ಗುರುವಾರ, ಮೇ 15, 2014

ಬ್ಯಾಂಡ್ ಏಡ್

ಕೆಲವು ನೆನಪುಗಳೆ ಹಾಗೆ.. ಎಷ್ಟೇ ಕಾಲವಾದರೂ ಮನದಲ್ಲಿ ಅಚ್ಚಳಿಯದೇ ನಿಂತು ಬಿಡುತ್ತವೆ!
    ನಾನು ನನ್ನ ತಂದೆಯನ್ನು ಕಳೆದುಕೊಂಡಾಗಿನ ಸಂದರ್ಭ... ಅವರೊಬ್ಬ ಅದ್ಭುತ ವ್ಯಕ್ತಿ.. ಅವರ ಮರಣ ನನಗೆ ಸಹಿಸಲಾರದ ನೋವು ಕೊಟ್ಟಿತ್ತು. ಯಾರೇ ಎಷ್ಟೇ ಸಮಾಧಾನ ಹೇಳಿದರೂ, ನನ್ನ ಮನಸ್ಸನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸಿದರೂ ಸಾಧ್ಯವಾಗಿರದಷ್ಟು ದು:ಖದಲ್ಲಿ ಮುಳುಗಿದ್ದೆ....ನನ್ನ ಮಗಳಿಗೆ ಒಂದು ವರ್ಷವಾಗಿತ್ತು. . ನಮ್ಮ ಪಕ್ಕದ ಮನೆಯಲ್ಲಿ ಸುಮಾರು ಎರಡು- ಮೂರು ವರ್ಷದ  ಹುಡುಗಿ ಇದ್ದಳು.
ಅವಳಿಗೆ ಬೇಸರವಾದಾಗಲೆಲ್ಲ ನನ್ನ ಮಗಳೊಂದಿಗೆ ಆಡಲಿಕ್ಕೆ ಬರುತ್ತಿದ್ದಳು.. ಆಗ ನನ್ನನ್ನು ಕಥೆ  ಹೇಳುವಂತೆ ಕೇಳುತ್ತಿದ್ದಳು.. ಮಕ್ಕಳಿಗೆ  ಕಥೆ ಹೇಳುವುದು ನನ್ನ ಮೆಚ್ಚಿನ ಹವ್ಯಾಸಗಳಲ್ಲಿ ಒಂದು. ನಾನು ದಿನಾ ಒಂದು ಹೊಸ ಕಥೆಯೊಂದಿಗೆ ಅವಳಿಗಾಗಿ ಕಾಯ್ತಿರ್ತಿದ್ದೆ.
 ಅವತ್ತು ಅದೇ ರೀತಿ ಅವಳು ಬಂದು, `ಆಂಟಿ, ಕಥೆ ಹೇಳಿ ...' ಅಂದಾಗ ಅವಳನ್ನು ಒಳಗೆ ಕರೆದು ಕಥೆ ಹೇಳಲಿಕ್ಕೆ ಪ್ರಯತ್ನಿಸಿದೆ..  ನನ್ನ ತಂದೆಯ ಅಗಲಿಕೆಯ ನೋವು ನನ್ನ ಮಿದುಳನ್ನು ಎಷ್ಟೊಂದು ನಿಷ್ಕ್ರಿಯಗೊಳಿಸಿತ್ತೆಂದರೆ ನನಗೆ ಯಾವ ಕಥಯೂ ನೆನಪಿಗೆ ಬರಲಿಲ್ಲ!!
ಹೊಸ ಕಥೆಗಾಗಿ ಕಾಯುತ್ತಿದ್ದ ಮಗುವಿಗೆ, ``ಸಾರಿ ಚಿನ್ನು.. ನಾನು ತುಂಬಾ ನೋವಿನಲ್ಲಿದೀನಿ.. ಯಾವ ಕಥೆನೂ ನೆನ್ಪಾಗ್ತಿಲ್ಲ.. ನಾಳೆ ಬರ್ತೀಯಾ? ...'' ಅಂದೆ.
 ಅವಳಿಗೆಷ್ಟು ಅರ್ಥವಾಯ್ತೋ ತಿಳೀದು .. ನನ್ ಮುಖ ನೋಡಿ, ` ಹೂಂ.. " ಅಂತ ಹೊರಟಳು.. ನಾನು ಮತ್ತೇ ಅದೇ ನೀರವ ಮೌನ ತುಂಬಿದ ಮನೆ ಮನದೊಂದಿಗೆ ಕುಳಿತೆ .. ಮಲಗಿದ್ದ ಮಗಳ ಹತ್ತಿರ..
ಮೆತ್ತೆ ಬಾಗಿಲು ಬಡಿದ ಸದ್ದು... ಬೇಸರದಿಂದಲೇ ಎದ್ದು ನೋಡಿದೆ..
 ಅದೇ ಪುಟ್ಟ ಹುಡುಗಿ ಬಾಗಿಲಲ್ಲಿ!
 ಬಾಗಿಲು ತೆರೆದು ನಾನು ಮಾತಾಡ ಬೇಕೆನ್ನುವಷ್ಟರಲ್ಲಿ ಅವಳೇ , ` ಆಂಟಿ, ಇದು ತಗೊಳ್ಳಿ.. ನಿಮ್ಗೆ ಎಲ್ಲಿ ನೋವಾಗಿದೆ ಅಲ್ಲಿ ಹಾಕಿಕೊಂಡ್ರೆ ಬೇಗ ವಾಸಿ ಆಗುತ್ತೆ.. '' ಅಂತ ನನ್ ಕೈಗೆ ಒಂದು   Band aid ಕೊಟ್ಟಳು..  ಅವಳ ಮುಖದಲ್ಲಿ ನಾನೇನೋ ಒಳ್ಳೆಯ ಕೆಲಸ ಮಾಡ್ತಿದೀನಿ ಅನ್ನೋ ಖುಷಿ, , ಹೆಮ್ಮೆ, ಕಣ್ಣುಗಳಲ್ಲಿ ಮುಗ್ಧ ಪ್ರೀತಿ, ಕರುಣೆ...  
ನನ್ನ ಆತ್ಮೀಯರು, ಹಿತೈಶಿಗಳು  ಅದೆಷ್ಟೇ ವಿಧವಾಗಿ ಸಮಾಧಾನ ಮಾಡಿದರೂ ಒಂದು ನೆಲೆಗೆ ಬಾರದ ನನ್ನ ಮನಸ್ಸಿಗೆ  ಅಂದು ಮಾತಿಗೆ ನಿಲುಕದಷ್ಟು ಹಿತವಾದ ಅನುಭವ ಆಗಿದ್ದು..  ನಾನು ಶೋಕ ಕೂಪದಿಂದ ಹೊರಬಂದದ್ದು....ಇವತ್ತಿಗೂ ನೆನಪಾಗ್ತನೇ ಇರುತ್ತೆ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