ಸೋಮವಾರ, ಜುಲೈ 23, 2018

ಪತ್ರಕರ್ತರ ದಿವ್ಯ ಮೌನ



ಸುಸುಮಾರು ಎರಡು ವರ್ಷಗಳ ಹಿಂದೆ ಒಬ್ಬ ಹೆಸರಾಂತ ಪತ್ರಕರ್ತರು ಒಂದು ಮಕ್ಕಳ ನಾಟಕ ಸಂಕಲನಕ್ಕಾಗಿ ನಾಟಕಗಳನ್ನು ಆಹ್ವಾನಿಸಿದ್ದರು. ಅದರಂತೇ ನಾನು ನಾಟಕವೊಂದನ್ನು ಕಳಿಸಿದೆ. ನಂತರ ಅವರು ಅವರ ಟಿವಿ ಪ್ರೋಗ್ರಾಂ ಗಳ ನ್ನು ನೋಡುವಂತೆ ಮೆಸೇಜ್ ಮಾಡಿದ್ದರು. ಅವರ ಮಾತನ್ನು ಗೌರವಿಸಿ ಆ ಕಾರ್ಯಕ್ರಮವನ್ನು ನೋಡಿ ಅವರಿಗೆ ನನ್ನ ಅಭಿಪ್ರಾಯ ತಿಳಿಸಿದೆ. ಕೆಲದಿನಗಳ ನಂತರ ಇನ್ಯಾವುದೋ ಲಿಂಕ್ ಶೆರ್ ಮಾಡಲು ಹೇಳಿದರು. ಮಾಡೆ. ಆರೇಳು ತಿಂಗಳು ಅವರಾಗೇ ನಾನು ಕಳಿಸಿದ್ದ ನಾಟಕದ ಬಗ್ಗೆ ಹೇಳಬಹುದೆಂದು ಕಾದರೂ ಆ ಬಗ್ಗೆ ಚಕಾರವಿಲ್ಲ!! ನಂತರ ನಾನೇ ಕೇಳಿದೆ. ಅದಕ್ಕೆ ಉತ್ತರ ಇಲ್ಲ.. ಆದರೆ ಏನಾದರೂ ಶೇರ್ ಮಾಡಲು ಕೇಳುವುದು ನಡೆದಿತ್ತು.


ಅವರು ಒಂದು ಈ ಪತ್ರಿಕೆಯನ್ನೂ ನಡೆಸುವವರಾದ್ದರಿಂದ ನಾನು ಕಥೆಯನ್ನು ಕಳಿಸಲೇ ಎಂದು ಅವರ ಪರಿಚಯವಾದ ಆರಂಭದಲ್ಲೇ ಕೇಳಿದ್ದೆ. ತಕ್ಷಣ ವೇ ಕಳಿಸಿ ಎಂದಿದ್ದರು. ನಾನು ಯಾವ ಕಥೆಯನ್ನು ಕಳಿಸಬೇಕೆಂದಿದ್ದೆನೋ ಅದನ್ನು ಕಳಿಸದೇ ಇಲ್ಲಿ ಹಾಕಿ ತುಂಬ ಜನ ಮೆಚ್ಚಿದ್ದ ಒಂದು ಕಿರುಗಥೆಯನ್ನು ಕಳಿಸಿದೆ..


ಅದಕ್ಕೂ ಪ್ರತಿಕ್ರಿಯೆ ಇಲ್ಲ.. ಎರಡು ಮೂರು ತಿಂಗಳು ಬಿಟ್ಟು ನಾಟಕದ ಬಗ್ಗೆ ಕಥೆಯ ಬಗ್ಗೆ ವಿಚಾರಿಸಿದರೆ ದೊರೆತ ಉತ್ತರ ದಿವ್ಯ ಮೌನ..


