ಗುರುವಾರ, ಆಗಸ್ಟ್ 13, 2015

ಎರಡು ಘಟನೆಗಳು.... ಒಂದು ಪ್ರಶ್ನೆ...


  ಮೋರಿ ಕಟ್ಟಿಕೊಂಡಿತ್ತು. ಅದನ್ನು ಸರಿ ಮಾಡಕ್ಕೆ ಒಬ್ಬನನ್ನು ಕರೆಸಿದ್ದರು.. ಅವನನ್ನು ಕಂಡು ಪಾಪ ಬೆಳಗ್ಗಿಂದ ಕೆಲಸ  ಮಾಡಿ ದಣಿದಿದ್ದಾನೆ ಅಂತ ಅವನಿಗಾಗಿ ಬಿಸಿ ದೋಸೆ , ಮತ್ತೆ ಟೀ ತಗೊಂಡು ಹೋಗಿ ಕೊಟ್ಟು.
 `ನೋಡಪ್ಪ. ದೋಸೆ  ಟೀ ಇದೆ  ಕೈತೊಳೆದುಕೊಂಡು ತಿಂದು ಕೆಲ್ಸ ಮಾಡು' ಅಂದೆ.. ಅವನು ದೋಸೆ ತಟ್ಟೆ ನೋಡಿ `ಅಮ್ಮಾ , ಒಂದು ಪೇಪರ್ ನಲ್ಲಿ ಹಾಕ್ಕೊಡಿ, ನಾನು ನಿಮ್ಮ ತಟ್ಟೆಲಿ ತಿನ್ನಲ್ಲ' ಅಂದ ನಾನು ` ಯಾಕೆ? ತಿನ್ನು ಪರವಾಗಿಲ್ಲ ಅಂದೆ ಅದಕ್ಕವನು ನೀವು ಮೇಲ್ಜಾತಿ. ನಮ್ಗೆ ನೀವು ಬಳಸೋ ತಟ್ಟೆ ಕೊಡ್ಬೇಡಿ ನಂಗೆ ಒಂದ್ ಪೇಪರ್ ನಲ್ಲಿ ಹಾಕ್ಕೊಡಿ ಸಾಕು. ಅಂದ `
ನಂಗೆ ಇಷ್ಟವಾಗಲಿಲ್ಲ` ``ಇದರಲ್ಲೇ ತಿನ್ನು ಪೇಪರ್ ನಲ್ಲಿ ಹಾಕಲ್ಲ....'' ಅಂತ ಹೇಳಿ ಬಂದೆ.
ಹೋದ ವಾರ  ದೇವಸ್ಥಾನಕ್ಕೆ ಹೋಗಿದ್ದೆ.. ಅಲ್ಲಿ ದೇವರ ದರ್ಶನವಾದಮೇಲೆ ತೀರ್ಥ ತೆಗೆದುಕೊಳ್ಳಲಿಕ್ಕೆ ಕ್ಯೂ ನಿಂತೆ. ಸ್ವಾಮೀಜಿಯವರು ಮಡಿಯಲ್ಲಿ ತೀರ್ಥ ಕೊಡುತ್ತಿದ್ದರು.   ಅಕಸ್ಮಾತ್ ಆಗಿ ಅವರ ಕೈ ನನ್ ಕೈಗೆ ತಗುಲಿತು..( ಅವರ ಅಚಾತುರ್ಯದಿಂದಲೇ)  ಅವರು  ಕೋಪ ತಿರಸ್ಕಾರಗಳಿಂದ ದುರುಗುಟ್ಟಿ ನನ್ನ ನೋಡಿ ` ದೂರ.. ದೂರ...'' ಅಂತ ಕಿರಿಚಿದರು.. ನಂಗೆ ಶಾಕ್ ... ಅವಮಾನದಿಂದ ಕಣ್ಣು ತುಂಬಿಕೊಂಡು  ಹಾಗೇ ಹಿಂತಿರುಗಿ ಬಂದೆ...

