ಭಾನುವಾರ, ಸೆಪ್ಟೆಂಬರ್ 29, 2013

ಸಾತ್ವಿಕ ಮತ್ತು ತಾಮಸ ಧೈರ್ಯಗಳು

ಧೈರ್ಯಗಳಲ್ಲಿ ಎರಡು ವಿಧಗಳಿವೆ. ಒಂದನೆಯದು ಮೃಗೀಯ ಮತ್ತು ತಾಮಸ. ಎರಡನೆಯದು ದೈವಿಕ ಮತ್ತು ಸಾತ್ವಿಕ. ತಾಮಸ ಧೈರ್ಯ ರಾಗ ಮೂಲವಾದುದು ; ಕ್ಷಣಿಕ ಉದ್ರೇಕಗಳಿಂದ ಉದ್ದೀಪನವಾದುದು, ಅವಿವೇಕವಾದುದು. ಸಾತ್ವಿಕ ಧೈರ್ಯ ನೀತಿಮೂಲವಾದುದು. ಮೊದಲನೆಯದು ಹುಲ್ಲು ಬೆಂಕಿಯಂತೆ ; ಎರಡನೆಯದು ಕಲ್ಲಿದ್ದಲ ಬೆಂಕಿಯಂತೆ. ಮೃಗೀಯ ಧೈರ್ಯ ದೇಹ ಬಲದ ಮೇಲೆ ನಿಂತಿದೆ. ದೈವಿಕ ಧೈರ್ಯ ಆತ್ಮಬಲದ ಮೇಲೆ ನಿಂತಿದೆ. ಮೃಗೀಯ ಧೈರ್ಯ ತನಗಿಂತಲೂ ಬಲವತ್ತರವಾದ ಪ್ರತಿಭಟನೆಯಿಂದ ಕುಗ್ಗಿಹೋಗುತ್ತದೆ. ಸಾತ್ವಿಕ ಧೈರ್ಯ ಕಷ್ಟ ಸಂಕಷ್ಟಗಳ ಪ್ರತಿಭಟನೆಗಳಿಂದ ಮತ್ತಷ್ಟು ಹಿಗ್ಗಿ ಉಜ್ವಲವಾಗುತ್ತದೆ. ಮೊದಲನೆಯದಕ್ಕೆ ಪ್ರಾಣ ಭಯವಿದೆ ; ಎರಡನೆಯದಕ್ಕೆ ಅದಿಲ್ಲ. ಮೊದಲನೆಯದು ಕೇಡಿಯಾಗಿರುವ ಮಾರು ವೇಷದ ಹೇಡಿತನ. ಎರಡನೆಯದು ಶಿಲುಬೆಗೇರುವ ಏಸುಕ್ರಿಸ್ತನ ಅಪಾರ ಸಾಮರ್ಥ್ಯ.....'
ಇದು ನಾನೀಗ ಅನೇಕ ದಿನಗಳ ನಂತರ ಮತ್ತೊಮ್ಮೆ ಓದುತ್ತಿರುವ  ನಮ್ಮ ರಾಷ್ಟ್ರಕವಿ ಕುವೆಂಪುರವರ  `ಕಾನೂರು ಹೆಗ್ಗಡತಿ'  ಕೃತಿಯಲ್ಲಿ ನನ್ನ ಮನಸ್ಸನ್ನು  ಬಹುವಾಗಿ ಆಕರ್ಷಿಸಿದ ಹಲವಾರು ನುಡಿಮುತ್ತುಗಳಲ್ಲಿ  ಒಂದು.
ಇಲ್ಲಿ ಸಹ ತುಲನೆ ಇದೆ. ರಸ ಋಷಿಗಳು ಇಲ್ಲಿ ಸಾತ್ವಿಕ ಮತ್ತು ತಾಮಸ ಧೈರ್ಯಗಳ ನಡುವಿನ ವ್ಯತ್ಯಾಸವನ್ನು. ಎಷ್ಟು ಸುಂದರವಾಗಿ  ತೋರಿಸಿ ಕೊಟ್ಟಿದ್ದಾರಲ್ಲವೇ? ಯಾವುದು  ಸರಿಯಾದ ಧೈರ್ಯ ಮತ್ತು ಅದು ಯಾಕೆ ಸರಿ ಎಂದು ಇಷ್ಟು ಮನ ಮುಟ್ಟುವ ಹಾಗೆ, ಯಾವುದೇ ಸಂದೇಹಕ್ಕೆ ಆಸ್ಪದವಿರದ ಹಾಗೆ?

ಈ ಕೃತಿಯಲ್ಲಿ ಇಂಥ ಮನಕಲಕುವ,  ಮನ ಮುಟ್ಟುವ  ಅಲ್ಲದೆ ಮನಸ್ಸು ಗೊಂದಲಕ್ಕೊಳಗಾದಾಗ ಕೈ ದೀಪವಾಗಿ ದಾರಿ  ತೋರುವ  ಎಷ್ಟೋ ನುಡಿಮುತ್ತುಗಳಿವೆ......

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