ಕಳೆದ ತಿಂಗಳು ಡಾ. ರಾಧಾ ಕೃಷ್ಣನ್
ರವರ ಜನ್ಮದಿನದ ಸ್ಮರಣಾರ್ಥವಾಗಿ ಶಿಕ್ಷಕರ ದಿನಾಚರಣೆಯನ್ನು
ಆಚರಿಸಲಾಯಿತು. ಈಗ ಈ ಆಚರಣೆ ಎಷ್ಟು ಪ್ರಸ್ತುತ? ಎಷ್ಟು ಅರ್ಥಪೂರ್ಣ?
ಕೇವಲ ಶಿಕ್ಷಕರಿಗೆ
" ಹ್ಯಾಪಿ ಟೀಚರ್ಸ್ ಡೇ ......! "ಎಂದು ಎದುರಿಗೆ ಕಂಡಾಗಲೋ, ಎಸ್. ಎಮ್. ಎಸ್. ಅಥವಾ
ಈ ಮೇಲ್ ಮೂಲಕವೋ ಹಾರೈಸಿದರೆ ಸಾಕೇ? ಮ್ಯಾನೇಜ್ಮೆಂಟಿನವರು ಬೋನಸ್ಸನ್ನೋ, ಏನಾದರೂ ಉಡುಗೊರೆಯನ್ನೋ
ನೀಡಿ, ಒ೦ದು ಊಟ ಹಾಕಿ, ಅರ್ಧ ದಿನ ರಜೆ ಕೊಟ್ಟು ಮನೆಗೆ ಕಳಿಸಿ ಬಿಡುವುದು. ಇದೇ ಶಿಕ್ಷಕರ ದಿನಾಚರಣೆಯೇ?
ಅದೇ ರೀತಿ ಶಿಕ್ಷಕರು
( ಬಹುತೇಕ ಶಿಕ್ಷಕಿಯರು) ಆ ದಿನ ಚನ್ನಾಗಿ ಅಲಂಕಾರ
ಮಾಡಿಕೊಂಡು, ನಗು ಮುಖದಿಂದ ಎಲ್ಲರ ಶುಭಾಶಯ ಗಳನ್ನೂ ಸ್ವೀಕರಿಸಿ, ಅವರಿಗೆ ಪ್ರತಿ ವಂದಿಸುತ್ತಾ, ತಾವು
ಶಿಕ್ಷಕರಾದುದ್ದು ಸಾರ್ಥಕವಾಯಿತು ಎಂಬಂತೆ ಸಂತೃಪ್ತರಾಗಿರುತ್ತಾರೆ.
ಇನ್ನು ಮಕ್ಕಳು;
ಅವರು ಈಗ ಯಾರು ತಮಗೆ ಪಾಠ
ಮಾಡುತ್ತಿದ್ದಾರೋ, ಅದರಲ್ಲೂ ವಿಜ್ಞಾನ, ಗಣಿತ, ಇಂಗ್ಲಿಷ್
ನಂತಹ ಮುಖ್ಯವಾದ ವಿಷಯಗಳನ್ನು ಬೋಧಿಸುತ್ತಾರೋ, ಅವರಿಗೆ ಮಾತ್ರ ಹೂಗುಚ್ಛವನ್ನೋ, ಶುಭಾಶಯ ಪತ್ರವನ್ನೋ
( ಗ್ರೀಟಿಂಗ್ಸ್) ಕೊಟ್ಟು " ಹ್ಯಾಪೀ..... ಟೀಚರ್ಸ್ ಡೇ........." ಅಂತ ಉಲಿಯುತ್ತಾರೆ.
ಇವೆಲ್ಲಾ ಅವರ ಮೇಲಿನ ಪ್ರೀತಿಗೋ
ಇಲ್ಲ, ನಮಗೆ ವಿದ್ಯಾದಾನ ಮಾಡುತ್ತಿರುವ ಗುರುಗಳು ಎಂಬ ಗೌರವಕ್ಕೋ ಅಲ್ಲ. ತಮಗೆ ಟೆಸ್ಟ್ ಗಳಲ್ಲಿ ಸ್ವಲ್ಪ
ಹೆಚ್ಚು ಅಂಕ ನೀಡಲಿ, ತಮ್ಮ ತಪ್ಪುಗಳನ್ನು ಮುಖ್ಯೋಪಾಧ್ಯಾಯರಿಗೋ, ಇಲ್ಲ ಪೋಷಕರಿಗೋ ತಿಳಿಸದೇ ಇರಲಿ,
ಕಾಪಿ ಹೊಡೆಯುವಾಗ ನೋಡಿದರೂ ನೋಡದಂತಿರಲಿ, ತಮ್ಮ ತಂದೆ ತಾಯಿಯರೆದುರು ತಮ್ಮನ್ನು ಚನ್ನಾಗಿ ಹೊಗಳಲಿ
ಎಂದು ಅವರಿಗೆ ಕೊಡುವ ಲಂಚ ಇದು.