ಕೆಲ ದಿನಗಳ ಹಿಂದೆ ಒಂದು ಅನಾಮಿಕ ನಂಬರಿಂದ ಸಂದೇಶಇದು ಎಲ್ಲರ ಮನೆಯಲ್ಲಿರಬೇಕಾದ ಪುಸ್ತಕ ಇಷ್ಟು ದುಡ್ಡು ಕಳಿಸಿ ಕೊಂಡುಕೊಳ್ಳಿ ..ಎಂದು.. ನಾಣು ಯಾರೋ ಎಂದು ಅಲಕ್ಷಿಸಿದೆ.. ಮತ್ತೆ ಕೆಲ ದಿನಗಳ ನಂತರ ಇನ್ನೊಂದು ಪುಸ್ತಕದ ಬಗ್ಗೆ ಅದೇ ಮಾದರಿಯ ಮೆಸೇಜ್.. ಆಗ ನಾನು,“ ಕ್ಷಮಿಸಿ ನಿಮ್ಮಪರಿಚಯವಾಗಲಿಲ್ಲ..ಎಂದು ಕೇಳಿದೆ.. ಆಗ ಅವರು ತಾವು ಇದೇ ಮಹನೀಯರ ಆಫೀಸಿನ ಅಡ್ಮಿನ್ ಎಂದು ತಿಳಿಸಿದರು.


ಅಲ್ಲ.. ನಿಮ್ಮ ಲೇಖನ /ಕಥೆ ಇಂಥ ಕಾರಣಕ್ಕೆ ಸ್ವೀಕೃತವಾಗಿಲ್ಲ ಎಂದು ಒಂದು ಮೆಸೇಜ್ ಮಾಡಿಸುವುದು ಆಫೀಸ್ , ಅಡ್ಮಿನ್ ಎಲ್ಲಾ ಇರುವವರಿಗೆ ಅಷ್ಟು ಕಷ್ಟವೇ. ಬರೆದು ಕಳಿಸಿದವರು ಉತ್ತರವನ್ನು ನಿರೀಕ್ಷಿಸುತ್ತಾರೆ ಎಂಬ ವಿಚಾರ ಅವರಿಗೆ ತಿಳಿಯದೇ? ನಮ್ಮ ಬರವಣಿಗೆಗೆ ಬೆಲೆಯೇ ಇಲ್ಲವೇ ? ಛೇ..


ಬೋಳುತಲೆ ಮತ್ತು ಡಾಕ್ಟರ್


ಬೋಳುತಲೆ ಮತ್ತು ಡಾಕ್ಟರ್
ಸುಮಾರು ಹತ್ತು ವರ್ಷಗಳ ಹಿಂದಿನ ಮಾತು. ಒಂದು ದಿನ ಶಾಲೆಯಲ್ಲಿರುವಾಗ  .   ಆಯಾಸ.. ಮೈಕೈ ನೋವು .. ಇವತ್ತು ಜ್ವರ ಬರುತ್ತೇನೋ ಅಂತ ಅನಿಸಿತು ಆದರೂ ಹೇಗೋ ಕೆಲಸ ಮುಗಿಸಿ ಮನೆಗೆ ಬಂದೆ.  ಸಾಯಂಕಾಲದ ಹೊತ್ತಿಗೆ  “ನೆನೆದವರ ಮನದಲ್ಲಿ ”ಅನ್ನುವ ಹಾಗೆ ಜ್ವರ ಬಂದೇಬಿಟ್ಟಿತು.  ಹೊರಗೆಲ್ಲೂ ತಿಂದಿರಲಿಲ್ಲ, ಮಳೆಯಲ್ಲಿ ನೆನೆದಿರಲಿಲ್ಲ.. ಆದರೂ ಯಾಕೆ ಜ್ವರ ಅಂತ ಆಶ್ಚರ್ಯವಾಯ್ತು.. ರಾತ್ರಿ ಒಂದು ಪ್ಯಾರಾಸಿಟಮಾಲ್ ನುಂಗಿ ಮಲಗಿದೆ.  ಮಧ್ಯರಾತ್ರಿಯ ವೇಳೆಗೆ ಜ್ವರ ಕಡಿಮೆಯಾದ್ದರಿಂದ  ನಾಳೆ ಸ್ಕೂಲಿಗೆ ಹೋಗಬಹುದು ಅನ್ನಿಸಿತು.. ಆದರೆ ಬೆಳಗ್ಗೆ ಮತ್ತೆ ಜ್ವರ. ಥರ್ಮಾಮೀಟರ್ ನೂರಾ ಮೂರು ಡಿಗ್ರೀ ತೋರಿಸುತ್ತಿತ್ತು..
