ಸೋಮವಾರ, ಅಕ್ಟೋಬರ್ 29, 2012

ಶಿಕ್ಷಕರ ದಿನಾಚರಣೆ


ಕಳೆದ ತಿಂಗಳು ಡಾ. ರಾಧಾ ಕೃಷ್ಣನ್ ರವರ ಜನ್ಮದಿನದ ಸ್ಮರಣಾರ್ಥವಾಗಿ  ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಈಗ ಈ ಆಚರಣೆ ಎಷ್ಟು ಪ್ರಸ್ತುತ? ಎಷ್ಟು ಅರ್ಥಪೂರ್ಣ?

ಕೇವಲ ಶಿಕ್ಷಕರಿಗೆ " ಹ್ಯಾಪಿ ಟೀಚರ್ಸ್ ಡೇ ......! "ಎಂದು ಎದುರಿಗೆ ಕಂಡಾಗಲೋ, ಎಸ್. ಎಮ್. ಎಸ್. ಅಥವಾ ಈ ಮೇಲ್ ಮೂಲಕವೋ ಹಾರೈಸಿದರೆ ಸಾಕೇ? ಮ್ಯಾನೇಜ್ಮೆಂಟಿನವರು ಬೋನಸ್ಸನ್ನೋ, ಏನಾದರೂ ಉಡುಗೊರೆಯನ್ನೋ ನೀಡಿ, ಒ೦ದು ಊಟ ಹಾಕಿ, ಅರ್ಧ ದಿನ ರಜೆ ಕೊಟ್ಟು ಮನೆಗೆ ಕಳಿಸಿ ಬಿಡುವುದು. ಇದೇ ಶಿಕ್ಷಕರ ದಿನಾಚರಣೆಯೇ?

ಅದೇ ರೀತಿ ಶಿಕ್ಷಕರು (  ಬಹುತೇಕ ಶಿಕ್ಷಕಿಯರು) ಆ ದಿನ ಚನ್ನಾಗಿ ಅಲಂಕಾರ ಮಾಡಿಕೊಂಡು, ನಗು ಮುಖದಿಂದ ಎಲ್ಲರ ಶುಭಾಶಯ ಗಳನ್ನೂ ಸ್ವೀಕರಿಸಿ, ಅವರಿಗೆ ಪ್ರತಿ ವಂದಿಸುತ್ತಾ, ತಾವು ಶಿಕ್ಷಕರಾದುದ್ದು ಸಾರ್ಥಕವಾಯಿತು ಎಂಬಂತೆ ಸಂತೃಪ್ತರಾಗಿರುತ್ತಾರೆ.

ಇನ್ನು ಮಕ್ಕಳು;

ಅವರು ಈಗ ಯಾರು ತಮಗೆ ಪಾಠ ಮಾಡುತ್ತಿದ್ದಾರೋ,  ಅದರಲ್ಲೂ ವಿಜ್ಞಾನ, ಗಣಿತ, ಇಂಗ್ಲಿಷ್ ನಂತಹ ಮುಖ್ಯವಾದ ವಿಷಯಗಳನ್ನು ಬೋಧಿಸುತ್ತಾರೋ, ಅವರಿಗೆ ಮಾತ್ರ ಹೂಗುಚ್ಛವನ್ನೋ, ಶುಭಾಶಯ ಪತ್ರವನ್ನೋ ( ಗ್ರೀಟಿಂಗ್ಸ್) ಕೊಟ್ಟು " ಹ್ಯಾಪೀ..... ಟೀಚರ್ಸ್ ಡೇ........." ಅಂತ ಉಲಿಯುತ್ತಾರೆ.

ಇವೆಲ್ಲಾ ಅವರ ಮೇಲಿನ ಪ್ರೀತಿಗೋ ಇಲ್ಲ, ನಮಗೆ ವಿದ್ಯಾದಾನ ಮಾಡುತ್ತಿರುವ ಗುರುಗಳು ಎಂಬ ಗೌರವಕ್ಕೋ ಅಲ್ಲ. ತಮಗೆ ಟೆಸ್ಟ್ ಗಳಲ್ಲಿ ಸ್ವಲ್ಪ ಹೆಚ್ಚು ಅಂಕ ನೀಡಲಿ, ತಮ್ಮ ತಪ್ಪುಗಳನ್ನು ಮುಖ್ಯೋಪಾಧ್ಯಾಯರಿಗೋ, ಇಲ್ಲ ಪೋಷಕರಿಗೋ ತಿಳಿಸದೇ ಇರಲಿ, ಕಾಪಿ ಹೊಡೆಯುವಾಗ ನೋಡಿದರೂ ನೋಡದಂತಿರಲಿ, ತಮ್ಮ ತಂದೆ ತಾಯಿಯರೆದುರು ತಮ್ಮನ್ನು ಚನ್ನಾಗಿ ಹೊಗಳಲಿ ಎಂದು ಅವರಿಗೆ ಕೊಡುವ ಲಂಚ ಇದು.

ತಮಗೆ ಅಕ್ಷರಾಭ್ಯಾಸ ಮಾಡಿಸಿದ, ತಮ್ಮ ಕೈ ಹಿಡಿದು ತಿದ್ದಿಸಿ ಬರೆಸಿದ, ತಾಯಿಯನ್ನು ಅಗಲಿ ಬಂದ ಹಸುಳೆಗಳೆಂದು ಅವ್ಯಾಜ ಮಮಕಾರ ತೋರಿಸಿದ ಪ್ರಾಥಮಿಕ ಶಿಕ್ಷಕರನ್ನು ಮುಂದಿನ ತರಗತಿಗೆ ಹೋದ ಮರು ಕ್ಷಣವೇ ಮರೆತು ಬಿಡುತ್ತಾರೆ!
ಅವರಿಗೆ ಏಕೆ ವಿಷ್ ಮಾಡಬೇಕು? ಅದ್ರಿಂದ ಏನು ಲಾಭ? ಅವರೆಲ್ಲಾ ಬರೀ ಅ, ಆ ಇ, ಈ ಎಬಿಸಿಡಿ ಕಲಿಸೋಕ್ಕೇ ಲಾಯಕ್ಕಾದವರು. ಅವರಿಗಿಂತ ನಮಗೇ ಜಾಸ್ತಿ ಗೊತ್ತು, ಅಂದಮೇಲೆ ಅವರಿಗೇಕೆ ಗೌರವ ತೋರಿಸ ಬೇಕು? ಅನ್ನೋದು ಈ ಮೇಧಾವಿ ಮಕ್ಕಳ ಲೆಖ್ಖಾಚಾರ.

ಇನ್ನು ಈ ಜಾಣಾಕ್ಷ ಮಕ್ಕಳು ಪೋಷಕರನ್ನು ಕಾಡಿ ಬೇಡಿ ಸ್ವಲ್ಪ ಹೆಚ್ಚಿನ ಬೆಲೆಯ ಸುಂದರವಾದ ಬೊಕ್ಕೆಯನ್ನು ಮುಖ್ಯೋಪಾಧ್ಯಾಯರಿಗೆ ತರುತ್ತಾರೆ. ಯಾಕೆಂದರೆ  'ನಮ್ಮನ್ನು ಬೈಯ್ಯಲು, ಶಿಕ್ಷಿಸಲು, ಪೋಷಕನ್ನು ಕರೆದು ದೂರು ಹೇಳಲು, ಕಡೆಗೆ ತಮ್ಮನ್ನೂ ಶಾಲೆಯಿಂದ ಹೊರಗೆ ತಳ್ಳಲು ಕೂಡಾ ಸಮರ್ಥರು ಎಂದರೆ ಕೇವಲ ಮುಖ್ಯೋಪಾಧ್ಯಾಯರು ಎಂದು  ಅವರಿಗೆ ಚನ್ನಾಗಿ ಗೊತ್ತು. ಅದಕ್ಕೇ ಅವರನ್ನು ಚನ್ನಾಗಿಟ್ಟುಕೊಳ್ಳಬೇಕಲ್ಲಾ.....' ಎಂದು ಶನೀಶ್ವರನಿಗೆ ಎಳ್ಳೆಣ್ಣೆ ದೀಪ ಹಚ್ಚುವ ಹಾಗೆ ಅವರಿಗೊಂದು ದೊಡ್ಡ ಬೊಕ್ಕೆ, ಒಂದು ಗಿಫ್ಟ್ ಕೊಟ್ಟು ಬಿಡುತ್ತಾರೆ.

ಅವರಿಗಿಂತಲೂ ಅವರ ಪೋಷಕರು ಇನ್ನೂ ವ್ಯವಹಾರಸ್ಥರು! 

