ಶುಕ್ರವಾರ, ಅಕ್ಟೋಬರ್ 19, 2012

ಉತ್ತರ ಸಿಗದ ಪ್ರಶ್ನೆಗಳು


 

ನಮ್ಮ ದೇಶ ಹೀಗೇಕಿದೆ?ನಮ್ಮ ಜನ ಏಕೆ ಹೀಗಿದ್ದಾರೆ?ನಾವೇಕೆ ಹೀಗಿದ್ದೇವೆ?
ನಮ್ಮ ಮನಸ್ಸೇಕೆ ಇಷ್ಟೊ೦ದು ಸಂಕುಚಿತವಾಗಿದೆ?ನಾವೇಕೆ ಇಷ್ಟು ಸ್ವಾರ್ಥಿಗಳಾಗಿ ಇದ್ದೇವೆ?

ಪಾಶ್ಚಾತ್ಯ ದೇಶಗಳನ್ನು, ಅಲ್ಲಿಸುವ ಸುವ್ಯವಸ್ಥೆಯನ್ನೂ, ಅಲ್ಲಿನ ನಾಗರೀಕರ ಪರಿಸರ ಪ್ರಜ್ಞೆಯನ್ನೂ, ಅವರ ಸಮಯ ಪ್ರಜ್ಞೆಯನ್ನೂ, ಮನದುಂಬಿ ಹೊಗಳುತ್ತಾ, ಅವರಂತೆ ಆಗಲು ಮಾತ್ರ ತಿಲಮಾತ್ರವೂ ಪ್ರಯತ್ನ ಪಡದೇ ``ನೋಡಿ ಸ್ವಾಮೀ, ನಾವಿರೋದೇ ಹೀಗೆ....`` ಅಂತ ಯಾಕೆ ಹೀಗೆ ಇದ್ದೇವೆ?

ನಮ್ಮದು ಜಾತ್ಯಾತೀತ ರಾಷ್ಟ್ರವೆಂದು ಹೊಗಳಿಕೊಳ್ಳುತ್ತಾ ಏಕೆ ಅರ್ಜಿಗಳಲ್ಲಿ ಜಾತಿ ಕಾಲಮ್ಮನ್ನು ತುಂಬುತ್ತಿದ್ದೇವೆ?


ನಾವು ಸರ್ವಧರ್ಮ ಸಹಿಷ್ಣುಗಳೆಂದು ಕೊಚ್ಚಿಕೊಳ್ಳುತ್ತಾ ನಾವೇಕೆ ಕೋಮು ಗಲಭೆಯಲ್ಲಿ ತೊಡಗಿದ್ದೇವೆ?

ಜಾತಿ ಪದ್ಧತಿಯನ್ನು ನಿರ್ಮೂಲ ಮಾಡಬೇಕು, ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸಬೇಕು ಎಂದು ಪ್ರಾಮಾಣಿಕವಾಗಿ ಯೋಚಿಸಿದರೂ, ನಮ್ಮ ಮಕ್ಕಳೇ ಅನ್ಯ ಜಾತಿಯವರನ್ನು ಮದುವೆಯಾಗ ಬಯಸಿದಾಗ ಏಕೆ ಎಲ್ಲೋ, ಮನಸ್ಸಿನ ಮೂಲೆಯಲ್ಲಿ ಕಹಿ ಭಾವನೆ ಉಂಟಾಗುತ್ತದೆ? ನಮ್ಮ ವಿಷಯದಲ್ಲಿ ಮಾತ್ರ ಹಾಗಾಗದಿರಲಿ ಅಂತ ಏಕೆ ಅನ್ನಿಸುತ್ತದೆ?

ಪ್ರತಿಯೊಬ್ಬ ಲಂಚಕೋರನೂ ತಾನು ಪಡೆಯುವ ಲಂಚವನ್ನು                'ಮೇಲ್ಸಂಪಾದನೆ..' ಅನ್ನೂ ಗೌರವಯುತವಾದ ಪದದಿಂದ ಸ್ವೀಕರಿಸುತ್ತಾ ಬೇರೆಯವರಿಗೆ ಲಂಚ ಕೊಡಬೇಕಾದಾಗ 'ಲಂಚಕೋರರು! ಪಾಪಿಗಳು.......' ಎಂದು ಬೈದುಕೊಳ್ಳುವುದೇಕೆ?

