ಅವನ ಬರಹಗಳಲ್ಲಿ ಬದುಕಿನ ತಲ್ಲಣಗಳು, ಬಾಹ್ಯ ಜಗತ್ತಿನ
ಭೀಕರತೆ, ಬಡತನದ ಬಾಧೆಗಳು, ದಾಸ್ಯದ ದುಃಖ, ರಾಜಕಾರಣಿಗಳ ಕ್ರೌರ್ಯ. ಇಂತಹ ಭಾವನೆಗಳು ತುಂಬಿರುತ್ತಿದ್ದವು,ಅವನು
ತನ್ನನ್ನು ತಾನು ಬಂಡಾಯ ಲೇಖಕ ಎಂದು ಗುರುತಿಸಿಕೊಂಡಿದ್ದ.
ಅವನ ಲೇಖನಗಳಿಗೆ ಒಳ್ಳೆಯ ಮೆಚ್ಚುಗೆ, ಪ್ರಶಂಸೆಗಳು ದೊರೆಯುತ್ತಿದ್ದರೂ,
ಯಾಕೋ ಅವನ ಮನಸ್ಸಿಗೆ ಶಾಂತಿ, ಸಮಾಧಾನಗಳಿರಲಿಲ್ಲ.
ಮನೆಯಲ್ಲಿ ಸದಾ ಅಶಾಂತಿ, ಅಸಂತುಷ್ಟಿಯಿಂದ ತಳಮಳಕ್ಕೊಳಗಾಗುತ್ತಿದ್ದ.
ಗಾಯಕಿಯಾದ ಪತ್ನಿಯ ಹಾಡು ಅವನಿಗೆ ಕರ್ಕಶವಾಗಿ ಕೇಳಿಸುತ್ತಿತ್ತು. ಮಕ್ಕಳ
ಆಟ ಪಾಟಗಳು ಅಸಹನೀಯವೆನಿಸುತ್ತಿದ್ದವು. ಏಕೋ ಜೀವನವೇ ಹೇಸಿಗೆ ಅನ್ನಿಸತೊಡಗಿದಾಗ ಅವನ ಬದುಕಿನಲ್ಲಿ
ಒ೦ದು ಮಹತ್ತರ ಘಟನೆ ನಡೆಯಿತು.....
ಅಂದು ಭಾನುವಾರ. ಬೆಳಗಿನ ತಿಂಡಿ ತಿಂದು ಮುಗಿಸಿದಾಗ ಪಕ್ಕದ ಮನೆಯ ಮಗು
ಸು೦ದರವಾದ ಚಿಟ್ಟೆಯ ಬಗ್ಗೆ ಪದ್ಯ ಬರೆಯಲು ಸಹಾಯ ಮಾಡಿ
ಎಂದು ಕೇಳಿತು.
ಅಂಥಾ ದೊಡ್ಡ ಬರಹಗಾರ ತಾನು. ಸಾಧ್ಯವಿಲ್ಲ ಎನ್ನಲು ಸ್ವಪ್ರತಿಷ್ಟೆ ಒಪ್ಪಲಿಲ್ಲ.
ಆದರೆ ಚಿಟ್ಟೆ ಹೇಗಿರುತ್ತೆ ಅಂತ ಅವನೆಂದೂ ಗಮನಿಸಿರಲೇ ಇಲ್ಲ. ಅಂದ ಮೇಲೆ ಪದ್ಯ ಬರೆಯುವುದು ಹೇಗೆ....? ಸರಿ,
ಆ ಮಗುವಿನೊಂದಿಗೇ ಒಂದು ಸಂಜೆ ಪಾರ್ಕಿಗೆ ಹೋದ. ಅಲ್ಲಿ
ಅರಳಿದ ಹೂವುಗಳ ಮೇಲೆ ವಿಧ ವಿಧವಾದ ಚಿಟ್ಟೆಗಳು ಹಾರಾಡುತ್ತಿದ್ದವು ...
ವರ್ಣಮಯವಾದ ಹೂವುಗಳ ಮೇಲೆ
ಅಷ್ಟೇ ವೈವಿಧ್ಯಮಯ ವರ್ಣ, ಚಿತ್ತಾರಗಳಿಂದ ಕೂಡಿದ ಚಿಟ್ಟೆಗಳು ಹಾರಾಡುತ್ತಿರುವುದನ್ನು ಮೊದಲ ಬಾರಿಗೆ
ಆಸಕ್ತಿಯಿಂದ ಗಮನಿಸಿದ. ಆಡುತ್ತಿದ್ದ ಪುಟ್ಟ ಮಕ್ಕಳ ಕೇಕೆ ಗಲಾಟೆಗಳು ಏಕೋ ಅಷ್ಟೊಂದು ಅಸಹನೀಯವೆನ್ನಿಸಲಿಲ್ಲ.
ಮುದ್ದು ಮಕ್ಕಳ ಮುಗ್ಧ ನಗುವನ್ನೂ ನಿಷ್ಕಲ್ಮಶ ಪ್ರೀತಿಯನ್ನೂ ಕಂಡು
" ಪ್ರಪಂಚ ಇಷ್ಟು ಸುಂದರವಾಗಿದೆಯೇ...?" ಎಂದು ವಿಸ್ಮಯಗೊಂಡ......
.