" ಇಲ್ನೋಡು, ಈ ಸಂಗೀತದ ಟೀಚರ್ ಮತ್ತೆ ಕ್ರಾಫ್ಟ್ ಟೀಚರ್ ವಾರಕ್ಕೊಂದ್ ಸಲ ತಾನೆ ಬರೋದು? ಅವರಿಗೆ ಈ ಐದ್ ರೂಪಾಯಿ ಗ್ರೀಟಿಂಗ್ಸ್ ಸಾಕು. ಸೈನ್ಸ್ ಮತ್ತೆ ಮ್ಯಾತ್ಸ್  ತುಂಬಾ ಮುಖ್ಯ. ಅದಕ್ಕೆ ಆ ಟೀಚರ್ಸ್ ಗೆ ಇವೆರಡು ಬೊಕೆ ಕೊಡು. ಕ್ಲಾಸ್ ಟೀಚರ್ ಗೆ ಈ ದೊಡ್ಡ ಬೊಕ್ಕೆ.ಕನ್ನಡ ಟೀಚರ್ ಗೆ ಏನೂ ಬೇಕಿಲ್ಲ. ಅವರು ಹೇಳೋದನ್ನ ಕಲಿಯೋದ್ ಸಾಲ್ದು ಅಂತ ಗ್ರೀಟಿಂಗ್ಸ್ ಬೇರೇ ದಂಡ......" 

ಹೀಗೆ ಟೀಚಸ್ ನ ಕ್ಯಾಟಗರೈಸ್ ಮಾಡಿ, ಕೆಲವರ ಬಗ್ಗೆ ಅವಮರ್ಯಾದೆಯಿಂದ ಮಾತಾಡಿದರೆ, ಮಕ್ಕಳು ಹೇಗೆ ತಾನೇ ಗುರುಗಳನ್ನು ಗೌರವಿಸಬಲ್ಲರು?

ಪೋಷಕರು ಶಿಕ್ಷಕರ ಸಲುವಾಗಿ ಅಲ್ಲ, ಬದಲಾಗಿ ತಮ್ಮ ಮಕ್ಕಳ ಕ್ಷೇಮಕ್ಕಾಗೇ, ಗುರುಗಳನ್ನು ಹಾಗೂ ಅವರು ಕಲಿಸುವ ವಿಷಯವನ್ನೂ ಗೌರವಿಸಲು ಕಲಿಸಬೇಕು. ಇಲ್ಲವಾದರೆ ಯಾವ ರೀತಿ ಕಠಿಣವಾದ ಕಲ್ಲು ಅದರ ಮೇಲೆ ಬಿದ್ದ ನೀರನ್ನು ಹೀರಿಕೊಳ್ಳುವುದಿಲ್ಲವೋ ಅದೇರೀತಿ ಅನಾದರ, ಉಪೇಕ್ಷೆಗಳಿಂದ ಕಠಿಣವಾದ ಮಕ್ಕಳ ಮನಸ್ಸು ಜ್ಞಾನ ಧಾರೆಯನ್ನು ಹೀರಿಕೊಳ್ಳಲು ಅಸಮರ್ಥವಾಗಿರುತ್ತದೆ.

ನನ್ನ ಅನಿಸಿಕೆಯಂತೆ, ಈ ಶಿಕ್ಷಕರ ದಿನಾಚರಣೆಯನ್ನು ಆಚರಿಸುವುದೇ ಇಂದಿನ ಸಂದರ್ಭದಲ್ಲಿ ಅಪ್ರಸ್ತುತ. ಅದಕ್ಕೆ ಬದಲಾಗಿ ಪೋಷಕರು ಮಕ್ಕಳಿಗೆ ಶಿಕ್ಷಣದ, ಶಿಕ್ಷಕರ ಮಹತ್ವ ತಿಳಿಸುತ್ತಾ,  ಪ್ರತಿನಿತ್ಯ ಗುರುಶಿಷ್ಯರ ನಡುವಿನ ಬಾಂಧವ್ಯವನ್ನು ಬಲಪಡಿಸುವಂತೆ, ಅವರು ಕಲಿಸುವ ವಿಷಯ ಯಾವುದೇ ಇರಲಿ, ತಾರತಮ್ಯವಿಲ್ಲದೇ ಎಲ್ಲರನ್ನೂ ಸಮಾನವಾಗಿ ಗೌರವಿಸುವಂತೆ ಮಾಡಿದರೆ ಆಗ ಪ್ರತಿದಿನವೂ ಶಿಕ್ಷಕರ ದಿನಾಚರಣೆಯೇ ಆಗುವುದರಲ್ಲಿ ಸಂಶಯವಿಲ್ಲ.

ಶನಿವಾರ, ಅಕ್ಟೋಬರ್ 27, 2012

ಚಾತುರ್ವರ್ಣ ಎಂಬ ಅದ್ಭುತ ಪದ್ಧತಿ




ಅಮೀಶ ಅವರು ರಚಿಸಿದ   THE IMMORTALS OF MELUHAS  ಕಾದಂಬರಿಯಲ್ಲಿ ನನಗೆ ಅತಿಯಾಗಿ ಮೆಚ್ಚಿಗೆಯಾದ, ಪದೇ ಪದೇ ಆ ಪುಟಗಳನ್ನು ಓದುವಂತೆ ಮಾಡುವ ಭಾಗವೆಂದರೆ ನಾಲ್ಕು ವರ್ಣಗಳನ್ನು ವಿಂಗಡಿಸುವ ಪರಿ!


ಮೈಕಾ ಪದ್ಧತಿ ಎಂದು ಕರೆಯಲ್ಪಡುವ ಈ ಕ್ರಮ ಎಷ್ಟೊಂದು ವೈಜ್ಞಾನಿಕವಾಗಿದೆ ಎಂದು ಅಚ್ಚರಿಯಾಗುತ್ತದೆ.


ದೇವೋತ್ತಮ ಶ್ರೀರಾಮಚಂದ್ರನಿಂದ ಆರಂಭವಾಯಿತು ಎನ್ನಲಾದ ಆ ಪದ್ಧತಿಯ ಪ್ರಕಾರ ಪ್ರತಿ ಗರ್ಭಿಣಿ ಸ್ತ್ರೀಯೂ ಹೆರಿಗೆಯ ಸಮಯ ಬಂದಾಗ ನಗರದ ಹೊರಭಾಗದಲ್ಲಿರುವ, ಸುವ್ಯವಸ್ಥಿತವಾದ, ಪರಿಣಿತ ವೈದ್ಯ ಬಳಗವನ್ನು ಹೊಂದಿದ ಆರೋಗ್ಯ ಕೇಂದ್ರಕ್ಕೆ ದಾಖಲಾಗಬೇಕು. ಅಲ್ಲಿ ಅವಳ ಪತಿಗಾಗಲೀ ಅಥವಾ ಉಳಿದ ಕುಟುಂಬದ ಸದಸ್ಯರಿಗಾಗಲೀ ಪ್ರವೇಶ ಇರುವುದಿಲ್ಲ

.
ಪ್ರಸವದ ನಂತರ ಕೆಲ ಸಮಯದ ಆರೈಕೆ ಪಡೆದು ಆಕೆ ತನ್ನ ಮಗುವನ್ನು ಅಲ್ಲೇ ಬಿಟ್ಟು ಸ್ವಗೃಹಕ್ಕೆ ಹಿಂತಿರುಗಬೇಕು......!


ಅಲ್ಲಿ ಎಲ್ಲಾ ಮಕ್ಕಳನ್ನು ಸಮಾನವಾದ ರೀತಿಯಲ್ಲಿ ಬೆಳೆಸಲಾಗುತ್ತದೆ. ಸಮಾನ ಆಹಾರ, ಉಪಚಾರ, ಶಿಕ್ಷಣ ಎಲ್ಲವನ್ನೂ ನೀಡಲಾಗುತ್ತದೆ. ಮಕ್ಕಳಿಗೂ ತಂದೆತಾಯಿಗಳಿಗೂ ಯಾವುದೇ ಸಂಪರ್ಕವಿರುವುದಿಲ್ಲ ! ಅಲ್ಲದೇ ಅವರು ಯಾರ ಮಕ್ಕಳು ಎಂಬುದನ್ನು ಅತಿ ಗೋಪ್ಯವಾಗಿಡಲಾಗುತ್ತದೆ.