 ಈ ಎರಡೂ ಸಂದರ್ಭದಲ್ಲೂ ನಾನು ನಾನೇ ಆಗಿದ್ದೆ.. ಆದರೆ ಮೊದಲ ಸಂದರ್ಭದಲ್ಲಿ ನಾನು ಹೇಗೆ ಆ  ಕಷ್ಟಜೀವಿ ಮನುಷ್ಯನಿಗಿಂತ  ಉತ್ತಮಳಾದೆ? ಹಾಗೂ  ಇನ್ನೊಂದು ಸಂದರ್ಭದಲ್ಲಿ ಹೇಗೆ ಯಾಕೆ ನಿಕೃಷ್ಟಳಾದೆ?
 ತಿಳಿಯುತ್ತಿಲ್ಲ

 *******************************

ಕಷ್ಟವಲ್ಲ ಕನ್ನಡ ಕಲಿಕೆ

   
ನನಗೆ ಅಪರೂಪಕ್ಕೊಮ್ಮೆಯಾದ್ರೂ ಚಿಕ್ಕಪೇಟೆಗೆ ಶಾಪಿಂಗ್ ಗೆ ಹೋವುದು ಇಷ್ಟವಾಗುತ್ತೆ.. ``ಅಲ್ಲಿ ಪಾರ್ಕಿಂಗ್ ಇರಲ್ಲ.. ಜನಜಂಗುಳಿ, ಗಲೀಜು.......'' ಇತ್ಯಾದಿ ಇವರ ಗೊಣಗಾಡಿದ್ರೂ, ಹೇಗಾದ್ರೂ ಕಾಡಿ, ಒಪ್ಪಿಸಿ ಹೋಗುವುದಿದೆ....
ಹೋದ ದಸರಾ ಸಮಯದಲ್ಲಿ ಪ್ರತೀ ವರ್ಷದಂತೆ ಕೆಲಸಕ್ಕೆ ಬರುವ ಹೆಣ್ಣು ಮಕ್ಕಳಿಗೆ ಸೀರೆ ತರಬೇಕಿತ್ತು. ನಾನು ಬಾರಿ ಚಿಕ್ಪೇಟೆಗೇ ಹೋಗೋಣಾ ಅಂತ ಹಾಗೂ ಹೀಗೂ ಇವರನ್ನು ಒಪ್ಪಿಸಿ ಹೊರಟೆ...

ಅಲ್ಲಿ ಒಂದು ಅಂಗಡಿ ಹೊಕ್ಕೆವು. ಸುಮಾರು ಇಪ್ಪತ್ತರ ಆಸು ಪಾಸಿನಲ್ಲಿದ್ದ ಹುಡುಗ ನಮ್ಮನ್ನು ಸ್ವಾಗತಿಸಿ`` ಬನ್ನಿ ಸರ್, ಬನ್ನು ಮೇಡಂ .. ಏನ್ ಬೇಕು? ...'' ಅಂದ . ಅವನ ಮಾತಿನಲ್ಲಿದ್ದ ಮೃದುತ್ವ, ಸ್ಪುಟತೆ ನನ್ನನ್ನು ಸೆಳೆದವು.. ಇಲ್ಲೇ ಇವತ್ತಿನ್ ಖರೀದಿ ಅಂತ ತೀರ್ಮಾನಿಸಿ, ಕುಳಿತು ಬಿಟ್ಟೆ..
``ನೋಡಪ್ಪಾ ನನಗೆ ಸುಮಾರುಸಾವಿರ ರೂಪಾಯಿಯ ಒಂದೇ ಥರದ ಹತ್ತು ಸೀರೆಗಳು ಬೇಕು...''
ಅವನು ಪ್ರತೀ ಸೀರೆಯ ಗುಣಗಾನ ಮಾಡ್ತಾ ಸೀರೆಗಳ ಗುಡ್ಡೆಯನ್ನೇ ಹಾಕಿದ.. ಅವನ ಭಾಷೆಯನ್ನು ನೋಡಿ ನನಗೆ ಇವ ಖಂಡಿತಾ ಮೈಸೂರಿನವ ಅನಿಸ್ತು...
ಅದ್ರಲ್ಲಿ ಒಂದು ಆರಿಸಿ ``ಇಂಥದ್ದೇ ಬೇರೆ ಬೇರೆ ಬಣ್ಣದಲ್ಲಿ ಹತ್ತು ಸೀರೆ ಪ್ಯಾಕ್ ಮಾಡ್ಬಿದಪ್ಪಾ...'' ಅಂದೆ.

``ಮೇಡಂ ಒಂದರ್ಧ ಗಂಟೆ ಕಾಯ್ತೀರಾ? ಹತ್ತು ಸೀರೆ ಬೇಕಂದ್ರೆ ಗೋಡೋನ್ ನಿಂದ ತರಿಸ್ಬೇಕು.. '' ಅಂದ.. ಅವನ್ ಜೊತೆ ಇನ್ನಷ್ಟು ಮಾತಾಡ್ಬೇಕು ಅನಿಸಿ , ``ಹೊತ್ತಾಗುತ್ತೆ.. ಬೇರೆ ಕಡೆ ಹೋಗೋಣ...' ಅನ್ನೋ ಪಿಸುದನಿಯ ಗದರಿಕೆಯನ್ನೂ ಕಿವಿಗೆ ಹಾಕಿಕೊಳ್ಳದೇ ಕೂತುಬಿಟ್ಟೆ..

