ಬುಧವಾರ, ಅಕ್ಟೋಬರ್ 28, 2020

ಯಾವುದು ಶಾಶ್ವತ?

 


ಕವಿಯ ಮನಸ್ಸಿನಲ್ಲಿ ಒಂದು ಸುಂದರವಾದ ಭಾವ ಒಂದು ಕವನದ ಸಾಲಿನ ರೂಪದಲ್ಲಿ ತನ್ನಿಂದತಾನೆ ಹುಟ್ಟುತ್ತದೆ..ನಂತರ ಕವಿ ಅದಕ್ಕೆ ತನ್ನ ಕಲ್ಪನೆಯಲ್ಲೊಂದು ರೂಪು ನೀಡಿ, ತನ್ನ ಭಾಷಾಜ್ಞಾನ, ಪದ ಸಂಪತ್ತು ಹಾಗೂ ಛಂದಸ್ಸಿನ ಅರಿವಿನ ಬಲದಿಂದ ಒಂದು ಕವನರೂಪವನ್ನು ಕೊಡುತ್ತಾನೆ..,

ಅದನ್ನು ಪುನಃ ಪುನಃ ಓದಿ ತನ್ನ ಮನಸ್ಸಿಗೆ ಒಪ್ಪುವಂತೆ, ಲೋಪದೋಷಗಳಿರದಂತೆ ತಿದ್ದುತ್ತಾನೆ...ಆಗ ಒಂದು ಕಾವ್ಯದ ಸೃಷ್ಟಿಯಾಗುತ್ತದೆ. 

ಕವಿಯಾಗ ಅದನ್ನು  ಸದಭಿರುಚಿ/ಸಮಾನಾಭಿರುಚಿ ಉಳ್ಳವರಿಗೆ ಓದಿ ತೋರಿಸಿ ಆನಂದಿಸುತ್ತಾನೆ…


ನಂತರ ಕಾವ್ಯವು ಸಮರ್ಥ ಸಂಗೀತಗಾರನ ಕೈ ಸೇರುತ್ತದೆ...ಆತನು ಕವಿಯ ಭಾವನೆಗಳನ್ನು ಅರ್ಥೈಸಿಕೊಂಡು ಅದಕ್ಕೆ ಹೊಂದುವಂತಹ ಒಂದು ಸಂಗೀತ ಸಂಯೋಜನೆ ಮಾಡುತ್ತಾನೆ..ಆ ಕಾರ್ಯ ಅವನಿಗೆ ಅಪರಿಮಿತವಾದ ಸಂತೋಷವನ್ನು  ಹಾಗೂ ಆತ್ಮತೃಪ್ತಿಯನ್ನು ಕೊಡುತ್ತದೆ..


ಹೀಗೆ ಸಂಗೀತವನ್ನು ಪಡೆದ ಕವನ ಒಬ್ಬಗಾಯಕನ ಕೈಗೆ ಸೇರುತ್ತದೆ ..ಗಾಯಕನ ಶ್ರುತಿಬದ್ಧವಾಗಿ ಪಕ್ಕವಾದ್ಯ ಸಹಿತವಾಗಿ ಅದನ್ನು ಹಾಡುತ್ತಾನೆ ...ಅಸಂಖ್ಯಾತ ಕೇಳುವರು ಅದನ್ನು ಕೇಳಿ ಆನಂದಿಸುತ್ತಾರೆ ...ಗುನುಗುನಿಸುತ್ತಾರೆ.. 


 ಹೊಸ ಹೊಸತರಲ್ಲಿ ಕವನದ ರಚನೆ ಯಾರದು, ಸಂಗೀತ ನಿರ್ದೇಶಕ ಯಾರು, ಗಾಯಕ/ಗಾಯಕಿ ಯಾರು ಎಂದು ತಳಿದಿದ್ದದರೂ ಕಾಲ ಕಳೆದಂತೆ ಕವಿಯ ಹೆಸರು, ನಂತರ ನಿರ್ದೇಶಕನ ಹೆಸರು, ಹಿನ್ನೆಲೆ ಸೇರಿದರೆ ಮತ್ತೆ ವರ್ಷಗಳ ನಂತರಗಾಯಕರ ಹೆಸರು ಸಹಾ ಮರೆಯಬಹುದು . 