ಆ ಮಕ್ಕಳು, ಹದಿ ವಯಸ್ಸಿಗೆ ಕಾಲಿಟ್ಟಾಗ ಸೋಮರಸ ಎನ್ನುವ ಒಂದು ಅದ್ಭುತವಾದ ಔಷಧವನ್ನು ನೀಡಲಾಗುತ್ತದೆ.ಮತ್ತು ಅವರು  ಹದಿನೈದು ವರ್ಷದವರಾದಾಗ, ಅವರನ್ನು ಸಮಗ್ರವಾದ ಪರೀಕ್ಷೆಗೊಳಪಡಿಸಲಾಗುತ್ತದೆ.


ಈ ಪರೀಕ್ಷಯ ಫಲಿತಾಂಶದ ಆಧಾರದಿಂದ ಅವರನ್ನು ಬ್ರಾಹ್ಮಣ, ಕ್ಷತ್ರಿಯ,  ವೈಶ್ಯ ಮತ್ತು ಶೂದ್ರರೆಂದು ವಿಭಾಗಿಸಲಾಗುತ್ತದೆ.


ಹಾಗಾಗಿ ಪ್ರತಿಯೊಬ್ಬರು ಅವರ ಸಾಮರ್ಥ್ಯ ಹಾಗೂ ಪ್ರತಿಭೆಯ ಆಧಾರದಿಂದ ಇಂಥ ವರ್ಣಕ್ಕೆ ಸೇರಿದವರೆಂದು ಗುರುತಿಸಲ್ಪಡುತ್ತಾರೇ ವಿನಃ ಅವರ ಹುಟ್ಟಿಗೆ ಕಾರಣವಾದವರಿಂದಲ್ಲ........!


ನಂತರ ಎಲ್ಲರೂ ಅವರವರ ವರ್ಣಗಳಿಗೆ ಅನುಸಾರವಾಗಿ ಹೆಚ್ಚಿನ ವಿದ್ಯಾಭ್ಯಾಸ ಮಾಡುತ್ತಾರೆ

.
ಆ ಸಮಯದಲ್ಲಿ ಯಾವ ಪಾಲಕರು ಸಂತಾನಾಪೇಕ್ಷಿಗಳಾಗಿ ಅರ್ಜಿ ಸಲ್ಲಿಸಿರುತ್ತಾರೋ ಅವರಿಗೆ ಅವರ ವರ್ಣದ ಮಗುವನ್ನು ನೀಡಲಾಗುತ್ತದೆ

. ಅಂದರೆ ಉದಾಹರಣೆಗೆ ಬ್ರಾಹ್ಮಣ ತಂದೆ ತಾಯಿಗೆ ದೊರಕುವ ಮಗು ಬೇರೆ ವರ್ಣಕ್ಕೂ ಸೇರಿರಬಹುದು. ಅವರು ಆ ಮಗುವನ್ನು ತಮ್ಮ ಸ್ವಂತ ಮಗುವಿನಂತೆ ಸಲಹುತ್ತಾರೆ.


ಇದರಿಂದ ಪ್ರತಿ ಮಗುವೂ ಜೀವನದಲ್ಲಿ ಬೆಳೆಯಲು ಹಾಗೂ ಬೆಳಗಲು ಸಮಾನ ಅವಕಾಶ ಪಡೆಯುತ್ತದೆ.


ಇಂಥ ಸುವ್ಯವಸ್ಥೆ ಇಂದಿಗೂ ಇದ್ದಿದ್ದರೆ, ನಮ್ಮ ಸಮಾಜದ ಹಿನ್ನೆಡೆಗೆ ಮುಖ್ಯವಾದ ಕಾರಣವಾದ. ಎಲ್ಲಾ ಸಮಸ್ಯೆಗಳಿಗೂ ಮೂಲವಾದ ಈ ಜಾತಿ ವೈಷಮ್ಯ, ಹೊಲಸು ಜಾತಿ ರಾಜಕಾರಣ, ನಾಚಿಕೆಗೇಡಿನ ಅಸ್ಪೃಶ್ಯತೆ, ಅಸಮಾನತೆ ಯಾವುದೂ ಇರುತ್ತಿರಲಿಲ್ಲ ಅಲ್ಲವೇ.......? 

ತುಲನೆ.......




" ಆಸೆಯೇ ದುಃಖದ ಮೂಲ ಎನ್ನುವ ಆರ್ಯ ಸತ್ಯವನ್ನು ಬುದ್ಧ ಕಂಡು ಹಿಡಿದ.   ನಾನೇ ಬುದ್ಧನಾಗಿದ್ದರೆ ಅದಕ್ಕಿಂತ ಹೆಚ್ಚು ಆಳವಾದ ಸತ್ಯವನ್ನೇ ಹೇಳ್ತಿದ್ದೆ; ತುಲನೆಯೇ ದುಃಖದ ಮೂಲ ಅಂತ..... "



ಇದು ಎಸ್. ಎಲ್. ಭೌರಪ್ಪನವರು ಅವರ `ಮಂದ್ರ' ಕೃತಿಯಲ್ಲಿ ರಾಮ್ ಚರಣ ಮಿತ್ತಲ್ ಸಾಹೇಬರ  ಬಾಯಲ್ಲಿ ಆಡಿಸಿದ ಮಾತು ಒಂದು ಸೂಕ್ತಿಯಂತಿದೆ. ಇದು ಒಂದು ಸಾರ್ವಕಾಲಿಕ ಸತ್ಯ.

ನಾವು ನಮ್ಮ ಜೀವನದ ಹಾದಿಯನ್ನೊಮ್ಮೆ ತಿರುಗಿ ನೋಡಿದಾಗ ನಮ್ಮ ಬಹುತೇಕ ಕಳವಳಗಳ ಕಾರಣವು ತುಲನೆಯೇ ಆಗಿರುತ್ತದೆ.

ಹೆಚ್ಚಿನ ಪ್ರಸಂಗಗಳಲ್ಲಿ ನಾವು ನಮಗಿಂತ ಸಿರಿವಂತರನ್ನ ನಮ್ಮೊಂದಿಗೆ ಹೋಲಿಸಿಕೊಂಡು ಕರುಬುತ್ತಾ ನಮ್ಮಲ್ಲೇ ನಾವು ನೋಯುವುದುಂಟು. 

ಹಾಗೇ ನಮಗಿಂತಾ ಸುಂದರವಾಗಿರುವವರೂ, ನಮಗಿಂತಾ ಕೆಲಸ ಕಾರ್ಯಗಳಲ್ಲಿ ಕುಶಲರೂ, ಮಾತಿನಲ್ಲಿ ಜಾಣರೂ, ಜನರನ್ನು ತಮ್ಮ ಕಡೆಗೆ ಸೆಳೆದು ಕೊಳ್ಳಬಲ್ಲವರೂ ಆದ ಜನರನ್ನು ನಮ್ಮೊಂದಿಗೆ ತುಲನೆ ಮಾಡಿಕೊಂಡು ಸಂಕಟ ಪಡುತ್ತೇವೆ. ನಿಷ್ಕಾರಣವಾಗಿ ಅವರನ್ನು ದ್ವೇಷಿಸುತ್ತೇವೆ........  

ನಮ್ಮ ಹೊಟ್ಟೆಯಲ್ಲಿ ಬೆಂಕಿ ಬಿದ್ದಂತಾಗುತ್ತದೆ..........

"ಮನೆಯೊಳಗಣಾ ಕಿಚ್ಚು ಮನೆಯ ಸುಟ್ಟಲ್ಲದೇ ನೆರೆಮನೆಯ ಸುಡುವುದೇ........?"

ಬಸವಣ್ಣನವರ ಈ ವಚನ ಹೇಳುವಂತೆ ನಾವು ನಮ್ಮ ಹೊಟ್ಟೆ ಉರಿಯಿಂದ , ದ್ವೇಷದ ಕಾಳ್ಗಿಚ್ಚಿನಿಂದ ಕೇವಲ ನಮ್ಮ ಮನವನ್ನು ದಹಿಸಿಕೊಳ್ಳುತ್ತೇವೇ ವಿನಃ ಅದಕ್ಕೆ ಕಾರಣವಾದವರನ್ನಲ್ಲ.

ಆದರೆ ಈ ತುಲನೆ ಕೇವಲ ಅನರ್ಥಕಾರಿಯೇ.........? ಖಂಡಿತಾ ಇಲ್ಲ.....!

