಸಿಕೊಳ್ಳಲು ವರ್ಷದಲ್ಲಿ ಒಂದೇ ಬಾರಿ ಬರುವ ಕನ್ನಡದ ದಿನ.

” ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು......." ಎಂದು ಪರಸ್ಪರ ಹಾರೈಸಿದರೆ, ಕನ್ನಡ ಬೆಳೆಸಿ, ಕನ್ನಡ ಉಳಿಸಿ, ಅಂತ ಘೋಷಣೆಗಳನ್ನು ಕೂಗಿದರೆ ಅದೇ ಕನ್ನಡಾಭಿಮಾನವೇ?

ಅಷ್ಟಕ್ಕೂ ಕನ್ನಡವನ್ನೇಕೆ ಉಳಿಸಬೇಕು? ಉಳಿಸಲು ಕನ್ನಡ ಖಂಡಿತವಾಗಿ ಸಾಯುತ್ತಿಲ್ಲ.ಅದು ಸಾಯುವಂತಿದ್ದರೆ ಅನೇಕಾನೇಕ ವರ್ಷಗಳ ಪರಭಾಷಿಗರ ಧಾಳಿಯ ಪೆಟ್ಟಿಗೆ ಇಷ್ಟು ಹೊತ್ತಿಗೆ ಕನ್ನಡ ಧೂಳೀಪಟವಾಗಬೇಕಿತ್ತು.

 ಆರೋಗ್ಯವಂತನನ್ನು ಪುನಃಪುನಃ ನೀನು ರೋಗಿ ಎಂದು ಹೇಳಿ, ಆತನನ್ನು ನಂಬುವಂತೆ ಮಾಡುತ್ತಾರಂತೆ.  ಅದೇ ರೀತಿ ಚಿರಂತನವಾದ ಕನ್ನಡ ಭಾಷೆಯನ್ನು ಸ್ವತಃ ಕನ್ನಡಿಗರೇ ಉಪೇಕ್ಷೆ ಮಾಡಿ ತಮ್ಮ ಮನಸ್ಸಿನಲ್ಲಿ ಸಾಯಿಸಿಕೊಂಡು ಮತ್ತು ಅದು ಸಾಯುತ್ತಿದೆ ಎಂದು ಬಲವಾಗಿ ನಂಬಿಕೊಂಡು, ಮೇಲೆ "ಅಯ್ಯೋ!.......... ಕನ್ನಡ ಸಾಯುತ್ತಿದೆ, ಕನ್ನಡವನ್ನು ಉಳಿಸಿ.....! ಕಾಪಾಡಿ.......! ಕಾಪಾಡಿ........!" ಎಂದು ಬೊಬ್ಬಿಡುತ್ತಿದ್ದಾರೆ.

ಹಾಸ್ಯ ಕಲಾವಿದರು ಕನ್ನಡದ ದುರವಸ್ಥೆಯನ್ನು ತಮ್ಮ ಹಾಸ್ಯದ ವಸ್ತುವಾಗಿ ಮಾಡಿಕೊಂಡಿರುವುದು ನಿಜಕ್ಕೂ ಹಾಸ್ಯಾಸ್ಪದವಾಗಿದೆ.

ಇನ್ನು ಅತಿ ಪ್ರಬಲ ಮಾಧ್ಯಮವಾದ ದೃಶ್ಯ ಮಾಧ್ಯಮ, ಸಿನೆಮಾ. " ಕನ್ನಡದಲ್ಲಿ ಒಳ್ಳೆ ಸಿನ್ಮಾ ಬರೋಲ್ಲ....."ಅಂತ ಸದಭಿರುಚಿಯುಳ್ಳ ಪ್ರೇಕ್ಷಕರು ಇತರ ಭಾಷೆಯ ಸಿನೆಮಾಗಳನ್ನು ನೋಡುತ್ತಿದ್ದಾರೆ. ಇಲ್ಲವೇ ಸಿನೆಮಾ ನೋಡುವುದನ್ನೇ ಬಿಟ್ಟಿದ್ದಾರೆ.