ನಮ್ಮ ಸಂಭಾಷಣೆ ಮುಂದುವರಿತು....
''ಏನಪ್ಪಾ ನಿಮ್ ಊರು ಯಾವ್ದು?''
''ರಾಜಾಸ್ಥಾನ ಅಮ್ಮ..''
''ಮತ್ತೆ ಇಷ್ಟು ಸೊಗಸಾಗಿ ಕನ್ನಡ ಮಾತಾಡ್ತೀ.. ನಾನು ನಿನ್ನ ಮೈಸೂರಿನ ಹುಡುಗ ಅಂತ ಭಾವಿಸಿದ್ದೆ....''
''ಜನರ್ ಜೊತೆ ಮಾತಾಡ್ತಾ ಬಂದ್ಬಿಡ್ತು ಅಮ್ಮಾ....''
''ಆದ್ರೆ ಇಷ್ಟು ಚನ್ನಾಗಿ ಇಷ್ಟು ಚಿಕ ವಯಸ್ಸಿಗೇ?''
''ಮೊದಮೊದಲಿಗೆ ಷ್ಟ ವಾಗ್ತಿತ್ತು.. ಈಗ ಹತ್ತು ವರ್ಷಗಳಿದ ವ್ಯಾಪಾರ ಮಾಡ್ತಾ  ಚನ್ನಾಗಿ ಅಭ್ಯಾಸ ವಾಯ್ತು.. ಈಗ ನಿಮ್ಮ ಬೆಂಗಳೂರಿನವರಿಗಿಂತ ಚನ್ನಾಗಿ ಮಾತಾಡ್ತೀನಿ....... ಆತ್ಮವಿಶ್ವಾಸದಿಂದ ನಕ್ಕ 
''ವಾವ್ ಸೂಪರ್, ಎಷ್ಟು ವರ್ಷದವನಾಗಿದ್ದಾಗ ವ್ಯಾಪಾರ ಶುರು ಮಾಡ್ದೆ? ಈಗ ನಿನಗೆ ಇಪ್ಪತ್ತೆರಡು ಇಪ್ಪತ್ಮೂರು ಇರಬಹುದಲ್ವಾ?''
''ಇಲ್ಲ.. ನನಗೆ ಇಪ್ಪತ್ತಾರು ನಾನು ಹತ್ ನೇಕ್ಲಾಸ್ ಫೇಲ್ ಆಗಿ ಇಲ್ಲಿ ಬಂದು ವ್ಯಾಪಾರ ಶುರು ಮಾಡ್ದೆ'''
ನನ್ನ ಚಿಕ್ಕಪ್ಪ ಮಾಡ್ಲಿಕೆ ಸಹಾಯ ಮಾಡಿದ್ರು..
 ''ಓ ಗುಡ್!! ನಿನ್ಗೆಷ್ಟು ಭಾಷೆಗಳನ್ನು ಮಾತಾಡಕ್ಕೆ ಬರುತ್ತೆ.....?''

'' ಕನ್ನಡ, ಇಂಗ್ಲಿಷ್, ತಮಿಳು, ತೆಲುಗು,, ಸ್ವಲ್ಪ ಮಲೆಯಾಳಂ ಕೂಡ....''

 '' ವಾವ್!! ಗುಡ್ ಗುಡ್   ಇಷ್ಟೊಂದು ಭಾಷೆಗಳನ್ನು ಹೇಗೆ ಕಲ್ತೆ......?''

 '' ಹೀಗೇ ಮಾತಾಡ್ತಾ.. ನಿಮ್ಮಂಥವರೆ  ನನ್ನ ಗುರುಗಳು ಅಲ್ವಾಮ್ಮಾ? ....''

'' ನೀನೇನೂ ತಿಳಿಯಲ್ಲ ಅಂದ್ರೆ ಒಂದು ಮಾತು ಕೇಳಲಾ.. ಬರೀ ಕುತೂಹಲ  ಅಷ್ಟೇ ....''

 '' ಕೇಳಿ ಅಮ್ಮಾ ....''

'' ನಿನ್ನ  ಅಂದಾಜು ಇನ್ಕಮ್ ಎಷ್ಟು? ....''