ಧನಾತ್ಮಕವಾದ ತುಲನೆ ಮನುಷ್ಯನ ಏಳಿಗೆಗೆ ದಾರಿ ದೀಪವಾಗುವುದು. ತಮಗಿಂತಾ ಜ್ಞಾನಿಗಳನ್ನು ನೋಡಿ ನಾವೂ ಅವರಂತೆ ಆಗಬೇಕೆಂದು ಹೆಚ್ಚು ಅಧ್ಯಯನ ಮಾಡುವವರು ಸುಜ್ಞಾನದ ಹಾದಿಯಲ್ಲಿ ಸಾಗುತ್ತಾರೆ.

ತನಗಿಂತ ದೀನರನ್ನು, ದರಿದ್ರರನ್ನು, ಅಜ್ಞಾನಿಗಳನ್ನು, ತನ್ನೊಂದಿಗೆ ಹೋಲಿಸಿಕೊಂಡು, ಅವರನ್ನು ಅವರನ್ನು ಹೀಯಾಳಿಸದೇ, ಅವರನ್ನು ತಿರಸ್ಕಾರದಿಂದ ತುಚ್ಛವಾಗಿ ಕಾಣದೇ, ಮೇಲೆತ್ತಲು ತನ್ನ ಕೈಯ್ಯಾಸರೆ ನೀಡುವವನು ಶ್ರೇಷ್ಠ ಮಾನವನಾಗುತ್ತಾನೆ.......

``ಮಂದ್ರ'  ಓದಿದಾಗ ನನ್ನ ಮನಸ್ಸಿ ಅನ್ನಿಸಿದ್ದು ಹೀಗೆ. ಅದನ್ನೇ ಹಂಚಿಕೊಂಡಿದ್ದೇನೆ ಇದನ್ನು ನನ್ನ ಬ್ಲೋಗ್ ನಲ್ಲೂ ಕಾಣಬಹುದು.

