ಶುಕ್ರವಾರ, ಡಿಸೆಂಬರ್ 18, 2020
ಮಂಗಳವಾರ, ಡಿಸೆಂಬರ್ 15, 2020
ಬುಧವಾರ, ಅಕ್ಟೋಬರ್ 28, 2020
ಕೊನೆಯ ಕರ್ತವ್ಯ....
ನನ್ನ ತೀರಾ ಪರಿಚಿತರೊಬ್ಬರು ಆಸ್ಪತ್ರೆಯಲ್ಲಿ ದಾಖಲಾಗಿದ್ರು.. ಅವರನ್ನು ನೋಡಲು ಬೇಗ ಮನೆಯ ಕೆಲಸ ಮುಗಿಸಿ ಹೊರಟೆ..
ಇನ್ನೇನು ಆ ಆಸ್ಪತ್ರೆಯ ಬಾಗಿಲಲ್ಲಿ ಆಟೋದಿಂದ ಇಳೀಬೇಕು, ಆಗ ಆಕೆಯ ತಮ್ಮ ಬಂದು `` ಮ್ಯಾಡಂ, ಇಲ್ಲಿ ಆಗಲ್ಲ ಅಂತ ಬೇರೆ ಹಾಸ್ಪಿಟಲ್ ಗೇ ಕರ್ಕೋಡು ಹೋಗಿದಾರೆ.. ನೀವು ನನ್ ಹಿಂದೇ ಬನ್ನಿ...'' ಅಂತ ಅವರ ಟೂ ವೀಲರ್ ನಲ್ಲಿ ಹೋದರು..ನಾನು ಅದೇ ಆಟೋದಲ್ಲಿ ಹಿಂಬಾಲಿಸಿದೆ.. ಆಟೋದವನಿಗೆ ಹಣ ನೀಡಿ, ನಾ ಆಸ್ಪತ್ರೆಯ ಒಳಗೆ ಪ್ರವೇಶಿಸುವಷ್ಟರಲ್ಲಿ ಆತ ಎಲ್ಲೋ ಮಾಯವಾಗಿದ್ದ!..
ಅವನೆಲ್ಲಿ ಅಂತ ಅರಸುತ್ತಾ ಇದ್ದ ನನ್ನ ಬಳಿ ನರ್ಸ್ ಒಬ್ಬರು ಬಂದು`` ಸುಮಾ ಅಂದ್ರೆ ನೀವೇನಾ?'' ಅಂದ್ರು ನಾನು ಹೌದೆಂದು ತಲೆ ಆಡಿಸಿದೆ.. ೨೩ನೇ ನಂಬರ್ ಬೇಡ್ ನವರನ್ನು ತಾನೇ ನೀವು ನೋಡ್ಬೇಕು? ಬನ್ನಿ ಬೇಗ ಅವರ ಕಂಡೀಶನ್ ತುಂಬಾ ಕ್ರಿಟಿಕಲ್ ಆಗಿದೆ.. ಬೇಗ ಬನ್ನಿ ನಿಮ್ಮನ್ನೇ ಕಾಯ್ತಿದೀವಿ'' ಅಂದಾಗ ನನಗೆ ಶಾಕ್!! ಕಾಲುಗಳಲ್ಲಿ ನಡೆಯುವ ಶಕ್ತಿಯೇ ಕಳೆದು ಹೋದ ಭಾವ!
ಆಕೆ ಹೆಚ್ಚೂ ಕಡಿಮೆ ನನ್ನನ್ನು ಎಳೆದುಕೊಂಡು ಹೋಗಿ ಆ ೨೩ನೇ ಬೆಡ್ ಮುಂದೆ ನಿಲ್ಲಿಸಿದಳು.. ಅಲ್ಲಿ ಮಲಗಿದ್ದ ಕ್ಷೀಣ ಕಾಯದ ವ್ಯಕ್ತಿಗೆ`` ತಾತ ನಿಮ್ ಮಗಳು ಬಂದಿದಾರ್ '' ನೋಡಿ.. '' ಅಂದು ನನ್ ಕೈಯ್ಯನ್ನು ಆತನ ಕೈಯ್ಯಲ್ಲಿಟ್ಟಳು.. ನನಗೆ ಎಷ್ಟು ದಿಗ್ಭಮೆಯಾಗಿತ್ತು, ಎಂಥ ಅಯೋಮಯ ಸ್ಥಿತಿಯಲ್ಲಿದ್ದೆ ಎಂದರೆ ನಾ ಏನೊಂದೂ ಹೇಳದಾದೆ.. ಸುಮ್ಮನೇ ಅವರ ಪಕ್ಕ ಕುಳಿತೆ ....