ಇವರು ಇವತ್ತು ಸ್ಕೂಲಿಗೆ ರಜಾ ಮಾಡು ಡಾಕ್ಟರ್ ಹತ್ತಿರ ಹೋಗೋಣ ಎಂದರು.  ನನಗೂ ಅದೇ ಸರಿ ಅನಿಸಿತು.  ಇವರ ಆಫೀಸಿಗೆ ಸೇರಿದಂತೇ ಇರುವ  ಹೆಲ್ತ್ ಸೆಂಟರ್ಗೆ ಯಾವಾಗಲೂ ನಾವು ಹೋಗುವುದು.  ಅಲ್ಲಿನ ಡಾಕ್ಟರ್ರುಗಳೆಲ್ಲ ನನಗೆ ಚೆನ್ನಾಗೆ ಪರಿಚಯ. 
 ನಾವು ಡಿಸ್ಪೆನ್ಸರಿ ತಲುಪಿದಾಗ ಬೆಳಗ್ಗೆ ಎಂಟು ಗಂಟೆ. ಇವರು “ನೀನು ಇಲ್ಲೇ ಕೂತಿರು ನಾನು ಸೈನ್ ಮಾಡಿ  ಬರ್ತೀನಿ ...” ಅಂತ ಹೋದರು.  ಇಡೀ ಕಟ್ಟಡದಲ್ಲಿ  ಪೇಷಂಟ್ ಅಂತ ನಾನೊಬ್ಬಳೇ.. ಉಳಿದ ಸಿಬ್ಬಂದಿಗಳು ಒಬ್ಬೊಬ್ಬರಾಗಿ ಬರ್ತಿದ್ದರು.. ಕೆಲವರು  ರೂಮುಗಳ ಬಾಗಿಲುಗಳನ್ನು ತೆರೆದು ಅಂದಿನ  ಕೆಲಸಗಳ ಸಿದ್ಧತೆ ಮಾಡಿಕೊಳ್ಳುತ್ತಿದ್ದರು.. ಡಾಕ್ಟರ್ ಗಳು ಬರುವುದು ಎಂಟೂ ಮುಕ್ಕಾಲರಿಂದ ಒಂಬತ್ತು ಗಂಟೆಗೆ ಅಂತ ಗೊತ್ತಿತ್ತು.