ತಮಗೆ ಅಕ್ಷರಾಭ್ಯಾಸ ಮಾಡಿಸಿದ,
ತಮ್ಮ ಕೈ ಹಿಡಿದು ತಿದ್ದಿಸಿ ಬರೆಸಿದ, ತಾಯಿಯನ್ನು ಅಗಲಿ ಬಂದ ಹಸುಳೆಗಳೆಂದು ಅವ್ಯಾಜ ಮಮಕಾರ ತೋರಿಸಿದ
ಪ್ರಾಥಮಿಕ ಶಿಕ್ಷಕರನ್ನು ಮುಂದಿನ ತರಗತಿಗೆ ಹೋದ ಮರು ಕ್ಷಣವೇ ಮರೆತು ಬಿಡುತ್ತಾರೆ!
ಅವರಿಗೆ ಏಕೆ ವಿಷ್ ಮಾಡಬೇಕು?
ಅದ್ರಿಂದ ಏನು ಲಾಭ? ಅವರೆಲ್ಲಾ ಬರೀ ಅ, ಆ ಇ, ಈ ಎಬಿಸಿಡಿ ಕಲಿಸೋಕ್ಕೇ ಲಾಯಕ್ಕಾದವರು. ಅವರಿಗಿಂತ
ನಮಗೇ ಜಾಸ್ತಿ ಗೊತ್ತು, ಅಂದಮೇಲೆ ಅವರಿಗೇಕೆ ಗೌರವ ತೋರಿಸ ಬೇಕು? ಅನ್ನೋದು ಈ ಮೇಧಾವಿ ಮಕ್ಕಳ ಲೆಖ್ಖಾಚಾರ.
ಇನ್ನು ಈ ಜಾಣಾಕ್ಷ ಮಕ್ಕಳು
ಪೋಷಕರನ್ನು ಕಾಡಿ ಬೇಡಿ ಸ್ವಲ್ಪ ಹೆಚ್ಚಿನ ಬೆಲೆಯ ಸುಂದರವಾದ ಬೊಕ್ಕೆಯನ್ನು ಮುಖ್ಯೋಪಾಧ್ಯಾಯರಿಗೆ
ತರುತ್ತಾರೆ. ಯಾಕೆಂದರೆ 'ನಮ್ಮನ್ನು ಬೈಯ್ಯಲು, ಶಿಕ್ಷಿಸಲು,
ಪೋಷಕನ್ನು ಕರೆದು ದೂರು ಹೇಳಲು, ಕಡೆಗೆ ತಮ್ಮನ್ನೂ ಶಾಲೆಯಿಂದ ಹೊರಗೆ ತಳ್ಳಲು ಕೂಡಾ ಸಮರ್ಥರು ಎಂದರೆ
ಕೇವಲ ಮುಖ್ಯೋಪಾಧ್ಯಾಯರು ಎಂದು ಅವರಿಗೆ ಚನ್ನಾಗಿ
ಗೊತ್ತು. ಅದಕ್ಕೇ ಅವರನ್ನು ಚನ್ನಾಗಿಟ್ಟುಕೊಳ್ಳಬೇಕಲ್ಲಾ.....' ಎಂದು ಶನೀಶ್ವರನಿಗೆ ಎಳ್ಳೆಣ್ಣೆ
ದೀಪ ಹಚ್ಚುವ ಹಾಗೆ ಅವರಿಗೊಂದು ದೊಡ್ಡ ಬೊಕ್ಕೆ, ಒಂದು ಗಿಫ್ಟ್ ಕೊಟ್ಟು ಬಿಡುತ್ತಾರೆ.
ಅವರಿಗಿಂತಲೂ ಅವರ ಪೋಷಕರು
ಇನ್ನೂ ವ್ಯವಹಾರಸ್ಥರು!
