ಗುರುವಾರ, ಅಕ್ಟೋಬರ್ 25, 2012

ಭಾಗ್ಯದಾ ಲಕ್ಷ್ಮೀ! ನಿಂಗೊತ್ತಾ ನಿನ್ನ ಬಗೆಗಿರೋ ವದಂತಿ?




ಅಮ್ಮಾ, ಲಕ್ಷ್ಮೀ ನೀನು ಯಾರಿಗೆ ಬೇಡ....? ಕಡು ಬಡವನಿಂದ ಮೂಗಿನ ತನಕ ಐಶ್ವರ್ಯದಲ್ಲಿ ಮುಳುಗಿರೋ ಶ್ರೀಮಂತನಿಗೂ ನೀನು ಬೇಕೇಬೇಕು. ಎಲ್ಲೋ ಕೆಲವರಿಗೆ ನ್ಯಾಯವಾಗಿ, ರಾಜಬೀದಿಯಲ್ಲಿ ಘನ ಗಾಂಭೀರ್ಯದಿಂದ ನಡೆದು ಬರುವ ನೀನು ಸಾಕಾದರೆ, ಉಳಿದವರಿಗೆ ದೇವಿಯು, ಎಂಥ ನೀಚ ಮೂಲದಿಂದಾದರೂ, ಎಷ್ಟು ಹೊಲಸು ದಾರಿಯಲ್ಲಾದರೂ, ಯಾವ ಅನ್ಯಾಯದ ಕ್ರಮದಲ್ಲಾರೂ ಸರಿ ಬರಬೇಕು! ಅಷ್ಟೆ.....

ಅದಕ್ಕಾಗಿ ಏನೇನೋ ದೊಂಬರಾಟ ಆಡುತ್ತಾರೆ. ಈ ರೀತಿ ಮಾಡಿದರೆ ನೀನು ಬರುತ್ತೀಯಾ ಅಂದ್ರೆ ಹಾಗೇ ಮಾಡ್ತಾರೆ. ಹಾಗೇ ಹೀಗ್ಮಾಡಿದ್ರೆ ನೀನು ಬರೋಲ್ಲ ಅಂತ ಯಾರೇ ಹೇಳಿದ್ರೂ ಕಣ್ಮುಚ್ಚಿಕೊಂಡು ಕೇಳ್ತಾರಲ್ಲಾ  ಇವರೆಲ್ಲಾ ನಿನ್ನ ಬಗ್ಗೆ ಹಬ್ಬಿಸಿರೋ ವದಂತಿಗಳ ಬಗ್ಗೆ ನಿಂಗೇನಾದ್ರೂ ಮಾಹಿತಿ ಇದ್ಯಾಮ್ಮಾ....?

ಇಲ್ಕೇಳು. ನೀನು ಪ್ರತೀ ದಿನಾ ಸಾಯಂಕಾಲ  ಬರ್ತೀಯಂತೆ.  ಆದ್ರೆ ಯಾವ ಹೊತ್ತಲ್ಲಿ ಹೋಗ್ತೀಯೋ ಗೊತ್ತಿಲ್ಲ.  ಅದಕ್ಕೆ ದೀಪ ಹಚ್ಚೋ ಮೊದ್ಲು ಎಲ್ಲ ಕಿಟಕಿ ಬಾಗಿಲು ಹಾಕಿ ಮುಂಬಾಗಿಲನ್ನ ತೆಗೆದಿಡ್ತಾರೆ. ಮುಂಬಾಗ್ಲಿಂದ ಬಂದ ನೀನು ಹಿಂಬಾಗ್ಲಿಂದಾನೋ ಕಿಟಕಿಯಿಂದಾನೋ ಆಚೆ ಹೋಗ್ದೇ ಇರ್ಲಿ ಅಂತ ಹಾಗ್ಮಾಡ್ತಾರಂತೆ. ಅಲ್ಲಮ್ಮಾ ನಿ೦ಗೆ ಹೋಗ್ಲೇ ಬೇಕನ್ಸಿದ್ರೆ ಬಂದ ಬಾಗ್ಲಿಂದಾನೇ ಹೋಗ್ಬಹುದಲ್ವಾ....? ಮತ್ತೆ ಬೇರೇ ದಾರಿ ಹುಡ್ಕೋ ಅಗತ್ಯ ಏನಿದೇಂತ....?


ಇನ್ನು ಶುಕ್ರವಾರ ಮಂಗಳವಾರ ನಿನ್ನ ಶ್ರೇಷ್ಟವಾದ ದಿನಗಳಂತೆ.  ಆ ದಿನಗಳಲ್ಲಿ ಮಾಡ್ಲೇ ಬಾರದ ಅನೇಕ ಕೆಲಸಗಳವೆ. ಅವಕ್ಕೆಲ್ಲಾ ಅರ್ಥ ಇದ್ಯಾ....? ಇದೆ ಅಂತಾದ್ರೆ ಏನು....? ನೀನೇ ಹೇಳ್ಬೇಕು...

.
ಮೊದಲ್ನೇದಾಗಿ ಶುಕ್ರವಾರ ಮಂಗಳವಾರ ಧೂಳು , ಬಲೆ ತೆಗೀಬಾರದಂತೆ.  ಆಗ ನೀನು ಹೊರಟು ಹೋಗ್ತೀಯಂತೆ. ಅದರರ್ಥ ನೀನು ಧೂಳಲ್ಲಿ ಕೂತಿರ್ತೀಯಾ ಆಂತಾನೋ ಇಲ್ಲಾ ನಿಂಗೆ ಧೂಳು, ಬಲೆ ಎಲ್ಲಾ ಇಷ್ಟ ಅಂತನೋ? ಅದೂ ಆ ಎರಡು ದಿನಗಳಲ್ಲಿ ಮಾತ್ರ ಯಾಕೆ....?


