ಅನೇಕ ವರ್ಷಗಳಾದರೂ ಆ ಸುಂದರ
ಬಾಲ್ಯ, ಆ ದೀಪಾವಳಿಯ ಸಡಗರ ಮನಸ್ಸಿನಲ್ಲಿ ಸದಾ ಮಿಂಚುತ್ತಿರುತ್ತದೆ.
ನನ್ನ ಎಳೆತನವನ್ನು ಒ೦ದು ಸರಳವಾದ ಚಿಕ್ಕ ಊರು, ಶಿಮ್ಮೊಗ್ಗ ಜಿಲ್ಲೆಯ ಸೊರಬದಲ್ಲಿ ಕಳೆದೆ.
ಹಬ್ಬದ ಹಿಂದಿನ ದಿನ ನೀರು
ತುಂಬೋ ಹಬ್ಬ. ಅವತ್ತು ಮನೆ ಎಲ್ಲಾ ಸಗಣಿಯಿಂದ ಸಾರಿಸಿ, ಗೋಡೆ ಅಂಚಿಗೆ ಮತ್ತೆ ಹೊಸಿಲುಗಳ ಮೇಲೆ ರಂಗೋಲಿ
ಹಾಕುತ್ತಿದ್ದರು.
ಹಾಗೇ ಅಡಿಗೆಮನೆ ಹಾಗೂ ಬಚ್ಚಲು ಮನೆಯ ಒಲೆಗಳನ್ನು ಸಾರಿಸಿ, ಹಂಡೆಯನ್ನು
ಚನ್ನಾಗಿ ತೊಳೆದು ನೀರು ತುಂಬುತ್ತಿದ್ದರು. ಅದರ ಮುಂದೆ ದೀಪ ಇಟ್ಟು, ಪೂಜೆ ಮಾಡುತ್ತಿದ್ದೆವು. ಅಪ್ಪ
ಆ ಹಂಡೆಯ ಪೂಜೆಗೇ ಒಂದು ಶ್ಲೋಕ ರಚಿಸಿದ್ದರು.
ಅದೀಗ
ಪೂರ್ತಿ ನೆನಪಿಲ್ಲ ಅಂತೂ "........ ಭಾಂಡ ದೇವಿ ನಮೋಸ್ತುತೇ" ಅಂತ ಮುಗಿಯುತ್ತೆ.
ಮರುದಿನ ಎರೆದು ಕೊಳ್ಳೋ ಹಬ್ಬ. ಮಧ್ಯರಾತ್ರಿ ಯಾವಾಗಲೋ ಅಪ್ಪ ಎದ್ದು ಒಲೆ
ಉರಿ ಹಾಕಿರುತ್ತಿದ್ದರು.
ಹಬ್ಬದ ದಿನ ಎಲ್ಲರೂ ಬೇಗ ಎದ್ದರೆ ನಾನು ಚಿಕ್ಕವಳೆಂದು ನನಗೆ ರಿಯಾಯಿತಿ
, ಸ್ವಲ್ಪ ತಡವಾಗಿ ಏಳಲು ಅನುಮತಿ ಇರುತ್ತಿತ್ತು!
ಅಮ್ಮಎಲ್ಲರನ್ನೂ ದೇವರ ಮನೆಯಲ್ಲಿ ಚಾಪೆ ಹಾಕಿ ಕೂರಿಸಿ " ಅಶ್ವತ್ಥಾಮ
ಬಲಿರ್ವ್ಯಾಸ........." ಶ್ಲೋಕ ಹೇಳುತ್ತಾ ಎಣ್ಣೆ ಒತ್ತುತ್ತಿದ್ದರು.
ಆಮೇಲೆ ಅಮ್ಮನೋ ಅಕ್ಕನೋ ನನಗೆ ಸ್ನಾನ ಮಾಡಿಸುತ್ತಿದ್ದರು.
ಅಕ್ಕ ಮನೆಯ ಮುಂದೆ , ಹಿತ್ತಿಲಲ್ಲಿ ತುಳಸೀ ಕಟ್ಟೆಯ ಮುಂದೆ ರಂಗೋಲಿ ಹಾಕುತ್ತಿದ್ದಳು.
ಅವಳ ರಂಗೋಲಿ ಹಾಕುವ ರೀತಿಯೇ ವಿಭಿನ್ನ! ಮಿಂಚಿನ ರೀತಿಯಲ್ಲಿ ಯಾವ ಚುಕ್ಕಿಯ ಆಧಾರವೂ ಇಲ್ಲದೇ ಅವಳಿಡುವ ಮನೋಹರ ವಿನ್ಯಾಸಗಳು
ಎಂದೂ ಪುನರಾವರ್ತನೆಯಾಗಿದ್ದಿಲ್ಲ. ಅವಳು ಒಬ್ಬ ಅಭಿಜಾತ ಕಲಾವಿದೆ.
ಆಮೇಲೆ ಹೊಸ ಬಟ್ಟೆ ಹಾಕಿ
ಕೊಂಡು ಬರುವಷ್ಟರಲ್ಲಿ ಅಪ್ಪ ಪೂಜೆ ಶುರು ಮಾಡಿರುತ್ತಿದ್ದರು. ಅವರು ಪ್ರತಿ ದಿನ ಮಂತ್ರೋಕ್ತವಾಗಿ ಪೂಜೆ
ಮಾಡುತ್ತಿದ್ದರು.
ಆಗಿನ ಹಬ್ಬದೂಟ ಕೂಡ ಸರಳವಾಗಿದ್ದರೂ ಸ್ವಾದಿಷ್ಟವಾಗಿರುತ್ತಿತ್ತು,
ಆಗ ಎಲ್ಲರ ಜೊತೆ ಕುಳಿತು ಅಕ್ಕ ಅಣ್ನಂದಿರ ಜೊತೆ ಹರಟುತ್ತಾ, ಜಗಳವಾಡುತ್ತಾ
ಊಟ ಮಾಡುತ್ತಿದ್ದುದು ನೆನಪಾದಾಗ ಏನೋ ಕಳೆದು ಕೊಂಡಂತಾಗುತ್ತದೆ.
ಮರುದಿನ ಬಲಿ ಪಾಡ್ಯಮಿಯಂದು ಎಲ್ಲ ಹೊಸಿಲಿನ ಎರಡೂ ಬದಿಯಲ್ಲೂ ಒರಳು ಕಲ್ಲಿನ ಮತ್ತು ಹಂಡೆಯ ಮೇಲೂ ಬಲೀಂದ್ರನ್ನ ಮಾಡಿಡುತ್ತಿದ್ದರು. ಅಂದರೆ
ಸಗಣಿಯಿಂದ ಪುಟ್ಟ ಗೋಪುರವನ್ನು ಮಾಡಿ, ಅದರ ಮೇಲೆ ಚಂಡು ಹೂ ಸಿಗಿಸಿ, ಜೊತೆಗೆ ತೆಂಗಿನ ಸಿಂಗಾರವನ್ನು
ಇಡುತ್ತಿದ್ದರು.
ಅಪ್ಪ ಒಂದು ಆಕಾಶ ಬುಟ್ಟಿ ಮಾಡಿಸಿದ್ದರು. ರಾತ್ರಿ ಅದರಲ್ಲಿ ದೀಪ ಹಚ್ಚಿ ಮನೆಯ ಅಟ್ಟದ ಮೇಲೆ ಹೊರಗಿನಿಂದ ಕಾಣುವಂತೆ
ಇಡುತ್ತಿದ್ದೆವು.
ಆಗ ಈಗಿನಂತೆ ಪಟಾಕಿ ಸಿಗುತ್ತಿರಲಿಲ್ಲ. ಕೆಲವೇ ಅತಿ ಶ್ರೀಮಂತರು ಪಟಾಕಿ
ಹೊಡೆಯುತ್ತಿದ್ದರೆ, ನಾವು ಅದನ್ನು ನೋಡಿ ತೃಪ್ತಿ ಪಟ್ಟುಕೊಳ್ಳುತ್ತಿದ್ದೆವು. ಅಪ್ಪ ಒಂದು ಉದ್ದವಾದ
ಕೋಲಿಗೆ ಬೆಂಕಿ ಹತ್ತಿಸಿ ಕೊಡುತ್ತಿದ್ದರು ನಾವು ಅದರ ಇನ್ನೊಂದು ತುದಿ ಹಿಡಿದುಕೊಂಡು, ಅದನ್ನು ಆಡಿಸುತ್ತಾ
ವಿವಿಧ ವಿನ್ಯಾಸಗಳನ್ನು ಮಾಡಿ ಆನಂದಿಸುತ್ತಿದ್ದೆವು.
ಇದೆಲ್ಲಾ ನೆನಪಾದಾಗ, ಆ ಪೈಪೋಟಿ ಇಲ್ಲದ, ಕಪಟವಿಲ್ಲದ, ಕೇವಲ ಪ್ರೀತಿ,
ಮುಗ್ಧತೆ ಯಿಂದ ಕೂಡಿದ ಸರಳ ಸುಂದರ ಬಾಲ್ಯ ಮತ್ತೊಮ್ಮೆ ಬರಬಾರದೇ ಅನ್ನಿಸುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