 '' ಒಂದೇ ಥರ ಇರಲ್ಲಮ್ಮ.. ಹಬ್ಬ ಹುಣ್ಣಿಮೆಗಳಲ್ಲಿ ಜಾಸ್ತಿ..  ಸಾಮಾನ್ಯ ಎಂಟು ಒಂಬತ್ತು ಲಕ್ಷ ವಹಿವಾಟಿದ್ರೆ ಹಬ್ಬಗಳು ಬಂದಾಗ  ಹದಿನೈದು ಲಕ್ಷದ ವರೆಗೂ ಆಗುತ್ತೆ.. ತಿಂಗಳಿಗೆ ಸುಮಾರು ನಾಲ್ಕು ಲಕ್ಷ  ಆದಾಯಕ್ಕೆ ಮೋಸವಿಲ್ಲ ....''

'' ಪರವಾಗಿಲ್ವೇ ....''

'' ಇದೇನ್ ಬಿಡಿ.. ಇದು ಉಳಿದೋರ್ಗಿಂತಾ ಕಡಿಮೆ.. ಇನ್ನೂ ಗಳಿಸೋರಿದಾರೆ ....''

 '' ನಿನ್ ಓದು ಮುಂದುವರೆಸಿದ್ರೆ ಚನ್ನಾಗಿರ್ತಿತ್ತು ಅನಿಸಲ್ವಾ ನಿಂಗೆ ....''

'' ಇಲ್ಲ.. ನಮ್ ಮನೆಲಿ ಯಾರೂ ಹೆಚ್ಚು ಓದಿಲ್ಲ..  ಆದ್ರೆ ನಾನು ಯಾವ ಗ್ರಾಜುಯೇಟ್ ಗೂ ಕಡಿಮೆ ಇಲ್ಲ ಅಲ್ವ.......?
 '' ಆದ್ರೂ   ಹೆಚ್ಚು ಓದಿದ್ರೆ ಇನ್ನೂ ಚನ್ನಾಗಿ ಬೆಳೀಬಹುದಿತ್ತೇನೋ ....''

'' ಇಲ್ಲ ಅಮ್ಮ.. ನನ್ನ ಗೆಳೆಯರು ಇಂಜಿನಿಯರ್ ಗಳಾಗಿದಾರೆ.. ಅವರೆಲ್ಲಾರನ್ನೂ ನೋಡಿದ್ರೆ ನನಗನಿಸುತ್ತೆ  ಎಜುಕೇಶನ್ ಜಾಸ್ತಿಯಾದಷ್ಟು ಭಯ ಜಾಸ್ತಿ ಆಗುತ್ತೆ.. ಒಬ್ಬರ ಕೈಕೆಳಗೆ ದುಡಿಯಬೇಕಾಗುತ್ತೆ..  ಸ್ವತಂತ್ರವಾಗಿ ಬದುಕಕ್ಕಾಗಲ್ಲ..  ನಾನೀಗಲೇ ಸಂತೋಷವಾಗಿದ್ದೇನೆ ....''

ಅಷ್ಟು ಹೊತ್ತಿಗೆ ನಮ್ಮ ಸೀರೆಗಳು ಬಂದವು.. ತಕ್ಷಣವೇ ಎಲ್ಲಾ ಸೀರೆಗೂ ಹತ್ತು ಪರ್ಸೆಂಟ್ ಡಿಸ್ಕೌಂಟ್ ಅಂತ   ನಾನು ಕೊಡಬೇಕಾದ ಹಣದ ಮೊತ್ತವನ್ನು ಹೇಳಿದ
 '' ಓ ಗಾಡ್ ಇಷ್ಟು ಬೇಗ ಹೇಗೆ ಲೆಕ್ಕ ಹಾಕಿದೆ? ಕ್ಯಾಲ್ಕುಲೇಟರ್ ಇಲ್ಲದೇ? ....''

'' ಅದೆಲ್ಲಾ ಗ್ರಾಜುಯೇಟು ಗಳಿಗೆ ನಮ್ಮಂತವರಿಗಲ್ಲ... "
.ಅಂತ ನಗ್ತಾ ಹೇಳಿ ನಮ್ಮ  ಸೀರೆಗಳ ಪ್ಯಾಕ್ ಕೊಟ್ಟ..

'' ನಿನ್ ಹೆಸರು ಕೇಳೋದೇ ಮರ್ತೆ.. ....''

 '' ಬಲ ರಾಮ್ ಅಂತ ಅಮ್ಮ ....''

