ಶುಕ್ರವಾರ, ಆಗಸ್ಟ್ 24, 2012

ಭಾಗ್ಯವಿಧಾತ


ಅವನು ಬಾಲ್ಯದಿಂದಲೇ ವಿಭಿನ್ನವಾದ ಆಲೋಚನೆಗಳೊಂದಿಗೆ ಬೆಳೆದ.  ತನ್ನ ಸುತ್ತಲಿನ ಪರಿಸರವನ್ನು ಅತಿ ಸೂಕ್ಷ್ಮವಾಗಿ ಗಮನಿಸ ತೊಡಗಿದ

.
 ನಮ್ಮ ದೇಶ ಹೀಗೇಕೆ...? ನಮ್ಮ ಜನರಿಗೆ ಏಕೆ ಪರಿಸರದ ಬಗ್ಗೆ ಕಾಳಜಿ ಇಲ್ಲ......? ಏಕೆ ದೇಶಭಕ್ತಿ ಇಲ್ಲ....? ಈ ರೀತಿಯ ನೂರಾರು ಪ್ರಶ್ನೆಗಳು ಅವನ ತಲೆ ಕೊರೆಯಲಾರಂಭಿಸಿದವು. ನಮ್ಮ ಸಂಸ್ಕೃತಿ ಇದೇನೇ....? ನಮ್ಮ ಪರಂಪರೆ ಹೀಗೇ ಇರಬಹುದೇ....? ಎಂಬ ಸಂಶಯದಿಂದ ಅನೇಕ ಪುಸ್ತಕಗಳನ್ನು ತಿರುವಿ ಹಾಕಿದ

ಅಲ್ಲಲ್ಲ.....! ನಮ್ಮ ಪರಂಪರೆ ಭವ್ಯವಾಗಿದೆ.... ಅರೇ.....! ವಿದೇಶೀಯರೂ ಬಂದು ನಮ್ಮ ಪೂರ್ವೀಕರನ್ನು ಹೇಗೆ ಹೊಗಳಿ ಕೊಡಾಡಿದ್ದಾರೆ! ಎಷ್ಟು ಸುಂದರವಾದ ಇತಿಹಾಸ ನಮ್ಮದು!  ಭಾರತದ ದಿವ್ಯ ಚರಿತ್ರೆಯ ನೂರಾರು ಪುಸ್ತಕಗಳನ್ನು ಓದಿದ. ಓದುತ್ತಾ,  ಓದುತ್ತಾ ಅವನ ಜ್ಞಾನದ ಹಸಿವು ಹೆಚ್ಚಾಯಿತು. ಯೌವನವನ್ನು ತಲುಪುವ ಮುನ್ನವೇ ದೇಶ ವಿದೇಶದ ಅನೇಕ ಶ್ರೇಷ್ಠ ಗ್ರಂಥಗಳನ್ನು ಅಧ್ಯಯನ ಮಾಡಿದ
.
 ಆದರೆ ಇಂದಿನ ಭಾರತದ ಪರಿಸ್ಥಿತಿ ಅವನನ್ನು ಚಿ೦ತೆಗೀಡು ಮಾಡಿತು.
ಆದರೆ ಹೆಚ್ಚಿನ ಜನರಂತೆ ಅವನು ಮನಸ್ಸಿನಲ್ಲಿ  ಮಾತೃ ಭೂಮಿಯ ಮೇಲೆ ತಿರಸ್ಕಾರ ಹೊಂದಲಿಲ್ಲ.

ಅವನ ಮನಸ್ಸು ತಾಯ್ತನದ ಪಕ್ವತೆಯನ್ನು ಪಡೆದಿತ್ತು.  ತಾಯಿ ತನ್ನ ಮಗು ಕೊಳಕಲ್ಲಿ ಬಿದ್ದು ಹೊಲಸು ಬಟ್ಟೆಯೊಂದಿಗೆ ರೋದಿಸುತ್ತಾ ಬಂದರೆ, ಆ ಮಗುವನ್ನು ಪ್ರೀತಿಯಿಂದ ಸಮಾಧಾನಗೊಳಿಸಿ, ಶುಚಿಮಾಡುವುದಿಲ್ಲವೇ? ಅಂಥ ಮನಃಸ್ಥಿತಿಗೆ ಆ ಯುವಕ ತಲುಪಿದ್ದ.

ಅವನು ಕಾಲೇಜಿನ ಭಾಷಣ ಸ್ಪರ್ಧೆಗಳಲ್ಲಿ ಮಾತ್ರವಲ್ಲ, ಎಲ್ಲೆಲ್ಲಿ ಗೆಳೆಯರ ಗುಂಪು ಸಿಗುವುದೋ ಅಲ್ಲೆಲ್ಲಾ ತನ್ನ ಆಲೋಚನೆಯ ಬೀಜ ಬಿತ್ತತೊಡಗಿದ

.
‘’ ಗೆಳೆಯರೇ, ನಮ್ಮ ದೇಶವನ್ನು ಅಭಿವೃದ್ಧಿಗೊಳಿಸುವುದು ಬೇರೆ ಯಾರ ಕೆಲಸವೂ ಅಲ್ಲ. ಅದು ಕೇವಲ ನಮ್ಮದೇ ಕರ್ತವ್ಯ, ಸರ್ಕಾರವನ್ನೂ, ಅಥವಾ ಇನ್ನಾರನ್ನೋ ದೂಷಿಸುತ್ತಾ ಕಾಲ ಹರಣ ಮಾಡುವುದು ಬೇಡ. ಬನ್ನಿ ನನ್ನೊಂದಿಗೆ ಕೈ ಜೋಡಿಸಿ’’ ಎಂದು ಕರೆ ಇತ್ತ.


ಅವನ ಮಾತಿನ ಧಾಟಿಗೆ, ಅದರಲ್ಲಡಗಿದ ಪ್ರಾಮಾಣಿಕತೆಗೆ, ಹಲವು ಜನ ಮನಸೋತರು, ಹೃತ್ಪೂರ್ವಕವಾಗಿ ಪ್ರಶಂಸಿಸಿದರು. ಆದರೆ ಕೆಲವೇ ಕೆಲವು ಜನ ಸಮಾನ ಮನಸ್ಕರು ಅವನೊಡನೆ ಕೈಗೂಡಿಸಿದರು.


ಅವನ ಮಾತಿನ ಪ್ರಭಾವ, ಮುಂದಾಲೋಚನೆಯ ಪರಿ, ಕಾರ್ಯ ಕ್ಷಮತೆ, ಅನತಿ ಕಾಲದಲ್ಲೇ ಈ ಕೆಲವು ಜನರನ್ನು ಹಲವರನ್ನಾಗಿ ಮಾಡಿತು.

ಆತ್ಮಸಾಕ್ಷಿಯಿಂದ, ಆತ್ಮ ಸಂತೃಪ್ತಿಗಾಗಿ ದುಡಿಯುವ ಯುವಪಡೆಯೇ ತಯಾರಾಯಿತು. ಸೂರ್ಯನ ಪ್ರಕಾಶದೆದುರು ಮಂಕಾಗುವ ದೀಪದ ಹುಳುಗಳಂತೆ, ಸ್ವಾರ್ಥಿ ರಾಜಕಾರಣಿಗಳು, ಮೋಸಗಾರ ಮಧ್ಯವರ್ತಿಗಳು,ಭಂಡ ಬಂಡವಾಳಶಾಹಿಗಳು ಹೇಳ ಹೆಸರಿಲ್ಲದೇ ಹೋದರು.

 ದೀಪದಿಂದ ದೀಪವನ್ನು ಹಚ್ಚುವ ಹಾಗೆ ಈ ಯುವ ನೇತಾರ ಉದ್ದೀಪಿಸಿದ ದೇಶಭಕ್ತಿಯ ಜ್ಯೋತಿ ಅನೇಕ ಮನೆ, ಮನಗಳನ್ನೂ ಬೆಳಗಹತ್ತಿತು.

‘’ಸಂಭವಾಮಿ ಯುಗೇಯುಗೇ’’ ಅಂದು ಭಗವಂತ ಹೇಳಿದಂತೆ ನಮ್ಮ ಭಾಗ್ಯವಿಧಾತ ಜನಿಸಿ ಬಂದಿದ್ದಾನೆ, ಎಂದು ಜನತೆ ಧನ್ಯಭಾವದಿಂದ ಅವನನ್ನು ಅವಿರೋಧವಾಗಿ ತಮ್ಮ ನೇತಾರನಾಗಿ ಆಯ್ಕೆ ಮಾಡಿಕೊಂಡಿತು.

ಇದಾಗಿ ಕೆಲವೇ ವರ್ಷಗಳು ಕಳೆದಿವೆ. ಅವನು ಭಾರತವನ್ನು ಮಾದರಿ ದೇಶವನ್ನಾಗಿ ಮಾಡಿದ್ದಾನೆ. ಭಾರತ ಈಗ ಭ್ರಷ್ಟಾಚಾರ ರಹಿತ, ಮಾಲಿನ್ಯರಹಿತ, ನಿಸ್ವಾರ್ಥಿ ಜನರಿಂದ ತುಂಬಿದೆ. ಸೋಮಾರಿತನ ತೊರೆದು ಶ್ರದ್ಧೆಯಿಂದ ಜನ ದುಡಿಯುತ್ತಿದ್ದಾರೆ.

ಆಹಾ! ಇವತ್ತು ಎಂಥ ಸುದಿನ!  ಈ ನಮ್ಮ ಭಾಗ್ಯವಿಧಾತ, ನಮ್ಮ ಕಷ್ಟ- ಸುಖಗಳನ್ನು ವಿಚಾರಿಸಲು ನಮ್ಮ ಬೀದಿಗೇ ಬರುತ್ತಿದ್ದಾನೆ.  ನಾನೂ  ಅವನನ್ನೊಮ್ಮೆ ನೋಡಬೇಕು . ಅದೋ ಅಲ್ಲಿ!   ಬಂದೇ ಬಿಟ್ಟ ! 

ಆದರೆ…..ಅವನ ಮುಖ ಏಕೆ ಸರಿಯಾಗಿ ಕಾಣುತ್ತಿಲ್ಲ? ಛೆ! ನನ್ನ ಕಣ್ಣಿಗೇನು ಪೊರೆ ಬಂದಿದೆಯೇ? ಕಣ್ಣುಜ್ಜಿ ಕಣ್ಣು ಬಿಟ್ಟು ನೋಡುತ್ತೇನೆ. ನಾನು ಮಂಚದ ಮೇಲೇ ಮಲಗಿದ್ದೇನೆ!

ಅಂದರೆ ??? ಇದೆಲ್ಲಾ ನಾನು ಕಂಡ ಕನಸೇ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