ಕನ್ನಡದಲ್ಲಿ ಒಳ್ಳೆಯ ಚಲನಚಿತ್ರಗಳೇ  ಬರುತ್ತಿಲ್ಲ ಎಂದಲ್ಲ, ಆದರೆ ಅದಕ್ಕಿರುವ ಪ್ರಚಾರ ಅತಿ ಕಡಿಮೆ. ಜನರು ಯಾರ ಅಭಿಪ್ರಾಯಗಳನ್ನು ನಂಬುತ್ತಾರೋ, ಯಾರ ಅಭಿರುಚಿಗಳನ್ನು ಗೌರವಿಸುತ್ತಾರೋ ಅಂತಹ ಪತ್ರಕರ್ತರು ನಿಜವಾಗಿ ಸದಭಿರುಚಿಯ ಚಿತ್ರಗಳ ಬಗ್ಗೆ ಪ್ರಚಾರ ನೀಡಬೇಕು.  

ನಮ್ಮಲ್ಲಿ ಅತ್ಯುತ್ತಮ ಕಾದಂಬರಿಕಾರರಿದ್ದಾರೆ, ಕಥೆಗಾರರಿದ್ದಾರೆ. ಅತಿ ಶ್ರೇಷ್ಟ ದರ್ಜೆಯ ನಿರ್ಮಾಪಕರು, ನಿರ್ದೇಶಕರು,ಛಾಯಗ್ರಾಹಕರೂ ಇದ್ದಾರೆ.  ( ಕರ್ನಾಟಕದ ಛಾಯಾಗ್ರಾಹಕರು ಅತಿ ಹೆಚ್ಚು ಪ್ರಶಸ್ತಿಗೆ ಭಾಜನರಾಗಿದ್ದಾರೆಂದು ಕೇಳಿದ್ದೇನೆ)

 ಕನ್ನಡದವರೇ ಆದ ಕಲಾವಿದರಿಗೆ ಯಾವ ಕೊರತೆಯೂ ಇಲ್ಲ.ಆದರೂ ಯಾಕೆ ವಿಶ್ವದರ್ಜೆಯ ಚಿತ್ರಗಳು ಬರುತ್ತಿಲ್ಲ ಎಂದರೆ, ಈ ಎಲ್ಲರ ನಡುವೆ ಸರಿಯಾದ ಕೊಂಡಿ ಇಲ್ಲದೇ ಇರುವುದು. ಮಾಧ್ಯಮಗಳು ಈ ಕೆಲಸವನ್ನು ಮಾಡಬೇಕು.

ಕೆಲವರ ಅಭಿಪ್ರಾಯದಂತೆ ಸಿನಿಮಾ ಪ್ರೇಕ್ಷಕರು ಹೆಚ್ಚಿನಂಶ ಗ್ರಾಮೀಣ ಭಾಗದವರು ಮತ್ತು ಕೆಳ ಮಧ್ಯಮ ವರ್ಗದವರು. ಅವರಿಗೆ ಬರೀ ಮಸಾಲೆ. ತುಂಬಿದ.  ಗ್ರಾಮೀಣ ಪರಿಸರಕ್ಕೆ ಹೊಂದುವಂತಹ ಸರಳವಾದ. ಚಿತ್ರಗಳನ್ನೇ ಕೊಡಬೇಕು.  ಕ್ಲಿಷ್ಟವಾದ ಸಾಮಾಜಿಕ ಸ0ದೇಶಗಳು ಅವರಿಗೆ ಅರ್ಥವಾಗುವುದಿಲ್ಲ. ಆದ್ದರಿಂದ ಅವರು ಸ್ವೀಕರಿಸಲಾರರು..... 