 ಇದರಿಂದ ನನಗೆ ಅನಿಸಿದ್ದು:
೧)  ಹೆಚ್ಚಿನ ವಿದ್ಯಾಭ್ಯಾಸ ಇಲ್ಲದಿದ್ರೂ ಬಲರಾಮ್ ನಿರುದ್ಯೋಗಿ ಅಲ್ಲ..   ಪದವಿಗಳಿದ್ರೂ  ನಮ್ಮ ಯುವಕರಿಗೆ ಸರಿಯಾದ ಉದ್ಯೋಗವಿಲ್ಲ
೨) ಹೆಚ್ಚಿನ ವಿದ್ಯಾಭ್ಯಾಸ ಇಲ್ಲದಿದ್ರೂ ಬಲರಾಮ್ಗೆ ಒಳ್ಳೆಯ  ಸಂವಹನ ಶಕ್ತಿ ಇದೆ  ಅನೇಕ ಕಂಪನಿಗಳು    ಇಂಥ ಕೌಶಲ್ಯವಿಲ್ಲದ  ಕೊರತೆಯನ್ನು ಹೋಗಲಾಡಿಸಲಿ ಅನೇಕ ವರ್ಕ್ ಶಾಪುಗಳನ್ನು  ಆಯೋಜಿಸುತ್ತವೆ..ಮತ್ತು ಪರಿಣಾಮ ಶೂನ್ಯ
೩)ಬಲರಾಮ್ ಗೆ ಲಕ್ಷ ಗಟ್ಟಲೇ ಆದಾಯವಿದೆ.. ಇವರಿಗೆ  ತಿಂಗಳ ಸಾಲಕ್ಕೇ ಆದಾಯ ಸಾಲದು ಅವನು ಕ್ಷಣ ಮಾತ್ರದಲ್ಲಿ ಲೆಕ್ಕ ಹಾಕಬಲ್ಲ 
೪)ಇವರು  ಗಣಿತದಲ್ಲಿ ನೂರಕ್ಕೆ ನೂರು ತೆಗೆದರೂ  ಕ್ಯಾಲ್ಕ್ಯುಲೇಟರ್ ಇಲ್ಲದೇ ಗುಣಿಸಲಾರರು..
೫) ಇವನಿಗೆ ಕೆಲಸ ಹೋದೀತೆಂಬ ಭಯವಿಲ್ಲ.. ಅವರು  ಯಾವಾಗ ಪಿಂಕ್ ಸ್ಲಿಪ್ ಬರುತ್ತೋ ಎಂಬ ಭೀತಿಯಲ್ಲಿ ನಿದ್ರಿಸಲಾರರು


ಈಗ ನನ್ನ ಪ್ರಶ್ನೆಗಳು  ಅಲ್ಲ ಒಂದೇ ಪ್ರಶ್ನೆ...

ಹೆಚ್ಚಿನ ವಿದ್ಯಾಭ್ಯಾಸ  ಮನುಷ್ಯನನ್ನು ಪೂರ್ಣ ವ್ಯಕ್ತಿಯಾಗಿಸಲು ಅವಶ್ಯಕವಾ?  ಅದು ಭಯವನ್ನು ಹುಟ್ಟಿಸುತ್ತದೆ ಅನ್ನೋ ಬಲರಾಮ್ ನ ಅಭಿಪ್ರಾಯ ಸರಿಯಾ?

 ಓ!! ಮರೆತೆ ಕೊನೆಗೆ ಅವ ನನ್ನೊಂದು ಪ್ರಶ್ನೆ ಕೇಳಿದ.. ''ಅಮ್ಮಾ ನೀವು ಟೀಚರ್ರಾ....?

 ''ಹೌದು.. ಹೇಗೆ ತಿಳೀತು....?''

'' ಟೀಚರ್ ತಾನೇ  ಇಷ್ಟೊಂದು ಪ್ರಶ್ನೆ ಕೇಳೋದು...?'' ಅಂತ ತುಂಟ ಉತರ ಕೊಟ್ಟು ನಂತರ ಗಂಭೀರವಾಗಿ ''ಇಲ್ಲ ಅಮ್ಮಾ.. ನನಗೆ ನನ್ ಟೀಚರ್ ನೆನಪಾದ್ರು.. ನಾನು ಕ್ಲಾಸ್ ನಲ್ಲಿ ದಡ್ಡನಾಗಿದ್ರೂ ನನ್ನ ಹೀಗೇ ಮೃದುವಾಗಿ ಮಾತಾಡಿಸ್ತಿದ್ರು.. ತುಂಬಾ ಅವರನ್ನು ಮಿಸ್ ಮಾಡ್ಕೋತ್ತೀನಿ....'' ಅಂದ
 ಖುಷಿಯಾಯ್ತು

ನನ್ನಂಥ ಟೀಚರ್ ಗಳನ್ನೂ ನೆನಪಿಸಿಕೊಳ್ಲೋರಿದಾರಲ್ಲ ಅಂತ