ನಾನು ಕ೦ಡ ಪರಮಹ೦ಸರು



                               ನಾನು ಕ೦ಡ ಪರಮಹ೦ಸರು

ಹೀಗೊಬ್ಬ ವ್ಯಕ್ತಿ ಇರಲು ಸಾಧ್ಯವೇ...........?
ಸದಾ ಸ್ವಾಧ್ಯಾಯ ನಿರತರಾಗಿ, ತಮ್ಮ ಜೀವನವನ್ನೇ ಪ್ರತಿಫಲಾಕಾಂಕ್ಷೆ ಇಲ್ಲದೇ. ಜ್ಞಾನದಾನ, ವಿದ್ಯಾದಾನ ಮಾಡಲು ಹಾತೊರೆಯುವವರು............?
ಸ್ತುತಿ ನಿಂದೆಗಳೆರಡನ್ನೂ ಸಮಾನವಾಗಿ ಸ್ವೀಕರಿಸುವವರು........?
ಉದ್ದಾಮ ಪಂಡಿತರಾದರೂ ಕೀರ್ತಿ ಲಾಲಸೆ ಇಲ್ಲದವರು.......?
ಅಸದೃಶ ಕವಿತಾ ಪ್ರೌಢಿಮೆ ಇದ್ದರೂ ಪ್ರಚಾರ ಲೋಲುಪ್ತಿ ಇಲ್ಲದವರು........?
ಪ್ರಾಪಂಚಿಕ  ಜಗತ್ತಿನಲ್ಲಿ ಕಮಲಪತ್ರದಂತೆ ಸಂಸಾರಕ್ಕೆ ಅಂಟಿಯೂ ಅಂಟದ0ತ್ತಿದ್ದವರು............?.
ಹೀಗೊಬ್ಬ ಮಹಾನ್ ಸಾಧಕರಿದ್ದರುಪ್ರತಿ ಮಾತನ್ನೂ ಕಾವ್ಯವಾಗಿಸಬಲ್ಲ. ಪ್ರತಿ ಭಾವವನ್ನೂ ಗೀತೆಯಾಗಿಸಬಲ್ಲ, ಪ್ರತಿ ಜೀವಿಯಲ್ಲೂ ದೈವತ್ವವನ್ನೇ ಕಾಣಬಲ್ಲ ಮಹಾನ್ ಚೇತನ.........
 ಇಪ್ಪತ್ತೇಳು ವರ್ಷಗಳ ಕೆಳಗೆ ಭೌತಿಕ ಜಗತ್ತನ್ನು ತೊರೆದು ಪಂಚಭೂತಗಳಲ್ಲಿ ಲೀನವಾದರು. ಅವರ ಸ್ವಸ್ಥಾನವಾದ  ಭಗವಂತನ ಚರಣಾರವಿಂದಕ್ಕೇ ಹಿಂತಿರುಗಿದರು.
ಇವರೇ ಸಂಸ್ಕೃತ ವಿದ್ವಾನ್, ಕನ್ನಡ ಮತ್ತು ಹಿಂದಿ  ಪಂಡಿತ್  ಬಿ. ವೆಂಕಟರಾಮ ಭಟ್ಟರು.
ಎಲ್ಲ ಕಾಲದಲ್ಲೂ ಅನೇಕಾನೇಕ ಪ್ರತಿಭಾವಂತ ವಿದ್ವಾಂಸರೂ, ಅಪ್ರತಿಮ ಕವಿಗಳೂ, ಇದ್ದೇ ಇರುತ್ತಾರೆ. ಆದರೆ ಇಂತಹ ಶಿಶು ಸದೃಶ ನಿರ್ಮಲಾಂತಃಕರಣ ಉಳ್ಳ, ಇಡೀ ಜಗತ್ತನ್ನೇ ನಿಷ್ಕಲ್ಮಶವಾಗಿ ಪ್ರೀತಿಸುವ, ದ್ವೇಷದ ಪದವನ್ನೇ ಅರಿಯದತನ್ನನ್ನು ತಿರಸ್ಕರಿಸುವವರನ್ನೂ,ವಂಚಿಸುವವರನ್ನೂ ಆದರಿಸುವ ಇವರಂಥವರು ಅತಿ ವಿರಳ.    ಇವರನ್ನು  ' ಪರಮಹಂಸರು' ಎಂದರೆ ಅತಿಶಯೋಕ್ತಿಯಲ್ಲ.
ಕವಿತೆಗಳನ್ನು ಛಂದೋಬದ್ಧವಾಗಿ, ವ್ಯಾಕರಣ ದೋಷವಿಲ್ಲದೇ, ಸರಾಗವಾಗಿ ರಚಿಸಬಲ್ಲವರಾಗಿದ್ದ ಇವರು ಜೀವನದ ಬಹು ಸಮಯವನ್ನು ಸಾಹಿತ್ಯ ಕೃಷಿಯಲ್ಲೇ ಸವೆಸಿದರು. ಹಗಲಿರುಳೆನ್ನದೇ, ಯಾವ ಟೀಕೆ, ನಿಂದನೆ ಹಾಗೂ ಮೂದಲಿಕೆಗಳಿಗೆ ಕಿವಿಗೊಡದೇ ಬರೆದೇ ಬರೆದರು.
ಏತಕ್ಕಾಗಿ ಬರೆದರು........? .
ಪ್ರಶಂಸೆ, ಪ್ರಸಿದ್ಧಿ, ಸನ್ಮಾನ ಅಥವಾ ಸಂಪತ್ತಿಗಾಗಿಯೇ.......? ಖಂಡಿತಾ ಇಲ್ಲ!
.ಕೇವಲ ಆತ್ಮತೃಪ್ತಿಗಾಗಿ, ಆತ್ಮಾನ೦ದಕ್ಕಾಗಿ." ನೀವೇಕೆ ಬರೀತೀರಿ? ಇದರಿಂದ ಏನು ಪ್ರಯೋಜನ......?" ಅಂತ ಯಾರಾದರೂ ಕೇಳಿದರೆ  " ನವಿಲು ನರ್ತಿಸುವುದು, ಕೋಗಿಲೆ ಹಾಡುವುದು ಯಾರಾದರೂ ಮೆಚ್ಚಲಿ ಎಂದೇ.........?'' ಎಂದು ನಗುತ್ತಾ ಉತ್ತರಿಸಿ ಬಿಡುತ್ತಿದ್ದರು.
ಯಾರಾದರೂ ಸಾಹಿತ್ಯಾಸಕ್ತರು ಕೇಳಿದರೆ ಅವರ ಕಾವ್ಯವನ್ನು ಉತ್ಸಾಹದಿಂದ ಓದಿ, ವಿವರಿಸುತ್ತಿದ್ದ ಅವರು ಎಲ್ಲರನ್ನೂ ಸಹೃದಯರೆಂದೇ ನಂಬಿದ್ದರು. ನಮಸ್ಕರಿಸಿದವರಿಗೆಲ್ಲಾ " ಯದಿಚ್ಛಸಿ ತದಸ್ತುತೇ......." ಎಂದು ಮಮತೆಯಿಂದ ಆಶೀರ್ವದಿಸುತ್ತಿದ್ದರು.
 ಪಾಠ ಹೇಳಿ ಎಂದವರಿಗೆಲ್ಲಾ ವಯಸ್ಸಿನ, ದೇಹಸ್ಥಿತಿಯ, ಸಮಯಾಸಮಯದ ಪರಿವೆ ಇಲ್ಲದೇ, ಪ್ರತಿಫಲಾಪೇಕ್ಷೆ ಇಲ್ಲದೇ ವಿದ್ಯಾದಾನ ಮಾಡುತ್ತಿದ್ದರು.ಹಲವಾರು  ಸಂಸ್ಕೃತ ಕೃತಿಗಳನ್ನು ರಚಿಸಿರುವ ಶ್ರೀಯುತರು ಸಾಂಪ್ರದಾಯಿಕ ಸಾಹಿತ್ಯ ಶೈಲಿಗೇ ಜೋತು ಬಿದ್ದವರಲ್ಲ. ಬದಲಾಗಿ ಹೊಸ ಪ್ರಯೋಗಗಳಿಗೆ ನಾಂದಿ ಹಾಡುತ್ತಿದ್ದರು.
ಪ್ರಥಮ ಬಾರಿಗೆ ಕನ್ನಡ ಸಾಹಿತ್ಯದಲ್ಲಿ ಅತ್ಯಂತ ಪ್ರಚಲಿತವಾಗಿರುವ ಭಾಮಿನೀ, ವಾರ್ಧಕಗಳಂಥ ಛಂದಸ್ಸುಗಳಲ್ಲಿ ಸಂಸ್ಕೃತದಲ್ಲಿ ಮಹಾ ಕಾವ್ಯವನ್ನು  ರಚಿಸಿದ ಹೆಗ್ಗಳಕೆ ಶ್ರೀಮಾನ್ ಭಟ್ಟರಿಗೇ ಸಲ್ಲುತ್ತದೆ. ಅವರು ರಚಿಸಿದ ಇನ್ನೆರಡು ಮಹಾ ಕಾವ್ಯಗಳೆಂದರೆ ಮೋಹನಾಯನಮ್ ( ಗಾಂಧೀಜಿಯವರ ಜೀವನ ಚರಿತ್ರೆ) ಹಾಗೂ ಶಂಕರ ವಿಜಯಮ್. .ಇದಲ್ಲದೆ ಸತಿ ಮಹಾಶ್ವೇತಾ, ಸತ್ಯವಿಜಯಂ ಮುಂತಾದ ನಾಟಕಗಳನ್ನೂ, ಅಂಗದ ಸಂವಾದ ಎಂಬ  ಗೀತರೂಪಕವನ್ನೂ ಅದೇ ಹೆಸರಿನ ಯಕ್ಷಗಾನ ರೂಪಕವನ್ನೂ ರಚಿಸಿ ಎಲ್ಲಾ ಪ್ರಕಾರದ ಸಾಹಿತ್ಯಪ್ರಕಾರದಲ್ಲೂ  ಬರೆಯುವ ತಮ್ಮ ಕೌಶಲ್ಯವನ್ನು  ನಿರೂಪಿಸಿದ್ದಾರೆ.
