ಸೋಮವಾರ, ಅಕ್ಟೋಬರ್ 22, 2012

ಮಂದ್ರ ಎಂಬ ಮಂದಾನಿಲ!


ಇದೀಗ ತಾನೇ ಎಸ್. ಎಲ್. ಭೈರಪ್ಪನವರ ಮಂದ್ರ ಕಾದಂಬರಿಯನ್ನೋದಿ ಮುಗಿಸಿದಾಗ ನೋವು ಹಾಗೂ ಖುಷಿಯಂಥ ಎರಡು ವಿರುದ್ಧ ಭಾವನೆಗಳ ನಿಟ್ಟುಸಿರು ಬಂತು

.
ಮೈ ಸೋಕಿ ನವಿರು ಭಾವನೆ ಉಂಟು ಮಾಡುವ ಮಂದಾನಿಲದಂತೆ, ಕುಳಿರ್ಗಾಳಿಯಂತೆ ಯಾವ ಭಾವನೆಗಳು ಕೇವಲ ಅನುಭವ ವೇದ್ಯವೋ ಅವುಗಳನ್ನು ಯಾವ ಭಾಷೆಯಲ್ಲೂ ವ್ಯಕ್ತ ಮಾಡಲು ಸಾಧ್ಯವಿಲ್ಲ ಎನ್ನುವ ನನ್ನ ದೃಢ ಅಭಿಪ್ರಾಯವನ್ನು ಈ ಕೃತಿ ಬುಡಮೇಲು ಮಾಡಿತು. ಸಾಗರದಂತೆ ವಿಸ್ತಾರವಾದ ಸಂಗೀತದ ಅದರಲ್ಲೂ ಹಿಂದೂಸ್ಥಾನೀ ಸಂಗೀತದ ಆಳವಾದ ಅಭ್ಯಾಸಮಾತ್ರದಿಂದ ಇಂಥದ್ದೊ೦ದು ಕಾದಂಬರಿಯನ್ನು ರಚಿಸಲು ಸಾಧ್ಯವಿಲ್ಲ. ಗಾಯಕನ ಶರೀರದಲ್ಲಿ ಪರಕಾಯ ಪ್ರವೇಶ ಮಾಡಿ ಅವನ ಭಾವನೆಗಳನ್ನೂ, ಚಿಂತನೆಗಳನ್ನೂ, ದುರ್ಗುಣ- ಸದ್ಗುಣಗಳನ್ನೂ ಅನುಭವಿಸಿ ಬರೆದಂತಿರುವ ಈ ಕಾದಂಬರಿ, ಕೇವಲ ಕಾದಂಬರಿಯಾಗಿರದೇ  ಒ೦ದು ಕಾವ್ಯದಂತಿದೆ.

 ಅಡೆತಡೆ ಇಲ್ಲದೇ ಇಳಿಜಾರಿನಲ್ಲಿ ಹರಿಯುವ ತೊರೆಯಂತೆ. ಎಲ್ಲೂ ಕೊಂಚವೂ ಬೇಸರ ಮೂಡದಂತೆ ಓದಿಸಿಕೊಂಡು ಹೋಗುವ ಶ್ರೀಯುತರ ಶೈಲಿ ಯಾವಾಗಿನಂತೆ ಅಮೋಘವಾಗಿದೆ.


ಇದು ಲೇಖಕರ ಕಲ್ಪನೆಯ ಸೃಷ್ಟಿಯೋ ನಿಜವಾದ ಘಟನೆಯೋ ತಿಳಿಯದು. ಆದರೆ ಓದುತ್ತಾ ಓದುತ್ತಾ ಆ ಘಟನೆಗಳಲ್ಲಿ ಒಂದಾಗಿ 'ಈತ ಹೀಗೆ ಮಾಡಬಾರದಿತ್ತು, ಆಕೆಯ ಈ ವರ್ತನೆ ಸರಿ ಇಲ್ಲ.ಈತ ಆದರ್ಶ ವ್ಯಕ್ತಿ' ಎಂದೆಲ್ಲಾ ಅನ್ನಿಸುತ್ತದೆ.


ನನಗೆ ಗೌರವ ಮೂಡಿಸಿದ ಪಾತ್ರಗಳಲ್ಲಿ ಮೊದಲಿಗೆ ಸ್ಮೃತಿಗೆ ಬರುವುದು, ಓಂಕಾರ ಬಾಬಾ. ಯಾರನ್ನು ಸಮಾಜ ಗಣನೆಗೇ ತರುವುದಿಲ್ಲವೋ,  ಅಂತಹವರಿಗಾಗಿ ಮಮತೆಯಿಂದ ಅನ್ನ ವಸತಿ ನೀಡಿ ವಿದ್ಯಾದಾನ ಮಾಡಿದ ಮಹಾನ್ ಚೇತನ ಆತ.


ಆತನಿಗೆ ಸರಿಸಮನಾಗಿ ಅಥವಾ ಇನ್ನೂ ಹೆಚ್ಚು ಗೌರವಕ್ಕೆ ಪಾತ್ರವಾಗಬಲ್ಲ ವ್ಯಕ್ತಿ ರಾಜಾ ಸಾಹೇಬರು. ಅವರ ಗಾನ ಪ್ರೌಢಿಮೆ, ತಮ್ಮ ವಿದ್ಯೆಯನ್ನು ಸತ್ಪಾತ್ರ ದಾನ ಮಾಡಬೇಕೆಂಬ ಹಂಬಲವನ್ನು ಸಾಕಾರಗೊಳಿಸಿದ ರೀತಿ ಮತ್ತು ಅವರ ಬದ್ಧತೆ ಅಭಿಮಾನ ತರುವಂತಿದೆ.


ಗುರುವಿಗೆ ನೀಡಿದಷ್ಟೇ ಬೆಂಬಲವನ್ನೇ ಒತ್ತಾಸೆಯನ್ನೂ ನೀಡಿ ಎಲ್ಲೂ ತನ್ನ ಕರ್ತವ್ಯ ಚ್ಯುತಿ ಮಾಡದೇ ಅಚ್ಚುಕಟ್ಟಾಗಿ ತನ್ನ ಪಾತ್ರ ನಿರ್ವಹಣೆ ಮಾಡಿದ ರಾಜಾರಾಮ್, ಹಾಗೂ ತಾವೊಬ್ಬ ಸಂಗೀತಾಭಿಮಾನಿಯಾಗಿದ್ದು. ಯಾವ ರೀತಿಯಲ್ಲಿ ಪಂಡಿತ ಮೋಹನ್ ಲಾಲ್ ಗೆ ಮನ್ನಣೆ ಇತ್ತರೋ, ಅದೇರೀತಿಯಲ್ಲಿ ಅವರ ಸಂಗೀತದ ಗಾಳಿ ಗಂಧವಿರದ ಅನಕ್ಷರಸ್ಥ ಪತ್ನಿಯನ್ನೂ, ಆಕೆಯ ದೌರ್ಬಲ್ಯವನ್ನು ದುರುಪಯೋಗಗೊಳಿಸಿಕೊಳ್ಳದೇ, ಆಕೆಯ ಭಾವನೆಗಳಿಗೆ ಬೆಲೆಕೊಟ್ಟು ಅವಳನ್ನು ಸಲಹಿದ ಗೋರೆ ಸಾಹೇಬರು ಮನ್ನಣೆಗೆ ಪಾತ್ರರಾದ ವ್ಯಕ್ತಿಗಳು

.
 ಇನ್ನು ಸ್ತ್ರೀಪಾತ್ರಗಳಲ್ಲಿ ಗೌರವಪೂರ್ಣವಾಗಿ ತೋರುವುದು ರಾಮ್ ಕುಮಾರಿಯ ಪಾತ್ರ. ಅನಕ್ಷರಸ್ತೆಯಾಗಿದ್ದರೂ ತನ್ನ ನಂಬಿಕೆಗಳಿಗೆ ದೃಢವಾಗಿ ಅಂಟಿಕೊಂಡು, ಯಾವ ಕಷ್ಟಗಳಿಗೂ ಸೋಲದೇ ಆಮಿಶಗಳಿಗೆ ಬಲಿಯಾಗದೇ, ತನ್ನ ಮಕ್ಕಳನ್ನು ಸಾಕಿದ ಮಹಾಮಾತೆ ಆಕೆ. ಅವಳ ಮಕ್ಕಳೇ ಅವಳನ್ನು ಧಿಕ್ಕರಿಸಿದಾಗ ಸ್ವಾಭಿಮಾನಿಯಾದ ಆಕೆ ಅವರಿಂದ ದೂರವಾದರೂ, ಸದಾ ಅವರ ಯೋಗಕ್ಷೇಮವನ್ನೇ ಇಂತಿಸುವ ಆಕೆಯ ಮಾತೃ ಹೃದಯ ಸದಾ ಪೂಜನೀಯ. ಆಕೆ. ಅವಳ ಪತಿ ಕರೆದಾಗ ನಿರಾಕರಿಸಿದ್ದರಲ್ಲಿ ಯಾವ ತಪ್ಪೂ ಕಾಣುವುದಿಲ್ಲ. ಎಲ್ಲ ಮನುಷ್ಯರೂ ಗಾಯಕರೋ, ಕಲಾವಿದರೋ, ಅತಿಶಯ ಪ್ರತಿಭಾವಂತರೋ, ಆಗರ್ಭ ಶ್ರೀಮಂತರೋ ಆಗಿರಬೇಕಿಲ್ಲ. ಆದರೆ ಅವರು ಮನುಷ್ಯತ್ವ ಉಳ್ಳ ಮಾನವರಾಗಿರುವುದು ಅತ್ಯವಶ್ಯ