ಆದರೆ ನಾವು ಏಕೆ ಅವರ ಅಭಿರುಚಿಯ ಮಟ್ಟವನ್ನು ಹೆಚ್ಚಿಸಬಾರದು ? ಅವರು ತಂಗಳನ್ನಕ್ಕೇ ತೃಪ್ತಿ ಪಡುತ್ತಾರೆಂದು ಅವರಿಗೆ ಹಳಸಿದ್ದನ್ನು ನೀಡಬೇಕೆ? ಏಕೆ ಅವರಿಗೆ ಶುಚಿ ರುಚಿಯಾದ ತಾಜಾ ಆಹಾರ ನೀಡ ಬಾರದು? ಹೇಳುವ ಸದ್ವಿಚಾರವನ್ನೇ ಅವರಿಗೆ ರುಚಿಸುವಂತೆ ಹೇಳುತ್ತಾ ಕ್ರಮೇಣ ಅವರ ಜೀವನಮಟ್ಟವನ್ನೂ ವೈಚಾರಿಕ ಮಟ್ಟವನ್ನೂ ಏಕೆ ಹೆಚ್ಚಿಸಬಾರದು......? 

ಕೊಲೆ ಸುಲಿಗೆ ಮುಂತಾದ ಕೆಟ್ಟ ವಿಷಯಗಳಿನ್ನು ತೋರಿಸಿ ಸಮಾಜ ಘಾತಕರನ್ನು ಸೃಷ್ಠಿಸುವ ಬದಲು ಏಕೆ ಪ್ರಾಮಾಣಿಕತೆ, ಪರಿಶ್ರಮಗಳಿಂದ ತೀರ ಕೆಳಮಟ್ಟದಿಂದ ಸಾಧನೆಯ ಶಿಖರವನ್ನು ಮುಟ್ಟಿದ ಸಾಧಕರ ಕತೆಗಳನ್ನೇಕೆ ತೋರಿಸಬಾರದು......?

ಅವರೇನು ನಮಗೆ ಇಂಥದ್ದೇ ಕೊಡಿ ಎಂದು ಕೇಳುತ್ತಿದ್ದಾರೆಯೇ? ಕೊಟ್ಟಿದ್ದನ್ನು ಸದ್ದಿಲ್ಲದೇ ಸ್ವೀಕರಿಸುತ್ತಿದ್ದಾರೆ. ಅವರಿಗೆ ಒಳ್ಳೆಯದನ್ನೇ ಕೊಟ್ಟು ನೋಡಬಾರದೇಕೆ?

ಸೋಮವಾರ, ಅಕ್ಟೋಬರ್ 29, 2012

ಶಿಕ್ಷಕರ ದಿನಾಚರಣೆ


ಕಳೆದ ತಿಂಗಳು ಡಾ. ರಾಧಾ ಕೃಷ್ಣನ್ ರವರ ಜನ್ಮದಿನದ ಸ್ಮರಣಾರ್ಥವಾಗಿ  ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಈಗ ಈ ಆಚರಣೆ ಎಷ್ಟು ಪ್ರಸ್ತುತ? ಎಷ್ಟು ಅರ್ಥಪೂರ್ಣ?

ಕೇವಲ ಶಿಕ್ಷಕರಿಗೆ " ಹ್ಯಾಪಿ ಟೀಚರ್ಸ್ ಡೇ ......! "ಎಂದು ಎದುರಿಗೆ ಕಂಡಾಗಲೋ, ಎಸ್. ಎಮ್. ಎಸ್. ಅಥವಾ ಈ ಮೇಲ್ ಮೂಲಕವೋ ಹಾರೈಸಿದರೆ ಸಾಕೇ? ಮ್ಯಾನೇಜ್ಮೆಂಟಿನವರು ಬೋನಸ್ಸನ್ನೋ, ಏನಾದರೂ ಉಡುಗೊರೆಯನ್ನೋ ನೀಡಿ, ಒ೦ದು ಊಟ ಹಾಕಿ, ಅರ್ಧ ದಿನ ರಜೆ ಕೊಟ್ಟು ಮನೆಗೆ ಕಳಿಸಿ ಬಿಡುವುದು. ಇದೇ ಶಿಕ್ಷಕರ ದಿನಾಚರಣೆಯೇ?

ಅದೇ ರೀತಿ ಶಿಕ್ಷಕರು (  ಬಹುತೇಕ ಶಿಕ್ಷಕಿಯರು) ಆ ದಿನ ಚನ್ನಾಗಿ ಅಲಂಕಾರ ಮಾಡಿಕೊಂಡು, ನಗು ಮುಖದಿಂದ ಎಲ್ಲರ ಶುಭಾಶಯ ಗಳನ್ನೂ ಸ್ವೀಕರಿಸಿ, ಅವರಿಗೆ ಪ್ರತಿ ವಂದಿಸುತ್ತಾ, ತಾವು ಶಿಕ್ಷಕರಾದುದ್ದು ಸಾರ್ಥಕವಾಯಿತು ಎಂಬಂತೆ ಸಂತೃಪ್ತರಾಗಿರುತ್ತಾರೆ.

ಇನ್ನು ಮಕ್ಕಳು;

ಅವರು ಈಗ ಯಾರು ತಮಗೆ ಪಾಠ ಮಾಡುತ್ತಿದ್ದಾರೋ,  ಅದರಲ್ಲೂ ವಿಜ್ಞಾನ, ಗಣಿತ, ಇಂಗ್ಲಿಷ್ ನಂತಹ ಮುಖ್ಯವಾದ ವಿಷಯಗಳನ್ನು ಬೋಧಿಸುತ್ತಾರೋ, ಅವರಿಗೆ ಮಾತ್ರ ಹೂಗುಚ್ಛವನ್ನೋ, ಶುಭಾಶಯ ಪತ್ರವನ್ನೋ ( ಗ್ರೀಟಿಂಗ್ಸ್) ಕೊಟ್ಟು " ಹ್ಯಾಪೀ..... ಟೀಚರ್ಸ್ ಡೇ........." ಅಂತ ಉಲಿಯುತ್ತಾರೆ.

ಇವೆಲ್ಲಾ ಅವರ ಮೇಲಿನ ಪ್ರೀತಿಗೋ ಇಲ್ಲ, ನಮಗೆ ವಿದ್ಯಾದಾನ ಮಾಡುತ್ತಿರುವ ಗುರುಗಳು ಎಂಬ ಗೌರವಕ್ಕೋ ಅಲ್ಲ. ತಮಗೆ ಟೆಸ್ಟ್ ಗಳಲ್ಲಿ ಸ್ವಲ್ಪ ಹೆಚ್ಚು ಅಂಕ ನೀಡಲಿ, ತಮ್ಮ ತಪ್ಪುಗಳನ್ನು ಮುಖ್ಯೋಪಾಧ್ಯಾಯರಿಗೋ, ಇಲ್ಲ ಪೋಷಕರಿಗೋ ತಿಳಿಸದೇ ಇರಲಿ, ಕಾಪಿ ಹೊಡೆಯುವಾಗ ನೋಡಿದರೂ ನೋಡದಂತಿರಲಿ, ತಮ್ಮ ತಂದೆ ತಾಯಿಯರೆದುರು ತಮ್ಮನ್ನು ಚನ್ನಾಗಿ ಹೊಗಳಲಿ ಎಂದು ಅವರಿಗೆ ಕೊಡುವ ಲಂಚ ಇದು.

