ಸೋಮವಾರ, ಆಗಸ್ಟ್ 27, 2012

ಬೆಸ್ಟ್ ಗಿಫ್ಟ್


ಅವನೊಬ್ಬ ಶ್ರೀಮಂತ ಹುಡುಗ.  ಅವನ ಸ್ನೇಹಿತರ ಗುಂಪಲ್ಲಿದ್ದವರೆಲ್ಲಾ ಸಾಕಷ್ಟು ಅನುಕೂಲಸ್ಥರೇ, ಒಬ್ಬನನ್ನು ಹೊರತಾಗಿ. ಆ ಒಬ್ಬ ಅವರ ಗುಂಪಿನಲ್ಲಿ ಯಾಕಿದ್ದ ಅಂತೀರಾ? ಆದಕ್ಕೆ ಕಾರಣ  ಅವನ ಬುದ್ಧಿವಂತಿಕೆ.
ಅವತ್ತು ಅ ಶ್ರೀಮಂತ  ಯುವಕನ ಜನ್ಮದಿನ. ದೊಡ್ಡ ಹೋಟೆಲಲ್ಲಿ ಪಾರ್ಟಿ ಏರ್ಪಡಿಸಿದ್ದ.  ಭಾರೀ ಅದ್ಧೂರಿಯ ಪಾರ್ಟಿಗೆ ಬಂದಿದ್ದ ಅವನ ಸ್ನೇಹಿತರು ಬೆಲೆಬಾಳುವ ಉಡುಗೊರೆಗಳನ್ನೇ ತಂದಿದ್ದರು.

ಆದರೆ ಈ ನಮ್ಮ ಬಡ ಗೆಳೆಯ ಒ೦ದು ಸುಂದರವಾದ ಗುಲಾಬಿಯ ಜೊತೆ,  ಕೈಯ್ಯಿಂದಲೇ ಮಾಡಿದ ಅರ್ಥಪೂರ್ಣ ಸಂದೇಶವುಳ್ಳ  ಗ್ರೀಟ್ಂಗ್ಸ್ ಕೊಟ್ಟ.

ಗೆಳೆಯರು ಅವನ ಗಿಫ್ಟ್ ನೋಡಿ ಮೀಸೆಯಡಿಯಲ್ಲೇ ನಕ್ಕರು.

ಅವರಿಗೆ ಆ ಪಾರ್ಟಿಯಲ್ಲಿ ಅವನನ್ನು ಯಾಕೋ ಸಹಿಸಿಕೊಳ್ಳಲಿಕ್ಕಾಗಲಿಲ್ಲ. ಅವನನ್ನು ಹೇಗಾದ್ರೂ ಕಳಸಿಬಿಡಬೇಕಂದುಕೊಂಡ್ರು. ``ನೋಡು ಗೆಳೆಯಾ, ನಿಂಗೆ ಈ ಕುಡಿತ, ಗದ್ದಲ ಎಲ್ಲಾ ಸರಿ ಹೋಗೋಲ್ಲಾ ಅನ್ಸಿದ್ರೆ, ಈ ಎಲ್ಲಾ ಉಡುಗೊರೆನೂ ತಗೊಂಡು ಕಾರಿನಲ್ಲಿ ಮನೆಗೆ ಹೋಗು, ನಾವು ಬೈಕಲ್ಲಿ ಜಾಲಿ ರೈಡ್ ಮಾಡ್ಕೊಂಡು ಬರ್ತೀವಿ. ಹಾ...? ಬೇಜಾರಿಲ್ಲ ತಾನೆ..? ನಯವಾಗೇ ಕೇಳಿದ್ರು.

 ಇವನು ``ಸರಿ... ತೊಂದ್ರೆ ಇಲ್ಲ...'' ಅಂತ ಹೊರಟ

ಕುಡಿದ ಮತ್ತಲ್ಲಿ ಗಾಡಿ ಓಡಿಸುವಾಗ ಅಪಘಾತವಾಯಿತು.  ಸುದೈವದಿಂದ ಯಾರಿಗೂ ಪ್ರಾಣಾಪಾಯವಾಗದಿದ್ದರೂ ನಮ್ಮ ಶ್ರೀಮಂತ ಹುಡುಗನಿಗೆ ಸ್ವಲ್ಪ ಹೆಚ್ಚೇ ಏಟಾಯಿತು.

ಕೆಲ ಕಾಲ ಆಸ್ಪತ್ರೆ ಯಲ್ಲಿದ್ದು ಮನೆಗೆ ಬಂದ ಶ್ರೀಮಂತ ಯುವಕ ಎಲ್ಲ ಉಡುಗೊರೆಗಳನ್ನೂ ನೋಡತೊಡಗಿದ.

``ಎಲ್ಲವೂ ಬೆಲೆಬಾಳುವಂಥದ್ದೇ, ಇದನ್ನು ಬಿಟ್ಟು'' .  

ಬಾಡಿದ ಗುಲಾಬಿಯೊಂದಿಗಿದ್ದ  ಗ್ರೀಟಿಂಗ್ ತೆಗೆದು ತಂದೆಗೆ ತೋರಿಸಿದ ಮಗನಿಗೆ ಅಪ್ಪ ಹೇಳಿದ್ರು, 

``ಮಗೂ ಅವನ ಉಡುಗೊರೆಗೆ ಬೆಲೆ ಕಟ್ಟಲಿಕ್ಕೇ ಆಗಲ್ಲ, ಅವನು ತನ್ನ ಒ೦ಡು ಕಿಡ್ನಿಯನ್ನೇ ನಿಂಗೆ ಕೊಟ್ಟಿದ್ದಾನೆ'' ಅಂದ್ರು.

ಆಶ್ಚರ್ಯದಿಂದ ಮೂಕನಾಗಿ, ಕೃತಜ್ಞತೆಯಿಂದ ಕಣ್ಣು ಮಂಜಾಗಿ ಅವನು ಆ ಗ್ರೀಟಿಂಗ್ಸ್ ತೆರೆದು ನೋಡಿದ.
ಅದರಲ್ಲಿತ್ತು......

`` ಗೆಳೆಯಾ, ನಿನಗೆ ಯಾವಾಗ ಎಲ್ಲಾ ಬಾಗಿಲುಗಳೂ ಮುಚ್ಚಿರುತ್ತದೆಯೋ, ಆಗ ಇತ್ತ ನೋಡು. ನನ್ನ ಹೃದಯದ ಬಾಗಿಲು ನಿನಗಾಗಿ ತೆರೆದಿರುತ್ತದೆ''   

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