ಹೇಗೆ ನಂಬಲಿ ಹೇಗೆ
ನಂಬದೇ ಇರಲಿ?
ಕಣ್ಣಿಂದ ಕಂಡದ್ದೆ
ಕಿವಿಯಿಂದ ಕೇಳಿದ್ದೆ?
ಇಂದ್ರಿಯಗಳನುಭವವೆ?
ಮನಕಾದ ನಲಿವೆ?
ಅಂದು ತಾಯಾಗುವೆನು
ಎಂಬ ಅನುಭೂತಿ ನಿಜ
ಗರ್ಭಸ್ಥ ಶಿಶು ಒದೆದ
ರೋಮಾಂಚ ಸತ್ಯ
ಯಾತನೆಯ ನಂತರದ ಮಾಯಕದ
ಮತ್ತಳಿದು
ತೊಳೆದ ಮುತ್ತಂಥ ಮಗು ಕಂಡದ್ದು ಸತ್ಯ
ಬೆಣ್ಣೆಯಂತಹ ಕಂದನಾಡಿದ್ದ ತುಂಟಾಟ
ಹೃನ್ಮನವ ತಣಿಸಿ ಮುದಗೊಳಿಸಿದ್ದು
ಸುಳ್ಳೇ?
ಇವ ನಿನ್ನ ಮಗನಲ್ಲ
ಅವನವ್ವೆ ಇಹಳೆಲ್ಲೋ
ಎನಲು ನಾನದನು ನಂಬಲಿ
ನೀನೆ ಹೇಳೇ?
ನಂಬದೆಲು ಇರಲಾರೆ,
ನಂಬಿ ದು:ಖಿಸಲಾರೆ
ನನ್ನ ಮನದಳಲನ್ನು ಬಲ್ಲೆಯಾ ಗೆಳತಿ?
ಇದನೆನಗೆ ಅರುಹಿದವರೆಂದು ಕನಸಲ್ಲಿಯೂ
ಅನೃತವನು ನುಡಿಯಲಾರದ ನನ್ನ ಪತಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