ತಮಗೆ ಅಕ್ಷರಾಭ್ಯಾಸ ಮಾಡಿಸಿದ, ತಮ್ಮ ಕೈ ಹಿಡಿದು ತಿದ್ದಿಸಿ ಬರೆಸಿದ, ತಾಯಿಯನ್ನು ಅಗಲಿ ಬಂದ ಹಸುಳೆಗಳೆಂದು ಅವ್ಯಾಜ ಮಮಕಾರ ತೋರಿಸಿದ ಪ್ರಾಥಮಿಕ ಶಿಕ್ಷಕರನ್ನು ಮುಂದಿನ ತರಗತಿಗೆ ಹೋದ ಮರು ಕ್ಷಣವೇ ಮರೆತು ಬಿಡುತ್ತಾರೆ!
ಅವರಿಗೆ ಏಕೆ ವಿಷ್ ಮಾಡಬೇಕು? ಅದ್ರಿಂದ ಏನು ಲಾಭ? ಅವರೆಲ್ಲಾ ಬರೀ ಅ, ಆ ಇ, ಈ ಎಬಿಸಿಡಿ ಕಲಿಸೋಕ್ಕೇ ಲಾಯಕ್ಕಾದವರು. ಅವರಿಗಿಂತ ನಮಗೇ ಜಾಸ್ತಿ ಗೊತ್ತು, ಅಂದಮೇಲೆ ಅವರಿಗೇಕೆ ಗೌರವ ತೋರಿಸ ಬೇಕು? ಅನ್ನೋದು ಈ ಮೇಧಾವಿ ಮಕ್ಕಳ ಲೆಖ್ಖಾಚಾರ.

ಇನ್ನು ಈ ಜಾಣಾಕ್ಷ ಮಕ್ಕಳು ಪೋಷಕರನ್ನು ಕಾಡಿ ಬೇಡಿ ಸ್ವಲ್ಪ ಹೆಚ್ಚಿನ ಬೆಲೆಯ ಸುಂದರವಾದ ಬೊಕ್ಕೆಯನ್ನು ಮುಖ್ಯೋಪಾಧ್ಯಾಯರಿಗೆ ತರುತ್ತಾರೆ. ಯಾಕೆಂದರೆ  'ನಮ್ಮನ್ನು ಬೈಯ್ಯಲು, ಶಿಕ್ಷಿಸಲು, ಪೋಷಕನ್ನು ಕರೆದು ದೂರು ಹೇಳಲು, ಕಡೆಗೆ ತಮ್ಮನ್ನೂ ಶಾಲೆಯಿಂದ ಹೊರಗೆ ತಳ್ಳಲು ಕೂಡಾ ಸಮರ್ಥರು ಎಂದರೆ ಕೇವಲ ಮುಖ್ಯೋಪಾಧ್ಯಾಯರು ಎಂದು  ಅವರಿಗೆ ಚನ್ನಾಗಿ ಗೊತ್ತು. ಅದಕ್ಕೇ ಅವರನ್ನು ಚನ್ನಾಗಿಟ್ಟುಕೊಳ್ಳಬೇಕಲ್ಲಾ.....' ಎಂದು ಶನೀಶ್ವರನಿಗೆ ಎಳ್ಳೆಣ್ಣೆ ದೀಪ ಹಚ್ಚುವ ಹಾಗೆ ಅವರಿಗೊಂದು ದೊಡ್ಡ ಬೊಕ್ಕೆ, ಒಂದು ಗಿಫ್ಟ್ ಕೊಟ್ಟು ಬಿಡುತ್ತಾರೆ.

ಅವರಿಗಿಂತಲೂ ಅವರ ಪೋಷಕರು ಇನ್ನೂ ವ್ಯವಹಾರಸ್ಥರು! 

" ಇಲ್ನೋಡು, ಈ ಸಂಗೀತದ ಟೀಚರ್ ಮತ್ತೆ ಕ್ರಾಫ್ಟ್ ಟೀಚರ್ ವಾರಕ್ಕೊಂದ್ ಸಲ ತಾನೆ ಬರೋದು? ಅವರಿಗೆ ಈ ಐದ್ ರೂಪಾಯಿ ಗ್ರೀಟಿಂಗ್ಸ್ ಸಾಕು. ಸೈನ್ಸ್ ಮತ್ತೆ ಮ್ಯಾತ್ಸ್  ತುಂಬಾ ಮುಖ್ಯ. ಅದಕ್ಕೆ ಆ ಟೀಚರ್ಸ್ ಗೆ ಇವೆರಡು ಬೊಕೆ ಕೊಡು. ಕ್ಲಾಸ್ ಟೀಚರ್ ಗೆ ಈ ದೊಡ್ಡ ಬೊಕ್ಕೆ.ಕನ್ನಡ ಟೀಚರ್ ಗೆ ಏನೂ ಬೇಕಿಲ್ಲ. ಅವರು ಹೇಳೋದನ್ನ ಕಲಿಯೋದ್ ಸಾಲ್ದು ಅಂತ ಗ್ರೀಟಿಂಗ್ಸ್ ಬೇರೇ ದಂಡ......" 

