ಇವತ್ತಿನ ಹಾಗೇ ಅವತ್ತೂ
ಮಡಿಯಲ್ಲಿ ಅಡುಗೆ ಮಾಡ್ತಿದ್ದೆ.. ನನ್ನ ಮಗಳು ಬಂದು ಮುಟ್ಟಿದಳು.
ಅಮ್ಮ,`` ಏನು ಈಗಿನ
ಕಾಲದ ಮಕ್ಳೋ.. ಮಡಿ ಇಲ್ಲ, ಮೈಲಿಗೆ ಇಲ್ಲ....'' ಅಂತ ಸಿಡುಕಿದರು... ಅದಕ್ಕೆ ಇವಳು `` ಅಜ್ಜೀ,
ಮಡೀನೂ ಇಲ್ಲ, ಮೈಲಿಗೇನೂ ಇಲ್ಲ,, ಹಾಗಾದ್ರೆ ಏನಿದೆ? '' ಅಂತ ಮಾಮೂಲಿ ತುಂಟತನದ ಪ್ರಶ್ನೆ ಹಾಕಿ ಅಮ್ಮನ್ನ ಮುಜುಗರಕ್ಕೀಡು
ಮಾಡಿದಳು.. `` ತಲೆ ಹರಟೆ ಮಾಡ್ಬೇಡ ಹೋಗು...'' ಅಂತ ಗದರಿದೆ ನಾನಾಗ..
ಆದರೂ ಅವಳ ಪ್ರಶ್ನೆಯಿಂದ
ಬಂದ ನಗುವನ್ನು ಅಡಗಿಸಿಕೊಳ್ಳಲಿಕ್ಕೆ ಕಷ್ಟವಾಯ್ತು.. ಅಲ್ಲದೇ ನಾನು ನಗೋದು ಅಮ್ಮ ನೋಡಿದರೆ ಅನ್ನೋ
ಆತಂಕದಿಂದ ಅವರತ್ತ ನೋಡಿದೆ.. ಅವರೂ ತಮ್ಮ ನಗುವನ್ನು ಅದುಮಿಡಲಿಕ್ಕೆ ಹೆಣಗ್ತಿರೋದು ಕಂಡು ನಗುಬಂತು..
ಇಬ್ಬರೂ ಒಬ್ಬರನ್ನೊಬ್ಬರು ನೋಡಿ ನಕ್ಕುಬಿಟ್ಟೆವು..
ಅದನ್ನು ಗಮನಿಸಿ ಮತ್ತೆ ಕೇಳಿದಳು, `` ಅಜ್ಜೀ, .... ನಾನು ಅಮ್ಮನ್ನ ಮುಟ್ಟಿದರೆ
ಅವರು ಮೈಲಿಗೆ ಆಗ್ತಾರೆ. ಅಮ್ಮಾನೇ ನನ್ನ ಮುಟ್ಟಿದ್ರೆ ನಾನ್ ಮಡಿ ಆಗ್ತೀನ?...''
ಹಟಾತ್ತನೆ ಬಂದ ಪ್ರಶ್ನೆಗೆ
ಅಮ್ಮ ತಬ್ಬಿಬ್ಬಾದ್ರು..
ನಾನು ಅನಿವಾರ್ಯವಾಗಿ,
`` ಹೋಗೇ .. ತಲೆ ಪ್ರತಿಷ್ಠೆ ಮಾಡ್ಬೇಡ... ದೊಡ್ಡವರಂದ್ರೆ ಭಯ ಇಲ್ಲ, ಭಕ್ತಿ ಇಲ್ಲ ....'' ಅಂತ
ಅಮ್ಮನ ಸ್ಟಯಿಲ್ ನಲ್ಲೇ ಗದರಿದೆ.....''
ನಂತರ. ಮುಂದೆ ಉತ್ತರಿಸಬೇಕಾಗುವ most expected questions
`` ಅಮ್ಮಾ ಹರಟೋದು
ಬಾಯಲ್ಲಿ ತಾನೆ? ಮತ್ಯಾಕೆ ತಲೆ ಹರಟೆ ಅಂತಾರೆ?
ತಲೆ ಪ್ರತಿಷ್ಠೆ
ಅಂದ್ರೇನು? ಕೈ, ಕಾಲು ಪ್ರತಿಷ್ಠೆ ಅಂತ ಯಾಕಿಲ್ಲ?
ಇತ್ಯಾದಿ ಪ್ರಶ್ನೆಗಳಿಗೇನು
ಉತ್ತರಿಸಲಿ ಅಂತ ಯೋಚಿಸ್ತಾ ನನ್ನ ಅಡುಗೆ ಮುಂದುವರೆಸಿದೆ.....
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