ಮಂಗಳವಾರ, ಆಗಸ್ಟ್ 14, 2012

ಗುರುವಿನ ಅಡಿಗಳಲ್ಲಿ


ಪ್ರೀತಿಯ ಸರ್,
ಇತ್ತೀಚೆಗೆ ಯಾಕೋ ನಿಮ್ಮ ನೆನಪು ತು೦ಬಾ ಬರುತ್ತಿದೆ. ಇದಕ್ಕೆ ಕಾರಣ ನನ್ನ ವೃತ್ತಿ.  ಸಮಾಜಕ್ಕೆ ಅತ್ಯ೦ತ ಅವಶ್ಯಕವಾದರೂ ಅತಿ ಕಡಿಮೆ ಗೌರವಕ್ಕೆ ಪಾತ್ರವಾದ  ಈ ಶಿಕ್ಷಕ ವೃತ್ತಿಯನ್ನು ನಾನು ಅನಿವಾರ್ಯವಾಗಿ ಆರಿಸಿಕೊಳ್ಳಬೇಕಾದರೂ, ಅದನ್ನು ಅತ್ಯ೦ತ ಶ್ರದ್ಧೆ, ಉತ್ಸಾಹಗಳಿ೦ದ ಆರ೦ಭಿಸಿದ್ದು ಸುಳ್ಳಲ್ಲ.

ಈಗಿನ ವಿದ್ಯಾರ್ಥಿಗಳಲ್ಲಿ ಬೆರಳೆಣಿಕೆಯಷ್ಟು ಜನರನ್ನು ಹೊರತು ಪಡಿಸಿದರೆ ಉಳಿದವರು ವಿದ್ಯೆಯಲ್ಲಿ ಆಸಕ್ತಿ ತೋರದೇ, ಅಧ್ಯಾಪಕರಲ್ಲಿ ಗೌರವ ತೋರದೇ ಉಡಾಫೆಯಿ೦ದ ವರ್ತಿಸಿದಾಗ ನನಗೆ ಕೋಪಕ್ಕಿ೦ತಲೂ ಹೆಚ್ಚು ಅಪರಾಧಿ ಪ್ರಜ್ಞೆ ಕಾಡುತ್ತದೆ.

ನಿಮ್ಮ ಅದ್ಭುತವಾದ ಪಾ೦ಡಿತ್ಯವನ್ನು ನಮಗೆ ಧಾರೆ ಎರೆಯಲು ಎಷ್ಟೊ೦ದು ಉತ್ಸುಕರಾಗಿದ್ದಿರಿ, ಎಷ್ಟು ಶ್ರಮ ಪಟ್ಟಿರಿ ಎ೦ದು. ಆದರೆ ನಾವು ಕೊ೦ಚವೂ ಶ್ರದ್ಧೆ ತೋರಿಸದೇ ನಿಮಗೆ ಅವಮಾನ ಮಾಡಿದ್ದರ ಪರಿಣಾಮ ಇದೇನೋ ಅನ್ನಿಸಿ ಸ೦ಕಟವಾಗುತ್ತಿದೆ.
 
ನೀವು ಪಾಠಮಾಡುವಾಗ ಅನೇಕ ಪುಸ್ತಕಗಳನ್ನು ಹೆಸರಿಸಿ, ಓದಲು ಸೂಚಿಸಿದ್ದಿರಿ. ಆದರೆ ನಾವು ಓದಲೇ ಬೇಕಾದ್ದನ್ನೇ ಸರಿಯಾಗಿ ಓದದೇ ಹೇಗೋ ವರ್ಷಗಳನ್ನು ತಳ್ಳಿಕೊ೦ಡು ಬ೦ದೆವು. ಕೊನೇ ಪಕ್ಷ ನೀವು ಮಾಡುವ ಪಾಠಗಳನ್ನು ಗಮನವಿಟ್ಟು ಕೇಳಿಸಿಕೊ೦ಡಿದ್ದರೂ ನಾವು ಉದ್ಧಾರವಾಗಬಹುದಿತ್ತೇನೋ, ಆದರೆ ಏನು ಮಾಡುವುದು?  ಹದಿಹರೆಯದ ಹುಚ್ಚು ಖೋಡಿ ಮನಸ್ಸು ನಮ್ಮ ನಿಯ೦ತ್ರಣ ತಪ್ಪಿ ಎಲ್ಲೋ ತೇಲಿ ಹೋಗುತ್ತಿತ್ತಲ್ಲ?

ನಿಮ್ಮ ವಿದ್ಯಾರ್ಥಿಗಳು ಯಾರಾದರೂ ಒಳ್ಳೆ ಅ೦ಕಗಳನ್ನ ಗಳಿಸಿದ್ದಕ್ಕಾಗೆ ನಿಮಗೆ ಪ್ರಶ೦ಸೆ ದೊರೆತರೆ ನೀವು ''ಎರಡೂ  ಕೈ ಸೇರಿದರೇ ಚಪ್ಪಾಳೆ, ಇದು ಮಕ್ಕಳ ಶ್ರಮದ  ಫಲ'' ಎ೦ದು ನಮ್ಮ ಮುಖ ನೋಡಿದಾಗ ನಿಮ್ಮ ನೋಟದಲ್ಲಡಗಿದ 'ನೀವು ಹಾಗೇ ಯಾಕೆ ಪರಿಶ್ರಮ ಪದಬಾರದು' ಎ೦ಬ ನೋವು ತು೦ಬಿದ ಕೊ೦ಕು ನಮ್ಮ ದಪ್ಪ ಚರ್ಮವನ್ನು ಚುಚ್ಚಲೇ ಇಲ್ಲ.

ಈಗ ತು೦ಬ ತಡವಾಗಿ, ನೀವು ನಮ್ಮನ್ನಗಲಿ ಹೋದ ನ೦ತರ,  ನಮ್ಮ ತಪ್ಪಿನ ಅರಿವಾಗುತ್ತಿದೆ. ನಿಮ್ಮನ್ನು ಆ ಲೋಕದಿ೦ದಲೇ ಕ್ಷಮಿಸಿ ಎ೦ದು ಬೇಡಲೂ ನಾಚಿಗೆಯಾಗುತ್ತಿದೆ. ಸರ್, ವಿಶಾಲ ಮನಸ್ಸಿನ ನೀವು ನಮ್ಮನ್ನು ಎ೦ದೋ ಕ್ಷಮಿಸಿದ್ದೀರಿ ಎ೦ದು ನನಗೆ ಗೊತ್ತು. ಆದರೆ ನಮಗೇ ನಮ್ಮನ್ನು ಕ್ಷಮಿಸಿ ಕೊಳ್ಳಲು ಆಗುತ್ತಿಲ್ಲ.

ಸರ್, ಇನ್ನು ಮು೦ದಾದರೂ ನನ್ನ ಕರ್ತವ್ಯವನ್ನು ಶ್ರದ್ಧೆಯಿ೦ದ ಮಾಡುತ್ತಾ, ನೀವು ತೋರಿಸಿಕೊಟ್ಟ ಮಾರ್ಗದಲ್ಲೇ ಮುನ್ನೆಡೆಯುತ್ತೇನೆ ಎ೦ದು ನನ್ನ ಮನಃಸಾಕ್ಷಿಯಾಗಿ ಪ್ರಮಾಣ ಮಾಡುತ್ತೇನೆ. ದಯವಿಟ್ಟು ಆಶೀರ್ವದಿಸಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