ಹೀಗೆ ಟೀಚಸ್ ನ ಕ್ಯಾಟಗರೈಸ್ ಮಾಡಿ, ಕೆಲವರ ಬಗ್ಗೆ ಅವಮರ್ಯಾದೆಯಿಂದ ಮಾತಾಡಿದರೆ, ಮಕ್ಕಳು ಹೇಗೆ ತಾನೇ ಗುರುಗಳನ್ನು ಗೌರವಿಸಬಲ್ಲರು?

ಪೋಷಕರು ಶಿಕ್ಷಕರ ಸಲುವಾಗಿ ಅಲ್ಲ, ಬದಲಾಗಿ ತಮ್ಮ ಮಕ್ಕಳ ಕ್ಷೇಮಕ್ಕಾಗೇ, ಗುರುಗಳನ್ನು ಹಾಗೂ ಅವರು ಕಲಿಸುವ ವಿಷಯವನ್ನೂ ಗೌರವಿಸಲು ಕಲಿಸಬೇಕು. ಇಲ್ಲವಾದರೆ ಯಾವ ರೀತಿ ಕಠಿಣವಾದ ಕಲ್ಲು ಅದರ ಮೇಲೆ ಬಿದ್ದ ನೀರನ್ನು ಹೀರಿಕೊಳ್ಳುವುದಿಲ್ಲವೋ ಅದೇರೀತಿ ಅನಾದರ, ಉಪೇಕ್ಷೆಗಳಿಂದ ಕಠಿಣವಾದ ಮಕ್ಕಳ ಮನಸ್ಸು ಜ್ಞಾನ ಧಾರೆಯನ್ನು ಹೀರಿಕೊಳ್ಳಲು ಅಸಮರ್ಥವಾಗಿರುತ್ತದೆ.

ನನ್ನ ಅನಿಸಿಕೆಯಂತೆ, ಈ ಶಿಕ್ಷಕರ ದಿನಾಚರಣೆಯನ್ನು ಆಚರಿಸುವುದೇ ಇಂದಿನ ಸಂದರ್ಭದಲ್ಲಿ ಅಪ್ರಸ್ತುತ. ಅದಕ್ಕೆ ಬದಲಾಗಿ ಪೋಷಕರು ಮಕ್ಕಳಿಗೆ ಶಿಕ್ಷಣದ, ಶಿಕ್ಷಕರ ಮಹತ್ವ ತಿಳಿಸುತ್ತಾ,  ಪ್ರತಿನಿತ್ಯ ಗುರುಶಿಷ್ಯರ ನಡುವಿನ ಬಾಂಧವ್ಯವನ್ನು ಬಲಪಡಿಸುವಂತೆ, ಅವರು ಕಲಿಸುವ ವಿಷಯ ಯಾವುದೇ ಇರಲಿ, ತಾರತಮ್ಯವಿಲ್ಲದೇ ಎಲ್ಲರನ್ನೂ ಸಮಾನವಾಗಿ ಗೌರವಿಸುವಂತೆ ಮಾಡಿದರೆ ಆಗ ಪ್ರತಿದಿನವೂ ಶಿಕ್ಷಕರ ದಿನಾಚರಣೆಯೇ ಆಗುವುದರಲ್ಲಿ ಸಂಶಯವಿಲ್ಲ.

ಶನಿವಾರ, ಅಕ್ಟೋಬರ್ 27, 2012

ಚಾತುರ್ವರ್ಣ ಎಂಬ ಅದ್ಭುತ ಪದ್ಧತಿ




ಅಮೀಶ ಅವರು ರಚಿಸಿದ   THE IMMORTALS OF MELUHAS  ಕಾದಂಬರಿಯಲ್ಲಿ ನನಗೆ ಅತಿಯಾಗಿ ಮೆಚ್ಚಿಗೆಯಾದ, ಪದೇ ಪದೇ ಆ ಪುಟಗಳನ್ನು ಓದುವಂತೆ ಮಾಡುವ ಭಾಗವೆಂದರೆ ನಾಲ್ಕು ವರ್ಣಗಳನ್ನು ವಿಂಗಡಿಸುವ ಪರಿ!


ಮೈಕಾ ಪದ್ಧತಿ ಎಂದು ಕರೆಯಲ್ಪಡುವ ಈ ಕ್ರಮ ಎಷ್ಟೊಂದು ವೈಜ್ಞಾನಿಕವಾಗಿದೆ ಎಂದು ಅಚ್ಚರಿಯಾಗುತ್ತದೆ.


ದೇವೋತ್ತಮ ಶ್ರೀರಾಮಚಂದ್ರನಿಂದ ಆರಂಭವಾಯಿತು ಎನ್ನಲಾದ ಆ ಪದ್ಧತಿಯ ಪ್ರಕಾರ ಪ್ರತಿ ಗರ್ಭಿಣಿ ಸ್ತ್ರೀಯೂ ಹೆರಿಗೆಯ ಸಮಯ ಬಂದಾಗ ನಗರದ ಹೊರಭಾಗದಲ್ಲಿರುವ, ಸುವ್ಯವಸ್ಥಿತವಾದ, ಪರಿಣಿತ ವೈದ್ಯ ಬಳಗವನ್ನು ಹೊಂದಿದ ಆರೋಗ್ಯ ಕೇಂದ್ರಕ್ಕೆ ದಾಖಲಾಗಬೇಕು. ಅಲ್ಲಿ ಅವಳ ಪತಿಗಾಗಲೀ ಅಥವಾ ಉಳಿದ ಕುಟುಂಬದ ಸದಸ್ಯರಿಗಾಗಲೀ ಪ್ರವೇಶ ಇರುವುದಿಲ್ಲ

.
ಪ್ರಸವದ ನಂತರ ಕೆಲ ಸಮಯದ ಆರೈಕೆ ಪಡೆದು ಆಕೆ ತನ್ನ ಮಗುವನ್ನು ಅಲ್ಲೇ ಬಿಟ್ಟು ಸ್ವಗೃಹಕ್ಕೆ ಹಿಂತಿರುಗಬೇಕು......!


ಅಲ್ಲಿ ಎಲ್ಲಾ ಮಕ್ಕಳನ್ನು ಸಮಾನವಾದ ರೀತಿಯಲ್ಲಿ ಬೆಳೆಸಲಾಗುತ್ತದೆ. ಸಮಾನ ಆಹಾರ, ಉಪಚಾರ, ಶಿಕ್ಷಣ ಎಲ್ಲವನ್ನೂ ನೀಡಲಾಗುತ್ತದೆ. ಮಕ್ಕಳಿಗೂ ತಂದೆತಾಯಿಗಳಿಗೂ ಯಾವುದೇ ಸಂಪರ್ಕವಿರುವುದಿಲ್ಲ ! ಅಲ್ಲದೇ ಅವರು ಯಾರ ಮಕ್ಕಳು ಎಂಬುದನ್ನು ಅತಿ ಗೋಪ್ಯವಾಗಿಡಲಾಗುತ್ತದೆ.