ಇವರು ಕನ್ನಡದಿಂದ ಸಂಸ್ಕೃತಕ್ಕೆ ಅನುವಾದ ಮಾಡಿದ ಡಿವಿಜಿಯವರ ಮಂಕುತಿಮ್ಮನ ಕಗ್ಗ
 ( ಮಂದತಿಮ್ಮ ಸಮಸ್ಯಾ) ಪುಣ್ಯಕೋಟಿ ಕಥಾ, ರತ್ನಾಕರ ಶತಕ ಮುಂತಾದುವು ಮೂಲ ಕವಿಯ ಆಶಯ, ಕಾವ್ಯದ ಭಾವ, ಅರ್ಥಗಳಿಗೆ  ಧಕ್ಕೆಯಾಗದಂತೆ  ರಚಿಸಿದ್ದಾರೆ. ಅನೇಕಾನೇಕ ಸ್ತುತಿಗಳನ್ನೂ, ಸುಪ್ರಭಾತಗಳನ್ನೂ ರಚಿಸಿದ್ದಾರೆ. 'ಆರ್ಯಾಸಾಹಸ್ರಿ ಇವರ ಮೇರು ಕೃತಿಗಳಲ್ಲೊಂದು. ಮಾತೆ ಲಲಿತಾದೇವಿಯ ಸಹಸ್ರನಾಮಾವಳಿಯ ಆಂತರಂಗಿಕವಾದ ಪಾರಮಾರ್ಥಿಕವಾದ ಆಶಯಗಳನ್ನು ಹೊಂದಿರುವ, ಅಕಾರಾದಿ ಕ್ರಮದಲ್ಲಿ, ಮನೋಹರವಾದ. ಲಾಲಿತ್ಯಪೂರ್ಣವಾದ ಶ್ಲೋಕಗಳ ರಚನೆ ಅವರ ಭಾಷಾ ಪಾಂಡಿತ್ಯಕ್ಕೆ ಕನ್ನಡಿಯಂತಿವೆ. ಸೂರ್ಯ ನಾರಾಯಣನನ್ನು ಕುರಿತ ಭಾರ್ಗವ ಶತಕಂ ಅವರ ಇನ್ನೊಂದು  ಅಮೋಘ ಕೃತಿ.
 ಈಗ ಮಂದತಿಮ್ಮ ಸಮಸ್ಯಾ ಅನುವಾದ ಕೃತಿಯನ್ನು ಪ್ರಕಟಿಸಲು ಡಿವಿಜಿ ಬಳಗದವರು ಮುಂದೆ ಬಂದಿರುವುದು ಸಂಭ್ರಮದ ವಿಷಯ. ಇದಲ್ಲದೆ ತೆಲುಗಿನ ವೇಮನ ವಚನಗಳನ್ನು 'ವೇಮೋಕ್ತ ಸೂಕ್ತಿ ಕುಸುಮಾಂಜಲಿ' ಎಂಬ ಹೆಸರಿನಲ್ಲಿ ಸಂಸ್ಕೃತಕ್ಕೆ ಅನುವಾದಿಸಿದ್ದಾರೆ. ಸರ್ವಜ್ಞನ ವಚನಗಳು, ಅಕ್ಕಮಹಾದೇವಿಯ ವಚನಗಳು, ಸಂಗಮೇಶನ ವಚನಗಳು, ಬಸವಣ್ಣವನರ ವಚನಗಳು ಹೀಗೇ ಅನೇಕ  ಕನ್ನಡದ  ವಚನ ಸಾಹಿತ್ಯದ ಸೊಬಗನ್ನು ಸಂಸೃತದ ದರ್ಪಣದಲ್ಲಿ ಇನ್ನೂ ಥಳಥಳಿಸುವಂತೆ ಮಾಡಿದ್ದಾರೆ.
ಸಂಸ್ಕೃತ ಹಾಗೂ ಕನ್ನಡ ಭಾಷೆಗಳಲ್ಲಿ ಇವರು ರಚಿಸಿರುವ ವ್ಯಾಕರಣ ಸುಲಲಿತವಾಗಿದ್ದು  ಕಬ್ಬಿಣದ ಕಡಲೆಯಂಥಾ ವ್ಯಾಕರಣವನ್ನು  ಸುಲಭವಾಗಿ ಅರಗುವ ಸಿಹಿ ಹಲ್ವಾ ಅನಿಸುವಂತೆ ಮಾಡಿರುವುದು ಅವರ  ಬೋಧನಾ  ಚಾತುರ್ಯಕ್ಕೆ  ಸಾಕ್ಷಿಯಾಗಿದೆ.
 ತಮ್ಮ ಸೇವಾವಧಿಯಲ್ಲಿ ಶಾಲಾ ಮಕ್ಕಳಿಗಾಗಿ ರಚಿಸಿದ ಸಂಪೂರ್ಣ ಮಹಾ ಭಾರತ, ಭಗವದ್ಗೀತೆ, ಮುಂತಾದ ಹಲವಾರು ಸಂಸ್ಕೃತ ಹಾಗೂ ಕನ್ನಡ ನಾಟಕಗಳು. ಅನೇಕ ಸಾಮಾಜಿಕ ನಾಟಕಗಳು, ದೇಶ ಭಕ್ತಿಗೀತೆಗಳು ಮತ್ತು ಭಾವಗೀತೆಗಳು, ಕನ್ನಡ ಕೋಲಾಟದ ಧಾಟಿಯಲ್ಲಿ ರಚಿಸಿದ 'ಯಷ್ಟಿಖೇಲನಮ್' ಮುಂತಾದ ಅನೇಕಾನೇಕ ಕವನಗಳು. ಕನ್ನಡ ಭಾವಗೀತೆಗಳು. ಹೀಗೇ ಪಟ್ಟಿ ಮಾಡುತ್ತಾ ಹೋದರೆ  ಅವುಗಳ ಅಗಾಧತೆ ಮನನವಾಗುತ್ತದೆ. ಅವರ ಅನೇಕಾನೇಕ   ಕೃತಿಗಳು ಈಗ ಅಲಭ್ಯವಾಗಿರುವುದು ನಮ್ಮ ದುರ್ದೈವ.
ಇವರಿಂದ ರಚಿತವಾದ ಸಂಸ್ಕೃತ ಹಾಗೂ ಕನ್ನಡ ದೇಶ ಭಕ್ತಿಗೀತೆಗಳಲ್ಲಿ ಅವರಿಗಿದ್ದ ದೇಶಾಭಿಮಾನ ಎದ್ದು ಕಾಣುತ್ತದೆ. ಮಹಾತ್ಮ ಗಾಂಧೀಜಿಯವರ  ಬಗೆಗಿದ್ದ ಅವರ ಅಸೀಮ ಅಭಿಮಾನ ಅವರ ಕೃತಿ ಮೋಹನಾಯನದಲ್ಲಿ  ಸುಸ್ಪಷ್ಟವಾಗಿ ಕಾಣುತ್ತದೆ.  ಮಹಾತ್ಮ ಗಾಂಧೀಜಿಯವರ ಹತ್ಯೆಯಾದ ನಂತರ  ಅತೀವ ಘಾಸಿಗೊಂಡ  ಅವರು  ಇನ್ನು ಮುಂದೆ ಕಾಲಿಗೆ ಚಪ್ಪಲಿ ಧರಿಸುವುದಿಲ್ಲ ಎಂದು ಶಪಥ ಮಾಡಿದವರು ಅದನ್ನು ಕೊನೆಯವರೆಗೂ ವ್ರತದಂತೆ ಪಾಲಿಸಿದರು.
ಇಂತಹ ಮಹಾನ್ ಸಾಧಕ, ಬೋಧಕ, ಚಿಂತಕ  ವಿದ್ವಾಂಸರಾದ ಋಷಿ ಸದೃಶ ವ್ಯಕ್ತಿಯ ಮಗಳಾದದ್ದು ನನ್ನ ಪೂರ್ವ ಜನ್ಮದ ಪುಣ್ಯ ವಿಶೇಷವೇ ಸರಿ.ಎಂದು ಅಪರಿಮಿತ ಆನಂದವಾದರೂ ದೀಪದ ಕೆಳಗಿನ ಕತ್ತಲೆಯಲ್ಲೇ ಇರುವ ಕ್ರಿಮಿಯಂತೆ ಅವರ ಪ್ರಜ್ವಲಿಸುವ ಜ್ಞಾನದ  ಪ್ರಕಾಶವನ್ನು ಕಿಂಚಿನ್ಮಾತ್ರ ಉಪಯೋಗವನ್ನೂ ಮಾಡಿಕೊಳ್ಳದೇ  ಅವರನ್ನು ಕಳೆದುಕೊಂಡ ನಂತರ ಪರಿತಪಿಸುತ್ತಿರುವುದಕ್ಕಾಗಿ  ಲಜ್ಜೆಯೂ, ಸಂಕಟವೂ ಆಗುತ್ತಿದೆ.
