ಶನಿವಾರ, ಅಕ್ಟೋಬರ್ 19, 2013

ಯಾರು ಕುರುಡರು?

ಸುಮಾರು ಒಂದು ತಿಂಗಳ ಹಿಂದೆ ನಡೆದ ಘಟನೆ.
 ಸಂಜೆ ಅಡುಗೆಗೆ ಉಪ್ಪು ಮುಗಿದದ್ದು ಗಮನಕ್ಕೆ ಬಂದು ತರಲು ಸಮೀಪದ ಅಂಗಡಿಗೆ ಹೋದೆ. ಹಿಂತಿರುಗಿ ಬರುವಾಗ ಬಂದ ವ್ಯಾನೊಂದರಿಂದ ಅಂಧ ಹುಡುಗಿಯೊಬ್ಬಳು ಇಳಿದು ಹೋಗುವುದು ಕಾಣಿಸಿತು. ತಕ್ಷಣ ನನಗೆ ಅವಳಿಗೆ ಸಹಾಯ ಮಾಡುವ ಮನಸ್ಸಾಗಿ ಅವಳ ಬಳಿಹೋಗಿ `` ಎಲ್ಲಿಗೆ ಹೋಗಬೇಕಮ್ಮ? ಸಹಾಯ ಮಾಡ್ಲಾ?' ಅಂತ ಕೇಳಿ ಅವಳ ಅನುಮತಿಗೂ ಕಾಯದೇ ಅವಳನ್ನು ಪಕ್ಕದ ಬೀದಿಯಲ್ಲಿರುವ ಅವಳ ಮನೆಗೆ ಬಿಟ್ಟುಬಂದಾಗ ಏನೋ ಪುಣ್ಯ ಕಾರ್ಯ ಮಾಡಿದ ತೃಪ್ತಿ ಉಂಟಾಯ್ತು.
ಮಾರನೇದಿನದಿಂದ ಏನೂ ಕೆಲಸ ಇಲ್ಲದಿದ್ದರು ಆಸಮಯಕ್ಕೆ ಹೋಗಿ ಅವಳೊಂದಿಗೆ ಮಾತಾಡುತ್ತಾ ಅವಳ ಮನೆ ತಲುಪಿಸತೊಡಗಿದೆ. ಅವಳು ಒಬ್ಬ ಹಾಡುಗಾರ್ತಿ. ಪ್ರತಿ ದಿನಾ ಒಂದು ಪ್ಲೇ ಹೋಂ ಗೆ ಹೋಗಿ ಮಕ್ಕಳಿಗೆ ಹಾಡಲು ಕಲಿಸುತ್ತಾಳೆ ಅಂತ ಗೊತ್ತಾಯ್ತು.  ಒಂದು ದಿನ ಅವಳನ್ನು ನಮ್ಮ ಮನೆಗೂ ಕರೆತಂದಿದ್ದೆ.
ಅದೇ ಮಹಾಲಯ ಅಮಾವಾಸ್ಯೆಯ ಹಿಂದಿನ ದಿನ ಅಂತ ಕಾಣುತ್ತೆ, ಅವಳನ್ನು ಕೈಹಿಡಿದು ಕರೆದುಕೊಂಡು ಹೋಗುವಾಗ `ಢಮಾರ್.... 'ಅನ್ನೋ ಸದ್ದಿನೊಂದಿಗೆ ಟ್ರಾನ್ಸ್ ಫಾರ್ಮರ್ ಸಿಡಿದ ಸದ್ದಾಗಿ ಎಲ್ಲಾ ಕಡೆ ಕರೆಂಟ್ ಹೋಯ್ತು. ಗಾಢಾಂಧಕಾರ. ಹೆಜ್ಜೆ ಮುಂದಿಡಲೂ ಏನೇನೂ ಕಾಣಿಸದು. `` ಏನಾಯ್ತು ಮೇಡಮ್? ಕರೆಂಟ್ ಹೋಯ್ತಾ?.....' ಅವಳು ಕೇಳಿದ್ಲು. ನಾನು `ಹೌದಮ್ಮ . ಏನೂ ಕಾಣ್ತಿಲ್ಲ. ನಿನ್ನ ಹೇಗೆ ಮನೆ ತಲುಪಿಸ್ಲಿ? ನಾನು ಹೇಗೆ ಮನೆಗೆ ಹೋಗ್ಲಿ ಗೊತ್ತಾಗ್ತಿಲ್ಲ...' ಅಂದೆ ಯೋಚ್ನೆ ಮಾಡ್ಬೇಡಿ ನನ್ನ ಕೈ ಹಿಡ್ಕೊಳ್ಳಿ ಅಂತ ಅವಳು ನನ್ನ ಕೈ ಹಿಡಿದು ನನ್ನ ಮನೆಗೆ ಕರೆತಂದಳು. ಎರಡೂ ಕಣ್ಣಿರೋ ನನ್ನ, ಅಂಧ ಬಾಲಕಿ ಕೈ ಹಿಡಿದು ನಡೆಸುವಾಗ ನಾಚಿಕೆಯಿಂದ ನನ್ನ ಮುಖವನ್ನ ಎಲ್ಲಿ ಅಡಗಿಸಿಕೊಳ್ಳಲಿ ಅನ್ನಿಸಿತು.
ಮನೆ ತಲುಪಿದ ಮೇಲೆ `ನೀವೇನೂ ಬರಬೇಡಿ ಮ್ಯಾಡಮ್ ನಾನೇ ಹೋಗ್ತೀನಿ. ನಿಮ್ಗೆ ಕೆಲಸ ಇರಬಹುದು.....'ಎಂದು ಆತ್ಮವಿಶ್ವಾಸದಿಂದ ಹೊರಟ  ಅವಳಿಗೆ ಒಂದು ಟಾರ್ಚ್ ಕೊಟ್ಟು ಕಳಿಸಿದೆ.

ಭಾನುವಾರ, ಅಕ್ಟೋಬರ್ 6, 2013

``ಮಿಳ್ಳೆ ವಾದ ''

Spoonerism(transposition of initial sound of spoken word) ಗೆ ಕನ್ನಡದಲ್ಲಿ ಸರಿಯಾದ ಪದ ಸಿಗ್ಲಿಲ್ಲ. ಅದಕ್ಕೆ ಅದನ್ನು `ಮಿಳ್ಳೆ ವಾದ' ಅಂತ ಕರೀತಿದೀನಿ.(spoon= ಮಿಳ್ಳೆ   ism= ವಾದ.ಇಂಗ್ಲಿಷ್ ನಿಂದ ಕನ್ನಡಕ್ಕೆ ತರುವಾಗ  neri ಉದುರಿ ಹೋಗ್ಬಿಡ್ತು. )
೧. ತಾತನ ಭೂತ- ಭೂತನ ತಾತ
೨. ಕಮ್ಮಾರನ ಚರ್ಮ -ಚಮ್ಮಾರನ ಕರ್ಮ
೩. ಪೆಟ್ಟಿಗೆಯಂತಹ ಕೊಟ್ಟಿಗೆ- ಕೊಟ್ಟಿಗೆಯಂತಹ ಪೆಟ್ಟಿಗೆ
೪. ಗುಡುಗುವಾಗ ನಡುಗಬೇಡ- ನಡುಗುವಾಗ ಗುಡುಗಬೇಡ
೫. ನಗೆಗಾರನ ಕಂಡರೆ ಹಗೆ ಯಾಕೆ? ಹಗೆಗಾರನ ಕಂಡರೆ ನಗೆ ಯಾಕೆ?
೬. ಕುಕ್ಕನ್ನು ಬುಕ್ ಮಾಡು ಅಂದ್ರೆ ಬುಕ್ಕನ್ನು ಕುಕ್ ಮಾಡಿದ್ರಂತೆ!
೭.` ಕ್ಷಣದಲ್ಲಿ ಹೊಳೆಯುವಂತೆ ಮಾಡ್ತ್ತೇನೆ ಬನ್ನಿ' ಅಂತ ಬ್ಯೂಟಿ ಪಾರ್ಲರ್ನವಳು ಹೇಳಿದ್ದು ಅವನಿಗೆ `ಹಣದಲ್ಲಿ ಕೊಳೆಯುವಂತೆ ಮಾಡುತ್ತೇನೆ ಬನ್ನಿ' ಅಂತ ಕೇಳಿಸಿದ್ಯಾಕೆ?
೮. ಬೆಳೆಯುತ್ತಿರುವ ಕಳೆ- ಕಳೆಯುತ್ತಿರುವ ಬೆಳೆ
೯. ಪ್ರಮುಖವಾದ ವಿಚಾರ- ವಿಮುಖವಾದ ಪ್ರಚಾರ
೧೦. ಬೆಂಗಳೂರಿನ ಮಂಕಿ- ಮಂಗಳೂರಿನ ಬೆಂಕಿ
೧೧. ಬಳಸಿದ ಹಾಡು- ಹಲಸಿದ ಬಾಡು
೧೨. ವಿಧಾನ ಸೌಧದ ನಿಕಟತೆ-ನಿಧಾನ ಸೌಧದ ವಿಕಟತೆ
೧೩.ತಿದ್ದಲಾಗದ ಗುಮ್ಮ -ಗುದ್ದಲಾಗದ ತಿಮ್ಮ

೧೪. ಕಿತ್ತಾಡುವ ಸುಂದರಿ- ಸುತ್ತಾಡುವ ಕಿಂದರಿ

ಭಾನುವಾರ, ಸೆಪ್ಟೆಂಬರ್ 29, 2013

ಸಾತ್ವಿಕ ಮತ್ತು ತಾಮಸ ಧೈರ್ಯಗಳು

ಧೈರ್ಯಗಳಲ್ಲಿ ಎರಡು ವಿಧಗಳಿವೆ. ಒಂದನೆಯದು ಮೃಗೀಯ ಮತ್ತು ತಾಮಸ. ಎರಡನೆಯದು ದೈವಿಕ ಮತ್ತು ಸಾತ್ವಿಕ. ತಾಮಸ ಧೈರ್ಯ ರಾಗ ಮೂಲವಾದುದು ; ಕ್ಷಣಿಕ ಉದ್ರೇಕಗಳಿಂದ ಉದ್ದೀಪನವಾದುದು, ಅವಿವೇಕವಾದುದು. ಸಾತ್ವಿಕ ಧೈರ್ಯ ನೀತಿಮೂಲವಾದುದು. ಮೊದಲನೆಯದು ಹುಲ್ಲು ಬೆಂಕಿಯಂತೆ ; ಎರಡನೆಯದು ಕಲ್ಲಿದ್ದಲ ಬೆಂಕಿಯಂತೆ. ಮೃಗೀಯ ಧೈರ್ಯ ದೇಹ ಬಲದ ಮೇಲೆ ನಿಂತಿದೆ. ದೈವಿಕ ಧೈರ್ಯ ಆತ್ಮಬಲದ ಮೇಲೆ ನಿಂತಿದೆ. ಮೃಗೀಯ ಧೈರ್ಯ ತನಗಿಂತಲೂ ಬಲವತ್ತರವಾದ ಪ್ರತಿಭಟನೆಯಿಂದ ಕುಗ್ಗಿಹೋಗುತ್ತದೆ. ಸಾತ್ವಿಕ ಧೈರ್ಯ ಕಷ್ಟ ಸಂಕಷ್ಟಗಳ ಪ್ರತಿಭಟನೆಗಳಿಂದ ಮತ್ತಷ್ಟು ಹಿಗ್ಗಿ ಉಜ್ವಲವಾಗುತ್ತದೆ. ಮೊದಲನೆಯದಕ್ಕೆ ಪ್ರಾಣ ಭಯವಿದೆ ; ಎರಡನೆಯದಕ್ಕೆ ಅದಿಲ್ಲ. ಮೊದಲನೆಯದು ಕೇಡಿಯಾಗಿರುವ ಮಾರು ವೇಷದ ಹೇಡಿತನ. ಎರಡನೆಯದು ಶಿಲುಬೆಗೇರುವ ಏಸುಕ್ರಿಸ್ತನ ಅಪಾರ ಸಾಮರ್ಥ್ಯ.....'
ಇದು ನಾನೀಗ ಅನೇಕ ದಿನಗಳ ನಂತರ ಮತ್ತೊಮ್ಮೆ ಓದುತ್ತಿರುವ  ನಮ್ಮ ರಾಷ್ಟ್ರಕವಿ ಕುವೆಂಪುರವರ  `ಕಾನೂರು ಹೆಗ್ಗಡತಿ'  ಕೃತಿಯಲ್ಲಿ ನನ್ನ ಮನಸ್ಸನ್ನು  ಬಹುವಾಗಿ ಆಕರ್ಷಿಸಿದ ಹಲವಾರು ನುಡಿಮುತ್ತುಗಳಲ್ಲಿ  ಒಂದು.
ಇಲ್ಲಿ ಸಹ ತುಲನೆ ಇದೆ. ರಸ ಋಷಿಗಳು ಇಲ್ಲಿ ಸಾತ್ವಿಕ ಮತ್ತು ತಾಮಸ ಧೈರ್ಯಗಳ ನಡುವಿನ ವ್ಯತ್ಯಾಸವನ್ನು. ಎಷ್ಟು ಸುಂದರವಾಗಿ  ತೋರಿಸಿ ಕೊಟ್ಟಿದ್ದಾರಲ್ಲವೇ? ಯಾವುದು  ಸರಿಯಾದ ಧೈರ್ಯ ಮತ್ತು ಅದು ಯಾಕೆ ಸರಿ ಎಂದು ಇಷ್ಟು ಮನ ಮುಟ್ಟುವ ಹಾಗೆ, ಯಾವುದೇ ಸಂದೇಹಕ್ಕೆ ಆಸ್ಪದವಿರದ ಹಾಗೆ?