ಆಮೇಲೆ ಆ ದಿನಗಳಲ್ಲಿ ಉಗುರು ಕತ್ತರಿಸೋದು ನಿಷಿದ್ಧ. ನಮ್ಮ ಉಗುರು ಬೆಳೆದಾಗ ಕತ್ತರಿಸಿದ್ರೆ ನೀನು ಕೋಪಿಸ್ಕೊಳ್ತೀಯ  ಅಂತ ಯಾಕೋ ನಂಬೋಕೇ ಆಗ್ತಿಲ್ಲಮ್ಮಾ. ಅಲ್ಲಾ ಕೋಟ್ಯಾನುಕೋಟಿ ಜನರಲ್ಲಿ ಯಾರು, ಯಾವತ್ತು ಉಗುರು ಕತ್ತರಿಸ್ತಾರೆ, ಕೂದಲು ಕತ್ತರಿಸ್ತಾರೆ ಅಂತ ನೋಡ್ತಿರೋದೇ ನಿನ್ನ ಕೆಲ್ಸಾನ....?

 
ಮತ್ತೆ ಯಾರ್ಗೂ ದುಡ್ಡು ಕೊಡಬಾರದಂತೆ. ಆದ್ರೆ ಯಾರಾದ್ರೂ ಕೊಟ್ರೆ ತಗೊಳ್ಳೇ ಬೇಕಂತೆ. ಕೊಟ್ರೆ ನಾವು ಬಡವರಾಗಿ ತಗೊಂಡವ್ರು ಶ್ರೀಮಂತರಾಗ್ತಾರಂತೆ. ಇದ್ಯಾವ ನ್ಯಾಯ ಅಮ್ಮಾ....? ನಿನ್ನ ಅನುಗ್ರಹ ಎಲ್ಲರ್ಗೂ ಬೇಕು ತಾನೇ? ಯಾಕೆ ಸದಾ ನಾವೇ ಚನ್ನಾಗಿರ್ಬೇಕು ಅನ್ನೋ ಸ್ವಾರ್ಥ?


ಅದಲ್ದೆ ಶುಕ್ರವಾರ ಮಂಗಳವಾರ ನಿನ್ನನ್ನು ಸೇರಿ ಯಾವ  ದೇವ್ರನ್ನ ತೊಳೀಬಾದ್ರಂತೆ. ಮನುಷ್ಯರಾದ ನಾವು ದಿನಾ ಎರಡು ಹೊತ್ತೂ ಸ್ನಾನ ಮಾಡಿ ಫ್ರೆಷ್ ಆಗಿ ಇರೋವಾಗ ದೇವಾನು ದೇವತೆಗಳಗೆ ವಾರಕ್ಕೆರಡು ದಿನ ಗಲೀಜಾಗಿರೋದು ಯಾವ ಕರ್ಮಾ ಅಂತೀನಿ....?


ಹಾಗೇ ಶುಕ್ರವಾರ ಮಂಗಳವಾರ ಹೆಣ್ಣು ಮಕ್ಕಳು ಅಳಬಾರ್ದಂತೆ. ಉಳಿದ ದಿನ ಎಲ್ಲಾ ಧಾರಾಳವಾಗಿ ಅಳ್ತಾನೇ ಇರಬಹುದು. ಆದ್ರೆ ಯಾವತ್ತು ಮನಸ್ಸಿಗೆ ಸಂಕಟವಾಗುತ್ತೋ, ಅಳು ಉಮ್ಮಳಿಸಿ ಬರುತ್ತೋ ಆಗ  ಅದನ್ನ ಬರಿದಾಗಿಸಿಕೊಳ್ಳದೇ ಮಾರನೇ ದಿನದ ವರೆಗೂ ತಡೆಹಿಡಿಯೋದು ಅದೆಂಥ ಹಿಂಸೆ ಗೊತ್ತಾ....?


ಇಂಥ ಎಲ್ಲ ಮೌಢ್ಯಗಳನ್ನೂ ತೊರೆದು, ಎಲ್ಲಿ ಪ್ರಾಮಾಣಿಕ ಪರಿಶ್ರಮ ಇರುತ್ತೋ, ಎಲ್ಲಿ ತೃಪ್ತಿ, ಸಂಯಮ ಇರುತ್ತೋ, ಎಲ್ಲಿ ಹಾಸಿಗೆ ಇದ್ದಷ್ಟೇ ಕಾಲು ಚಾಚುವ ಪರಿಪಾಠ ಇರುತ್ತೋ, ಎಲ್ಲಿ ತುಲನೆ ಇರುವುದಿಲ್ಲವೋ ಅಲ್ಲೇ ನೀನು ನೆಲೆಸುತ್ತೀ ಎಂಬ ಸತ್ಯವನ್ನು ಯಾವಾಗಮ್ಮ ಎಲ್ಲರ್ಗೂ ಮನವರಿಕೆ ಮಾಡುತ್ತೀ....?


ಅದಕ್ಕಾಗಿಯಾದರೂ ಭಾಗ್ಯದ ಲಕ್ಷ್ಮೀ ಬೇಗ ಬಾಮ್ಮಾ...........


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