'ಲಂಚ ಕೊಡಬಾರದು. ನಾವು ಲಂಚ ಕೊಡೋದ್ರಿಂದ ತಾನೇ ಈ ಥರ ಲಂಚಗುಳಿತನ ತಾಂಡವ ಆಡ್ತಾ ಇದೆ? ಯಾರೂ ಯಾವ ಕಾರಣಕ್ಕೂ ಲಂಚ ಕೊಡಬೇಡಿ.....' ಅಂತ ಮೇಜು ಕುಟ್ಟಿ ಆವೇಶದಿಂದ ಭಾಷಣ ಬಿಗಿಯೋರು,
ತಮ್ಮ ಕೆಲಸ ಆಗಬೇಕಾದಾಗ ಸದ್ದಿಲ್ಲದೇ ಲಂಚ ಕೊಟ್ಟು  'ಏನ್ಮಾಡೋದು, ಕೆಲಸ ಆಗ್ಬೇಕಾದ್ರೆ ಸ್ವಲ್ಪ ಕೈ ಸಡಿಲ ಬಿಡ್ಬೇಕಾಗುತ್ತೆ.....' ಅಂತ ಧಾರಾಳಿತನ ತೋರಿಸೋದು ಯಾಕೆ?

ಬೇರೆಯವರು ರಸ್ತೆಯಲ್ಲಿ ಉಗಿದಾಗ  'ಸ್ವಲ್ಪಾನೂ ಸಿವಿಕ್ ಸೆನ್ಸ್ ಇಲ್ಲದ ಜನ.....' ಅಂತ ಅಸಹ್ಯಪಟ್ಟುಕೊಳ್ಳೂರೇ ತಾವು ರಸ್ತೆಯಲ್ಲಿ ಉಗಿಯೋವಾಗ ' ಕಫ ಕಟ್ಬಿಟ್ಟಿದೆ. ಏನ್ಮಾಡೋದು....? ಉಗೀಲೇಬೇಕಲ್ಲ.....' ಅಂತ ತಮ್ಮನ್ನ ತಾವು  ಕ್ಷಮಿಸಿಕೊಳ್ಳೋದು ಯಾಕೆ?

ತಮ್ಮ ಮನೆಯ ಮುಂದೆ ಸ್ವಚ್ಛವಾಗಿರಬೇಕು ಎಂದು ಯಾಕೆ ಬೇರೆಯವರ ಮನೆ ಮುಂದೆ ಕಸ ಚಲ್ಲುತ್ತಾರೆ?

ಯಾಕೆ ತಮ್ಮಂತೆ ಇತರರೂ ಎಂದು ಯೋಚಿಸಲಾರರು ಈ ಜನ?
ತಮ್ಮ ಸೊಸೆಯರನ್ನು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡುವ, ಕಸದಂತೆ ಕಾಣುವ ಅತ್ತೆಯರು ತಮ್ಮ ಹೆಣ್ಣು ಮಕ್ಕಳನ್ನು ಅವರ ಅತ್ತೆಯರು ಚನ್ನಾಗಿ ನೋಡಿಕೊಳ್ಳಬೇಕು, ಗೌರವಿಸಬೇಕು ಎಂದು ಏಕೆ ಯೋಚಿಸುತ್ತಾರೆ?

ಅಳಿಯ ತಮ್ಮ ಮಗಳು ಹೇಳಿದಂತೆ ಕೇಳಿದರೆ, ಅವಳನ್ನು ಓಲೈಸಿದರೆ ಸಂಭ್ರಮ ಪಡುವ ತಂದೆ ತಾಯಿ, ಮಗ ಸೊಸೆಯ ಮಾತನ್ನು ಕೇಳಿದರೆ 'ಹೆಂಡ್ತಿ ಗುಲಾಮ....' ಅಂತ ಹಳಿಯುವುದೇಕೆ?