ಆತ ನನ್ನ ಕೈಯನ್ನು ತನ್ನ ಕೃಶವಾದ ಕೈಯ್ಯಲ್ಲಿ ಹಿಡಿದು ಅಸ್ಪಷ್ಟವಾಗಿ ಏನೋ ಹೇಳುತ್ತಿದ್ದರೆ ನನಗೆ ನನ್ನ ತಂದೆಯ ನೆನಪು ಒತ್ತರಿಸಿ ಬರುತ್ತಿತ್ತು.. ಅವರ ಮಾತಿಗೆಲ್ಲಾ ತಲೆ ಆಡಿಸುತ್ತಾ . ಕೆಲವು ಪ್ರಶ್ನೆಗಳಿಗೆ ನನಗೆ ತಿಳಿದ ರೀತಿ ಉತ್ತರಿಸುತ್ತಾ, ಇಲ್ಲಿಗೆ ನಾನು ಬಂದ ಎಂಬುದನ್ನೇ ಮರೆತು ಪಕ್ಕದಲ್ಲೇ ಕುಳಿತುಬಿಟ್ಟೆ..
ಸ್ವಲ್ಪ ಸಮಯದ ನಂತರ ಆತನಿಗೆ ಬಿಕ್ಕಳಿಕೆ ಬಂತು.. ನಾನು ನನ್ನ ಬ್ಯಾಗಲ್ಲಿದ್ದ ಬಾಟಲ್ ನಿಂದ ನೀರು ಕುಡಿಸಿದೆ. ಎರಡು ಗುಟುಕು .. ಮೂರನೇ ಗುಟುಕು ಒಳಗೆ ಹೋಗಲಿಲ್ಲ.. ಆತನ ಕಣ್ಣುಗಳಲ್ಲಿ ಇದ್ದ ಕಾಂತಿ ಮಾಯವಾದಂತೆ ಅನ್ನಿಸಿತು!
ತಕ್ಷಣ ಗಾಭರಿಯಿಂದ ಅಲ್ಲೇ ಇದ್ದ ಡಾಕ್ಟರ್ ನ ಕರೆದೆ.. ಅವರು ಬಂದು.. ಚೆಕ್ ಮಾಡಿ ` ಸಾರಿ ಮ್ಯಾ ಡಂ.. ಹಿ ಈಸ್ ನೋ ಮೋರ್ '' ಅಂದರು. ನಾನು ``ಇವರು ಯಾರಂತ ನಂಗೊತ್ತಿಲ್ಲ ಸರ್....'' ಅಂದೆ.. ``ಮತ್ತೆ ಇಷ್ಟು ಹೊತ್ತು ಅವರ ಜೊತೆ ಮಾತಾಡ್ತಿದ್ರಿ?'' ಅಂದ್ರು.
ಅಷ್ಟು ಹೊತ್ತಿಗೆ ನನ್ನ ಕರೆತಂದಿದ್ದ ನರ್ಸ್ ಬಂದು.. ``ಸಾರಿ ಮ್ಯಾಡಂ ಈ ಪೇಷಂಟ್ ಕಡೆಯೋರು ಇವರು.. ನಾನು ಕನ್ಫ್ಯೂಸ್ ಮಾಡಿಕೊಂಡೆ....'' ಅಂದ್ರು.