 ಅಲ್ಲಿರುವ ನಾಲ್ಕು ಜನ ಡಾಕ್ಟರ್ ಗಳಲ್ಲಿ ಒಬ್ಬರು ಲೇಡಿ ಡಾಕ್ಟರ್. ನಾನು  ಯಾವಾಗಲೂ ಅವರ ಬಳಿಯೇ ಹೋಗೋದು. ಯಾಕೋ ಪುರುಷ ಡಾಕ್ಟರ್ ಗಳ ಬಳಿ ಹೋಗಲು ನನಗೆ ಅಷ್ಟು ಕಂಫರ್ಟ್ ಅನಿಸೋಲ್ಲ..  ಹಾಗಾಗಿ ಲೇಡೀ ಡಾಕ್ಟರ್  ಕೊಠಡಿಯ ಬಳಿ ಕುಳಿತೆ. ನಿಧಾನವಾಗಿ  ಪೇಶಂಟುಗಳು ಬರಲಾರಂಭಿಸಿದ್ದರು. ಇದ್ದಕ್ಕಿಂದ್ದಂತೇ ನನ್ನ ನೋಟ   ಆ ಲೇಡಿ ಡಾಕ್ಟರರ  ರೂಮಿನ ಮುಚ್ಚಿದ್ದ ಬಾಗಿಲ ಮೇಲೆ ಹರಿಯಿತು.. ಅಯ್ಯೋ ಹರಿಯೇ!     “ ಡಾಕ್ಟರ್ ರಜೆಯಲ್ಲಿದ್ದಾರೆ ”.ಎಂಬ ಬೋರ್ಡು ಅಲ್ಲಿ  ಆರಾಮವಾಗಿ ತೂಗಾಡುತ್ತಿತ್ತು.. ಇನ್ನೇನು ಮಾಡುವುದು. ಬೇರೆ ಡಾಕ್ಟರರ ಬಳಿ ಹೋಗದೇ ವಿಧಿಯಿರಲಿಲ್ಲ.. ಜ್ವರ ಸುಡುತ್ತಿತ್ತು.
 ಅವತ್ತು ಸೋಮವಾರವಾದ್ದರಿಂದ ಜಾಸ್ತಿ ಜನ  ಪೇಶಂಟುಗಳಿದ್ದರು.  ನಾನು ಎಲ್ಲಗಿಗಿಂತಾ ಮೊದಲೇ ಬಂದದ್ದರಿಂದ ನಾನು ಮೊದಲು ಡಾಕ್ಟರನ್ನು ನೋಡುವುದು.. ಅಲ್ಲಲ್ಲ.. ನನ್ನನ್ನೇ ಮೊದಲು ಡಾಕ್ಟರ್ ಪರೀಕ್ಷಿಸುವುದು ನ್ಯಾಯಸಮ್ಮತವೆಂದು. ನನಗೆ ತುಂಬಾ ಜ್ವರ ಇದ್ದುದರಿಂದ ನನಗೆ ನಾನೇ ಆದ್ಯತೆ ನೀಡಿಕೊಳ್ಳುವುದು ಧರ್ಮ ಸಮ್ಮತವೆಂದು ಮನಸ್ಸು ಹೇಳಿದರಿಂದ ನಾನು  ಡಾಕ್ಟರ್  ಕೊಠಡಿಯ ಬಾಗಿಲ ಬಳಿ ನಿಂತೆ   ಅವರು ಬಂದ ತಕ್ಷಣವೇ   ನಾನು ಹೋಗಬಹುದು.  ಬೇಗ ಔಷಧಿ ತಗೊಂಡು ಮನೆಗೆ ಹೋಗಬಹುದು ಅಂತ ಸುಸ್ತಾಗ್ತಿದ್ದರೂ ಅಲ್ಲೇ ನಿಂತೆ. ಯಾಕೆಂದರೆ ನಾನೇನಾದರೂ ಎಲ್ಲಾ ಪೇಷಂಟ್ ಗಳ. ಜೊತೆ ಕುಳಿತರೆ  ನನ್ನ  ಆಲೋಚನೆಗಳಲ್ಲೇ ಮುಳುಗಿ ಹೋಗ್ತೀನಿ..  ಕಡೆಗೆ ತುಂಬಾ ತಡವಾಗುತ್ತದೆ ಅಂತ ಗೊತ್ತಿತ್ತು..