ಅದೇ ರೀತಿ ತಮ್ಮ ಅತ್ತೆ ಮಾವನಿಗೆ ಗೌರವ ನೀಡದ ಹೆಣ್ಣುಮಕ್ಕಳು ತಮ್ಮ ಅತ್ತಿಗೆಯರು ಹಾಗೆ ಮಾಡುವುದನ್ನು  ಏಕೆ ಸಹಿಸಲಾರರು?

ಯಾಕೆ ಅವರೇ ಹಿರಿಯರಿಗೆ ಮರ್ಯಾದೆ ನೀಡದಿದ್ದರೂ ತಮ್ಮನ್ನು ಕಿರಿಯರು ಗೌರವಿಸಲಿ ಎಂದು ಬಯಸುತ್ತಾರೆ?

`ನಾನು ಹೇಳಿದ್ದನ್ನು ಮಾಡು! ನಾನು ಮಾಡಿದ್ದನ್ನಲ್ಲ ........`ಅಂತ ಹಿರಿಯರು ಗುಟುರು ಹಾಕೋದೇಕೆ?

ಯಾಕೆ ಎಲ್ಲರೂ ತಾವು ಮಾತ್ರ ಎಲ್ಲ ತಪ್ಪುಗಳನ್ನೂ ಮಾಡಬಹುದು. ಆದರೆ ಅದೇ ತಪ್ಪನ್ನು ಬೇರೆಯೆವರು ಮಾಡಬಾರದು ಎಂದು ಯೋಚಿಸುತ್ತಾರೆ?
ತಮ್ಮನ್ನುಳಿದು ಎಲ್ಲರೂ  ಸರಿಯಾಗಿರಬೇಕೆಂದು ನಿರೀಕ್ಷಿಸುತ್ತಾರೆ?
ತಾವು ಹಸೀ ಸುಳ್ಳು ಹೇಳುತ್ತ ಯಾಕೆ ಎಲ್ಲರೂ ಸತ್ಯವನ್ನೇ ಹೇಳಬೇಕು ಎನ್ನುತ್ತಾರೆ?

 ತಾವೇ ಮೋಸಗಾರರಾಗಿದ್ದರೂ ಬೇರೆಯವರು ಮೋಸ ಮಾಡಿದರೆ ಯಾಕೆ ಅಸಹನೆಯಿಂದ ಕಿಡಿಕಾರುತ್ತಾರೆ?

ಇದಕ್ಕೆ ತದ್ವಿರುದ್ಧವಾಗಿ ಪ್ರತಿಯೊಬ್ಬರೂ, ಯಾರು ಏನಾದರೂ ಮೋಸ ಮಾಡ್ಲಿ, ಸುಳ್ಳು ಹೇಳಿ ಅಥವಾ ಯಾವುದೇ ತಪ್ಪು ಮಾಡ್ಲಿ ನಾನು ಮಾತ್ರ ಸರಿಯಾಗೇ ಇರಬೇಕು ಅಂತ ದೃಢವಾಗಿ ನಿರ್ಧಾರ ಮಾಡಿದರೆ ಈ ಭೂಮಿಯೇ ಸ್ವರ್ಗ ಆಗುವುದಿಲ್ಲವೇ?

ಆದರೆ ಪುನಃ ಇದನ್ನ ಯಾರು ಪ್ರಾರಂಭಿಸಬೇಕು?

ಉತ್ತರ ಸಿಗದ ನೂರಾರು ಇಂತಹ ಪ್ರಶ್ನೆಗಳಿಗೆ ಉತ್ತರ ಹುಡುಕುವಲ್ಲಿ ಯಾವ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾರದಂಥ ಸೋಮಾರಿತನ, ನಿರ್ಲಕ್ಷ್ಯ ಯಾಕಿದೆ?

ಯಾಕೆ....? ಯಾಕೆ.........? ಯಾಕೆ..............?

2 ಕಾಮೆಂಟ್‌ಗಳು: