ಭಾನುವಾರ, ಡಿಸೆಂಬರ್ 9, 2012

ಸಜ್ಜುಮಾಡು ಅಮ್ಮಾ


ಜ್ಜುಮಾಡು ಅಮ್ಮಾ ಎನ್ನ
ಎದುರಿಸಲು ಜಗವನು
ಎಷ್ಟು ಕಾಲ ಮಲಗಿರಲಿ
 ನಿನ್ನ ಮಡಿಲನಲ್ಲಿಯೇ?

ಸಡಿಲಿಸಮ್ಮ ಮಮತೆ ಬಂಧ
ನೋಡಲು ಬಿಡು ಜಗವನು
ಸವಿಯಲು ಬಿಡು ಸೋಲ ಕಹಿಯ
ನೋಯಲು ಬಿಡು ಮನವನು

ನೊಂದು ಬೆಂದು  ಮಾಗಿ ಮತ್ತೆ
ಬರುವೆ ನಿನ್ನ ಮಡಿಲಿಗೆ
ಆಗ ನೀಡು ಸಾಂತ್ವನವ
ಅಷ್ಟೇ ಸಾಕು ಬಾಳಿಗೆ

ಮಮಕಾರವ ದೂರುತಿಲ್ಲ
ಅಮ್ಮಾ ಘಾಸಿಪಡದಿರು
ಹಾರ ಬಯಸದೇನು ಹಕ್ಕಿ
ತನ್ನ ರೆಕ್ಕೆ ಬಲಿಯಲು?

ಗೊತ್ತು ಅಮ್ಮಾ ನಿನ್ನ ಪ್ರೀತಿ
ಆಕುಲತೆಯ ಮರೆಯಲಿ
ಅವಿತ ಅಮಿತ ಮಮತೆಯನ್ನು
ಹೇಗೆ ತಾನೇ ಹಳಿಯಲಿ?

ಹಾತೊರೆದಿದೆ ನನ್ನ ಮನವು
 ಜಗದನುಭವ ಪಡೆಯಲು
ರೆಕ್ಕೆ ಹರಡಿ ಕ್ಷಿತಿಜದೆಡೆಗೆ
 ಹಾರಿ ಹೋಗಿ ನೋಡಲು

ಅಮ್ಮಾ ಒಮ್ಮೆ ಕಳಿಸಿ ನೋಡು
 ಸೇರುವೆನು ಗುರಿಯನು
ನಿನ್ನ ಹರಕೆ ಒಂದೇ ಸಾಕು
ಎದುರಿಸಲು ಜಗವನು



ಶನಿವಾರ, ಡಿಸೆಂಬರ್ 8, 2012

ಪ್ರೀತಿ ಎಷ್ಟೊಂದು ಕುರುಡು.........!!??


ಅವನು ಸೋತ ಕಾಲುಗಳನ್ನೆಳೆಯುತ್ತಾ ದಿಕ್ಕು ದೆಸೆ ಇಲ್ಲದೇ ಹೋಗುತ್ತಿದ್ದ. ಚಿಂತೆ,ಆತಂಕಗಳ ಗೂಡಾಗಿದ್ದ  ಅವನ ಈ ಮನಸ್ಥಿತಿಗೆ ಕಾರಣ ಮುಂಜಾನೆ ಬಂದ ಕರೆ.

" ಮಾವ, ನೀವು ಮಾತು ಕೊಟ್ಟ ಹಾಗೆ ಇನ್ನೂ ಸ್ಕೂಟರ್ ಕೊಡಿಸಿಲ್ಲ. ಅದಕ್ಕೇ ನಿಮ್ಮ ಮಗಳನ್ನು ನಿಮ್ಮನೆಗೇ ಕಳಿಸ್ತಿದೀನಿ. ಅವಳ ಮೇಲೆ ಪ್ರೀತಿ ಇದ್ರೆ, ಅವಳು ನಮ್ಮನೇಲಿ ಚನ್ನಾಗಿರ್ಬೇಕೂಂತ ಆಸೆ ಇದ್ರೆ ಆದಷ್ಟೂ ಬೇಗ ಸ್ಕೂಟರ್ ಕೊಡಿಸಿ. ಇಲ್ಲಾಂದ್ರೆ ನಿಮ್ಮ ದಾರಿ ನಿಮ್ದು, ನನ್ ದಾರಿ ನಂದು......."

 ಹಿನ್ನೆಲೆಯಲ್ಲಿ ಅಳುವ ಸದ್ದು! "ಇಲ್ಕೇಳಿ ಅಳಿಯಂದ್ರೆ......." ಫೋನ್ ಕಟ್ಟಾಯಿತು.

 ' ಅಯ್ಯೋ ಮಗು ಎಷ್ಟು ಸಂಕಟ ಪಡ್ತಿದಾಳೂ.....' ಮನಸ್ಸು ವಿಲವಿಲ ಒದ್ದಾಡಿತು. ಹೊಟ್ಟೆ ಬಟ್ಟೆ ಕಟ್ಟಿ ಮುದ್ದಿನಿಂದ ಸಾಕಿ ಸಲಹಿದ ಒಬ್ಬಳೇ ಮಗಳು. ಅವಳ ಮೈಮೇಲೆ ಸಾಕಷ್ಟು ಬಂಗಾರ ಹಾಕಿ ತಕ್ಕಮಟ್ಟಿಗೆ ಚನ್ನಾಗೇ ಮದುವೆ ಮಾಡಿ ಕಳಿಸೋದ್ರಲ್ಲಿ ಸಾಲದ ಹೊಳೆಯಲ್ಲಿ ಪೂರ್ಣವಾಗಿ ಮುಳುಗಿ ಹೋಗಿದ್ದ. ಎಷ್ಟೇ ತಿಪ್ಪರಲಾಗ ಹಾಕಿದ್ರೂ ಅಳಿಯ ದೇವರು ಕೇಳಿದ ಸ್ಕೂಟರ್ ತರಲು ಆಗಲೇ ಇಲ್ಲ. ಆದಷ್ಟೂ ಬೇಗ ಕೊಡಿಸ್ತೀನಿ ಅಂತ ಹೇಗೋ ಸಮಾಧಾನ ಮಾಡಿ ಹೆಣ್ಣೊಪ್ಪಿಸಿಕೊಡೋಷ್ಟರಲ್ಲಿ ಮತ್ತೆ ಹುಟ್ಟಿ ಬಂದಂತಾಗಿತ್ತು.

"ಅಯ್ಯೋ...! ದೇವ್ರೇ!......ಇನ್ನು ಹಣಕ್ಕಾಗಿ ಏನು ಮಾಡಲಿ? ಯಾರ ಹತ್ರ ಕೇಳಲಿ?........" ಮನದಲ್ಲೇ ಮೌನವಾಗಿ ರೋದಿಸುತ್ತಾ ಸಾಗುತ್ತಿದ್ದವನನ್ನು ಒ೦ದು ಭಯಂಕರ ಶಬ್ದ ವಾಸ್ತವಕ್ಕೆ ತಂದಿತು. ವ್ಯಾನೊಂದು ಚಾಲಕನ ನಿಯಂತ್ರಣ ತಪ್ಪಿ ಮರವೊಂದಕ್ಕೆ ಡಿಕ್ಕಿ ಹೊಡೆದಿತ್ತು. ಬಹುಷಃ ಎಲ್ಲರೂ ಸ್ಥಳದಲ್ಲೇ ಮೃತಪಟ್ಟಿರಬಹುದು. ಯಾವ ಕಿರುಚಾಟವೂ ಕೇಳಿಬರಲಿಲ್ಲ. ಹತ್ತಿರ ಹೋಗಿ ನೋಡಿದ. ಕಿಟಕಿಯಿಂದ ಒಂದು ರಕ್ತಸಿಕ್ತ  ಕೈ ಆಚೆ ಬಂದಿತ್ತು.

ಅವನ ಗಮನ ಸೆಳೆದಿದ್ದು ಆ ಕೈಗಳಲ್ಲಿದ್ದ ಬಂಗಾರದ ಬಳೆಗಳು. ಇವನ್ನು ಮಾರಿದರೆ ಸ್ಕೂಟರ್ ಗೆ ಹಣ ಹೊಂದಿಸಬಹುದು ಅಂದುಕೊಂಡು ಲಗುಬಗೆಯಿಂದ ಆ ಬಳೆಗಳನ್ನು ಕಳಚಿಕೊಳ್ಳುವಾಗ ಆ ಕೈ ಮೇಲಿದ್ದ ಮಚ್ಚೆ ಮಗಳನ್ನು ನೆನಪಿಗೆ ತಂತು " ಪುಟ್ಟಿ ನಾನು ಸ್ಕೂಟರ್ ತಂದು ಕೊಡ್ತೇನಮ್ಮ ನೀನು ಅಳ್ಬೇಡ...." ಅಂತ ಮನಸ್ಸಲ್ಲೇ ಅಂದುಕೊಂಡು ಮನೆಗೆ ಧಾವಿಸಿದ.

"ಇನ್ನೇನು ಮಗು ಬರ್ತಾಳೆ. ಅವಳನ್ನ ನಾಳೆ ಪೇಟೆಗೆ ಕರ್ಕೊಂಡು ಹೋಗಿ ಅವಳ ಗಂಡನಿಗೆ ಒಳ್ಳೆ ಸ್ಕೂಟರ್ ಕೊಡಿಸ್ತೀನಿ........" ಅಂತ ಕಾಯ ತೊಡಗಿದ.

 ಗಂಟೆಗಳುರುಳಿದರೂ ಮಗಳ ಸುಳಿವಿಲ್ಲ. ಕಾಯುತ್ತಾ ತೂಕಡಿಸುತ್ತಾ ಕುಳಿತವನನ್ನು ಬಾಗಿಲ ಸದ್ದು ಎಚ್ಚರಿಸಿತು. 'ಓ ಮಗು ಬಂದ್ಲು.....' ಅಂತ ಲಗುಬಗೆಯಿಂದ ತೆಗೆದವನಿಗೆ ಕಂಡದ್ದು ಪೋಲೀಸರ ಗಡಸು ಮುಖ. " ನಿನ್ ಮಗಳಿಗೆ ಆಕ್ಸಿಡೆಂಟಾಗಿದೆ, ಆಸ್ಪತ್ರೆಲಿದ್ದಾಳೆ...." ಅಂದದ್ದೇ ಎದ್ದೆನೋ ಬಿದ್ದೆನೋ ಅಂತ ಆಸ್ಪತ್ರೆಗೆ ಓಡಿದ.

ಮಗಳ ಮೃತದೇಹದ ಮುಂದೆ ಅಳುತ್ತಿದ್ದ ಅವನಿಗೆ ಯಾರೋ ಅಂದಿದ್ದು ಕೇಳಿಸಿತು " ಪಾಪ  ಅಪಘಾತವಾದದ್ದು ನೋಡಿದವರು ಇಲ್ಲಿಗೆ ಬೇಗ ಕರೆತಂದಿದ್ದರೆ ಬದಿಕಿರೋಳು. ಅದ್ಯಾವ ಕಟುಕನೋ ಅಂಥ ಸ್ಠಿತೀಲಿ ಅವಳ ಬಳೆ ಕಿತ್ಕೊಂಡು ಹೋಗಿದಾನೆ ನೋಡಿ. ....."

'ಆ ಕಟುಕ ತಾನೇ...' ತನ್ನನ್ನು ತಾನು ಕ್ಷಮಿಸಿಕೊಳ್ಳಲು ನಿರಾಕರಿಸಿದ ಅವನ ಹೃದಯ ಸ್ಥಬ್ದವಾಗಿತ್ತು........