ಆ ಮಕ್ಕಳು, ಹದಿ ವಯಸ್ಸಿಗೆ ಕಾಲಿಟ್ಟಾಗ ಸೋಮರಸ ಎನ್ನುವ ಒಂದು ಅದ್ಭುತವಾದ ಔಷಧವನ್ನು ನೀಡಲಾಗುತ್ತದೆ.ಮತ್ತು ಅವರು  ಹದಿನೈದು ವರ್ಷದವರಾದಾಗ, ಅವರನ್ನು ಸಮಗ್ರವಾದ ಪರೀಕ್ಷೆಗೊಳಪಡಿಸಲಾಗುತ್ತದೆ.


ಈ ಪರೀಕ್ಷಯ ಫಲಿತಾಂಶದ ಆಧಾರದಿಂದ ಅವರನ್ನು ಬ್ರಾಹ್ಮಣ, ಕ್ಷತ್ರಿಯ,  ವೈಶ್ಯ ಮತ್ತು ಶೂದ್ರರೆಂದು ವಿಭಾಗಿಸಲಾಗುತ್ತದೆ.


ಹಾಗಾಗಿ ಪ್ರತಿಯೊಬ್ಬರು ಅವರ ಸಾಮರ್ಥ್ಯ ಹಾಗೂ ಪ್ರತಿಭೆಯ ಆಧಾರದಿಂದ ಇಂಥ ವರ್ಣಕ್ಕೆ ಸೇರಿದವರೆಂದು ಗುರುತಿಸಲ್ಪಡುತ್ತಾರೇ ವಿನಃ ಅವರ ಹುಟ್ಟಿಗೆ ಕಾರಣವಾದವರಿಂದಲ್ಲ........!


ನಂತರ ಎಲ್ಲರೂ ಅವರವರ ವರ್ಣಗಳಿಗೆ ಅನುಸಾರವಾಗಿ ಹೆಚ್ಚಿನ ವಿದ್ಯಾಭ್ಯಾಸ ಮಾಡುತ್ತಾರೆ

.
ಆ ಸಮಯದಲ್ಲಿ ಯಾವ ಪಾಲಕರು ಸಂತಾನಾಪೇಕ್ಷಿಗಳಾಗಿ ಅರ್ಜಿ ಸಲ್ಲಿಸಿರುತ್ತಾರೋ ಅವರಿಗೆ ಅವರ ವರ್ಣದ ಮಗುವನ್ನು ನೀಡಲಾಗುತ್ತದೆ

. ಅಂದರೆ ಉದಾಹರಣೆಗೆ ಬ್ರಾಹ್ಮಣ ತಂದೆ ತಾಯಿಗೆ ದೊರಕುವ ಮಗು ಬೇರೆ ವರ್ಣಕ್ಕೂ ಸೇರಿರಬಹುದು. ಅವರು ಆ ಮಗುವನ್ನು ತಮ್ಮ ಸ್ವಂತ ಮಗುವಿನಂತೆ ಸಲಹುತ್ತಾರೆ.


ಇದರಿಂದ ಪ್ರತಿ ಮಗುವೂ ಜೀವನದಲ್ಲಿ ಬೆಳೆಯಲು ಹಾಗೂ ಬೆಳಗಲು ಸಮಾನ ಅವಕಾಶ ಪಡೆಯುತ್ತದೆ.


ಇಂಥ ಸುವ್ಯವಸ್ಥೆ ಇಂದಿಗೂ ಇದ್ದಿದ್ದರೆ, ನಮ್ಮ ಸಮಾಜದ ಹಿನ್ನೆಡೆಗೆ ಮುಖ್ಯವಾದ ಕಾರಣವಾದ. ಎಲ್ಲಾ ಸಮಸ್ಯೆಗಳಿಗೂ ಮೂಲವಾದ ಈ ಜಾತಿ ವೈಷಮ್ಯ, ಹೊಲಸು ಜಾತಿ ರಾಜಕಾರಣ, ನಾಚಿಕೆಗೇಡಿನ ಅಸ್ಪೃಶ್ಯತೆ, ಅಸಮಾನತೆ ಯಾವುದೂ ಇರುತ್ತಿರಲಿಲ್ಲ ಅಲ್ಲವೇ.......?