ಈ ಕೃತಿಯಲ್ಲಿ ಇಂಥ ಮನಕಲಕುವ,  ಮನ ಮುಟ್ಟುವ  ಅಲ್ಲದೆ ಮನಸ್ಸು ಗೊಂದಲಕ್ಕೊಳಗಾದಾಗ ಕೈ ದೀಪವಾಗಿ ದಾರಿ  ತೋರುವ  ಎಷ್ಟೋ ನುಡಿಮುತ್ತುಗಳಿವೆ......

ಶನಿವಾರ, ಸೆಪ್ಟೆಂಬರ್ 14, 2013

ಅಸಹಾಯಕತೆ

ಈ ಅಸಹಾಯಕತೆ ಎಂಬುದು ಎಷ್ಟೊಂದು ನೋವು ಕೊಡುತ್ತದೆ ಅನ್ನೋದು ನನಗೆ ನೆನ್ನೆ ಆದ ಅನುಭವದಿಂದ ಗೊತ್ತಾಯ್ತು.

ನಾನು ಶಾಲೆ ಮುಗಿಸಿಕೊಂಡು ಬರುವಾಗ ಸ್ವಲ್ಪ ಅಗತ್ಯ ವಸ್ತುಗಳನ್ನು ಖರೀದಿ ಮಾಡಬೇಕಾದ್ದರಿಂದ ಅರ್ಧ ದಾರಿಲಿ ಆಟೋದಿಂದ ಇಳಿದು ನನ್ನ  ಕೆಲಸ ಮುಗಿಸಿಕೊಂಡು ಮನೆಗೆ ಹೊರಟೆ. ಮುಖ್ಯ ರಸ್ತೆಯ ವಾಹನ ದಟ್ಟಣೆ ಮತ್ತು ಪಲ್ಯೂಶನ್ ಗಳಿಂದ ಬಚಾವಾಗಲು  ಒಳ ಹಾದಿಯಲ್ಲಿ ಹೋಗುವುದೆಂದು ತೀರ್ಮಾನಿಸಿ ಹೊರಟೆ.
ಒಂದು ಸ್ವಲ್ಪದೂರ ಸಾಗುವಷ್ಟರಲ್ಲಿ ಮಗುವೊಂದರ ಆಕ್ರಂದನ, ಹಿರಿಯರೊಬ್ಬರ ಕಿರುಚಾಟ ಕೇಳಿತು. ಮುಂದೆ ಹೋಗಿ ನೋಡಿದಾಗ ತಂದೆಯೊಬ್ಬರು ಮಗುವನ್ನು ಹಿಗ್ಗಾ ಮುಗ್ಗಾ ಥಳಿಸುತ್ತಿದ್ದರು. ಮಗು `` ಸ್ಕೂಲ್.... ಸ್ಕೂಲ್ ....''ಅಂತ ಆಳುತ್ತಾ ದೈನ್ಯವಾಗಿ ನನ್ನನ್ನು ನೋಡಿತು.
ಅದೇ ಮಗುವನ್ನು ಈಗ್ಗೆ ಎಂಟು -ಹತ್ತು ದಿನಗಳ ಹಿಂದೆ ಇದೇ ದಾರಿಯಲ್ಲಿ ಬಂದಾಗ ನಾನು ನೋಡಿದ್ದೆ. ಹರುಕು, ಹಳೆ ಬಟ್ಟೆ ತೊಟ್ಟಿದ್ದರೂ ಅದರ ಕಣ್ಣುಗಳಲ್ಲಿದ್ದ ಮಿಂಚು ನನ್ನನ್ನು ಸೆಳೆದಿತ್ತು. ಅವಳನ್ನು ಹತ್ತಿರ ಕರೆದು, ನನ್ನ ಬ್ಯಾಗಿನಲ್ಲಿದ್ದ ಚಾಕ್ಲೇಟನ್ನು ಅವಳ ಕೈಗಿತ್ತು `` ಯಾವ ಸ್ಕೂಲಿಗೆ ಹೋಗ್ತೀಯಾ ಪುಟ್ಟಿ? ನಿನ್ನ ಹೆಸರೇನು.....? ಅಂತ ಕೇಳಿದ್ದೆ. ಆ ಮಗು `` ಸ್ಕೂಲಿಗೆ ಹೋಗಲ್ಲಾ ಆಂಟಿ. ಮನೆ ಕೆಲ್ಸ ಮಾಡ್ತೀನಿ....'' ಅಂದಾಗ  ನಾನು ``  ನೀನು ಸ್ಕೂಲಿಗೆ ಹೋಗ್ಬೇಕಮ್ಮಾ.