 ಅಂದರೆ.. ಯಾವ ಕವಿಯ ಹೃದಯದಲ್ಲಿ ಹುಟ್ಟಿ ಕಲ್ಪನೆಯಲ್ಲಿ ಬೆಳೆದು ಲೇಖನಿಯಲ್ಲಿ ರೂಪ ಪಡೆಯಿತೋ  ಆ ಕವಿಯ ಹೆಸರು ಶಾಶ್ವತವಲ್ಲ. 

ಯಾರ ಕೌಶಲ್ಯ ದಿಂದ ಕವನವು ಹಾಡಾಯ್ತೋ ಆ ವ್ಯಕ್ತಿಯ ಹೆಸರೂ ಅಲ್ಲ.. ಭಾವದುಂಬಿ ಹಾಡುವ ಗಾಯಕನ ಹೆಸರೂ ಅಲ್ಲ. ಇನ್ನು ಅದನ್ನಷ್ಟು ಸುಂದರ ಗೊಳಿಸಿದ ಪಕ್ಕವಾದ್ಯದವರು ಮುನ್ನೆಲೆಗೆ ಬರುವುದು ಅಪರೂಪ.. 


ಹಾಗಾದರೆ ಯಾವುದು ಶಾಶ್ವತ? 

ಆಳವಾದ ಮನಮುಟ್ಟುವ ಸಾಹಿತ್ಯವುಳ್ಳ ದಕ್ಷ ಸಂಗೀತವಿದ್ದು ಅತ್ಯುತ್ತಮ ಗಾಯಕರಿಂದ ಹಾಡಲ್ಪಟ್ಟ ಆ ಹಾಡು ಶಾಶ್ವತ.. 


ಅದನ್ನು ಶಾಶ್ವತಗೊಳಿಸಲು ಕವಿ, ಸಂಗೀತ ನಿರ್ದೇಶಕ, ಗಾಯಕ, ಮೊದಲಾದ ಎಲ್ಲಾ ಹೆಸರಿನ ವ್ಯಾಮೋಹ ವಿಲ್ಲದೇ  ಶ್ರಮಿಸಬೇಕು.. ಆಗ ಜನಮಾನಸದಲ್ಲಿ ಚಿರಂತನವಾಗಿ ಉಳಿಯುವಂತಹ ಕವನ ಜೀವಪಡೆಯುತ್ತದೆ.. 

ಆದರೆ ಅಂತಹ ನಿಸ್ವಾರ್ಥಿಗಳು ಯಾರಿದ್ದಾರೆ ಎಂದಿರಾ? ಇದ್ದಾರೆ.. 

ಅವರೇ ನಮ್ಮ ಜಾನಪದ ಕವಿಗಳು.. 

ಎಂತೆಂತಹ ಒಳ್ಳೆಯ ಕವನಗಳನ್ನು ಕೊಟ್ಟು ಹೋಗಿದಾರೇರೀ.. ಅಲ್ವಾ? 


ನನಗಿಷ್ಟವಾಗುವ ಕವನ


ಹೆಣ್ಣಿನ ಜನ್ಮಕ್ಕೆ ಅಣ್ಣ ತಮ್ಮರು ಬೇಕು

ಬೆನ್ನ ತಟ್ಟುವರು ಸಭೆಯೊಳಗೆ

ಬೆನ್ನ ತಟ್ಟುವರು ಸಭೆಯೊಳಗೆ ಸಾವೀರ

ಹೊನ್ನ ಕಟ್ಟುವರು ಉಡಿಯೊಳಗೆ


ವಸುಮತಿ

೨೮-೧೦-೨೦೨೦



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