ಅದೇ ಥರ ವಿಕ್ರಮ ತಾನು ಅಷ್ಟೊಂದು ನಂಬಿದ, ಪ್ರೀತಿಸಿದ ಗೌರವಿಸಿದ ಪತ್ನಿ ತನ್ನ ನಂಬಿಕೆಯ ಬುನಾದಿಯನ್ನೇ ಅಲ್ಲಾಡಿಸಿ ನಂತರ ಪುನರ್ಮಿಲನದ ಪ್ರಸ್ತಾಪ ಮಾಡಿದಾಗ ಒಲ್ಲೆನೆಂದದ್ದು ಸಹಜವಾಗೆ ಇದೆ. ಆದರೂ ಅವನು ಅವಳನ್ನು ಕ್ಷಮಿಸಿ.ಒಪ್ಪಿಕೊಂಡು. ಅವಳ ಕಲೆಗೆ ಮರುಜೀವ ನೀಡಿದ್ದರೆ ಅವನ ವ್ಯಕ್ತಿತ್ವದ ಘನತೆ ಇನ್ನೂ ಹೆಚ್ಚಾಗುತ್ತಿತ್ತೇನೋ.


ಉಳಿದ ಪ್ರಮುಖ ಸ್ತ್ರೀ ಪಾತ್ರಗಳಲ್ಲಿ ಭೂಪಾಲಿಯ ಸಂಗೀತಾಸಕ್ತಿಯನ್ನು ಮೆಚ್ಚಬಹುದಾದರೂ,ಅದರ ಸಾಧನೆಗೆ ಅವಳು ಹಿಡಿದ ಅಡ್ಡದಾರಿ ಮುಜುಗರ ಉಂಟುಮಾಡಿದರೂ.  ಅವಳು ವಿದೇಶೀಯಳಾದ್ದರಿಂದ ಅದರ ತೀವ್ರತೆ ಕಡಿಮೆ ಅನ್ನಿಸುತ್ತದೆ

.
 ಹಾಗೇ ಮಧುಮಿತಾ ಆಕೆಯ ಕಲಾಸಕ್ತಿ ಎಷ್ಟೇ ತೀವ್ರವಾಗಿದ್ದರೂ ಅದಕ್ಕಾಗಿ ತನ್ನ ಅಮೂಲ್ಯವಾದ ಕನ್ಯತ್ವವನ್ನು ಒತ್ತೆ ಇಡಬೇಕಾಗಿರಲಿಲ್ಲ. ಆದರೂ ಅವಳು ಪಶ್ಚಾತ್ತಾಪದ ಪ್ರಾಯಶ್ಚಿತ್ತ ಮಾಡಿಕೊಂಡ ಕಾರಣ ಅಂತ್ಯದಲ್ಲಿ ಅವಳಿಗೆ ಭರವಸೆಯ ಹೊಸ ಬೆಳಕು  ಗೋಚರಿಸಿತು.


ಮತ್ತೆ ಮನೋಹರಿ ಬಗ್ಗೆ ಹೇಳುವುದಾದರೆ    ಆಕೆ ಪಿತೃ ಸಮಾನರಾದ ಗುರುಗಳನ್ನೇ ಕೇವಲ ತನ್ನ ಸ್ವಾರ್ಥಸಾಧನೆಗಾಗಿ ಪುನಃ ಪುನಃ ಬಳಸಿಕೊಂಡಿದ್ದು ಮತ್ತು ಅವಳ ಕಾಮಲಾಲಸೆ ಹಾಗೂ ಚಾಂಚಲ್ಯ ಸ್ತ್ರೀ ಕುಲಕ್ಕೇ ಕಳಂಕ ತರುವಂತಿದ್ದು ಅವಳ ಸೌಂದರ್ಯ, ಸಾಧನೆಯತ್ತ ಬದ್ಧತೆ, ಪ್ರತಿಭೆ ಎಲ್ಲವೂ ನಗಣ್ಯವಾಗುತ್ತವೆ.

ಕೃತಿಯ ಮುಖ್ಯ ಪಾತ್ರ ಗಾಯಕ ಪಂಡಿತ ಮೋಹನ್ ಲಾಲ್ ಬಗ್ಗೆ ಆರಂಭದಲ್ಲೇ ತುಸು ಕೋಪಬರುತ್ತದೆ. ಏಕೆಂದರೆ ಒಬ್ಬ ವ್ಯಕ್ತಿ ಎಷ್ಟೇ ಪ್ರತಿಭಾವಂತನಾಗಿರಲಿ ಆತನು ಚಾರಿತ್ರ್ಯಹೀನನಾಗಿದ್ದರೆ ಅವನನ್ನು ಗೌರವಿಸಲು ಮನಸ್ಸು ಹಿಂದೆ ಮುಂದೆ ನೋಡುತ್ತದೆ. ಅವನು ತನ್ನ ದೈಹಿಕ ವಾಂಛೆಗಳನ್ನು ಪೂರೈಸಿಕೊಳ್ಳಲು ಸೂಳೆಯ ಮನೆಗೆ ಹೋಗಿದ್ದನ್ನೂ ಸಹಿಸಬಹುದು ಆದರೆ ಪುತ್ರೀಸಮಾನಳಾದ ಶಿಷ್ಯೆಯನ್ನೇ,ಅವಳ ಅಮಿತವಾದ ಸಂಗೀತಾಸಕ್ತಿಯನ್ನೇ ಅವಲ ದೌರ್ಬಲ್ಯವೆಂದು ಸ್ವೀಕರಿಸಿ. ಕಾಮಿಸಿದುದು ಅತಿ ಹೇಯವೆನ್ನಿಸುತ್ತದೆ.ಏಕೆಂದರೆ ಅಲ್ಲಿ ಸೂಳೆಯೊಂದಿಗೆ ಇರುವುದು ಕೇವಲ ಕೊಡು ಕೊಳ್ಳುವ ವ್ಯಾಪಾರೀ ಭಾವ. ಆದರೆ ಗುರು ಶಿಷ್ಯರ ನಡುವೆ ಇರಬೇಕಾದ್ದು ಮತ್ತು ಸಹಜವಾಗೇ ಇರುವುದು ಒಂದು ಪವಿತ್ರವಾದ ವಾತ್ಸಲ್ಯ.  ಮುಂದೆ ಓದುತ್ತಾ ಹೋದಂತೆ ಆತನ ಪರಸ್ತ್ರೀ ವ್ಯಾಮೋಹ, ಕಾಮುಕತನ, ಕಚ್ಚೆಹರುಕತನ ಮನಸ್ಸಿಗೆ ಹೇಸಿಗೆಯನ್ನೂ. ಹಿಂಸೆಯನ್ನೂ ಉಂಟುಮಾಡುತ್ತದೆ. ಅದು ಮಸಿ ಮೆತ್ತಿದ ಲಾಂದ್ರವು ಯಾವ ರೀತಿ  ಪೂರ್ಣ ಬೆಳಕನ್ನು ನೀಡಲಾರದೋ ಹಾಗೆ ಆತನ ವಿದ್ವತ್ತು, ಪರಿಶ್ರಮ, ಸಂಗೀತೋಪಾಸನೆಯ ಬಗ್ಗೆ ಹುಟ್ಟಬಹುದಾದ ಗೌರವ ಮಂಕಾಗುತ್ತದೆ. 

. ಕಾಮ ಎಂಬುದು ದಾಂಪತ್ಯದ ಚೌಕಟ್ಟಿನಿಂದಾಚೆ ಹೋದಾಗ ಅದರ ಮೌಲ್ಯವನ್ನೂ. ಪಾವಿತ್ರವನ್ನೂ ಕಳೆದುಕೊಳ್ಳುತ್ತದೆ.
ಹೀಗೇ ಈ ಕೃತಿಯ ಪ್ರತಿ ಪಾತ್ರವೂ ಭಿನ್ನವಾಗಿ ಚಿಂತಿಸಿದಷ್ಟೂ ನವನವೀನ ಅರ್ಥ ಹೊಳೆಹುವ ಹಾಗಿದ್ದು
ಇನ್ನಷ್ಟು ವಿಚಾರ ಮಂಥನಮಾಡಲು, ಮತ್ತಷ್ಟು ಅರಿಯಲು ಉದ್ದೀಪಿಸುತ್ತದೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