ಎಳೆಯ ತಂದೆ ತಾಯಿಗಳು ತಮ್ಮ ಮಕ್ಕಳ ಜೊತೆ ಉಲ್ಲಾಸದಿಂದ ಆಟವಾಡುವುದನ್ನು
ನೋಡಿ "ಅಯ್ಯೋ!ನಾನು ನನ್ನ ನಿರುಪಯುಕ್ತ ಬಂಡಾಯ ಸಾಹಿತ್ಯದ ಸಲುವಾಗಿ ಎಂಥ ಮಧುರ ಕ್ಷಣಗಳನ್ನು
ಕಳೆದುಕೊಳ್ಳುತ್ತಿದ್ದೇನೆ" ಎಂದು ಪರಿತಪಿಸಿದ.
ಅವನ ಮನಸ್ಸಿನಲ್ಲಿ ಇಷ್ಟು ದಿನ ಇದ್ದ ಕ್ರೋಧ ಆಕ್ರೋಶ ಹತಾಶೆಗಳ ಭಾವಗಳು ಮಾಯವಾಗಿ ಆ ಜಾಗದಲ್ಲಿ ನೂತನವಾದ ಆನಂದ,
ಉತ್ಸಾಹಗಳು ತುಂಬಿದ್ದವು.ಸದಾ ಬಾಳಿನ ಕರಾಳ ಮುಖವನ್ನೆ ನೋಡುತ್ತಿದ್ದ ಅವನಿಗೆ ಅದರ ಇನ್ನೊಂದು ಮುಖದ
ಪರಿಚಯ ಆಯ್ತು.
" ಅಂಕಲ್, ಅಲ್ನೋಡಿ" ಮಗುವಿನ ದನಿ ಅವನನ್ನು ಇಹ ಲೋಕಕ್ಕೆ ಕರೆತಂದಿತು.
ಅದರ ಎಳೆಯ ಕೈ ತೋರುತ್ತಿದ್ದ ದಿಕ್ಕನ್ನು ನೋಡಿದ. ಅಲ್ಲಿ ಸೂರ್ಯಾಸ್ಥವಾಗುತ್ತಿದೆ. ಬಾನಂಚು ರಂಗೇರಿದೆ.ಕೆಂಬಣ್ಣದ
ಸೂರ್ಯ ದೂರದ ಬೆಟ್ಟದ ಹಿಂದೆ ಅಸ್ಥಮಿಸುತ್ತಿದ್ದಾನೆ.
" ದಿನಾ ಜರಗುವ ಸೂರ್ಯಾಸ್ಥ
ಇಷ್ಟು ಮನೋಹರವಾಗಿರುತ್ತದೆಯೇ?......" ಎಂದು ಚಕಿತನಾದ. ಅದೇ ಮನಸ್ಥಿತಿಯಲ್ಲಿ ಮನೆ ತಲುಪಿದಾಗ
ಒಳಗಿಂದ ಹೆಂಡತಿ ಇನಿದನಿ ಕೇಳಿಬಂತು
" ಪಾತರಗಿತ್ತಿ
ಪಕ್ಕ, ನೋಡಿದೇನೆ ಅಕ್ಕ......" ಮೆಲ್ಲಗೆ ಸದ್ದಾಗದಂತೆ ಬಾಗಿಲು ತಳ್ಳಿದ. ಒಳಗೆ ಐದು ವರ್ಷದ
ಮಗ ಪುಸ್ತಕದಲ್ಲಿ ಬಣ್ಣದ ಚಿಟ್ಟೆ ಬಿಡಿಸಿದ್ದಾನೆ, ಅದನ್ನು ಎರಡು ವರ್ಷದ ಪುಟ್ಟ ಮಗಳಿಗೆ ತೋರಿಸುತ್ತಾ
ಪತ್ನಿ ಇಂಪಾಗಿ ಹಾಡುತ್ತಿದ್ದಾಳೆ. ಅವನನ್ನು ಕಂಡ ತಕ್ಷಣ ಅವಳು ಹಾಡು ನಿಲ್ಲಿಸಿ,ಒಳ ಹೊರಟಳು.
ಅವನು"
ಅರೆ! ನಿನ್ನ ಧ್ವನಿ ಎಷ್ಟು ಚನ್ನಾಗಿದೆ! ಪೂರ್ತಿ ಹಾಡು ಹೇಳು...." ಅಂದು ಅವಳ ಕೈಯ್ಯಲ್ಲಿದ್ದ
ಮಗುವನ್ನೆತ್ತಿ ಮುದ್ದಿಸಿದ. ಮಗನ ಪುಸ್ತಕದಲ್ಲಿದ್ದ ಬಣ್ಣದ ಚಿಟ್ಟೆಯನ್ನು ನೋಡಿ ಕಣ್ಣಲ್ಲೇ ಪ್ರಶಂಸಿಸುತ್ತಾ
ಅವನ ತಲೆಯನ್ನು ಆಪ್ಯಾಯತೆಯಿಂದ ಸವರಿದ. ಅವರೆಲ್ಲರ ಕಣ್ಣುಗಳಲ್ಲಿ ಆಶ್ಚರ್ಯ, ಆನಂದದ ಬೆಳಕು ನೋಡುತ್ತಲೇ
ಅವನ ಮನಃಪಟಲದ ಮೇಲೆ ಕೋಮಲವಾದ ಭಾವನೆಗಳಿಂದ ಕೂಡಿದ
ಪದ್ಯವೊಂದು ಮೂಡುತ್ತಿರುವುದು ಅವನಿಗೆ ಭಾಸವಾಯಿತು.