ಪ್ರತಿ  ದಿನವೂ ಅಪ್ಪ ಬೆಳಗಿನ ನಾಲ್ಕು ಗಂಟೆಗೇ ಎದ್ದು ಬರೆಯಲು ಆರಂಭಿಸುತ್ತಿದ್ದರು. ನಂತರ ಕಾಫಿ ಕುಡಿದು  ಸ್ನಾನ ಮಾಡಿ ಹೊರ ಬರುತ್ತಲೇ  ಶ್ಲೋಕಗಳನ್ನು ಗಟ್ಟಿಯಾಗಿ ಹೇಳ ತೊಡಗುತ್ತಿದ್ದರು.  ಕೊನೆಯವರೆಗೂ  ಒಂದು ದಿನವೂ ಅವರು  ಸಂಧ್ಯಾವಂದನೆ ಮತ್ತು ಪೂಜೆಯನ್ನು ತಪ್ಪಿಸಿರಲಿಲ್ಲ. ಹಾಗಾಗಿ ನಮಗೆಲ್ಲಾ ಪೂಜೆಯ ಮಂತ್ರ ಬಾಯಿಪಾಠವಾಗಿತ್ತು.  ಪೂಜೆಯ ನಂತರ  ಶ್ರೀ ಸೂಕ್ತ, ಪುರುಷ ಸೂಕ್ತ ,ರಾಮರಕ್ಷಾ ಮಂತ್ರಗಳನ್ನು ಹೇಳುತ್ತಿದ್ದರು. ಶಿವ ಮಾನಸ ಪೂಜಾ ಸ್ತೋತ್ರವನ್ನು ಹೇಳುತ್ತಿದ್ದರು. ಅದು ನನಗೆ ಬಹಳ ಇಷ್ಟವಾಗಿ, ಅದರ ಅರ್ಥ ಕೇಳಿದಾಗ   ಅದನ್ನು ಮನದಟ್ಟಾಗುವಂತೆ ವಿವರಿಸಿದ್ದರು.  ನಮ್ಮ ಪ್ರತಿಯೊಂದು ಮಾತು ಕೃತಿಗಳಲ್ಲೇ ದೇವರನ್ನು ಆರಾಧಿಸಬಹುದನ್ನುವ ಕಲ್ಪನೆ ನನಗೆ ಅತಿವಿಶಿಷ್ಟವಾಗಿ ಕಂಡುಬಂದಿತ್ತು. ಅವರ ಕೃತಿಗಳನ್ನು  ವಿಂಗಡಿಸುವಾಗ ದೇವೀಮಾನಸ ಪೂಜಾ ಸ್ತೋತ್ರವೂ ದೊರೆಯಿತು.   ಪ್ರಾಯಶಃ ಅವರು ಅಹರ್ನಿಶಿ ಮಾನಸಪೂಜೆಯಲ್ಲೇ ನಿರತರಾಗಿರುತ್ತಿದ್ದರೇನೋ. ಅದರಿಂದಲೇ ವ್ಯಾವಹಾರಿಕ ಪ್ರಪಂಚದಲ್ಲಿ ಆಸಕ್ತಿ ಬೆಳೆಸಿಕೊಳ್ಳಲೇ ಇಲ್ಲ.    ಅದನ್ನರಿತ ನನ್ನ ಅಣ್ಣಂದಿರು  ಅವರೆಲ್ಲಾ ಜವಾಬ್ದಾರಿಗಳಿಗೂ ಹೆಗಲು ಕೊಟ್ಟು ನಿಭಾಯಿಸಿಬಿಟ್ಟಿದ್ದು ಅವರ ಮೇಲೆ   ದೈವೀ ಅನುಗ್ರಹವಿದ್ದುದ್ದಕ್ಕೆ ಸಾಕ್ಷಿ ಎನಿಸುತ್ತದೆ.
ಅವರಿಗೆ  ವ್ರತಗಳನ್ನು ಮಾಡಿಸುವುದರಲ್ಲಿ ತುಂಬಾ ಆಸಕ್ತಿಯಿತ್ತು. ನನಗೆ ಬುದ್ಧಿ ಬಂದಾಗಿನಿಂದ ನಮಗೆ ಪ್ರತೀ ವರ್ಷ  ಭೀಮನ ಅಮಾವಾಸ್ಯೆಯ ವ್ರತವನ್ನು ಮಾಡಿಸುತ್ತಿದ್ದರು.  ಯಾವುದೇ ವ್ರತವಿರಲಿ ಅಂದು ನಮಗಿಂತಾ ಬೇಗ ಎದ್ದು ಸ್ನಾನಮಾಡಿ ವ್ರತಕ್ಕೆ ಬೇಕಾದ ಎಲ್ಲಾ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದ್ದರು.  ಎಲ್ಲಾ ವ್ರತಗಳ  ಮಂತ್ರಗಳೂ, ವ್ರತ ಕಥೆಗಳೂ ಅವರಿಗೆ ಕಂಠಸ್ಥವಾಗಿದ್ದವು.  ನಾಗರಪಂಚಮಿಯ ದಿನ ಅಮ್ಮ ಮಣ್ಣಿನಲ್ಲಿ ನಾಗ ದೇವತೆಯನ್ನು ಮಾಡುತ್ತಿದ್ದರು ಹಾಗೂ ನಾವೆಲ್ಲಾ ಅದಕ್ಕೆ ಭಕ್ತಿಯಿಂದ ಹಾಲೆರೆದು ಪೂಜಿಸುತ್ತಿದ್ದೆವು.  ಹಾಗೂ   ಶಿರಿಯಾಳ ಷಷ್ಠಿಗೆ  ಶಿರಿಯಾಳನ  ಗೊಂಬೆ ಮಾಡುತ್ತಿದ್ದರು. ಅದಕ್ಕೆ ಬೇಕಾದ  ಹುತ್ತದ ಮಣ್ಣನ್ನು ಅಪ್ಪ ಎಲ್ಲಿಂದಲೋ ತಂದುಕೊಡುತ್ತಿದ್ದರು.  ನಾನು ನನ್ನ ಬಾಣಂತನಕ್ಕೆ ಹೋದಾಗ  ಅದೇ ಸಮಯದಲ್ಲಿ ನನ್ನ ಅತ್ತಿಗೆ ಸುಜಾತಾ ಸಹಾ  ಗರ್ಭಿಣಿಯಾಗಿ ಬಂದಿದ್ದಳು.  ಅಪ್ಪ ನಮಗಿಬ್ಬರಿಗೂ ಪ್ರತಿದಿನವೂ ಯಾವುದಾದರೊಂದು ಒಳ್ಳೆಯ ಕಥೆ ಹೇಳುತ್ತಿದ್ದರು. ನನ್ನ ಅಣ್ಣಂದಿರು ನನ್ನ ಆರೈಕೆಯ ಹೊಣೆಯನ್ನು ಪೂರ್ತಿ ಹೊತ್ತಿದ್ದರೂ ಅವರ  ಮಮತೆಯ ಕಣ್ಗಾವಲಿನ ರಕ್ಷಣೆಯ ಅರಿವು ಸದಾ ನನಗೆ ಆಗುತ್ತಿತ್ತು.
ನನ್ನ ಮಗಳು  ಮಾತು ಕಲಿಯುವಾಗ ಅವಳಿಗೆ ಚಿಕ್ಕ ಚಿಕ್ಕ ಭಜನೆಗಳನ್ನು ಸ್ತೋತ್ರಗಳನ್ನು ಕಲಿಸುತ್ತಿದ್ದರು. ಅವಳದನ್ನು ಬಾಲ ಭಾಷೆಯಲ್ಲಿ ಹೇಳುವುದನ್ನು ಕೇಳಲು ಅವರಿಗೆ ತುಂಬಾ ಇಷ್ಟವಾಗುತ್ತಿತ್ತು. ಅವಳನ್ನು “ ಅಪೂರ್ವ ಚಿಂತಾ ಮಣಿಯಮ್ಮನವರೇ” ಅಂತ ತಮಾಷೆಯಾಗಿ ಕರೆಯುತ್ತಿದ್ದರು.
ನನ್ನ ಅಕ್ಕನ ಮಕ್ಕಳು ಚಿಕ್ಕವರಿದ್ದಾಗ   ಮತ್ತು ನನ್ನ ಮಗಳು ಚಿಕ್ಕವಳಾಗಿದ್ದಾಗ ಅವರನ್ನು ಮಲಗಿಸುವಾಗ ಶ್ಲೋಕಗಳನ್ನು ಹಾಡಿನ ಹಾಗೆ ಹಾಡುತ್ತಿದ್ದರು. ಅದರಲ್ಲಿ ಮುಕುಂದಮಾಲಾ ಸ್ತೋತ್ರವೂ ಒಂದು.  ಅದರಲ್ಲಿ ಒಂದು ಶ್ಲೋಕದ ಅರ್ಥ ಅವರು ವಿವರಿಸಿದ್ದು ನನಗಿನ್ನೂ  ನೆನಪಿದೆ.
ಕೃಷ್ಣ ತ್ವದೀಯ ಪದಪಂಕಜಪಂಜರಾಂತಮ್
ಅದ್ಯೈವ ಮೇ ವಿಶತು ಮಾನಸ ರಾಜ ಹಂಸಃ|
ಪ್ರಾಣ ಪ್ರಯಾಣ ಸಮಯೇ ಕಫವಾತ ಪಿತ್ಥೈಃ
ಕಂಠಾವರೋಹನವಿಧೌ  ಸ್ಮರಣಂ ಕುತಸ್ತೇ||
‘ಕೃಷ್ಣಾ ನಿನ್ನ  ಪಾದಗಳೆಂಬ ಪದ್ಮದ ಕಡೆಗೆ ನನ್ನ ಮನಸ್ಸೆಂಬ ರಾಜ ಹಂಸವು ಇಂದೇ  ಹೋಗಲಿ ಮರಣ ಕಾಲದಲ್ಲಿ  ಕಫ ವಾತ ಪಿತ್ಥಗಳಿಂದ ಗಂಟಲು ಕಟ್ಟಿದಾಗ ನಿನ್ನ ಸ್ಮರಣೆ ಮಾಡಲು ಆಗುವುದೋ ಇಲ್ಲವೋ..  ಎನ್ನುತ್ತಿದ್ದ ಅವರು ಪ್ರಾಣ ನಿಷ್ಕ್ರಮಣ ಕಾಲದಲ್ಲೂ ಅವರ ಅಪೇಕ್ಷೆಯಂತೇ ಅವರ ಮನಸ್ಸು ಭಗವನ್ನಾಮ ಕೀರ್ತನೆಯಲ್ಲೇ ತೊಡಗಿದ್ದುದು ಅವರ ಭಾಗ್ಯ ವಿಶೇಷವಲ್ಲದೇ ಮತ್ತೇನೂ ಅಲ್ಲ.