" ಇಲ್ನೋಡು, ಈ ಸಂಗೀತದ ಟೀಚರ್ ಮತ್ತೆ ಕ್ರಾಫ್ಟ್ ಟೀಚರ್ ವಾರಕ್ಕೊಂದ್
ಸಲ ತಾನೆ ಬರೋದು? ಅವರಿಗೆ ಈ ಐದ್ ರೂಪಾಯಿ ಗ್ರೀಟಿಂಗ್ಸ್ ಸಾಕು. ಸೈನ್ಸ್ ಮತ್ತೆ ಮ್ಯಾತ್ಸ್ ತುಂಬಾ ಮುಖ್ಯ. ಅದಕ್ಕೆ ಆ ಟೀಚರ್ಸ್ ಗೆ ಇವೆರಡು ಬೊಕೆ ಕೊಡು.
ಕ್ಲಾಸ್ ಟೀಚರ್ ಗೆ ಈ ದೊಡ್ಡ ಬೊಕ್ಕೆ.ಕನ್ನಡ ಟೀಚರ್ ಗೆ ಏನೂ ಬೇಕಿಲ್ಲ. ಅವರು ಹೇಳೋದನ್ನ ಕಲಿಯೋದ್
ಸಾಲ್ದು ಅಂತ ಗ್ರೀಟಿಂಗ್ಸ್ ಬೇರೇ ದಂಡ......"
ಹೀಗೆ ಟೀಚಸ್ ನ ಕ್ಯಾಟಗರೈಸ್ ಮಾಡಿ, ಕೆಲವರ
ಬಗ್ಗೆ ಅವಮರ್ಯಾದೆಯಿಂದ ಮಾತಾಡಿದರೆ, ಮಕ್ಕಳು ಹೇಗೆ ತಾನೇ ಗುರುಗಳನ್ನು ಗೌರವಿಸಬಲ್ಲರು?
ಪೋಷಕರು ಶಿಕ್ಷಕರ ಸಲುವಾಗಿ
ಅಲ್ಲ, ಬದಲಾಗಿ ತಮ್ಮ ಮಕ್ಕಳ ಕ್ಷೇಮಕ್ಕಾಗೇ, ಗುರುಗಳನ್ನು ಹಾಗೂ ಅವರು ಕಲಿಸುವ ವಿಷಯವನ್ನೂ ಗೌರವಿಸಲು
ಕಲಿಸಬೇಕು. ಇಲ್ಲವಾದರೆ ಯಾವ ರೀತಿ ಕಠಿಣವಾದ ಕಲ್ಲು ಅದರ ಮೇಲೆ ಬಿದ್ದ ನೀರನ್ನು ಹೀರಿಕೊಳ್ಳುವುದಿಲ್ಲವೋ
ಅದೇರೀತಿ ಅನಾದರ, ಉಪೇಕ್ಷೆಗಳಿಂದ ಕಠಿಣವಾದ ಮಕ್ಕಳ ಮನಸ್ಸು ಜ್ಞಾನ ಧಾರೆಯನ್ನು ಹೀರಿಕೊಳ್ಳಲು ಅಸಮರ್ಥವಾಗಿರುತ್ತದೆ.
ನನ್ನ ಅನಿಸಿಕೆಯಂತೆ, ಈ ಶಿಕ್ಷಕರ
ದಿನಾಚರಣೆಯನ್ನು ಆಚರಿಸುವುದೇ ಇಂದಿನ ಸಂದರ್ಭದಲ್ಲಿ ಅಪ್ರಸ್ತುತ. ಅದಕ್ಕೆ ಬದಲಾಗಿ ಪೋಷಕರು ಮಕ್ಕಳಿಗೆ
ಶಿಕ್ಷಣದ, ಶಿಕ್ಷಕರ ಮಹತ್ವ ತಿಳಿಸುತ್ತಾ, ಪ್ರತಿನಿತ್ಯ
ಗುರುಶಿಷ್ಯರ ನಡುವಿನ ಬಾಂಧವ್ಯವನ್ನು ಬಲಪಡಿಸುವಂತೆ, ಅವರು ಕಲಿಸುವ ವಿಷಯ ಯಾವುದೇ ಇರಲಿ, ತಾರತಮ್ಯವಿಲ್ಲದೇ
ಎಲ್ಲರನ್ನೂ ಸಮಾನವಾಗಿ ಗೌರವಿಸುವಂತೆ ಮಾಡಿದರೆ ಆಗ ಪ್ರತಿದಿನವೂ ಶಿಕ್ಷಕರ ದಿನಾಚರಣೆಯೇ ಆಗುವುದರಲ್ಲಿ
ಸಂಶಯವಿಲ್ಲ.