 ಅದಾಗಿ ಸ್ವಲ್ಪ ಸಮಯದಲ್ಲೇ ಒಬ್ಬರು  ಆ ರೂಮಿನ ಒಳಗೆ ಹೋಗಲು ಯತ್ನಿಸಿದರು. ಅರೇ ನಾನು  ಮೊದಲು ಹೋಗಬೇಕೆಂದು ಬಾಗಿಲಲ್ಲೇ ಪೆಡಂಭೂತದ ಥರ ನಿಂತಿರುವಾಗ, ಇಷ್ಟೊಂದು ಜನ ಕಾಯುತ್ತಿರುವಾಗ ಹೀಗೆ ನುಗ್ತಿದಾರಲ್ಲ ಅಂತ ಅಚ್ಚರಿಯಾದರೂ  ಅವರು ಹೊಸಬರಿರಬೇಕು ಅಂತ “ ಸರ್, ಇನ್ನೂ ಡಾಕ್ಟರ್ ಬಂದಿಲ್ಲ.. ಅಲ್ಲಿ ಕುಳಿತು ಕಾಯಿರಿ.. ನಿಮ್ಮ ಸರದಿ ಬಂದಾಗ  ಬರಬಹುದು..” ಎಂದು ವಿನಯವಾಗೇ ಹೇಳಿದೆ..
 ಆದರೆ ಅವರು “ ನಾನೆ ಡಾಕ್ಟರ್.. ” ಅಂತ ನಗುತ್ತಾ ಹೇಳಿದರು..  ಅವರ ಮುಖ ಮತ್ತೆ ಗಮನಿಸಿದೆ.. ‘ ಛೇ ಇವರು ಹೇಗೆ ಡಾಕ್ಟರ್ ಆಗಲಿಕ್ಕೆ ಸಾಧ್ಯ? ನಾನು ಡಾಕ್ಟರ್ ಇಲ್ಲ ಅಂತ ಹೇಳಿದ್ದನ್ನು ನಂಬದೇ ಹೀಗೆ ಹೇಳ್ತಿರಬಹುದು..” ಅಂತ ಮನಸ್ಸಿನಲ್ಲೇ ಯೋಚಿಸಿ.. “ ಇಲ್ಲ ಸರ್.. ನಿಜವಾಗಿಯೂ ಒಳಗೆ ಡಾಕ್ಟರ್ ಇಲ್ಲ.. ಅವರು ಬಂದಮೇಲೆ ನಾನು ಮೊದಲು ಹೋಗ್ತೀನಿ..  ಬೆಳಗ್ಗೆ ಎಂಟು ಗಂಟೆಗೇ ಬಂದು ಕಾಯ್ತಿದೀನಿ.. ಪ್ಲೀಸ್ ಅಲ್ಲಿ ಕೂತ್ಕೊಳ್ಳಿ...”   ಎಷ್ಟೇ ನಯವಾಗಿ ಹೇಳಿದರೂ ನನ್ನ ಕೊನೆಯ ಮಾತಿನಲ್ಲಿ ಅಸಮಾಧಾನ . ಧ್ವನಿತವಾಗೋದನ್ನು ತಡೆಯಲಾಗಲಿಲ್ಲ .  ಅವರು ಮತ್ತೆ “ ನಾನೆ ಡಾಕ್ಟರ್..ಮೇಡಂ ” ಅಂದರು.