  ಮನೆಯಲ್ಲಿ ಮಕ್ಕಳಿಗೆ ಗೀತಾ ಪಾಠವಾಗುತ್ತಿತ್ತು. ಅದರೊಡನೆ  ನೀತಿ ಶ್ಲೋಕಗಳನ್ನೂ ಕಲಿಸುತ್ತಿದ್ದರು.   ಪೌರಾಣಿಕ ಕಥೆಗಳನ್ನೂ ಹೇಳುತ್ತಿದ್ದರು.  ಅವರ ಅಂತರಂಗವನ್ನು ಅಗಾಧವಾಗಿ ಆವರಿಸಿಕೊಂಡಿದ್ದ ಮತ್ತೊಂದು ಗ್ರಂಥವೆಂದರೆ ಭಗವದ್ಗೀತೆ . ಅವರು ಭಗವದ್ಗೀತೆಯನ್ನೇ ಉಸಿರಾಡುತ್ತಿದ್ದರೇನೋ ಎಂದು ನನಗೀಗೀಗ ಅನಿಸುತ್ತಿದೆ.   ಅವರು ಭಗವದ್ಗೀತೆಯ ಬಗ್ಗೆ ಬರೆದ ಕೃತಿಗಳು ಅನೇಕ.   ಅನೇಕ ವಿಧದ ಭಗವದ್ಗೀತಾ ನಾಟಕಗಳು,  ಗೀತ ರೂಪಕಗಳು, ಗೀತೆಯ ಸಾರಸ್ವರೂಪವಾದ ಗೀತಾ ನವನೀತಂ,  ಅವರಿಗೆ ಪ್ರಿಯವಾದ ಭಾಮಿನೀ ಛಂದಸ್ಸಿನಲ್ಲಿ ಭಾಮಿನೀ ಭಗವದ್ಗೀತಾ.. ಒಂದೇ ಎರಡೇ..
 ಅದರಲ್ಲಿನ ಸ್ಥಿತಪ್ರಜ್ಞತೆ ಅವರಲ್ಲಿ ಮೈಗೂಡಿತ್ತು ಎಂದು ಆಗ ಅರ್ಥಮಾಡಿಕೊಳ್ಳಲಾಗದ ನಮ್ಮ ಮೌಢ್ಯದ ಬಗ್ಗೆ   ದುಃಖವಾಗುತ್ತದೆ. ಇಂತಹ ದೈವೀ ಸ್ವರೂಪರಾದವರು ಬದುಕಿರುವವರೆಗೂ ಅವರ  ಮಹತ್ವ  ಸುತ್ತಮುತ್ತಲಿನವರಿಗೆ ಅರಿವಾಗುವುದೇ ಇಲ್ಲ..
ಅವರು ಕಾವ್ಯ ಶಾಸ್ತ್ರ ವಿನೋದಗಳಲ್ಲೇ ಮೈ ಮರೆಯುತ್ತಿದ್ದರಾದದ್ದರಿಂದ ಅವರಿಗೆ  ಬೇಸರವೆಂಬುದಾಗುತ್ತಿರಲಿಲ್ಲವಾದರೂ ಅಮ್ಮ ಬೇಸರವಾದಾಗ  ಪಗಡೆ ಆಡಲು ಕರೆದರೆ ನಿರಾಕರಿಸುತ್ತಿರಲಿಲ್ಲ. ಪ್ರತೀ ಬಾರಿಯೂ ಅಮ್ಮನೊಡನೆ ಸಂತೋಷದಿಂದಲೇ  ಸೋಲುತ್ತಿದ್ದರು. ಅವರ ಮನಸ್ಸಿನಲ್ಲಿ ‘ ಅವಳಿಗೆ ಸಂತೋಷವಾದರೆ ಆಗಲಿ... ’ ಎನ್ನುವ ಭಾವವಿದ್ದಂತೆ ಅನಿಸುತ್ತಿತ್ತು. ಅವರು ಸೋಲುವುದು ನನಗೆ ಇಷ್ಟವಾಗದೇ  ನಾನೇ ಅವರ ಪರವಾಗಿ ಆಡಿ ಗೆಲ್ಲಿಸಿದ್ದೂ ಉಂಟು.
ಆ ಕಾಲದ ಅನೇಕ ಕರ್ಮಠ ಬ್ರಾಹ್ಮಣರಲ್ಲಿದ್ದ ಹಾಗೆ ಇವರಲ್ಲಿ ಅತೀ ಜಾತ್ಯಾಭಿಮಾನವಿರಲಿಲ್ಲ.  ವೀರ ಶೈವರೊಡನೆ ಹಾಗೂ  ತ್ರಿಮತಸ್ಥರೊಡನೆ ಆತ್ಮೀಯ  ಸ್ನೇಹವನ್ನು ಇಟ್ಟುಕೊಂಡಿದ್ದರು. ಶಂಕರರ ತತ್ತ್ವಗಳನ್ನು  ಆರಾಧಿಸುವಂತೇ ಬಸವ ತತ್ತ್ವಗಳನ್ನೂ ಗೌರವಿಸುತ್ತಿದ್ದರು. ತಿರುಪ್ಪಾವೈ ಯನ್ನೂ ಆಲಿಸುತ್ತಿದ್ದರು. ಅದನ್ನೂ ಸಂಸ್ಕೃತಕ್ಕೆ ತರ್ಜುಮೆ ಮಾಡಿದ ನೆನಪು.. ಆದರೆ ಅದು ದೊರೆತಿಲ್ಲ.
ಅವರು  ತಾರತಮ್ಯವಿಲ್ಲದೇ ಯಾರೇ ಬಂದರೂ ಆಸಕ್ತಿಯಿಂದ ಪಾಠಮಾಡುತ್ತಿದ್ದರು.  ಮಾನ್ಯ  ಎಂ ಜಿ ಸಿದ್ಧರಾಮಯ್ಯನವರಂಥ ಅನೇಕ ಶಿಷ್ಯರು ಅವರನ್ನು  ನಾಲ್ಕಾರು ದಶಕಗಳ ನಂತರವೂ ನೆನಪಿಡಲು ಸಾಧ್ಯವಿತ್ತೇ? ಪ್ರೊ| ಮಲ್ಲೇಪುರಂ ವೆಂಕಟೇಶ್ ಅವರಂಥ  ಧೀಮಂತ ವ್ಯಕ್ತಿಗಳು ಅವರ ಕೆಲಸ ಮಾಡುತ್ತೇನೆಂದೊಡನೇ  ತಮ್ಮೆಲ್ಲ  ಬಿಡುವಿರದ ಕೆಲಸಗಳನ್ನೂ ಬದಿಗೊತ್ತಿ ನನಗೆ ಮಾರ್ಗದರ್ಶನ ಮಾಡುತ್ತಿದ್ದರೇ? 
ನನಗೆ ಸಣ್ಣ ಪುಟ್ಟ ಕಷ್ಟ , ನಿರಾಸೆಗಳುಂಟಾದಾಗ    ಅಪ್ಪ,
ಸರ್ವಮಂಗಲ ಮಾಂಗಲ್ಯೇ
 ಶಿವೇ ಸರ್ವಾರ್ಥ  ಸಾಧಿಕೇ|
 ಶರಣ್ಯೇ ತ್ರ್ಯಯಂಬಕೇ ಗೌರೀ
ನಾರಾಯಣಿ ನಮೋಸ್ತುತೇ||
ಎಂಬ ಒಂದು ಶ್ಲೋಕವನ್ನೇ  ಭಕ್ತಿಯಿಂದ ಹೇಳು ಸಾಕು. ತಾಯಿ ನಿನ್ನನ್ನು ಕಾಪಾಡುತ್ತಾಳೆ ಎಂದಿದ್ದರು. ಆ ಶ್ಲೋಕದ ಮಹಿಮೆಯೋ ಅಥವಾ ಅವರ ಆಶೀರ್ವಾದವೋ   ನನ್ನ ಬದುಕಿನಲ್ಲಿ ನೆಮ್ಮದಿ ನೆಲಸಿತು.
 ಇಂತಹ ಮಹನೀಯರನ್ನು  ನಾವು ಕಳೆದುಕೊಂಡರೂ ಅವರು ಅವರ ಕೃತಿಗಳಲ್ಲಿ ಜೀವಂತವಾಗಿದ್ದಾರೆ. ಇಂತಹ  ಅಮೋಘವಾದ   ಪ್ರತಿಭಾಶಾಲಿ ವಿದ್ವಾಂಸರು ಇದ್ದರೆಂದೂ, ಅವರ ಕೃತಿಗಳ ಅನನ್ಯತೆಯನ್ನೂ ಮುಂದಿನ ಪೀಳಿಗೆಯವರಿಗೆ ತಿಳಿಸಿಕೊಡುವ ಉದ್ದೇಶದಿಂದ ಅವರ ಕೃತಿಗಳನ್ನು ಸಂಪಾದಿಸುವ  ಮಹತ್ಕಾರ್ಯವನ್ನು ಅವರ ಮಕ್ಕಳಾದ ನಾವೆಲ್ಲರೂ ಕೈಗೆತ್ತಿಕೊಂಡಿರುವುದು ತಡವಾಗಿಯಾದರೂ ಅವಶ್ಯಕವಾದ ಕೆಲಸ. ನಮ್ಮ ಪ್ರಯತ್ನಗಳಿಗೆ ಯಶಸ್ಸು ಸಿಗಲಿ . ಭಗವಂತನ ಕೃಪೆ  ಮತ್ತು ತಂದೆಯವರ ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ ಎಂದು ಬೇಡುತ್ತೇನೆ.
.  ನಮ್ಮೆಲ್ಲಾ ಕಾರ್ಯಗಳಲ್ಲೂ ನಮಗೆ ಬೆಂಬಲವಾಗಿ ನಿಂತು ಅವರ ಶುಭಾಶೀರ್ವಾದದ ರಕ್ಷೆಯಿತ್ತಿರುವ ನಮ್ಮ ಮಾತೃಶ್ರೀಯವರಿಗೆ ನನ್ನ ಅನಂತಾನಂತ ಭಕ್ತಿಪೂರ್ವಕ ಪ್ರಣಾಮಗಳು.
ಸರ್ವೇ ಜನಾಃ ಸುಖಿನೋ ಭವಂತು
ಸಮಸ್ತ ಸನ್ಮಂಗಳಾನಿ ಭವಂತು
ಇತಿ ಶಂ
ವಸುಮತಿ ರಾಮಚಂದ್ರ
೧೬-೧೧-೧೮
ವಿಳಂಬಿ ಸಂವತ್ಸರದ ಕಾರ್ತಿಕ ಶುದ್ಧ ನವಮಿ.
ಜಿ ೧, ಮಾರುತಿ ಅಪಾರ್ಟ್ಮೆಂಟ್,
೩ನೆ ಎ ತಿರುವು, ೧೬ನೇ ಮುಖ್ಯರಸ್ತೆ,
ಜೆಪಿ ನಗರ ಎರಡನೇ ಹಂತ,
ಬೆಂಗಳೂರು- ೫೬೦೦೭೮