ಗುರುವಾರ, ಮೇ 15, 2014

ಒಂಟಿ ಲಲನೆ

ಬಿಸಿಲ ಭೀಕರತೆಯಲೂ ಒಳಗೊಳಗೆ ಸಂಭ್ರಮಿಸಿ
ಒಬ್ಬಂಟಿಯಾದರೂ ಒಂಟಿಯಲ್ಲದ ಲಲನೆ
ಸುಡುವ ಬಿಸಿಲಿನ ಬೇಗೆಯಲಿ ಸುಖವಾಗಿ ಸಾಗುವಳು
 ಜೊತೆಯಲ್ಲಿ ಮನದಲ್ಲಿ ಇರಲು ಅವನೆ
ಅವನ ಹಸ್ತ ಸ್ಪರ್ಶ  ಹೃದಯಕ್ಕೆ ಸುಮ ಸ್ಪರ್ಶ
ರಾಗಸಂಗಮ ನೂರು ಭಾವಗೀತೆ
ಅವನೊಡನೆ ಇದ್ದ ಪ್ರತಿ ಘಳಿಗೆಯೂ ಹೊಸ ಬಯಕೆ
ಏನೋ ಹೊಸ ಕನಸುಗಳ ಹೆಣೆಯುತ್ತಿವೆ
 ಏಕಾಂಗಿತನದಲೂ ಜೊತೆಯಲ್ಲಿವೆ
 ಮಂದ ಮಾರುತ ಹೊತ್ತು  ತಂದ ಆ ಪಿಸುಮಾತು
ಹಾಡುತಿವೆ ಅವನೆ ರಚಿಸಿದ ಪ್ರೇಮ ಕವನ
ಕಾಮದಾ ಕೊಳಕಿರದ ಶುದ್ಧ ಚೈತನ್ಯಮಯ
ನಿರ್ಭೀತ ದೃಢಮನದಿ ಹಿತ ಕಂಪನ



ಮಾತೆಯೊಬ್ಬಳ ಮನದಳಲು



ಹೇಗೆ ನಂಬಲಿ ಹೇಗೆ ನಂಬದೇ ಇರಲಿ?
ಕಣ್ಣಿಂದ ಕಂಡದ್ದೆ ಕಿವಿಯಿಂದ  ಕೇಳಿದ್ದೆ?
ಇಂದ್ರಿಯಗಳನುಭವವೆ? ಮನಕಾದ ನಲಿವೆ?

ಅಂದು ತಾಯಾಗುವೆನು ಎಂಬ ಅನುಭೂತಿ ನಿಜ
ಗರ್ಭಸ್ಥ ಶಿಶು ಒದೆದ ರೋಮಾಂಚ ಸತ್ಯ
ಯಾತನೆಯ ನಂತರದ ಮಾಯಕದ ಮತ್ತಳಿದು
 ತೊಳೆದ ಮುತ್ತಂಥ ಮಗು  ಕಂಡದ್ದು ಸತ್ಯ

 ಬೆಣ್ಣೆಯಂತಹ ಕಂದನಾಡಿದ್ದ ತುಂಟಾಟ
ಹೃನ್ಮನವ ತಣಿಸಿ ಮುದಗೊಳಿಸಿದ್ದು ಸುಳ್ಳೇ?
ಇವ ನಿನ್ನ ಮಗನಲ್ಲ ಅವನವ್ವೆ ಇಹಳೆಲ್ಲೋ
ಎನಲು ನಾನದನು ನಂಬಲಿ ನೀನೆ ಹೇಳೇ?

ನಂಬದೆಲು ಇರಲಾರೆ, ನಂಬಿ ದು:ಖಿಸಲಾರೆ
 ನನ್ನ ಮನದಳಲನ್ನು ಬಲ್ಲೆಯಾ ಗೆಳತಿ?
ಇದನೆನಗೆ ಅರುಹಿದವರೆಂದು  ಕನಸಲ್ಲಿಯೂ
 ಅನೃತವನು ನುಡಿಯಲಾರದ ನನ್ನ ಪತಿ


ನಿರಾಸೆ

ಅಂದು....
ಅವ ನನ್ನ ನೋಡಿ
ಮುಗುಳ್ನಕ್ಕ..
 ನಾನು ಪ್ರತಿ ನಗಲಿಲ್ಲ..

ನನಗಾಗಿ
ಕವನ ಬರೆದ..
ನಾನೋದಲಿಲ್ಲ...
.
ನನಗಾಗಿ ನದಿ ತೀರದಿ
 ಕಪ್ಪೆ ಗೂಡು ಕಟ್ಟಿದ
ನಾ ಗಮನಿಸಲಿಲ್ಲ...

ನನಗಾಗಿ ಪ್ರೇಮ
ಕವನ ಹಾಡಿದ
 ನಾನಾಲಿಸಲಿಲ್ಲ..

ನನಗಾಗಿ
ಮಲ್ಲಿಗೆ ತಂದ
ನಾ ಮುಡಿಯಲಿಲ್ಲ..

ಅವನ ಅನುರಾಗಕ್ಕೆ
ದನಿಯಾಗಲಿಲ್ಲ...

ಕೊನೆಗೆ....
 ಯೋಧಾನಾಗುವೆನೆಂದು
ವಿದಾಯ ಹೇಳಲು ಬಂದ..
ನಾ ಬೇಡವೆಂದು ಗೋಗರೆದೆ
ಅವ  ದೃಢ ಚಿತ್ತ
ಕೇಳಲಿಲ್ಲ
ಜಾಗ್ರತೆಯಾಗಿ ಬೇಗ ಬಾ 
ಎಂದು ಅಂಗಲಾಚಿಗೆ
ನಿಷ್ಕರುಣಿ
ಬರಲೇ ಇಲ್ಲ....


ಕಥೆ

ಕಥೆ
 ಗಾಢವಾದ ನಿದ್ರೆಯಲ್ಲಿದ್ದಾಗ ಇದ್ದಕ್ಕಿದ್ದ ಹಾಗೆ ರಿಂಗ್ ಆದ ಸದ್ದಿಂದ ಎಚ್ಚರ ಆಯ್ತು.. ` ಅಲಾರಾಂ?? ಇಲ್ಲ ಇದು ಯಾವುದೋ ಕಾಲ್ ಬಂದ ಶಬ್ದ. ಗಡಿಯಾರ ನೋಡಿದೆ.. ರಾತ್ರಿ ಒಂದು ಗಂಟೆ..ಎದೆ ಧಗ್ ಅಂತು... ಫೋನ್ ರಿಸೀವ್ ಮಾಡ್ತಾ ಇವರ ಕಡೆ ನೋಡ್ದೆ..   ಒಳ್ಳೇ ನಿದ್ರೆಲಿದ್ದರು.. `ಹಲೋ' ಅಂದ ತಕ್ಷಣ  `ಅಮ್ಮಾ" ಅನ್ನುವ ಎಳೆಯ ದನಿನನ್ನ ನಿದ್ರೆಯ ಮಬ್ಬನ್ನೂ ಪೂರ್ಣವಾಗಿ ಓಡಿಸಿತು..
ಮಗಳ ಮುಖ ಕಣ್ಮುಂದೆ ಬಂತು..  `` ಅಮ್ಮಾ , ನನ್ ಮೇಲೆ ನಿಂಗೆ ಸಿಕ್ಕಾಪಟ್ಟೆ ಕೋಪ ಬಂದಿದೆ..  ಹೇಳ್ದೆ ಕೇಳ್ದೆ ಯಾವನ ಹಿಂದೇನೋ ಓಡಿ ಹೋದ್ಲು ಅಂತ.. ಆದ್ರೆ ಅಮ್ಮಾ ನನ್ ಮಾತು ಸ್ವಲ್ಪ ಕೇಳು.. ಪ್ಲೀಸ್.. ''
 `ಪುಟ್ಟೀ.. '
``ಅಮ್ಮಾ ನಾನು ಹೇಳ್ತೀನಿ ಇವತ್ತು.. ನೀನು ಯಾವಾಗ್ಲೂ ಹೇಳ್ತಾನೇ ಇರ್ತಿ.. ನನ್ನೆಲ್ಲಾ ಪ್ರಾಬ್ಲಮ್ಗೂ ನಿನ್ ಹತ್ರ ಸಲ್ಯೂಶನ್ ಇದೆ ಅನ್ನೋ ಥರ..ನಂಗೆ ನನ್ ಮಾತನ್ನು ಕೇಳಿಸಿಕೊಳ್ಳೋಕೆ ಯಾರಾದ್ರು ಬೇಕಿತ್ತು.. ಅಮ್ಮಾ, ಪ್ಲೀಜ್ ಫೋನ್ ಇಡ್ಬೇಡ..  ನಂಗೆ ಬೇರೆ ದಾರಿ ಇರ್ಲಿಲ್ಲಾಮ್ಮ. ನೀನು ಲವ್ ಅನ್ನೋ ಪದದ ಬಗ್ಗೆ ಉರಿದ್ ಬೀಳಿದ್ದೀ,, ನಾನೇನು ಬೇಕಂತ ಲವ್ ಮಾಡ್ಲಿಲ್ಲ .. ಅದೇ ಹೆಂಗೋ ಆಯ್ತು..
ಕುತೂಹಲಕ್ಕೆ ಏನೋ ಮಾಡಕ್ಕೆ  ಹೋಗಿ ಇನ್ನೇನೋ ಆಯ್ತು.. ಅಮ್ಮಾ, ಕೇಳ್ತಿದೀಯಾ?
 ``ಹೂ ಹೇಳು ಕಂದಾ''
ಇವರಿಗೆ ಎಚ್ರ ಆಯ್ತು.. ಪ್ರಶ್ನಾರ್ಥಕವಾಗಿ ನೋಡಿದರು.. ನಾನು ಕಣ್ಣೀ.
ರನ್ನು ಒರೆಸುತ್ತಾ ಸುಮ್ಮನಿರುವಂತೆ ಸೂಚಿಸಿದೆ.. ತಕ್ಷಣ ಇವರು ಲಿವಿಂಗ್ ರೂಮ್ನಿಂದ ಇನ್ನೊಂದು ಹ್ಯಾಂಡ್ ಸೆಟ್ ತಂದು ಆಲಿಸುತ್ತಾ ನನ್ ಪಕ್ಕ ಕುಳಿತರು..