ನಿಮ್ಮ ಅಪ್ಪ ಅಮ್ಮಂಗೆ ಕೇಳು  ಸ್ಕೂಲಿಗೆ ಸೇರ್ಸಿ ಅಂತ. ಹಟ ಮಾಡಿ ಆದ್ರೂ ಸ್ಕೂಲಿಗೆ ಸೇರ್ಬೇಕು. ಆಯ್ತಾ.....ನಿಂಗೆ ಪುಸ್ತಕ ಪೆನ್ಸಿಲ್ಲು ಎಲ್ಲಾ ನಾನು ಕೊಡಿಸ್ತೀನಿ.....?ಅಂತ ಅವಳ ತಲೆ ಸವರಿ ಏನೋ ದೊಡ್ದ ಕೆಲಸ ಮಾಡಿದ ತೃಪ್ತಿಯಿಂದ ಮನೆ ಸೇರಿದ್ದೆ.
ನನ್ನನ್ನು ನೋಡಿ ಮಗುವಿನ ಅಳು ಇನ್ನೂ ಹೆಚ್ಚಾಯ್ತು. ಅವಳನ್ನು ಬಡಿಯುತ್ತಿದ್ದ ಅವಳ ತಂದೆ ನನ್ನನ್ನು ನೋಡಿದರು. ಅಬ್ಬಾ! ಆ ಕೆಂಪು ಕಣ್ಣುಗಳ ಕ್ರೂರ ನೋಟಕ್ಕೆ ನಾನು ನಡುಗಿ ಹೋದೆ! ಆತ ಬಹುಶ: ಕುಡಿದಿದ್ದಿರಬಹುದು.   ಅವರಿಗೆ ``ಮಗು ಸ್ಕೂಲ್ಗೆ ಸೇರಿಸಿ ಅಂತ ಹಟ ಮಾಡುವಂತೆ ಕುಮ್ಮಕ್ಕು ಕೊಟ್ಟಿದ್ದು ಇವಳೇ.....'' ಅಂತ ಗೊತ್ತಾಯಿತೇನೋ. ನನ್ನನ್ನು ದುರುಗುಟ್ಟಿಸಿಕೊಂಡು ನೋಡುತ್ತಾ   ಮಗುವಿನ ಕೆನ್ನೆಗೆ ಛಟಾರನೆ ಹೊಡೆದು, ತಿರಸ್ಕಾರ ಕೋಪಗಳಿಂದ ನನ್ನತ್ತ ನೋಡಿ, ನನಗೆ ಹೋಗುವಂತೆ ಸನ್ನೆ ಮಾಡಿದರು. ಆತ ನನಗೇ ಹೊಡೆದಂತೆ ಭಾಸವಾಗಿ ಅಲ್ಲಿಂದ ಹೊರಟೆ. ಭಯ ಉದ್ವೇಗಗಳಿಂದ ನನ್ನ ಎದೆ ಬಡಿತ ನನಗೇ ಕೇಳುವಂತೆ ಅನ್ನಿಸಿತು.
ದಾರಿಯಲ್ಲಿ ಅಳುವುದು ಸರಿ ಅಲ್ಲ ಎಂದು ಕರ್ಚೀಫ್ ನಿಂದ ಬಾಯನ್ನು ಭದ್ರವಾಗಿ ಮುಚ್ಚಿಕೊಂಡು, ಸರಸರ ಮನೆ ಸೇರಿ, ಮನಸ್ಸು ಹಗುರವಾಗುವ ವರೆಗೂ ಬಿಕ್ಕಿ ಬಿಕ್ಕಿ ಅತ್ತೆ.........