ಆಗ ಅಲ್ಲಿ ಬಂದ ನನ್ನ ಪರಿಚಿತರ ತಮ್ಮ ಬಂದ... ``ಓ ಇಲ್ಲಿದೀರಾ? ನಮ್ಮಕ್ಕ ಇರೋದು ಬೇರೆ ಕಡೆ ಬನ್ನಿ...'' ಅಂತ ಕರೆದ.. ನನಗೆ ಮನಸ್ಸು ತಳಮಳಗೊಂಡಿದ್ದರಿಂದ ಅವರಿಗೆ ಮತ್ತೆ ಬರ್ತೀನಿ.. ಕೆಲಸವಿದೆ ಅಂತ ಹೇಳಿ, ಸ್ವಲ್ಪ ಹಣ ಕೊಟ್ಟು, ಅಲ್ಲಿ ಹೆಚ್ಚು ಸಮಯ ನಿಲ್ಲದೇ ಮನೆಗೆ ಹಿಂತಿರುಗಿದೆ..
ಸ್ವಲ್ಪಕಾಲ ಧ್ಯಾನ ಮಾಡಿದ ನಂತರ ಮನಸ್ಸು ತಿಳಿಯಾಯ್ತು....
ಯಾವುದು ಶಾಶ್ವತ?
ಕವಿಯ ಮನಸ್ಸಿನಲ್ಲಿ ಒಂದು ಸುಂದರವಾದ ಭಾವ ಒಂದು ಕವನದ ಸಾಲಿನ ರೂಪದಲ್ಲಿ ತನ್ನಿಂದತಾನೆ ಹುಟ್ಟುತ್ತದೆ..ನಂತರ ಕವಿ ಅದಕ್ಕೆ ತನ್ನ ಕಲ್ಪನೆಯಲ್ಲೊಂದು ರೂಪು ನೀಡಿ, ತನ್ನ ಭಾಷಾಜ್ಞಾನ, ಪದ ಸಂಪತ್ತು ಹಾಗೂ ಛಂದಸ್ಸಿನ ಅರಿವಿನ ಬಲದಿಂದ ಒಂದು ಕವನರೂಪವನ್ನು ಕೊಡುತ್ತಾನೆ..,
ಅದನ್ನು ಪುನಃ ಪುನಃ ಓದಿ ತನ್ನ ಮನಸ್ಸಿಗೆ ಒಪ್ಪುವಂತೆ, ಲೋಪದೋಷಗಳಿರದಂತೆ ತಿದ್ದುತ್ತಾನೆ...ಆಗ ಒಂದು ಕಾವ್ಯದ ಸೃಷ್ಟಿಯಾಗುತ್ತದೆ.
ಕವಿಯಾಗ ಅದನ್ನು ಸದಭಿರುಚಿ/ಸಮಾನಾಭಿರುಚಿ ಉಳ್ಳವರಿಗೆ ಓದಿ ತೋರಿಸಿ ಆನಂದಿಸುತ್ತಾನೆ…
ನಂತರ ಕಾವ್ಯವು ಸಮರ್ಥ ಸಂಗೀತಗಾರನ ಕೈ ಸೇರುತ್ತದೆ...ಆತನು ಕವಿಯ ಭಾವನೆಗಳನ್ನು ಅರ್ಥೈಸಿಕೊಂಡು ಅದಕ್ಕೆ ಹೊಂದುವಂತಹ ಒಂದು ಸಂಗೀತ ಸಂಯೋಜನೆ ಮಾಡುತ್ತಾನೆ..ಆ ಕಾರ್ಯ ಅವನಿಗೆ ಅಪರಿಮಿತವಾದ ಸಂತೋಷವನ್ನು ಹಾಗೂ ಆತ್ಮತೃಪ್ತಿಯನ್ನು ಕೊಡುತ್ತದೆ..
ಹೀಗೆ ಸಂಗೀತವನ್ನು ಪಡೆದ ಕವನ ಒಬ್ಬಗಾಯಕನ ಕೈಗೆ ಸೇರುತ್ತದೆ ..ಗಾಯಕನ ಶ್ರುತಿಬದ್ಧವಾಗಿ ಪಕ್ಕವಾದ್ಯ ಸಹಿತವಾಗಿ ಅದನ್ನು ಹಾಡುತ್ತಾನೆ ...ಅಸಂಖ್ಯಾತ ಕೇಳುವರು ಅದನ್ನು ಕೇಳಿ ಆನಂದಿಸುತ್ತಾರೆ ...ಗುನುಗುನಿಸುತ್ತಾರೆ..
ಹೊಸ ಹೊಸತರಲ್ಲಿ ಕವನದ ರಚನೆ ಯಾರದು, ಸಂಗೀತ ನಿರ್ದೇಶಕ ಯಾರು, ಗಾಯಕ/ಗಾಯಕಿ ಯಾರು ಎಂದು ತಳಿದಿದ್ದದರೂ ಕಾಲ ಕಳೆದಂತೆ ಕವಿಯ ಹೆಸರು, ನಂತರ ನಿರ್ದೇಶಕನ ಹೆಸರು, ಹಿನ್ನೆಲೆ ಸೇರಿದರೆ ಮತ್ತೆ ವರ್ಷಗಳ ನಂತರಗಾಯಕರ ಹೆಸರು ಸಹಾ ಮರೆಯಬಹುದು .
ಅಂದರೆ.. ಯಾವ ಕವಿಯ ಹೃದಯದಲ್ಲಿ ಹುಟ್ಟಿ ಕಲ್ಪನೆಯಲ್ಲಿ ಬೆಳೆದು ಲೇಖನಿಯಲ್ಲಿ ರೂಪ ಪಡೆಯಿತೋ ಆ ಕವಿಯ ಹೆಸರು ಶಾಶ್ವತವಲ್ಲ.
ಯಾರ ಕೌಶಲ್ಯ ದಿಂದ ಕವನವು ಹಾಡಾಯ್ತೋ ಆ ವ್ಯಕ್ತಿಯ ಹೆಸರೂ ಅಲ್ಲ.. ಭಾವದುಂಬಿ ಹಾಡುವ ಗಾಯಕನ ಹೆಸರೂ ಅಲ್ಲ. ಇನ್ನು ಅದನ್ನಷ್ಟು ಸುಂದರ ಗೊಳಿಸಿದ ಪಕ್ಕವಾದ್ಯದವರು ಮುನ್ನೆಲೆಗೆ ಬರುವುದು ಅಪರೂಪ..
ಹಾಗಾದರೆ ಯಾವುದು ಶಾಶ್ವತ?
ಆಳವಾದ ಮನಮುಟ್ಟುವ ಸಾಹಿತ್ಯವುಳ್ಳ ದಕ್ಷ ಸಂಗೀತವಿದ್ದು ಅತ್ಯುತ್ತಮ ಗಾಯಕರಿಂದ ಹಾಡಲ್ಪಟ್ಟ ಆ ಹಾಡು ಶಾಶ್ವತ..
ಅದನ್ನು ಶಾಶ್ವತಗೊಳಿಸಲು ಕವಿ, ಸಂಗೀತ ನಿರ್ದೇಶಕ, ಗಾಯಕ, ಮೊದಲಾದ ಎಲ್ಲಾ ಹೆಸರಿನ ವ್ಯಾಮೋಹ ವಿಲ್ಲದೇ ಶ್ರಮಿಸಬೇಕು.. ಆಗ ಜನಮಾನಸದಲ್ಲಿ ಚಿರಂತನವಾಗಿ ಉಳಿಯುವಂತಹ ಕವನ ಜೀವಪಡೆಯುತ್ತದೆ..
ಆದರೆ ಅಂತಹ ನಿಸ್ವಾರ್ಥಿಗಳು ಯಾರಿದ್ದಾರೆ ಎಂದಿರಾ? ಇದ್ದಾರೆ..
ಅವರೇ ನಮ್ಮ ಜಾನಪದ ಕವಿಗಳು..
ಎಂತೆಂತಹ ಒಳ್ಳೆಯ ಕವನಗಳನ್ನು ಕೊಟ್ಟು ಹೋಗಿದಾರೇರೀ.. ಅಲ್ವಾ?
ನನಗಿಷ್ಟವಾಗುವ ಕವನ
ಹೆಣ್ಣಿನ ಜನ್ಮಕ್ಕೆ ಅಣ್ಣ ತಮ್ಮರು ಬೇಕು
ಬೆನ್ನ ತಟ್ಟುವರು ಸಭೆಯೊಳಗೆ
ಬೆನ್ನ ತಟ್ಟುವರು ಸಭೆಯೊಳಗೆ ಸಾವೀರ
ಹೊನ್ನ ಕಟ್ಟುವರು ಉಡಿಯೊಳಗೆ
ವಸುಮತಿ
೨೮-೧೦-೨೦೨೦