  ``ನಿಂಗೆ ಹೇಳಕ್ಕೆ ಧೈರ್ಯ ಬರ್ಲಿಲ್ಲ.. ನಾವಿಬ್ರು ಚರ್ಚಲ್ಲಿ ಮದ್ವೆ ಆದ್ವಿ.. ಅಮ್ಮಾ  ಈಗ ನನ್ ಹೊಟ್ಟೆಲಿ ಪುಟ್ಟ ಮಗು ಇದೆ.. ಈಗ ನಿನ್ನ ತುಂಬಾ ಮಿಸ್ ಮಾಡ್ಕೋತಿದೀನಿ.. ನಿನ್ನ  ಈಗ್ಲೇ ನೋಡಬೇಕನ್ನಿಸ್ತಿದೆ..
ಗಂಟಲುಬ್ಬು ಬಂದಿತ್ತು.. ಕಷ್ಟ ಪಟ್ಟು ಹೇಳಿದೆ.. ``ಹೂಂ..'' ನನ್ನವರ ಕೈಯ್ಯನ್ನು ಭದ್ರವಾಗಿ ಹಿಡಿದುಕೊಂಡೆ...
 ``ನಾ ಸುಮಾರಾಗಿ ಡ್ರೈವ್ ಮಾಡ್ತೀನಿ.. ನಾನೊಬ್ಳೇ ಬರ್ಲಾ.. ಅಮ್ಮಾ ಕೆವಿನ್ ತುಂಬಾ ಒಳ್ಳೆಯವನು.. ಅವನ್ನ ಕರ್ಕೊಂಡ್ ಬರಕ್ಕೆ ಭಯ ಆಗುತ್ತೆ.. ನೀನು ಅವನನ್ನು ಬೈದರೆ ಅಂತ.. ಅದಕ್ಕೆ ನಾನೊಬ್ಳೇ ಬರ್ತೀನಿ.. ಆಯ್ತ? ಬರಲಾ
 ``ಬೇಡ.... ಬೇಡ... ಕಂದಾ ......ನೀನು ಈಗ ಡ್ರೈವ್ ಮಾಡ್ಬೇಡ.. ಕೆವಿನ್ ಜೊತೇನೇ ಬಾ.. ನಾನವನ್ನ್ ಏನೂ ಬೈಯ್ಯಲ್ಲ ..  ಪ್ರಾಮಿಸ್... ಪ್ಲೀಜ್ ಅಮ್ಮಂಗೋಸ್ಕರ ಇದೊಂದ್ ಹೆಲ್ಪ್ ಮಾಡು ಪುಟ್ಟೀ..ಪ್ಲೀಜ್...'' ದೈನ್ಯವಾಗಿ ಅಳ್ತಾ ಕೇಳಿದೆ...
``ಓಹ್! ಥ್ಯಾಂಕ್ ಯು...  ಲವ್ ಯು ಅಮ್ಮಾ.. ಈವಾಗ್ಲೇ ಹೊರಡ್ತೀನಿ.. ಬೈ.. .. '' ಫೋನ್ ಇಟ್ಟ ಸದ್ದು..
 ನನ್ನ ಕೆನ್ನೆ ಕಣ್ಣೀರಿಂದ ಒದ್ದೆ ಆಗಿತ್ತು.. ಇವರನ್ನು ನೋಡಿದೆ.. ಅವರ ಕಣ್ಣಲ್ಲೂ ನೀರು..  ಅವರೆದೆಯಲ್ಲಿ ಮುಖ ಹುದುಗಿಸಿದೆ. ಅವರು ನನ ಕೂದಲು ಸವರ್ತಾ ಕೇಳಿದ್ರು...` ``ನೀನ್ಯಾಕೆ ಅವಳಿಗೆ ರಾಂಗ್ ನಂಬರ್ ಅಂತ ಹೇಳಲಿಲ್ಲ...?''
 ``ಅದು ಅಂಥ ರಾಂಗ್ ನಂಬರ್ ಆಗಿರ್ಲಿಲ್ಲ..... '' ಅಂತ ಹೇಳಿ ಎದ್ದು ಮಗಳ ರೂಂ ಗೆ ಹೋದೆ. ಇವರು ಹಿಂಬಾಲಿಸಿದರು .. ಮಗಳು ಹಸುಗೂಸಿನ ಹಾಗೆ ನಿದ್ರಿಸಿದ್ದನ್ನು ನೋಡಿ ಪ್ರೀತಿ ಉಕ್ಕಿಬಂತು.. ಅವಳ ಹಣೆಗೆ ಹಗುರಾಗಿ ಮುತ್ತಿಟ್ಟೆ.. ಅವಳು  ಕಣ್ತೆರೆದು ನಿದ್ದೆ ಮಬ್ಬಲ್ಲಿ ಕೇಳಿದ್ಲು`` ಅಮ್ಮಾ, ಅಪ್ಪಾ ಏಂಮಾಡ್ತಿದ್ದೀರಿ.....?''
 `ಪ್ರಾಕ್ಟೀಸ್.... ' ನಾನಂದೆ. 
``ಏಂ ಪ್ರಾಕ್ಟೀಸ್...?' ನಿದ್ದೆಗೆ ಜಾರ್ತ ಕೇಳಿದ್ಲು..


 ``ಕೇಳಿಸಿಕೊಳ್ಳೋ ಪ್ರಾಕ್ಟೀಸ್..... '' ಮೆಲ್ಲಗೆ ಉತ್ತರಿಸಿದೆ..

ಬ್ಯಾಂಡ್ ಏಡ್

ಕೆಲವು ನೆನಪುಗಳೆ ಹಾಗೆ.. ಎಷ್ಟೇ ಕಾಲವಾದರೂ ಮನದಲ್ಲಿ ಅಚ್ಚಳಿಯದೇ ನಿಂತು ಬಿಡುತ್ತವೆ!
    ನಾನು ನನ್ನ ತಂದೆಯನ್ನು ಕಳೆದುಕೊಂಡಾಗಿನ ಸಂದರ್ಭ... ಅವರೊಬ್ಬ ಅದ್ಭುತ ವ್ಯಕ್ತಿ.. ಅವರ ಮರಣ ನನಗೆ ಸಹಿಸಲಾರದ ನೋವು ಕೊಟ್ಟಿತ್ತು. ಯಾರೇ ಎಷ್ಟೇ ಸಮಾಧಾನ ಹೇಳಿದರೂ, ನನ್ನ ಮನಸ್ಸನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸಿದರೂ ಸಾಧ್ಯವಾಗಿರದಷ್ಟು ದು:ಖದಲ್ಲಿ ಮುಳುಗಿದ್ದೆ....ನನ್ನ ಮಗಳಿಗೆ ಒಂದು ವರ್ಷವಾಗಿತ್ತು. . ನಮ್ಮ ಪಕ್ಕದ ಮನೆಯಲ್ಲಿ ಸುಮಾರು ಎರಡು- ಮೂರು ವರ್ಷದ  ಹುಡುಗಿ ಇದ್ದಳು.
ಅವಳಿಗೆ ಬೇಸರವಾದಾಗಲೆಲ್ಲ ನನ್ನ ಮಗಳೊಂದಿಗೆ ಆಡಲಿಕ್ಕೆ ಬರುತ್ತಿದ್ದಳು.. ಆಗ ನನ್ನನ್ನು ಕಥೆ  ಹೇಳುವಂತೆ ಕೇಳುತ್ತಿದ್ದಳು.. ಮಕ್ಕಳಿಗೆ  ಕಥೆ ಹೇಳುವುದು ನನ್ನ ಮೆಚ್ಚಿನ ಹವ್ಯಾಸಗಳಲ್ಲಿ ಒಂದು. ನಾನು ದಿನಾ ಒಂದು ಹೊಸ ಕಥೆಯೊಂದಿಗೆ ಅವಳಿಗಾಗಿ ಕಾಯ್ತಿರ್ತಿದ್ದೆ.
 ಅವತ್ತು ಅದೇ ರೀತಿ ಅವಳು ಬಂದು, `ಆಂಟಿ, ಕಥೆ ಹೇಳಿ ...' ಅಂದಾಗ ಅವಳನ್ನು ಒಳಗೆ ಕರೆದು ಕಥೆ ಹೇಳಲಿಕ್ಕೆ ಪ್ರಯತ್ನಿಸಿದೆ..  ನನ್ನ ತಂದೆಯ ಅಗಲಿಕೆಯ ನೋವು ನನ್ನ ಮಿದುಳನ್ನು ಎಷ್ಟೊಂದು ನಿಷ್ಕ್ರಿಯಗೊಳಿಸಿತ್ತೆಂದರೆ ನನಗೆ ಯಾವ ಕಥಯೂ ನೆನಪಿಗೆ ಬರಲಿಲ್ಲ!!
ಹೊಸ ಕಥೆಗಾಗಿ ಕಾಯುತ್ತಿದ್ದ ಮಗುವಿಗೆ, ``ಸಾರಿ ಚಿನ್ನು.. ನಾನು ತುಂಬಾ ನೋವಿನಲ್ಲಿದೀನಿ.. ಯಾವ ಕಥೆನೂ ನೆನ್ಪಾಗ್ತಿಲ್ಲ.. ನಾಳೆ ಬರ್ತೀಯಾ? ...'' ಅಂದೆ.
 ಅವಳಿಗೆಷ್ಟು ಅರ್ಥವಾಯ್ತೋ ತಿಳೀದು .. ನನ್ ಮುಖ ನೋಡಿ, ` ಹೂಂ.. " ಅಂತ ಹೊರಟಳು.. ನಾನು ಮತ್ತೇ ಅದೇ ನೀರವ ಮೌನ ತುಂಬಿದ ಮನೆ ಮನದೊಂದಿಗೆ ಕುಳಿತೆ .. ಮಲಗಿದ್ದ ಮಗಳ ಹತ್ತಿರ..
ಮೆತ್ತೆ ಬಾಗಿಲು ಬಡಿದ ಸದ್ದು... ಬೇಸರದಿಂದಲೇ ಎದ್ದು ನೋಡಿದೆ..
 ಅದೇ ಪುಟ್ಟ ಹುಡುಗಿ ಬಾಗಿಲಲ್ಲಿ!
 ಬಾಗಿಲು ತೆರೆದು ನಾನು ಮಾತಾಡ ಬೇಕೆನ್ನುವಷ್ಟರಲ್ಲಿ ಅವಳೇ , ` ಆಂಟಿ, ಇದು ತಗೊಳ್ಳಿ.. ನಿಮ್ಗೆ ಎಲ್ಲಿ ನೋವಾಗಿದೆ ಅಲ್ಲಿ ಹಾಕಿಕೊಂಡ್ರೆ ಬೇಗ ವಾಸಿ ಆಗುತ್ತೆ.. '' ಅಂತ ನನ್ ಕೈಗೆ ಒಂದು   Band aid ಕೊಟ್ಟಳು..  ಅವಳ ಮುಖದಲ್ಲಿ ನಾನೇನೋ ಒಳ್ಳೆಯ ಕೆಲಸ ಮಾಡ್ತಿದೀನಿ ಅನ್ನೋ ಖುಷಿ, , ಹೆಮ್ಮೆ, ಕಣ್ಣುಗಳಲ್ಲಿ ಮುಗ್ಧ ಪ್ರೀತಿ, ಕರುಣೆ...  
ನನ್ನ ಆತ್ಮೀಯರು, ಹಿತೈಶಿಗಳು  ಅದೆಷ್ಟೇ ವಿಧವಾಗಿ ಸಮಾಧಾನ ಮಾಡಿದರೂ ಒಂದು ನೆಲೆಗೆ ಬಾರದ ನನ್ನ ಮನಸ್ಸಿಗೆ  ಅಂದು ಮಾತಿಗೆ ನಿಲುಕದಷ್ಟು ಹಿತವಾದ ಅನುಭವ ಆಗಿದ್ದು..  ನಾನು ಶೋಕ ಕೂಪದಿಂದ ಹೊರಬಂದದ್ದು....ಇವತ್ತಿಗೂ ನೆನಪಾಗ್ತನೇ ಇರುತ್ತೆ


ಶ್ರೀನಿವಾಸ ಕಲ್ಯಾಣ

ಆಗಾಗ ನೆಂಟರಿಷ್ಟರು, ಸ್ನೇಹಿತಗು ಅವರ ಮನೆಗಳಲ್ಲಿ ಶುಭ ಕಾರ್ಯಗಳಾದ ನಂತರ ದೇವಾಲಯಗಳಲ್ಲಿ ಶ್ರೀನಿವಾಸ ಕಲ್ಯಾಣ  ಮಾಡಿಸುತ್ತಾರೆ.. ಆಗ ನಮಗೂ ಆಹ್ವಾನ ಬರುತ್ತದೆ.. ಆಗೆಲ್ಲ ನನ್ನ ಮಗಳು `` ಯಾಕಮ್ಮ ಶ್ರೀನಿವಾಸ ಕಲ್ಯಾಣ ಮಾಡ್ತಾರೆ? ಅದು ದೇವರಿಗೆ ಇಷ್ಟನ? ಹಾಗಂತ ಅವನು ಹೇಳಿದಾನ? ಯಾವಾಗ ? 
 ಪದೇ ಪದೇ ಮದುವೆ ಮಾಡಿಕೊಳ್ಳಕ್ಕೆ ಬೋರಾಗಲ್ವ?...  '' ಹೀಗೆ ನೂರೆಂಟು ಪ್ರಶ್ನೆ ಕೇಳ್ತಾಳೆ..
 ಇದ್ಯಾವುದಕ್ಕೂ ಅವಳಿಗೆ ಸಮಾಧಾನವಾಗುವಂಥ ಉತ್ತರ ನಂಗೆ ಸಿಕ್ಕಿಲ್ಲ..
ಅಲ್ಲದೆ  ಶ್ರೀನಿವಾಸ ಪದ್ಮಾವತಿಯನ್ನು ಮದುವೆಯಾಗಿ  ಸುಖ ಸಂಸಾರ ಮಾಡುವ ಮೊದಲೇ ಕಲ್ಲಾದನಲ್ಲ? ಅವನ ಮದುವೆಯನ್ನು ಮತ್ತೆ ಮತ್ತೆ ಮಾಡಿದರೆ ಅವನಿಗೆ ನೋವಾಗುತ್ತೇನೋ ಅನ್ನಿಸುತ್ತೆ.. ಅಲ್ಲವೇ?


ಗುರಿ

 ಅತ್ತಿತ್ತ ನೋಡುತ್ತ ಅಲ್ಲಲ್ಲೆ ನಿಲ್ಲುತ್ತ 
ಮೆಲ್ಲ ನಡೆಯುವ ತನ್ನ ಗೆಳತಿಗಾಗ
ತನ್ನ ಜೊತೆ ಜೊತೆಯಲ್ಲಿ ಹೆಜ್ಜೆ ಹಾಕದ ಅವಳ
ಹುಡುಗಾಟ ನೋಡಿ ಕಿಡಿ ನುಡಿದ ಹುಡುಗ
``ಬೇಗ ಹೆಜ್ಜೆಯ ಹಾಕು ದೂರವಿದೆ ನಮ್ಮ ಗುರಿ
ಸಾಗಬೇಕಿದೆ ಕೊಂಚ ನಿಲುಗಡೆಯು ಇರದೆ
ಅತ್ತಿತ್ತ ನೋಡುತ್ತ ಹೊತ್ತೇಕೆ ಕಳೆಯುತಿಹೆ
ಕಡಿವಾಣ ನಿನಗೀಗ ಬೇಕಾಗಿದೆ''
ಮೆಲು ನಗೆಯ ಬೀರುತ್ತ. ಮರಿ ದುಂಬಿ ಹಿಡಿಯುತ್ತ
ಪ್ರೀತಿಯಿಂದಲಿ ಅವನ ಮುಖವ ನೋಡಿ 
ಕಣ್ತುಂಬ ನಲಿವನ್ನು ತುಂಬಿ ಕೊಂಡಿಹ ಅವಳು
ನುಡಿದಳು ಮಾತಿನಲೆ ಹಾಕಿ ಮೋಡಿ

``ಇಲ್ಲಿ ಚಿಟ್ಟೆಯ ನೋಡು ಅಲ್ಲಿ ಅರಳಿದ ಸುಮವು
ಕೋಗಿಲೆಯ ಗಾಯನವು ಸೊಗಸಾಗಿದೆ
ಇಂಥ ಆನಂದವು ಇಲ್ಲಿಯೇ ಇರುವಾಗ 
ಮತ್ತಾವ ಗುರಿ ತಲುಪಬೇಕಾಗಿದೆ?''

ಋಣಾಣುಬಂಧ

 ನನ್ನ ತೀರಾ ಪರಿಚಿತರೊಬ್ಬರು ಆಸ್ಪತ್ರೆಯಲ್ಲಿ ದಾಖಲಾಗಿದ್ರು.. ಅವರನ್ನು ನೋಡಲು  ಬೇಗ ಮನೆಯ ಕೆಲಸಮುಗಿಸಿ ಹೊರಟೆ.. ಇನ್ನೇನು  ಆ ಆಸ್ಪತ್ರೆಯ ಬಾಗಿಲಲ್ಲಿ ಆಟೋದಿಂದ ಇಳೀಬೇಕು, ಆಗ ಆಕೆಯ ತಮ್ಮ ಬಂದು `` ಮ್ಯಾಡಂ, ಇಲ್ಲಿ ಆಗಲ್ಲ ಅಂತ ಬೇರೆ ಹಾಸ್ಪಿಟಲ್ ಗೇ ಕರ್ಕೋಡು ಹೋಗಿದಾರೆ.. ನೀವು ನನ್ ಹಿಂದೇ ಬನ್ನಿ...'' ಅಂತ ಅವರ ಟೂ ವೀಲರ್ ನಲ್ಲಿ ಹೋದರು..ನಾನು ಅದೇ ಆಟೋದಲ್ಲಿ ಹಿಂಬಾಲಿಸಿದೆ.. ಆಟೋದವನಿಗೆ ಹಣ ನೀಡಿ, ನಾ ಆಸ್ಪತ್ರೆಯ ಒಳಗೆ ಪ್ರವೇಶಿಸುವಷ್ಟರಲ್ಲಿ ಆತ ಎಲ್ಲೋ ಮಾಯವಾಗಿದ್ದ!.. ಅವನೆಲ್ಲಿ ಅಂತ ಅರಸುತ್ತಾ  ಇದ್ದ ನನ್ನ ಬಳಿ ನರ್ಸ್ ಒಬ್ಬರು ಬಂದು`` ಸುಮಾ ಅಂದ್ರೆ ನೀವೇನಾ?'' ಅಂದ್ರು ನಾನು ಹೌದೆಂದು ತಲೆ ಆಡಿಸಿದೆ.. ೨೩ನೇ ನಂಬರ್ ಬೇಡ್ ನವರನ್ನು ತಾನೇ ನೀವು ನೋಡ್ಬೇಕು? ಬನ್ನಿ ಬೇಗ ಅವರ ಕಂಡೀಶನ್ ತುಂಬಾ ಕ್ರಿಟಿಕಲ್ ಆಗಿದೆ.. ಬೇಗ ಬನ್ನಿ ನಿಮ್ಮನ್ನೇ ಕಾಯ್ತಿದೀವಿ'' ಅಂದಾಗ ನನಗೆ ಶಾಕ್!! ಕಾಲುಗಳಲ್ಲಿ ನಡೆಯುವ ಶಕ್ತಿಯೇ ಕಳೆದು ಹೋದ ಭಾವ!
 ಆಕೆ ಹೆಚ್ಚೂ ಕಡಿಮೆ ನನ್ನನ್ನು ಎಳೆದುಕೊಂಡು ಹೋಗಿ ಆ ೨೩ನೇ ಬೆಡ್ ಮುಂದೆ ನಿಲ್ಲಿಸಿದಳು.. ಅಲ್ಲಿ ಮಲಗಿದ್ದ ಕ್ಷೀಣ ಕಾಯದ ವ್ಯಕ್ತಿಗೆ`` ತಾತ ನಿಮ್ ಮಗಳು ಬಂದಿದಾರ್‍ ''  ನೋಡಿ.. '' ಅಂದು ನನ್ ಕೈಯ್ಯನ್ನು ಆತನ ಕೈಯ್ಯಲ್ಲಿಟ್ಟಳು.. ನನಗೆ ಎಷ್ಟು ದಿಗ್ಭಮೆಯಾಗಿತ್ತು, ಎಂಥ ಅಯೋಮಯ  ಸ್ಥಿತಿಯಲ್ಲಿದ್ದೆ ಎಂದರೆ ನಾ ಏನೊಂದೂ ಹೇಳದಾದೆ.. ಸುಮ್ಮನೇ ಅವರ ಪಕ್ಕ ಕುಳಿತೆ
 ಆತ ನನ್ನ ಕೈಯನ್ನು ತನ್ನ ಕೃಶವಾದ ಕೈಯ್ಯಲ್ಲಿ ಹಿಡಿದು ಅಸ್ಪಷ್ಟವಾಗಿ ಏನೋ ಹೇಳುತ್ತಿದ್ದರೆ  ನನಗೆ ನನ್ನ ತಂದೆಯ ನೆನಪು ಒತ್ತರಿಸಿ ಬರುತ್ತಿತ್ತು.. ಅವರ ಮಾತಿಗೆಲ್ಲಾ ತಲೆ ಆಡಿಸುತ್ತಾ .  ಕೆಲವು ಪ್ರಶ್ನೆಗಳಿಗೆ  ನನಗೆ ತಿಳಿದ ರೀತಿ ಉತ್ತರಿಸುತ್ತಾ, ಇಲ್ಲಿಗೆ ನಾನು ಬಂದ ಎಂಬುದನ್ನೇ ಮರೆತು ಪಕ್ಕದಲ್ಲೇ ಕುಳಿತುಬಿಟ್ಟೆ..
 ಸ್ವಲ್ಪ ಸಮಯದ ನಂತರ ಆತನಿಗೆ ಬಿಕ್ಕಳಿಕೆ ಬಂತು.. ನಾನು ನನ್ನ ಬ್ಯಾಗಲ್ಲಿದ್ದ ಬಾಟಲ್ ನಿಂದ ನೀರು ಕುಡಿಸಿದೆ. ಎರಡು ಗುಟುಕು .. ಮೂರನೇ ಗುಟುಕು ಒಳಗೆ ಹೋಗಲಿಲ್ಲ.. ಆತನ ಕಣ್ಣುಗಳಲ್ಲಿ ಇದ್ದ ಕಾಂತಿ ಮಾಯವಾದಂತೆ ಅನ್ನಿಸಿತು!  ತಕ್ಷಣ ಗಾಭರಿಯಿಂದ ಅಲ್ಲೇ ಇದ್ದ ಡಾಕ್ಟರ್ ನ ಕರೆದೆ.. ಅವರು ಬಂದು.. ಚೆಕ್ ಮಾಡಿ ` ಸಾರಿ ಮ್ಯಾ ಡಂ.. ಹಿ ಈಸ್ ನೋ ಮೋರ್ '' ಅಂದರು.  ನಾನು ``ಇವರು ಯಾರಂತ ನಂಗೊತ್ತಿಲ್ಲ ಸರ್....'' ಅಂದೆ.. ``ಮತ್ತೆ ಇಷ್ಟು ಹೊತ್ತು ಅವರ ಜೊತೆ ಮಾತಾಡ್ತಿದ್ರಿ?'' ಅಂದ್ರು.
ಅಷ್ಟು ಹೊತ್ತಿಗೆ ನನ್ನ ಕರೆತಂದಿದ್ದ ನರ್ಸ್ ಬಂದು.. ``ಸಾರಿ ಮ್ಯಾಡಂ  ಈ ಪೇಷಂಟ್ ಕಡೆಯೋರು ಇವರು.. ನಾನು ಕನ್ಫ್ಯೂಸ್ ಮಾಡಿಕೊಂಡೆ....'' ಅಂದ್ರು.
ಆಗ ಅಲ್ಲಿ ಬಂದ ನನ್ನ ಪರಿಚಿತರ ತಮ್ಮ  ಬಂದ... ``ಓ ಇಲ್ಲಿದೀರಾ?  ನಮ್ಮಕ್ಕ  ಇರೋದು ಬೇರೆ ಕಡೆ ಬನ್ನಿ...'' ಅಂತ ಕರೆದ.. ನನಗೆ  ಮನಸ್ಸು ತಳಮಳಗೊಂಡಿದ್ದರಿಂದ  ಅವರಿಗೆ ಮತ್ತೆ ಬರ್ತೀನಿ.. ಕೆಲಸವಿದೆ ಅಂತ ಹೇಳಿ, ಸ್ವಲ್ಪ ಹಣ ಕೊಟ್ಟು, ಅಲ್ಲಿ ಹೆಚ್ಚು ಸಮಯ ನಿಲ್ಲದೇ ಮನೆಗೆ ಹಿಂತಿರುಗಿದೆ..
 ಸ್ವಲ್ಪಕಾಲ  ಧ್ಯಾನ ಮಾಡಿದ ನಂತರ ಮನಸ್ಸು ತಿಳಿಯಾಯ್ತು....

ದಶಕಗಳ ದಿನಚರಿಯಲಿ...ಒಂದು ಪ್ರೇಮ ಕಥೆ



 ನವೆಂಬರ್ ೧೯೫೪
 ಗೆಳತೀ,
 ಅಬ್ಬಾ! ಮುಗಿಯಿತು ಯುದ್ಧ ದೇವರಿಗೆ ನಮನ
 ಓಡೋಡಿ ಬರುವೆ ನಾ ಕಾಣಲಿಕೆ ನಿನ್ನ

ಬಾಲ್ಯದೊಡನಾಟದಲಿ ಸದ್ದಿಲ್ಲದಂತೆ
  ನಮ್ಮ ಒಲವಿನ ಬಳ್ಳಿ ಹೇಗೆ ಚಿಗುರಿತ್ತೆ?

ನೆನಪಿದೆಯ ನೀನಂದು ನೀಡಿದ್ದ ವಚನ?
 ಅದರಂತೆ ನನ್ನನ್ನು ವರಿಸುವೆಯ ಚಿನ್ನ?

ನವೆಂಬರ್ ೧೯೬೪
ಗೆಳತೀ,
 ಹತ್ತು ವರ್ಷದ ಹಿಂದೆ ನಾಚಿ `ಹೂಂ' ಅಂದಿ
  ಮುಂದೆ ಬರೀ ಆನಂದ ನೀನಾದೆ ಮಡದಿ
 ನಿನ್ನೆ ಮೊನ್ನೆಯ ಹಾಗೆ ದಶಕ ಕಳೆದಾಯ್ತು
 ನಮ್ಮ ಮಗನಿಗೆ ಈಗ ವರುಷ ಒಂಬತ್ತು


  ನವೆಂಬರ್ ೧೯೭೪
ಗೆಳತೀ,
 ಹತ್ತು ವರುಷವು ಮತ್ತೆ ಕಳೆದದ್ದು ಹೇಗೆ?!
 ನಮ್ಮೊಲವು ನಳನಳಿಸುತಿದೆ ಇನ್ನು  ಹಾಗೇ
ನನ್ನಬದುಕಲಿ ನೀನೇ ಮತ್ತೇನೂ ಇಲ್ಲ.
ಒಲವಿನಲಿ ಚೆಲುವಿನಲಿ ಕುಂದೆಣಿತೂ ಇಲ್ಲ
ನವೆಂಬರ್ ೧೯೮೪
ಗೆಳತೀ,
ಏಳಲ್ಲಿ ಬೀಳಲ್ಲಿ ಜೊತೆಯಲ್ಲೆ ಇರುವೆ
 ಬಾಳ ಗಾಡಿಯ ನೊಗವ ಜೊತೆಗೆ ಹೊತ್ತಿರುವೆ
 ಮೂವತ್ತು ವರ್ಷಗಳ ಬಾಳ ಸಂಗಾತಿ.
 ನೀನಾಗು ಪ್ರತಿ ಜನ್ಮದಲೂ ನನ್ನ ಗೆಳತಿ
ನವೆಂಬರ್ ೧೯೯೪
ಗೆಳತೀ,
ನಲವತ್ತು ವರ್ಷಗಳು ತುಂಬಿದವು ಇಂದು
 ನಾನಂಬಲಾರೆ ನೀ ಬಳಿ ಇಲ್ಲವೆಂದು
 ದೇಹ ಮಣ್ಣಾದರೂ ನಿನ್ನಾತ್ಮ ನನ್ನ
ಹೃದಯದಲಿ ಅಡಗಿಯೇ ಇರುತಿಹುದು ಚಿನ್ನ

ನವೆಂಬರ್ ೨೦೦೮
 ಪ್ರಿಯ ಓದುಗ
  ಮಡಿಚಿಟ್ಟ ಅಮ್ಮನ ಸೀರೆಗಳ ನಡುವೆ
 ಈ ಎಲ್ಲ ಕವನಗಳೆ ಅಮ್ಮನಿಗೆ ಒಡವೆ
 ಕೊನೆಯ ಕಣ್ನೀರಿನಲಿ ನೆನದದ್ದು  ಹೊರತು
ಅದು ನನ್ನ ತಾಯ್ತಂದೆ ಪ್ರೇಮದಾ ಗುರುತು

ಈಗ ಇಬ್ಬರು ಇಲ್ಲ ಪ್ರೀತಿಯೋ ಅಮರ

ಸ್ವರ್ಗದಲಿ ಜೊತೆಯಲ್ಲಿ  ಸೇರಿಸಲಿ ಅವರ