 ಅಷ್ಟು ಹೊತ್ತಿಗೆ ಇವರು ಬಂದರು.. ನಾನು ಬಾಗಿಲಲ್ಲಿ ನಿಂತಿದ್ದನ್ನು ನೋಡಿ “ ಏನಾಯ್ತು” ಅಂತ ಕೇಳಿದ್ರು..  ನಾನು ,“ಏನಿಲ್ಲ.. ಇನ್ನೂ ಡಾಕ್ಟರ್ ಬಂದಿಲ್ಲ.. ”ಅಂದೆ..ಆಗ   ಇವರು,“ ಇವರೇ ಡಾಕ್ಟರ್...”  ಅಂತ   ಹೇಳಿದರು.. ನನಗೆ ನಂಬಲಾಗಲಿಲ್ಲ..   ಆ ಆಸ್ಪತ್ರೆಯಲ್ಲಿ ಎಲ್ಲಾ ಪುರುಷ ಡಾಕ್ಟರುಗಳೂ ಬಾಲ್ಡಿಗಳು.. ಇವರಿಗೆ ನೋಡಿದರೆ ತಲೆ ತುಂಬಾ ಕೂದಲಿದೆ.. ಇವರು ಡಾಕ್ಟರ್ ಆಗಲಿಕ್ಕೆ ಹೇಗೆ ಸಾಧ್ಯ? “ ಎಂಬ ಅಚ್ಚರಿಯ ಜೊತೆ ಡಾಕ್ಟರನ್ನೇ ನೀವು ಡಾಕ್ಟರ್ ಅಲ್ಲ ಅಂತ ವಾದಿಸಿ ಹೊರಗೇ ನಿಲ್ಲಿಸಿದ್ದಕ್ಕೆ ತುಂಬಾ ಲಜ್ಜೆಯಾಯ್ತು..
ಅಲ್ಲಿದ್ದ ಹಳೆಯ ಡಾಕ್ಟರ್ ಗೆ ವರ್ಗವಾಗಿ ಆ ಜಾಗಕ್ಕೆ ಈ ಹೊಸ ಡಾಕ್ಟರ್ ಬಂದದ್ದದ್ದು ನನಗೆ ಗೊತ್ತಿರಲಿಲ್ಲ
 ಅವರು ನನ್ನ ಟೆಸ್ಟ್ ಮಾಡಿ ಔಷಧಿ ಕೊಟ್ಟ ಮೇಲೆ ಕೇಳಿದ್ರು ಯಾಕೆ ನಿಮಗೆ ನಾನು ಡಾಕ್ಟರ್ ಅಂತ ನಂಬಿಕೆ ಬರಲಿಲ್ಲ? ಅಂತ ಅದಕ್ಕೆ ನಾನು ನೆಮ್ಮ ತಲೆಯಲ್ಲಿ ಕೂದಲಿದೆಯಲ್ಲಾ.. ಆ ಆಸ್ಪತ್ರೆಯಲ್ಲಿ ಎಲ್ಲಾ ಪುರುಷ ಡಾಕ್ಟರುಗಳೂ ಬಾಲ್ಡಿಗಳು.  ಅದಕ್ಕೆ” ಎಂದು ಮುಗ್ಧವಾಗಿ  ಹೇಳಿದಾಗ ಇಬ್ಬರೂ ಜೋರಾಗಿ ನಕ್ಕಿದ್ದರು..
ಇತ್ತೀಚೆಗೆ ಅದೇ ಡಾಕ್ಟರ್ ಯಾವುದೋ ಸಮಾರಂಭದಲ್ಲಿ ಸಿಕ್ಕಾಗ ಅವರೂ  ಸ್ವಲ್ಪ ಬಾಲ್ಡಿಯಾಗಿದ್ದನ್ನು ಗಮನಿಸಿದೆ.. ಅವರು ಅದು ಹೇಗೆ ಆ ಪ್ರಸಂಗವನ್ನು ನೆನಪಿಟ್ಟಿದರೋ ಕಾಣೆ. ನನ್ನ ಹತ್ತಿರ ಬಂದು “ಮೇಡಮ್ ನಾನು ಈಗೀಗ ಡಾಕ್ಟರ್ ಆಗ್ತಿದೀನಿ  .. ಅಂದರ ನೋಡಿ ..”ಅಂತ ತಮ್ಮ ತಲೆಯ ಮೇಲೆ ಕೈಯ್ಯಾಡಿಸುತ್ತಾ ಹೇಳಿದಾಗ ನನಗೆ  ಲಜ್ಜೆಯೂ ಆಯ್ತು ನಗುವೂ ಬಂತು..

ವಸುಮತಿ
೨೩-೭-೧೮
 ಆಶಾಢ ಏಕಾದಶಿ
ಸೋಮವಾರ