ನವೆಂಬರ್ ೧೯೫೪
ಗೆಳತೀ,
ಅಬ್ಬಾ! ಮುಗಿಯಿತು ಯುದ್ಧ ದೇವರಿಗೆ ನಮನ
ಓಡೋಡಿ ಬರುವೆ ನಾ ಕಾಣಲಿಕೆ ನಿನ್ನ
ಬಾಲ್ಯದೊಡನಾಟದಲಿ
ಸದ್ದಿಲ್ಲದಂತೆ
ನಮ್ಮ ಒಲವಿನ ಬಳ್ಳಿ ಹೇಗೆ ಚಿಗುರಿತ್ತೆ?
ನೆನಪಿದೆಯ ನೀನಂದು
ನೀಡಿದ್ದ ವಚನ?
ಅದರಂತೆ ನನ್ನನ್ನು ವರಿಸುವೆಯ ಚಿನ್ನ?
ನವೆಂಬರ್ ೧೯೬೪
ಗೆಳತೀ,
ಹತ್ತು ವರ್ಷದ ಹಿಂದೆ ನಾಚಿ `ಹೂಂ' ಅಂದಿ
ಮುಂದೆ ಬರೀ ಆನಂದ ನೀನಾದೆ ಮಡದಿ
ನಿನ್ನೆ ಮೊನ್ನೆಯ ಹಾಗೆ ದಶಕ ಕಳೆದಾಯ್ತು
ನಮ್ಮ ಮಗನಿಗೆ ಈಗ ವರುಷ ಒಂಬತ್ತು
ನವೆಂಬರ್ ೧೯೭೪
ಗೆಳತೀ,
ಹತ್ತು ವರುಷವು ಮತ್ತೆ ಕಳೆದದ್ದು ಹೇಗೆ?!
ನಮ್ಮೊಲವು ನಳನಳಿಸುತಿದೆ ಇನ್ನು ಹಾಗೇ
ನನ್ನಬದುಕಲಿ ನೀನೇ
ಮತ್ತೇನೂ ಇಲ್ಲ.
ಒಲವಿನಲಿ ಚೆಲುವಿನಲಿ
ಕುಂದೆಣಿತೂ ಇಲ್ಲ
ನವೆಂಬರ್ ೧೯೮೪
ಗೆಳತೀ,
ಏಳಲ್ಲಿ ಬೀಳಲ್ಲಿ
ಜೊತೆಯಲ್ಲೆ ಇರುವೆ
ಬಾಳ ಗಾಡಿಯ ನೊಗವ ಜೊತೆಗೆ ಹೊತ್ತಿರುವೆ
ಮೂವತ್ತು ವರ್ಷಗಳ ಬಾಳ ಸಂಗಾತಿ.
ನೀನಾಗು ಪ್ರತಿ ಜನ್ಮದಲೂ ನನ್ನ ಗೆಳತಿ
ನವೆಂಬರ್ ೧೯೯೪
ಗೆಳತೀ,
ನಲವತ್ತು ವರ್ಷಗಳು
ತುಂಬಿದವು ಇಂದು
ನಾನಂಬಲಾರೆ ನೀ ಬಳಿ ಇಲ್ಲವೆಂದು
ದೇಹ ಮಣ್ಣಾದರೂ ನಿನ್ನಾತ್ಮ ನನ್ನ
ಹೃದಯದಲಿ ಅಡಗಿಯೇ
ಇರುತಿಹುದು ಚಿನ್ನ
ನವೆಂಬರ್ ೨೦೦೮
ಪ್ರಿಯ ಓದುಗ
ಮಡಿಚಿಟ್ಟ
ಅಮ್ಮನ ಸೀರೆಗಳ ನಡುವೆ
ಈ ಎಲ್ಲ ಕವನಗಳೆ ಅಮ್ಮನಿಗೆ ಒಡವೆ
ಕೊನೆಯ ಕಣ್ನೀರಿನಲಿ ನೆನದದ್ದು ಹೊರತು
ಅದು ನನ್ನ ತಾಯ್ತಂದೆ
ಪ್ರೇಮದಾ ಗುರುತು
ಈಗ ಇಬ್ಬರು ಇಲ್ಲ
ಪ್ರೀತಿಯೋ ಅಮರ
ಸ್ವರ್ಗದಲಿ ಜೊತೆಯಲ್ಲಿ ಸೇರಿಸಲಿ ಅವರ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