ಗುರುವಾರ, ಆಗಸ್ಟ್ 13, 2015

ಎರಡು ಘಟನೆಗಳು.... ಒಂದು ಪ್ರಶ್ನೆ...


  ಮೋರಿ ಕಟ್ಟಿಕೊಂಡಿತ್ತು. ಅದನ್ನು ಸರಿ ಮಾಡಕ್ಕೆ ಒಬ್ಬನನ್ನು ಕರೆಸಿದ್ದರು.. ಅವನನ್ನು ಕಂಡು ಪಾಪ ಬೆಳಗ್ಗಿಂದ ಕೆಲಸ  ಮಾಡಿ ದಣಿದಿದ್ದಾನೆ ಅಂತ ಅವನಿಗಾಗಿ ಬಿಸಿ ದೋಸೆ , ಮತ್ತೆ ಟೀ ತಗೊಂಡು ಹೋಗಿ ಕೊಟ್ಟು.
 `ನೋಡಪ್ಪ. ದೋಸೆ  ಟೀ ಇದೆ  ಕೈತೊಳೆದುಕೊಂಡು ತಿಂದು ಕೆಲ್ಸ ಮಾಡು' ಅಂದೆ.. ಅವನು ದೋಸೆ ತಟ್ಟೆ ನೋಡಿ `ಅಮ್ಮಾ , ಒಂದು ಪೇಪರ್ ನಲ್ಲಿ ಹಾಕ್ಕೊಡಿ, ನಾನು ನಿಮ್ಮ ತಟ್ಟೆಲಿ ತಿನ್ನಲ್ಲ' ಅಂದ ನಾನು ` ಯಾಕೆ? ತಿನ್ನು ಪರವಾಗಿಲ್ಲ ಅಂದೆ ಅದಕ್ಕವನು ನೀವು ಮೇಲ್ಜಾತಿ. ನಮ್ಗೆ ನೀವು ಬಳಸೋ ತಟ್ಟೆ ಕೊಡ್ಬೇಡಿ ನಂಗೆ ಒಂದ್ ಪೇಪರ್ ನಲ್ಲಿ ಹಾಕ್ಕೊಡಿ ಸಾಕು. ಅಂದ `
ನಂಗೆ ಇಷ್ಟವಾಗಲಿಲ್ಲ` ``ಇದರಲ್ಲೇ ತಿನ್ನು ಪೇಪರ್ ನಲ್ಲಿ ಹಾಕಲ್ಲ....'' ಅಂತ ಹೇಳಿ ಬಂದೆ.
ಹೋದ ವಾರ  ದೇವಸ್ಥಾನಕ್ಕೆ ಹೋಗಿದ್ದೆ.. ಅಲ್ಲಿ ದೇವರ ದರ್ಶನವಾದಮೇಲೆ ತೀರ್ಥ ತೆಗೆದುಕೊಳ್ಳಲಿಕ್ಕೆ ಕ್ಯೂ ನಿಂತೆ. ಸ್ವಾಮೀಜಿಯವರು ಮಡಿಯಲ್ಲಿ ತೀರ್ಥ ಕೊಡುತ್ತಿದ್ದರು.   ಅಕಸ್ಮಾತ್ ಆಗಿ ಅವರ ಕೈ ನನ್ ಕೈಗೆ ತಗುಲಿತು..( ಅವರ ಅಚಾತುರ್ಯದಿಂದಲೇ)  ಅವರು  ಕೋಪ ತಿರಸ್ಕಾರಗಳಿಂದ ದುರುಗುಟ್ಟಿ ನನ್ನ ನೋಡಿ ` ದೂರ.. ದೂರ...'' ಅಂತ ಕಿರಿಚಿದರು.. ನಂಗೆ ಶಾಕ್ ... ಅವಮಾನದಿಂದ ಕಣ್ಣು ತುಂಬಿಕೊಂಡು  ಹಾಗೇ ಹಿಂತಿರುಗಿ ಬಂದೆ...

 ಈ ಎರಡೂ ಸಂದರ್ಭದಲ್ಲೂ ನಾನು ನಾನೇ ಆಗಿದ್ದೆ.. ಆದರೆ ಮೊದಲ ಸಂದರ್ಭದಲ್ಲಿ ನಾನು ಹೇಗೆ ಆ  ಕಷ್ಟಜೀವಿ ಮನುಷ್ಯನಿಗಿಂತ  ಉತ್ತಮಳಾದೆ? ಹಾಗೂ  ಇನ್ನೊಂದು ಸಂದರ್ಭದಲ್ಲಿ ಹೇಗೆ ಯಾಕೆ ನಿಕೃಷ್ಟಳಾದೆ?
 ತಿಳಿಯುತ್ತಿಲ್ಲ

 *******************************

1 ಕಾಮೆಂಟ್‌: